Wednesday, July 5, 2023

ಜು.೭ರಂದು ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಶಿಬಿರ



ಭದ್ರಾವತಿ, ಜು. ೫  : ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಛೇರಿ ಹಾಗು ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದ  ಸಹಯೋಗದೊಂದಿಗೆ ಜು. ೭ರಂದು ಉಚಿತ ನೇತ್ರ ತಪಾಸಣೆ , ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ ಆಯೋಜಿಸಲಾಗಿದೆ.  
      ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಳಿಗ್ಗೆ ೯.೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಶಿಬಿರ ನಡೆಯಲಿದ್ದು,  ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಕಣ್ಣಿನ ವಿಭಾಗದ ನುರಿತ ಅನುಭವಿ ತಜ್ಞ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ:  ೭೮೯೨೯ ೫೨೧೭೬, ೭೮೯೨೭ ೦೩೯೬೧ ಇವರನ್ನು ಸಂಪರ್ಕಿಸಬಹುದಾಗಿದೆ.

ಚುಂಚಾದ್ರಿ ಮಹಿಳಾವೇದಿಕೆಯಿಂದ ಗುರು ಪೂರ್ಣಿಮಾ ಆಚರಣೆ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ವಿಶೇಷವಾಗಿ ಗುರುಪೂರ್ಣಿಮಾ ಆಚರಿಸಲಾಯಿತು.

    ಭದ್ರಾವತಿ, ಜು. : ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ ವಿಶೇಷವಾಗಿ ಗುರುಪೂರ್ಣಿಮಾ ಆಚರಿಸಲಾಯಿತು.

   ಇಂದಿನ ಪೀಳಿಗೆಗೆ ಗುರುಪೂರ್ಣಿಮಾ ಮಹತ್ವ ತಿಳಿಸಿಕೊಂಡುವ  ಜೊತೆಗೆ ಧಾರ್ಮಿಕ ಪರಂಪರೆ ಎತ್ತಿ ಹಿಡಿಯುವ ಕಾರ್ಯದಲ್ಲಿ ವೇದಿಕೆ ತೊಡಗಿಸಿಕೊಂಡಿದೆ. ಹಲವಾರು ವರ್ಷಗಳಿಂದ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಮೂಲಕ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ.

   ಕಾರ್ಯಕ್ರಮದಲ್ಲಿ ಗುರು ಪೂರ್ಣಿಮಾ ಕುರಿತು ಪುಷ್ಟ ಕೇಶವ ಮಾತನಾಡಿದರುನಗರಸಭೆ ಮಾಜಿ ಅಧ್ಯಕ್ಷೆ, ವೇದಿಕ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.

      ಶೀಲಾ ರವಿ ಪ್ರಾರ್ಥಿಸಿ, ಲತಾ ಪ್ರಭಾಕರ್ ಸ್ವಾಗತಿಸಿದರು. ಭಾರತಿ ಕುಮಾರ್, ಮಂಗಳಾ, ಮಂಜುಳಾ, ಪ್ರೇಮ, ಕುಸುಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 


Tuesday, July 4, 2023

ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಎರಡು ದಿನಗಳ ಸಾಹಿತ್ಯ ರಸಗ್ರಹಣ ಶಿಬಿರ


    ಭದ್ರಾವತಿ, ಜು. ೪  : ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರ  ಜು.೬ ಮತ್ತು ೭ರಂದು  ಏರ್ಪಡಿಸಲಾಗಿದೆ.
    ನ್ಯೂಟೌನ್‌ ಎಸ್ಎವಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿರುವ ಶಿಬಿರವನ್ನು ಜು.೬ರ ಬೆಳಿಗ್ಗೆ ೧೦ ಗಂಟೆಗೆ ಶಾಸಕ ಬಿ. ಕೆ. ಸಂಗಮೇಶ್ವರ್ ಉದ್ಘಾಟಿಸಲಿದ್ದು,  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ  ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.    ‌
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರಚಲ್ಯ  ಆಧುನಿಕ ಕಾವ್ಯಗಳು, ಅವುಗಳನ್ನು ಪಾಠಮಾಡುವ ಕ್ರಮಗಳ ಕುರಿತು ಮಾತನಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ  ಬಿ. ಸಿದ್ಧಬಸಪ್ಪ, ವಿ. ಜಗದೀಶ್, ಕೋಡ್ಲು ಯಜ್ಞಯ್ಯ ಮತ್ತು ಪ್ರಶಾಂತ ಸಣ್ಣಕ್ಕಿ ಉಪಸ್ಥಿತರಿರುವರು.
     ವಿಶ್ರಾಂತ ಪ್ರಾಂಶುಪಾಲ, ಸಾಹಿತಿ ಡಾ. ಬಿ. ಎಂ ಜಯಶೀಲಾ  ಪ್ರಾಚೀನ ಕಾವ್ಯ ಓದು-ವಿಶ್ಲೇಷಣೆ ಕುರಿತು ಹಾಗು  ಹಳೆಗನ್ನಡ, ನಡುಗನ್ನಡ, ಗಮಕ ಓದು ವಾಚನ ಕುರಿತು  ಲಲಿತಮ್ಮ ವಿಠಲದಾಸ್ ಮಾಹಿತಿ ನೀಡಲಿದ್ದಾರೆ.   ಹಿರಿಯ ಸಾಹಿತಿ ವಿಶ್ರಾಂತ ಉಪನ್ಯಾಸಕ ಡಾ. ಶಾಂತಾರಾಮ್ ಪ್ರಭು  ಭಾಷೆ-ವ್ಯಾಕರಣ ಕುರಿತು ಮಾತನಾಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ, ಚಿಂತಕ ಡಾ. ಎಚ್. ಟಿ. ಕೃಷ್ಣಮೂರ್ತಿ ಕಾವ್ಯ ಮಿಮಾಂಸೆ - ಶೋಧನೆ ಕುರಿತು ಮಾಹಿತಿ ನೀಡಲಿದ್ದಾರೆ.
      ಜು. 7ರಂದು ಶುಕ್ರವಾರ ಬೆಳಿಗ್ಗೆ 10ಕ್ಕೆ ಕನ್ನಡ ಪಠ್ಯದಲ್ಲಿರುವ ಕಥೆ-ಪ್ರಬಂಧ ಗಳನ್ನು ಓದುವ, ವಿಶ್ಲೇಷಣೆ ಮಾಡುವ ಬಗೆಯನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ ವಿವರಿಸುವರು. ವಚನ ಸಾಹಿತ್ಯ ಹಿರಿಮೆ ಕುರಿತು ಕಸ್ತೂರಿಬಾ ಬಾಲಿಕಾ ಪ್ರೌಢಶಾಲಾ ಶಿಕ್ಷಕರಾದ ಡಾ. ಬಿ. ಎಸ್. ತಂಬೂಳಿ ಅವರು ಮಾತನಾಡಲಿದ್ದಾರೆ. ಜನಪದ ಸಾಹಿತ್ಯ ಕುರಿತು ಡಾ. ಎಸ್. ಎಂ. ಮುತ್ತಯ್ಯ ಹಾಗು ಭಾಷಾ ಕೌಶಲ್ಯ-ಮಹತ್ವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡುವರು.  ಪಠ್ಯದಲ್ಲಿರುವ ನಾಟಕ ಕುರಿತು ಓದು, ಪ್ರದರ್ಶನ ಕುರಿತು ಉಪನ್ಯಾಸಕ, ರಂಗನಿರ್ದೇಶಕ ಡಾ. ಜಿ. ಆರ್. ಲವ ಮಾಹಿತಿ ನೀಡಲಿದ್ದಾರೆ.
    ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು, ಫಲಿತಾಂಶದಲ್ಲಿ ಪ್ರಗತಿ ಕಾಣುವ ಉದ್ದೇಶದಿಂದ ಸಾಹಿತ್ಯ ರಸಗ್ರಹಣ ಶಿಬಿರ ಏರ್ಪಡಿಸಲಾಗಿದೆ.  ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು, ಉರ್ದು ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಲು ವೇದಿಕೆ ತಾಲೂಕು ಅಧ್ಯಕ್ಷೆ  ಎಂ.ಎಸ್  ಸುಧಾಮಣಿ  ಕೋರಿದ್ದಾರೆ. 

ಗುರು ಕೃಪೆಯಿಂದ ಎಲ್ಲವೂ ಸಾಧ್ಯ : ಶ್ರೀ ಕೃಷ್ಣಮೂರ್ತಿ ಸೋಮಯಾಜಿ

ಭದ್ರಾವತಿ ತಾಲೂಕು ಶಂಕರ ಸಮಿತಿ ಸಂಚಾಲಕರಾದ ವೇದಬ್ರಹ್ಮ ಶ್ರಿ ಕೃಷ್ಣ ಮೂರ್ತಿ ಸೋಮಯಾಜಿ ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾ‍ರ್ಯಕ್ರಮದ ನೇತೃತ್ವ ವಹಿಸಿ  ಮಾತನಾಡಿದರು.

    ಭದ್ರಾವತಿ, ಜು. : ಜೀವನದಲ್ಲಿ ಗುರು ಕೃಪೆಯಿಂದ  ಲೌಕಿಕ ಹಾಗೂ ಅಲೌಕಿಕ ಸಾಧನೆ ಗುರಿ ತಲುಪಲು ಸಾಧ್ಯ ಎಂದು ತಾಲೂಕು ಶಂಕರ ಸಮಿತಿ ಸಂಚಾಲಕರಾದ  ವೇದಬ್ರಹ್ಮ ಶ್ರಿ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.

    ಅವರು ಜನ್ನಾಪುರ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಪೂರ್ಣಿಮೆ ಕಾ‍ರ್ಯಕ್ರಮದ ನೇತೃತ್ವವಹಿಸಿ  ಮಾತನಾಡಿದರು

   ಗುರುಪೂರ್ಣಿಮೆ ಮಹತ್ವ ತಿಳಿಸಿಕೊಡಲಾಯಿತು. ಅಲ್ಲದೆ  ಭಜನೆ ಹಾಗೂ ಅಷ್ಟೋತ್ತರ ಪಠಣ ನಡೆಯಿತು.  ಜಯಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.  ಎನ್ ಎಸ್ ಸುಬ್ರಹ್ಮಣ್ಯ ಸ್ವಾಗತಿಸಿ, ಸ್ವರ್ಣ ನಾಗೇಂದ್ರ ವಂದಿಸಿದರು

Monday, July 3, 2023

ಎಂ. ಸಿಂಚನಾಗೆ ಅತ್ಯುತ್ತಮ ಎನ್‌ಎಸ್‌ಎಸ್‌ಸ್ವಯಂ ಸೇವಕಿ ಪ್ರಶಸ್ತಿ

ಎಂ. ಸಿಂಚನ
    ಭದ್ರಾವತಿ, ಜು. ೩ : ನಗರದ ಗಾಂಧಿನಗರದ ನಿವಾಸಿ ಕಾರೇಹಳ್ಳಿ ಶ್ರೀ ಬಾಲಗಂಗಾಧರನಾಥ ಕೇಂದ್ರೀಯ ವಿದ್ಯಾಲಯ(ಬಿಜಿಎಸ್)ದ ಶಿಕ್ಷಕಿ ಜಿ.ಎಸ್‌ಅನ್ನಪೂರ್ಣ ಹಾಗು ಗ್ರೀನ್‌ಲ್ಯಾಂಡ್‌ಹೋಟೆಲ್‌ಮಾಲೀಕ ಎಂ.ಎಸ್‌ಮಂಜುನಾಥ್‌ದಂಪತಿ ಪುತ್ರಿ ಎಂ. ಸಿಂಚನ ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಎನ್‌ಎಸ್‌ಎಸ್‌ಸ್ವಯಂ ಸೇವಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಎಂ. ಸಿಂಚನ ಸಾಗರ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದು, ಸ್ವಯಂ ಸೇವಕಿ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
    ಕುವೆಂಪು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಯಂ ಸೇವಕರು ಹಾಗು ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜು.೬ರಂದು ಬೆಳಿಗ್ಗೆ ೧೦.೩೦ಕ್ಕೆ ಕುವೆಂಪು ವಿಶ್ವ ವಿದ್ಯಾಲಯದ ಪ್ರೊ. ಎಸ್.ಪಿ ಹಿರೇಮಠ್‌ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.
    ಎಂ. ಸಿಂಚನ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಕುಟಂಬ ವರ್ಗದವರು ಸಂತಸ ವ್ಯಕ್ತಪಡಿಸಿದ್ದು, ಅಲ್ಲದೆ ನಗರದ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ನಗರಸಭೆ ಅಧ್ಯಕ್ಷರಾಗಿ ಶೃತಿ ವಸಂತಕುಮಾರ್

ಭದ್ರಾವತಿ ನಗರಸಭೆ ಅಧ್ಯಕ್ಷೆಯಾಗಿ ಶೃತಿ ವಸಂತಕುಮಾರ್ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜು. ೩: ನಗರಸಭೆ ಅಧ್ಯಕ್ಷೆಯಾಗಿ ಶೃತಿ ವಸಂತಕುಮಾರ್ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯೆ ಶೃತಿ ವಸಂತಕುಮಾರ್  ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.
ನಗರಸಭೆ ಬಹುತೇಕ ಸದಸ್ಯರು ಹಾಜರಿದ್ದು, ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಶೃತಿ ವಸಂತಕುಮಾರ್‌ರವರನ್ನು ಅಭಿನಂದಿಸಿದರು.  ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡು ಅವಿರೋಧ ಆಯ್ಕೆ ಘೋಷಿಸಿದ ತಕ್ಷಣ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
    ಅಧಿಕಾರ ಹಂಚಿಕೆ :
    ೩೫ ಸದಸ್ಯ ಬಲ ಹೊಂದಿರುವ ನಗರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್‌ ಪಕ್ಷ ಹಿಡಿದಿದ್ದು, ೩೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ೩೦ ತಿಂಗಳ ಅವಧಿಯಲ್ಲಿ ಮೀಸಲಾತಿ ಹೊಂದಿರುವ ಎಲ್ಲಾ ಸದಸ್ಯರಿಗೆ ಅಧಿಕಾರ ಲಭಿಸಬೇಕೆಂಬ ಉದ್ದೇಶದೊಂದಿಗೆ ಒಪ್ಪಂದ ಪ್ರಕಾರ ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗಿದೆ.  ಈಗಾಗಲೇ ಗೀತಾ ರಾಜ್‌ಕುಮಾರ್‌ ಮತ್ತು ಅನುಸುಧಾ ಮೋಹನ್‌ ಪಳನಿ ಅಧ್ಯಕ್ಷರಾಗಿ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ  ಅಧಿಕಾರ ಅನುಭವಿಸಿದ್ದು,  ಪ್ರಸ್ತುತ ಸರ್ವಮಂಗಳ ಭೈರಪ್ಪ ಉಪಾಧ್ಯಕ್ಷರಾಗಿ ಹಾಗು ಶೃತಿ ವಸಂತಕುಮಾರ್‌ ಅಧ್ಯಕ್ಷರಾಗಿದ್ದಾರೆ.
    ಶೃತಿ ವಸಂತಕುಮಾರ್‌ ಪರಿಚಯ:
    ನಗರಸಭೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶೃತಿ ವಸಂತಕುಮಾರ್‌ ನಗರಸಭೆ ೩೫ನೇ ವಾರ್ಡ್‌ ಕಾಂಗ್ರೆಸ್‌ ಸದಸ್ಯೆಯಾಗಿದ್ದು, ಬಿ.ಎ ಪದವಿಧರೆಯಾಗಿದ್ದಾರೆ.  ಮಾಜಿ ನಗರಸಭಾ ಸದಸ್ಯ ಗಂಗಾಧರ್‌ರವರ ಸೊಸೆಯಾಗಿದ್ದು, ಮೊದಲ ಬಾರಿಗೆ ನಗರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾರೆ. ಇವರು ಪತಿ ವಸಂತಕುಮಾರ್‌ ಹಾಗು ಇಬ್ಬರು ಗಂಡು ಮಕ್ಕಳ ಕುಟುಂಬ ಹೊಂದಿದ್ದಾರೆ.

Sunday, July 2, 2023

ಪ್ರೊ. ಬಿ. ಕೃಷ್ಣಪ್ಪ ದಲಿತರ ಬಾಳಿನ ಆಶಾಕಿರಣ : ಸತ್ಯ ಭದ್ರಾವತಿ

ಭದ್ರಾವತಿ ನ್ಯೂಟೌನ್‌ ಜೆಟಿಎಸ್ಶಾಲೆ ಸಮೀಪದ ಲಯನ್ಸ್ಕಣ್ಣಿನ ಆಸ್ಪತ್ರೆ ಸಭಾ ಭವನದಲ್ಲಿ ಭಾನುವಾರ  ಕರ್ನಾಟಕ ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊಬಿಕೃಷ್ಣಪ್ಪನವರ ೮೬ನೇ ಜನ್ಮದಿನಾಚರಣೆ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಉದ್ಘಾಟಿಸಿದರು


ಭದ್ರಾವತಿ, ಜು. :  ಪ್ರೊ. ಬಿ. ಕೃಷ್ಣಪ್ಪನವರು ರಾಜ್ಯದಲ್ಲಿ ದಲಿತ ಚಳುವಳಿಗಳ ರೂವಾರಿಯಾಗಿದ್ದು, ಅಲ್ಲದೆ ದಲಿತರ ಬಾಳಿನ ಆಶಾ ಕಿರಣವಾಗಿದ್ದರು. ಅವರು ರೂಪಿಸಿಕೊಟ್ಟಿರುವ ಹೋರಾಟದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.

          ಅವರು ಭಾನುವಾರ ನ್ಯೂಟೌನ್ಜೆಟಿಎಸ್ಶಾಲೆ ಸಮೀಪದ ಲಯನ್ಸ್ಕಣ್ಣಿನ ಆಸ್ಪತ್ರೆ ಸಭಾ ಭವನದಲ್ಲಿ  ಕರ್ನಾಟಕ ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

          ವಿಶ್ವಜ್ಞಾನಿ, ಭಾರತರತ್ನ ಬಾಬಾ ಸಾಹೇಬ್ಅಂಬೇಡ್ಕರ್ರವರ ದಾರಿಯಲ್ಲಿ ಸಾಗಿಬಂದ ಪ್ರೊ. ಬಿ. ಕೃಷ್ಣಪ್ಪನವರು ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ೧೯೭೫ರ ಅವಧಿಯಲ್ಲಿ ದಲಿತ ಸಂಘಟನೆ ಮೂಲಕ ಚಳುವಳಿಗಳನ್ನು ಆರಂಭಿಸಿ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾದರು. ಹಲವಾರು ಪ್ರಮುಖ ಹೋರಾಟಗಳಲ್ಲಿ ಪ್ರೊ. ಬಿ. ಕೃಷ್ಣಪ್ಪನವರು ಮುಂಚೂಣಿ ನಾಯಾಕರಾಗಿದ್ದರು. ಅವರ ಹೋರಾಟ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ದಾರಿಯಲ್ಲಿ ನಾವುಗಳು ಸಹ ಸಾಗಬೇಕಾಗಿದೆ ಎಂದರು.

          ಒಕ್ಕೂಟದ ಅಧ್ಯಕ್ಷೆ ಎಸ್. ಉಮಾ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಸಿ. ಜಯಪ್ಪ ಹೆಬ್ಬಳಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಿದರುಶಿವಮೊಗ್ಗ ಇತಿಹಾಸ ತಜ್ಞ, ಚಿಂತಕ ಡಾ. ಕೆ.ಜಿ ವೆಂಕಟೇಶ್ಉಪನ್ಯಾಸ ನಡೆಸಿ ಕೊಟ್ಟರು.

          ಹಿರಿಯ ರೈತ ಮುಖಂಡ  ಎಚ್.ಆರ್ಬಸವರಾಜಪ್ಪ,  ಬೆಂಗಳೂರು ಗಾಂಧಿಭವನ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ಕಾರ್ಯದರ್ಶಿ, ಮ್ಯಾನೆಜಿಂಗ್ಟ್ರಸ್ಟಿ ಇಂದಿರಾ ಪ್ರೊ. ಕೃಷ್ಣಪ್ಪಹಿರಿಯ ಸಾಹಿತಿ ಜಿ.ವಿ ಸಂಗಮೇಶ್ವರ್, ನಿವೃತ್ತ ಉಪನ್ಯಾಸಕ ಪ್ರೊ. ಎಂ. ಚಂದ್ರಶೇಖರಯ್ಯ, ನಗರಸಭೆ ಪ್ರಭಾರ ಅಧ್ಯಕ್ಷೆ ಬಿ.ಪಿ ಸರ್ವಮಂಗಳ ಭೈರಪ್ಪ,  ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,  ಪೌರಾಯುಕ್ತ ಎಚ್.ಎಂ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ .ಕೆ ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ, ಒಕ್ಕೂಟದ ಪ್ರಭಾರ ಜಿಲ್ಲಾಧ್ಯಕ್ಷ ಸಿ.ಕೆ ಗಂಗಾಧರಮೂರ್ತಿ, ಡಿಎಸ್ಎಸ್ಜಿಲ್ಲಾ ಸಂಚಾಲಕ ಚಿನ್ನಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ವರ್ಷ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ  ರಂಗನಾಥ್ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

          ಒಕ್ಕೂಟದ ಉಪಾಧ್ಯಕ್ಷ ಲೋಕೇಶ್(ಮೆಸ್ಕಾಂ) ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ. ಈಶ್ವರಪ್ಪ(ನಗರಸಭೆ) ನಿರೂಪಿಸಿದರು. ಒಕ್ಕೂಟದ ಮಾರ್ಗದರ್ಶಕ ಕೆ.ಬಿ ಜುಂಜಾನಾಯ್ಕ್, ಸಂಘಟನಾ ಕಾರ್ಯದರ್ಶಿ ಕೆ. ರಂಗನಾಥ್ಹಾಗು ವಿವಿಧ ಸಂಘಟನೆಗಳ ಪ್ರಮುಖರು, ದಲಿತ ನೌಕರರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.