Monday, June 26, 2023

ಮಂತ್ರಿಗಿರಿ ಬೇಡ, ಊರಿನ ಅಭಿವೃದ್ಧಿ ಮುಖ್ಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೨೬ : ನನಗೆ ಯಾವುದೇ ಮಂತ್ರಿಗಿರಿ ಅಗತ್ಯವಿಲ್ಲ. ಅಧಿಕಾರಕ್ಕಿಂತ ಊರಿನ ಅಭಿವೃದ್ಧಿಯೇ ನನಗೆ ಮುಖ್ಯ. ಆದರೂ ಜು.೨೦ರೊಳಗಾಗಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ ಎಂದು  ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
    ಕ್ಷೇತ್ರಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ. ಯಾವುದೇ ಅಪಪ್ರಚಾರಕ್ಕೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದರು.
    ಆರೋಗ್ಯ ಸರಿ ಇಲ್ಲ. ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ, ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತ ಅದರಲ್ಲಿಯೂ ರಾಜಕಾರಣ ಮಾಡಲು ಹೊರಟಿದ್ದಾರೆ. ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ನನ್ನೊಡನೆ ಮಾತನಾಡಿಕೊಂಡು ಊರಿನ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ಊರಿನ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶವಾಗಿದ್ದು,  ಎಲ್ಲಾ ಮಂತ್ರಿಗಳು ಸುಲಭವಾಗಿ ಸಿಗುತ್ತಿದ್ದ ಕಾರಣ ಯಾರೂ ಪ್ರಸ್ತಾವನೆ ಸಲ್ಲಿಸಲು ಮುಂದೆ ಬಾರದ ಸಂದರ್ಭದಲ್ಲಿ ಅಲ್ಲಿಯೇ ಇದ್ದು ಅವಕಾಶ ಸದುಪಯೋಗಪಡಿಸಿಕೊಂಡಿದ್ದೇನೆ ಎಂದರು.
    ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ೨ ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ. ಎಂಪಿಎಂ ಕಾರ್ಖಾನೆ ಪುನರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ್ ಮತ್ತು ಕಾರ್ಖಾನೆ ಅಧ್ಯಕ್ಷರ ಜೊತೆ ಮಾತನಾಡಲಾಗಿದೆ. ವಿಐಎಸ್‌ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡುವಂತೆ ಕೇಳಲಾಗಿದೆ. ವಾಪಸ್ ಕೊಡದಿದ್ದರೆ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
    ಹೊಸ ಸೇತುವೆಗಳ ನಿರ್ಮಾಣ, ರಿಂಗ್ ರೋಡ್ ಕಾಮಗಾರಿ, ಭದ್ರಾ ಕಾಲೋನಿಯಲ್ಲಿರುವ ೧೦ ಎಕರೆ ಜಾಗದಲ್ಲಿ ೧೫೦ ಬೆಡ್‌ಗಳ ಆಸ್ಪತ್ರೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ಯಂತ್ರೋಪಕರಣಗಳ ಅಳವಡಿಕೆ, ಚನ್ನಗಿರಿ ರಸ್ತೆ ಅಗಲೀಕರಣ, ಮಾಧವಾಚಾರ್ ವೃತ್ತದಿಂದ ಭದ್ರಾ ಕಾಲೋನಿವರೆಗೂ ಹಾಗೂ ಅನ್ವರ್ ಕಾಲೋನಿಯಿಂದ ಬಾಬಳ್ಳಿವರೆಗೂ ೧೦೦ ಅಡಿ ಅಗಲವಾದ ರಸ್ತೆ ಕಾಮಗಾರಿ ಶೀಘ್ರ ಕೈಗೊಳ್ಳಲಾಗುವುದು. ತಕ್ಕಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
    ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಪ್ರತಕರ್ತರಾದ ಎನ್. ಬಾಬು, ಬಸವರಾಜ್, ಫಿಲೋಮಿನಾ, ಕಿರಣ್, ಮಹಾಲಿಂಗಪ್ಪ, ಕೆ.ಆರ್ ಶಂಕರ್, ಸುಭಾಷ್‌ರಾವ್ ಸಿಂಧ್ಯಾ, ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಶೈಲೇಶ್ ಕೋಠಿ, ಸುದರ್ಶನ್, ರವೀಂದ್ರನಾಥ್(ಬ್ರದರ್), ರಾಬರ್ಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment