Friday, July 28, 2023

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ

    ಭದ್ರಾವತಿ, ಜು. ೨೮: ನ್ಯೂಟೌನ್‌ ಠಾಣೆ ಪೊಲೀಸರು ಇಸ್ಪೀಟ್‌ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಘಟನೆ ಗುರುವಾರ ನಡೆದಿದೆ.
    ಜಿಂಕ್ ಲೈನ್ ಸಾರ್ವಜನಿಕ ಸಮುದಾಯ ಭವನದ ಪಕ್ಕದಲ್ಲಿ 5-6 ಜನರ ಗುಂಪೊಂದು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಲಕ್ಕವಳ್ಳಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಔತಣಕೂಟ

೮ ಜನ ಗ್ರಾ.ಪಂ ಸದಸ್ಯರ ಮೇಲೆ ಹಲ್ಲೆ ಆರೋಪ: ಇಬ್ಬರ ಸೆರೆ


    ಭದ್ರಾವತಿ, ಜು. ೨೮:  ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ  ಔತಣ ಕೂಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು,  ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ತಾಲೂಕಿನ ಶಂಕರಘಟ್ಟದ ಕುವೆಂಪು ನಗರ ಬಡಾವಣೆಯ ಹೋಟೆಲ್ ಒಂದರಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ 8 ಜನ ಗ್ರಾಮಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
    ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವಿ ಕಿಶೋರ್ ಬೆಂಬಲಿತರನ್ನು ಕಡೆಗಣಿಸಿರುವ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
    ಗ್ರಾಮ ಪಂಚಾಯಿತಿ ಸದಸ್ಯರಾದ ಧನಪಾಲ್, ದಶರಥ್, ಶ್ರೀಧರ್, ವೆಂಕಟರಮಣ, ಮಂಜುನಾಥ್ ಸೇರಿದಂತೆ ಇನ್ನಿತರರು ಹಲ್ಲೆಗೊಳಗಾಗಿದ್ದಾರೆ. ರವಿಕಿಶೋರ್, ಆಕಾಶ್, ಪವನ್, ಕಿಶೋರ್, ಕಾರ್ತಿಕ್ ಮತ್ತು  ಡ್ರೈವರ್ ಸಾದಿಕ್ ವಿರುದ್ಧ ಪ್ರಕರಣ ದಾಖಲಾಗಿದೆ.  ರವಿಕಿಶೋರ್ ಮತ್ತು ಆಕಾಶ್  ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಮೂವರು ನಾಪತ್ತೆಯಾಗಿದ್ದಾರೆ.

ಬಿ.ಎ ಪದವಿಯಲ್ಲಿ ಎಚ್.ಎಂ ಪುಷ್ಪಾ ಪ್ರಥಮ ರ‍್ಯಾಂಕ್

ಎಚ್.ಎಂ ಪುಷ್ಪಾ
    ಭದ್ರಾವತಿ, ಜು. ೨೮: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉದ್ಯೋಗಿ, ಲ್ಯಾಬೋರೇಟರೀಸ್ ವಿಭಾಗದ ಸೂಪರ್‌ವೈಸರ್ ಎಲ್‌. ಮಧುಕುಮಾರ್‌ರವರ ಪತ್ನಿ  ಎಚ್.ಎಂ. ಪುಷ್ಪಾರವರು ಬಿ.ಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.
    ಕುವೆಂಪು ವಿಶ್ವವಿದ್ಯಾಲಯ 2022ರ ನವೆಂಬರ್‌ನಲ್ಲಿ ನಡೆಸಿದ ಬ್ಯಾಚುಲರ್ ಆಫ್ ಆರ್ಟ್ಸ್‌
ಪರೀಕ್ಷೆಯಲ್ಲಿ ಪುಷ್ಪಾರವರು ದೂರ ಶಿಕ್ಷಣದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
    ಇತ್ತೀಚೆಗೆ ನಡೆದ ವಿಶ್ವ ವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ಇವರಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಪುಷ್ಪಾರವರು ಓದು, ಬರವಣೆಗೆ, ನೃತ್ಯ, ಸೃಜನಾತ್ಮಕ ಕಲೆ ಇತ್ಯಾದಿ ಹವ್ಯಾಸಗಳನ್ನು ಹೊಂದಿದ್ದಾರೆ. ಭವಿಷ್ಯದಲ್ಲಿ ಶಿಕಕಿಯಾಗುವ ಹಂಬಲ ಇವರದ್ದಾಗಿದೆ. ವಿಐಎಸ್‌ಎಲ್ ಸಮುದಾಯ ಇವರ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸಿದೆ.

ಅಪ್ಪಾಜಿ ಶಿಷ್ಯ ಎಸ್.‌ ಕುಮಾರ್‌ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಭದ್ರಾವತಿ ಬಿಜೆಪಿ ಮುಖಂಡ ಎಸ್.‌ ಕುಮಾರ್‌ರವರನ್ನು ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಳಿಸಲಾಗಿದೆ.
    ಭದ್ರಾವತಿ, ಜು. ೨೮: ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರೊಂದಿಗೆ  ಬಹುಕಾಲದವರೆಗೆ ರಾಜಕೀಯ ಶಿಷ್ಯರಾಗಿ ಗುರುತಿಸಿಕೊಂಡಿದ್ದ, ಈ ಬಾರಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಬಿಜೆಪಿ ಮುಖಂಡ ಎಸ್.‌ ಕುಮಾರ್‌ರವರನ್ನು ಇದೀಗ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.
    ಈ ಕುರಿತು ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್‌ ಸುಂದರೇಶ್‌ರವರು ಕೆಪಿಸಿಸಿ ಆದೇಶದ ಅನ್ವಯ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಆದೇಶ ಪತ್ರ ಹೊರಡಿಸಿದ್ದಾರೆ.
    ಎಸ್.‌ ಕುಮಾರ್‌  ಮೂಲತಃ ಎಂ.ಜೆ ಅಪ್ಪಾಜಿಯವರ ಶಿಷ್ಯರಾಗಿ ರಾಜಕೀಯ ಪ್ರವೇಶಿಸುವ ಮೂಲಕ ಮೊದಲ ಬಾರಿಗೆ ಮಾವಿನಕೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿದ್ದರು. ನಂತರ ಇದೆ ಕ್ಷೇತ್ರದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷರಾಗಿದ್ದರು. ನಂತರ  ಇದೆ ಕ್ಷೇತ್ರದಿಂದ ೨ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಅಲ್ಲದೆ ಇವರ ಪತ್ನಿ ಜ್ಯೋತಿ ಸಹ ೨ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಉಪಾಧ್ಯಕ್ಷರಾಗಿ, ಮತ್ತೊಂದು ಬಾರಿ ಅಧ್ಯಕ್ಷರಾಗಿದ್ದರು. ಎಂ.ಜೆ ಅಪ್ಪಾಜಿ ನಿಧನ ಹೊಂದಿದ ನಂತರ ಜೆಡಿಎಸ್‌ ಪಕ್ಷ ತೊರೆದು ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೆ ಗುರುತಿಸಿಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
    ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಗೆಲುವಿಗೆ ಕಾರಣರಾಗಿದ್ದರು. ಇದೀಗ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
    ಇದುವರೆಗೂ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ನ್ಯಾಯವಾದಿ ಟಿ. ಚಂದ್ರೇಗೌಡ ಅವರನ್ನು ಏಕಾಏಕಿ ಕೈ ಬಿಡಲಾಗಿದೆ.

Thursday, July 27, 2023

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಿಜಿಎಸ್‌ ಶಾಲೆ ಮಕ್ಕಳಿಗೆ ಬಹುಮಾನ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ಭದ್ರಾವತಿ, ಜು. ೨೭: ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಹ್ಯಾದ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
    ಜಾವಳ್ಳಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಶಿವಮೊಗ್ಗ ಕ್ಲಸ್ಟರ್‌ ಸಿಬಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಜಿಎಸ್ ಶಾಲೆ ೮ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಹಾಗೂ ೧೦ನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯಾ ಎನ್ ಗೌಡ ಮತ್ತು ಪಿ. ಮನ್ವಿತ್  ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
    ವಿದ್ಯಾಲಯದ ಆಡಳಿತ ಮಂಡಳಿಯವರು,  ಶೈಕ್ಷಣಿಕ ಸಲಹೆಗಾರರು, ಆಡಳಿತಾಧಿಕಾರಿ ಬಿ. ಜಗದೀಶ್‌, ಪ್ರಾಂಶುಪಾಲರಾದ ಡಾ. ಸಿ. ಅಮುದಾ, ಮುನಿರಾಜ್‌, ಉಪಪ್ರಾಂಶುಪಾಲ ಎ.ಎಂ ವೀರರಾಜೇಂದ್ರ ಸ್ವಾಮಿ ಹಾಗೂ ಮುಖ್ಯೋಪಾಧ್ಯಾಯಿನಿ  ಕೆ.ಎನ್‌ ದಿವ್ಯ ಬಹುಮಾನ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.  

ಆಭರಣ, ನಗದು ಕಳವು

    ಭದ್ರಾವತಿ, ಜು. ೨೭: ಮನೆಯೊಂದರ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ತಡವಾಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
    ಶ್ರೀರಾಮನಗರದ ನಿವಾಸಿ ಮಂಜುಳಾರವರ ಮನೆಯಲ್ಲಿ ಜು.೧೩ರಂದು ಕಳವು ಘಟನೆ ನಡೆದಿದೆ. ಅಂದು ಮಂಜುಳಾ ಹಾಗು ಇವರ ಪತಿ ಇಬ್ಬರೂ ಕೆಲಸಕ್ಕೆ ತೆರಳಿದ್ದು, ಮಗಳು ಕಾಲೇಜಿಗೆ ಹೋಗಿದ್ದು, ಮನೆಯಲ್ಲಿ ಇವರ ಅತ್ತೆ ಮಾತ್ರ ಇರುತ್ತಾರೆ.
    ಸಂಜೆ ಮನೆಗೆ ಬಂದು ಬೀರು ನೋಡಲಾಗಿದ್ದು, ಲಾಕರ್‌ನಲ್ಲಿ ಇಡಲಾಗಿದ್ದ ಸುಮಾರು ೮೯,೦೦೦ ರು. ಮೌಲ್ಯದ ಆಭರಣ ಹಾಗು ೮,೦೦೦ ರು. ನಗದು ಕಳುವಾಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಮಂಜುಳಾರವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ರಾಮನಕೊಪ್ಪ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿ ವಿತರಣೆ

ಹಲವಾರು ವರ್ಷಗಳಿಂದ ಭದ್ರಾವತಿ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ  ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜು. ೨೭ : ಹಲವಾರು ವರ್ಷಗಳಿಂದ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ  ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕೇಸರಿಪಡೆವತಿಯಿಂದ ಪ್ರಸಕ್ತ ಸಾಲಿಗೆ ಅಗತ್ಯವಿರುವಷ್ಟು ಪುಸ್ತಕ, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್ ಸೇರಿದಂತೆ ಲೇಖನ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
     ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಗ್ರಾಮದ ಮುಖಂಡರು, ಶಾಲೆಯ ಮಕ್ಕಳ ಪೋಷಕರು, ಕೇಸರಿ ಪಡೆ ಪ್ರಮುಖರು ಉಪಸ್ಥಿತರಿದ್ದರು.
    ಈಗಾಗಲೇ ಕಳೆದ ಸುಮಾರು ೨ ತಿಂಗಳಿನಿಂದ ಕೇಸರಿಪಡೆವತಿಯಿಂದ ಹಲವು ಸರ್ಕಾರಿ ಶಾಲೆಗಳಲ್ಲಿ ಬಡಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಗಿದೆ.