ಶನಿವಾರ, ಜುಲೈ 22, 2023
ಬಿಎಸ್‌ವೈ ಗೌರವ ಡಾಕ್ಟರೇಟ್ : ಅಭಿನಂದಿಸಿ ಆಶೀರ್ವದಿಸಿದ ಶ್ರೀಗಳು
ಶುಕ್ರವಾರ, ಜುಲೈ 21, 2023
ರೌಡಿಶೀಟರ್ ಮುಜಾಯಿದ್ದೀನ್ ಹತ್ಯೆ : ೫ ಮಂದಿ ಪೊಲೀಸರ ವಶಕ್ಕೆ
ಕುವೆಂಪು ವೈಚಾರಿಕ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ : ಡಾ. ಟಿ.ಸಿ ಭಾರತಿ
ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ʻಕುವೆಂಪು ನಾಟಕಗಳು ಮತ್ತು ಸಾಮಾಜಿಕ ಶ್ರೇಣಿಕರಣ ವ್ಯವಸ್ಥೆʼ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರು, ಗಣ್ಯರು, ವಿದ್ಯಾರ್ಥಿಗಳು ಉದ್ಘಾಟಿಸಿದರು.
ಭದ್ರಾವತಿ, ಜು. ೨೧: ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರು ಪ್ರತಿಪಾದಿಸಿದ ವೈಚಾರಿಕ ತತ್ವಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿಅಳವಡಿಸಿಕೊಳ್ಳುವಂತಾಗಬೇಕೆಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಟಿ.ಸಿ ಭಾರತಿ ಹೇಳಿದರು.
ಅವರು ಶುಕ್ರವಾರ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ʻಕುವೆಂಪು ನಾಟಕಗಳು ಮತ್ತು ಸಾಮಾಜಿಕ ಶ್ರೇಣಿಕರಣ ವ್ಯವಸ್ಥೆʼ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುವೆಂಪು ಅವರ ವೈಚಾರಿಕ ತತ್ವಗಳು ಎಂದಿಗೂ ಪ್ರಸ್ತುತವಾಗಿವೆ. ಪ್ರತಿಯೊಬ್ಬರು ಇದರ ಕುರಿತು ಹೆಚ್ಚಿನ ಅರಿವು ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹೆಚ್ಚಿನ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಮಂಜುನಾಥ್ ಸಕಲೇಶ್ ಮಾತನಾಡಿ, ಕುವೆಂಪು ಸಾಹಿತ್ಯ ಮತ್ತು ವಿಚಾರಗಳು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿರುವುದರ ಕುರಿತು ವಿವರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್. ಕುಮಾರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ ಉಪಸ್ಥಿತರಿದ್ದರು.
ವರ್ಷಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಶಾರದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಶ್ವತ್ ವಂದಿಸಿದರು. ಸುಮಾರು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ರೌಡಿಶೀಟರ್ ಮುಜ್ಜು ಹತ್ಯೆ
ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಹತ್ಯೆಯಾದ ರೌಡಿಶೀಟರ್ ಮುಜ್ಜು ಅಲಿಯಾಸ್ ಮುಜಾಯಿದ್ದೀನ್.
ಭದ್ರಾವತಿ, ಜು. ೨೧ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್ ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮುಜ್ಜು ಅಲಿಯಾಸ್ ಮುಜಾಯಿದ್ದೀನ್(32) ಹತ್ಯೆಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈತನಿಗೆ ಇಬ್ಬರು ಪತ್ನಿಯರಿದ್ದು, ಗುರುವಾರ ಮಧ್ಯ ರಾತ್ರಿ ಈತನ ಎರಡನೇ ಪತ್ನಿ ಮನೆ ಮುಂಭಾಗದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಹಿರಿಯ ಪೊಲೀಸ್ ಅಧೀಕ್ಷಕ ಜಿತೇಂದ್ರಕುಮಾರ್ ದಯಾಮ ಹಾಗು ಪೇಪರ್‌ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತದೇಹದ ಶವ ಪರೀಕ್ಷೆ ನಡೆಸಲಾಗಿದ್ದು, ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಹತ್ಯೆಗೊಳಗಾಗಿರುವ ಮುಜಾಯಿದ್ದೀನ್ ಸಹೋದರ(ತಮ್ಮ) ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.