Tuesday, August 8, 2023

ಸಮಾಜದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಪರಿಹಾರ ಸಾಧ್ಯ : ಪ್ರಕಾಶ್‌ ರಾಜ್‌

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ಭದ್ರಾವತಿ ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
    ಭದ್ರಾವತಿ, ಆ. ೮ :  ಸಮಾಜದ ಸಮಸ್ಯೆಗಳಿಗೆ ನಾವುಗಳು ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌ ಸಹಯೋಗದೊಂದಿಗೆ  ನ್ಯೂಟೌನ್‌ ಸರ್‌.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಂಗಭೂಮಿ, ಸಿನಿಮಾ ಮತ್ತು ಸಮಾಜ ವಿಷಯ ಕುರಿತು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
    ನಗರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್) ಮತ್ತು ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ)ಗಳ ಸಮಸ್ಯೆಗಳು ಕೇವಲ ಕಾರ್ಮಿಕರ ಸಮಸ್ಯೆಗಳಲ್ಲ. ಇಡೀ ಊರಿನ ಸಮಸ್ಯೆಯಾಗಿದೆ ಎಂದು ಜನರು ಭಾವಿಸಿ, ಪ್ರತಿಕ್ರಿಯಿಸಿದಾಗ ಮಾತ್ರ  ಸಮಸ್ಯೆ ನಿವಾರಣೆ ಸಾಧ್ಯ  ಎಂದರು.  
    ಕಲಾವಿದರು ಸಮಾಜದ ಪ್ರತಿನಿಧಿಗಳು:
    ಕಲಾವಿದರು ಹೇಡಿಗಳಾದರೆ, ಸಮಾಜ ಹೇಡಿಯಾದಂತೆ. ಏಕೆಂದರೆ ಕಲಾವಿದರು ಸಹ ಸಮಾಜದ ಪ್ರತಿನಿಧಿಗಳು. ಕಲಾವಿದ ಕೇವಲ ಪ್ರತಿಭೆಯಿಂದ ಮಾತ್ರ ಬೆಳೆಯಲು ಸಾಧ್ಯವಿಲ್ಲ. ಸಮಾಜದ ಜನ ಪ್ರೋತ್ಸಾಹಿಸಿದಾಗ, ಒಪ್ಪಿಕೊಂಡಾಗ ಮಾತ್ರ ಬೆಳೆಯಲು ಸಾಧ್ಯ ಎಂದರು.
    ಧರ್ಮದ ಹೆಸರಿನಲ್ಲಿ ವಿವಾದಗಳು ಬೇಡ :
    ಧರ್ಮದ ಹೆಸರಿನಲ್ಲಿ ವಿವಾದಗಳು ಸೃಷ್ಟಿಸಬಾರದು. ಏಕೆಂದರೆ ಧರ್ಮ ಕರುಣೆಯನ್ನು ಸಾರುತ್ತದೆ ಹೊರತು, ಹಿಂಸೆಯನ್ನಲ್ಲ. ಆದ್ದರಿಂದ ನಾವುಗಳು ವಿಶ್ವ ಮಾನವರಾಗೋಣ, ವಿಶ್ವ ಗುರುವಾಗುವುದು ಬೇಡ. ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿರಬೇಕು. ಆದರೆ ಭಿನ್ನಾಭಿಪ್ರಾಯವನ್ನು ಅವಾಚ್ಯ ಶಬ್ದಗಳ ಮೂಲಕ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

No comments:

Post a Comment