ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಆಡಿ ಕೃತ್ತಿಕಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಭದ್ರಾವತಿ, ಆ. ೯ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಆಡಿ ಕೃತ್ತಿಕಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಕ್ಷೇತ್ರದಲ್ಲಿನ ಎಲ್ಲಾ ಮೂಲ ವಿಗ್ರಹಗಳಿಗೆ ಹಾಗು ಶ್ರೀ ದವತ್ತಿರು ಸ್ವಾಮೀಜಿಯವರ ಶಕ್ತಿ ಪೀಠಕ್ಕೆ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗಿನ ಜಾವ ೪ ಗಂಟೆಗೆ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ ನಡೆಯಿತು.
ಭರಣಿ ಕಾವಡಿ ಉತ್ಸವ ಮಂಗಳವಾರ ಜರುಗಿದ್ದು, ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಂಡರು. ಚಿಕ್ಕಮಗಳೂರು ಹಾಗು ಶಿವಮೊಗ್ಗ ಜಿಲ್ಲೆಗಳಿಂದ, ರಾಜ್ಯದ ವಿವಿಧ ಭಾಗಗಳಿಂದ ಹಾಗು ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ವಿಶೇಷವಾಗಿ ಕಾವಡಿ ಹರಕೆ ಹೊತ್ತ ಭಕ್ತರು ಗಮನ ಸೆಳೆದರು. ಬಾಯಿ, ಬೆನ್ನಿಗೆ ಕಾವಡಿ ಚುಚ್ಚಿಕೊಂಡು ಹರಕೆ ಸಮರ್ಪಿಸುವ ಮೂಲಕ ಭಕ್ತಿ ಮೆರೆದರು.
ಶ್ರೀ ಕ್ಷೇತ್ರದ ಶ್ರೀ ಮುರುಗೇಶ್‌ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕ್ಷೇತ್ರದ ಪ್ರಮುಖರಾದ ಎ. ಚಂದ್ರಘೋಷಣ್ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರುಗಳು, ಭದ್ರಗಿರಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗು ಸೇವಾಕರ್ತರು ಉಪಸ್ಥಿತರಿದ್ದರು.