Saturday, July 8, 2023

ನ್ಯೂಟೌನ್‌ ಪೊಲೀಸರ ಕಾರ್ಯಾಚರಣೆ : ಓರ್ವನ ಸೆರೆ

೪ ಪ್ರಕರಣ ದಾಖಲು : ೪ ದ್ವಿಚಕ್ರ ವಶ

ಭದ್ರಾವತಿ ನ್ಯೂಟೌನ್‌ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಜು. ೮: ನ್ಯೂಟೌನ್‌ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ತಾಲೂಕಿನ ದಾನವಾಡಿ ಗ್ರಾಮದ ನಿವಾಸಿ ಉಮೇಶ್‌(೪೧) ಬಂಧಿತ ವ್ಯಕ್ತಿಯಾಗಿದ್ದು, ಈತನಿಂದ ಒಟ್ಟು ೧.೨೫ ಲಕ್ಷ ರು. ಮೌಲ್ಯದ ನಾಲ್ಕು ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  ನ್ಯೂಟೌನ್‌ ಠಾಣೆಯಲ್ಲಿ ಒಟ್ಟು ೩ ಪ್ರಕರಣ ಹಾಗು ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿತ್ತು.
   ಜಿಲ್ಲಾ ರಕ್ಷಣಾಧಿಕಾರಿ  ಜಿ.ಕೆ  ಮಿಥುನ್ ಕುಮಾರ್, ಹೆಚ್ಚುವರಿ  ರಕ್ಷಣಾಧಿಕಾರಿ  ಅನಿಲ್‌ಕುಮಾರ್‌ ಭೂಮಾರೆಡ್ಡಿ,   ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮರವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಟಿ. ರಮೇಶ್  ಮತ್ತು  ಭಾರತಿ  ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ವೆಂಕಟೇಶ್ ಹಾಗು ಸಿಬ್ಬಂದಿಗಳಾದ ರಂಗನಾಥ್, ತೀರ್ಥಲಿಂಗಪ್ಪ ಮತ್ತು ಪ್ರವೀಣ್ ಕುಮಾರ್  ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿದೆ.

Friday, July 7, 2023

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ

ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ನಡೆಯಿತು.
ಭದ್ರಾವತಿ, ಜು. ೭ : ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಜಯತೀರ್ಥರ ಆರಾಧನೆ ನಡೆಯಿತು.
    ಬೆಳಿಗ್ಗೆ ನಿರ್ಮಾಲ್ಯ, ಪಂಚಾಮೃತ ಅಭಿಷೇಕ ಮತ್ತು ಪ್ರಾಕಾರದ ಒಳಗಡೆ ರಥೋತ್ಸವ ಹಾಗೂ ಶಿವಮೊಗ್ಗ ಶ್ರೀನಿಧಿ ಗುಡಿ ಅವರಿಂದ ಜಯತೀರ್ಥರ ಕುರಿತು ಉಪನ್ಯಾಸ  ನಡೆಯಿತು. ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ನೆರೆವೇರಿತು.
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾ ರಾಘವೇಂದ್ರ ತಂತ್ರಿ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್,  ನಿರಂಜನಾಚಾರ್ಯ, ಮಧುರ,  ಜಯತೀರ್ಥ, ಗೋಪಾಲಕೃಷ್ಣ ಆಚಾರ್,  ಶ್ರೀನಿವಾಸ ಆಚಾರ್, ಶುಭ ಗುರುರಾಜ್, ಸುಪ್ರೀತಾ ತಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಬಿ.ಎಸ್‌ ಶಶಿಕಾಂತ್‌ ನಿಧನ


ಬಿ.ಎಸ್‌ ಶಶಿಕಾಂತ್‌
    ಭದ್ರಾವತಿ, ಜು. ೭ : ತಾಲೂಕಿನ ರಾಮನಗರ ನಿವಾಸಿ, ಯುವ ಮುಖಂಡ ಬಿ.ಎಸ್‌ ಶಶಿಕಾಂತ್‌(೩೫) ಶುಕ್ರವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಕೆಲವು ದಿನಗಳ ಹಿಂದೆ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಇವರ ತಂದೆ ಮಾವಿನಕೆರೆ ಗ್ರಾಮ ಪಂಚಾಯಿತಿ ನಿವೃತ್ತ ಕಾರ್ಯದರ್ಶಿ ಸಿದ್ದಲಿಂಗೇಗೌಡ್ರು ನಿಧನ ಹೊಂದಿದ್ದರು.
    ಶಶಿಕಾಂತ್‌ ನಿಧನಕ್ಕೆ ರಾಮನಗರ ಗ್ರಾಮಸ್ಥರು, ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Thursday, July 6, 2023

ಜು.೮ರಂದು ರಂಗ ಕಲಾವಿದರು ಒಕ್ಕೂಟದ ಉದ್ಘಾಟನೆ

    ಭದ್ರಾವತಿ, ಜು. ೬ : ರಂಗ ಕಲಾವಿದರು ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಜು. ೮ರ ಸಂಜೆ ೪ ಗಂಟೆಗೆ ಹಳೇನಗರದ ಕನಕಮಂಟಪದಲ್ಲಿ ನಡೆಯಲಿದೆ.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಪೌರಾಯುಕ್ತ ಮನುಕುಮಾರ್‌ ಉಪಸ್ಥಿತರಿರುವರು.
    ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌ ರಂಗಭೂಮಿ ಕುರಿತು ಉಪನ್ಯಾಸ ನೀಡಲಿದ್ದು, ಒಕ್ಕೂಟದ ಅಧ್ಯಕ್ಷ ಬಿ. ಕಮಲಾಕರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಆಧುನಿಕ ಕಾವ್ಯ ಓದು, ವಿಶ್ಲೇಷಣೆಗೆ ಆಧುನಿಕ ಕಾಲಘಟ್ಟದ ಅರಿವು ಅಗತ್ಯ : ಡಾ. ಕುಮಾರ ಚಲ್ಯ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರದಲ್ಲಿ ಆಧುನಿಕ ಕಾವ್ಯ ಓದು, ವಿಶ್ಲೇಷಣೆ ಕುರಿತು ಮಾತನಾಡಿದರು. 
    ಭದ್ರಾವತಿ, ಜು. ೬ : ಆಧುನಿಕ ಕಾಲಘಟ್ಟದ ಅರಿವು ಹೊಂದಿರುವವರಿಗೆ ಮಾತ್ರ ಆಧುನಿಕ ಸಾಹಿತ್ಯದ ಅರಿವು ತಿಳಿಯಲು ಸಾಧ್ಯ. ಆ ನೆಲೆಗಟ್ಟಿನಲ್ಲಿಯೇ ಒಂದು ಸಾಹಿತ್ಯದ ಕಾವ್ಯದ ಓದು, ವಿಶ್ಲೇಷಣೆ ನಡೆಯಬೇಕಾಗಿದೆ  ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕುಮಾರ ಚಲ್ಯ ಹೇಳಿದರು.
    ಅವರು ಗುರುವಾರ  ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ಹಾಗು ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಗೆ ಪಠ್ಯವನ್ನು ಆಧರಿಸಿದ ಸಾಹಿತ್ಯ ರಸಗ್ರಹಣ ಶಿಬಿರದಲ್ಲಿ ಆಧುನಿಕ ಕಾವ್ಯ ಓದು, ವಿಶ್ಲೇಷಣೆ ಕುರಿತು ಮಾತನಾಡಿದರು.
    ಪ್ರಾಚೀನ ಕಾಲಘಟ್ಟ ಹಾಗು ಆಧುನಿಕ ಕಾಲಘಟ್ಟಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಆಧುನಿಕತೆ ಬೆಳೆದಂತೆ ನಾಗರೀಕ ಸಮಾಜ ಸಹ ಬೆಳವಣಿಗೆ ಹೊಂದಿದೆ. ಈ ನಡುವೆ ರೂಪುಗೊಂಡ ಸಾಹಿತ್ಯದ ಕುರಿತು ಹೆಚ್ಚಿನ ಅರಿವು ಅಗತ್ಯವಾಗಿದೆ. ಆಧುನಿಕ ಸಾಹಿತ್ಯದ ಕಾವ್ಯ-ಓದು, ವಿಶ್ಲೇಷಣೆ ವಿಭಿನ್ನವಾಗಿದೆ. ಇದರ ಕುರಿತು ಇಂದಿನ ಪೀಳಿಗೆಯವರು ತಿಳಿದುಕೊಳ್ಳಬೇಕಾಗಿದೆ ಎಂದರು.
    ಆಧುನಿಕ ಸಾಹಿತ್ಯದ ಕಾವ್ಯ ಓದುವ ಬಗೆ ಹಾಗು ವಿಶ್ವೇಷಣೆ ಮಾಡುವ ವಿಧಾನಗಳನ್ನು ಶಿಕ್ಷಕರಿಗೆ ವಿವರಿಸಿದರು.
    ನಗರಸಭೆ ಸದಸ್ಯ ಬಿ.ಕೆ ಮೋಹನ್‌ ಶಿಬಿರ ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯಪರ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಶಾಸಕರು ಬದ್ದರಾಗಿದ್ದು, ಶಿಕ್ಷಕರು ಶಿಬಿರದ ಸದುಪಯೋಗಪಡೆದುಕೊಳ್ಳಬೇಕೆಂದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ  ಎಂ.ಎಸ್  ಸುಧಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ. ಬಸವರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಮತ್ತು ಪ್ರಶಾಂತ ಸಣ್ಣಕ್ಕಿ ಉಪಸ್ಥಿತರಿರುವರು.
    ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವಾನಾಥ್‌, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ರಾಜಸ್ವ ನಿರೀಕ್ಷಕ ಪ್ರಶಾಂತ್‌, ಶಿಕ್ಷಣ ಸಂಯೋಜಕ ರವಿಕುಮಾರ್‌, ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುಮತಿ ಕಾರಂತ್‌ ಪ್ರಾರ್ಥಿಸಿದರು. ಶಿಕ್ಷಕಿ ಮಾಯಮ್ಮ ನಿರೂಪಿಸಿದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.

Wednesday, July 5, 2023

ವಿಐಎಸ್‌ಎಲ್‌ ಕಾರ್ಖಾನೆ ಮುಂಭಾಗ ಮುಂದುವರೆದ ಹೋರಾಟ

ರಾಜ್ಯ ಸರ್ಕಾರ ಗಮನ ಹರಿಸಲಿ 

    ಭದ್ರಾವತಿ, ಜು. ೫ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಸುಮಾರು ೬ ತಿಂಗಳಿನಿಂದ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
    ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹಾಗು ಅಗತ್ಯವಿರುವ ಬಂಡವಾಳ ತೊಡಗಿಸಿವಂತೆ ಮತ್ತು ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಈಗಾಗಲೇ ಹಲವು ರೀತಿಯ ಹೋರಾಟಗಳನ್ನು ನಡೆಸಲಾಗಿದೆ. ರಾಜ್ಯದ ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳು, ಹೋರಾಟಗಾರರು, ಶಾಲಾ-ಕಾಲೇಜುಗಳ ವಿದ್ಯಾಸಂಸ್ಥೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ನಾಗರೀಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಹಲವಾರು ಬಾರಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಮನವಿ ಸಹ ಸಲ್ಲಿಸಲಾಗಿದೆ. ಆದರೆ ಹೋರಾಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.
    ಈ ನಡುವೆ ಇದೀಗ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳ್ಳುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್‌ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದು, ಆದರೂ ಸಹ ಆಡಳಿತ ಮಂಡಳಿ ಯಾವುದೇ ನಿರ್ಧಾರ ಕೈಗೊಳ್ಳದೆ ಅಸಹಾಯಕತೆ ವ್ಯಕ್ತಪಡಿಸಿದೆ.
    ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ಕಳೆದ ೩ ದಿನಗಳಿಂದ ವಿಧಾನಮಂಡಲ ಅಧಿವೇಶ ನಡೆಯುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಗಮನ ಹರಿಸಬೇಕಾಗಿದೆ.
    ಮಳೆ ನಡುವೆ ಹೋರಾಟ:
    ಶಾಮಿಯಾನ ಬಳಸಿಕೊಂಡು ಕಳೆದ ೬ ತಿಂಗಳಿನಿಂದ ಮಳೆ-ಗಾಳಿ-ಬಿಸಿಲನ್ನು ಲೆಕ್ಕಿಸದೆ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಕಳೆದ ಸುಮಾರು ೨ ತಿಂಗಳ ಹಿಂದೆ ಶಾಮಿಯಾನ ಬದಲಿಸಿದ್ದು, ವಾಟರ್‌ ಪ್ರೂಫ್‌ ಶಾಮಿಯಾನ ಹಾಕಲಾಗಿದೆ. ಕಳೆದ ೨ ದಿನಗಳಿಂದ ಮಳೆಯಾಗುತ್ತಿದ್ದು, ಆದರೂ ಸಹ ಹೋರಾಟ ಮುಂದುವರೆಯುತ್ತಿದ್ದು, ಶಾಮಿಯಾನ ಭಾಗದಲ್ಲಿ ಮಳೆ ನೀರು ನಿಂತುಕೊಂಡಿದ್ದು, ಹೋರಾಟಗಾರರು ನೀರನ್ನು ತೆರವುಗೊಳಿಸುವ ಮೂಲಕ ಹೋರಾಟಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಿದ್ದಾರೆ.


ಭದ್ರಾವತಿ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಸುಮಾರು ೬ ತಿಂಗಳಿನಿಂದ ಹೋರಾಟ ನಡೆಸುತ್ತಿದ್ದು, ಕಳೆದ ೨ ದಿನಗಳಿಂದ ಮಳೆಯಾಗುತ್ತಿದೆ. ಬುಧವಾರ ಹೋರಾಟದ ಸ್ಥಳದಲ್ಲಿ ಮಳೆ ನೀರು ನಿಂತುಕೊಂಡಿದ್ದು, ತೆರವುಗೊಳಿಸುತ್ತಿರುವುದು.

ಜು.೯ರಂದು ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರ




    ಭದ್ರಾವತಿ, ಜು. ೫ : ಸಿದ್ಧಾರೂಢ ನಗರದ ಶೃಂಗೇರಿ ಶಂಕರ ಮಠದ ವತಿಯಿಂದ ಜು. ೯ರಂದು ಬೆಳಿಗ್ಗೆ ೧೦.೩೦ ಕ್ಕೆ ೨೩ನೇ ವರ್ಷದ ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರವನ್ನು ರಾಜಲಕ್ಷ್ಮಿ ಟೀಚರ್ ಮತ್ತು ಸಂಗಡಿಗರಿಂದ ಹಮ್ಮಿಕೊಳ್ಳಲಾಗಿದೆ.  
    ಶೃಂಗೇರಿ ಶ್ರೀ ವಿಭೂಷಿತ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರ ಕೃಪಾಶೀರ್ವಾದೊಂದಿಗೆ  ಕಾರ್ಯಕ್ರಮ ನಡೆಯಲಿದ್ದು, ಶ್ರೀಶೃಂಗೇರಿ ಶಂಕರ ಮಠ ಧರ್ಮಾಧಿಕಾರಿ ಕೆ.ಆರ್‌ ಸುಬ್ಬರಾವ್‌ ಉಪಸ್ಥಿತರಿರುವರು.   ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
    ಶಾರದಾ ಶಂಕರ ಭಕ್ತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಲು ಕೋರಲಾಗಿದೆ.