Wednesday, August 23, 2023

‘ಕ್ರಾಂತಿಕಾರಿ ಗದ್ದರ್-ಒಂದು ನೆನಪು’ ಕಾರ್ಯಕ್ರಮ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಭದ್ರಾವತಿ ತಾಲೂಕು ಶಾಖೆ ವತಿಯಿಂದ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ 'ಕ್ರಾಂತಿಕಾರಿ ಗದ್ದರ್-ಒಂದು ನೆನಪು' ಕಾರ್ಯಕ್ರಮ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಮಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
    ಭದ್ರಾವತಿ, ಆ. ೨೩: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)  ತಾಲೂಕು ಶಾಖೆ ವತಿಯಿಂದ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  'ಕ್ರಾಂತಿಕಾರಿ ಗದ್ದರ್-ಒಂದು ನೆನಪು' ಕಾರ್ಯಕ್ರಮ ಬುಧವಾರ ನಡೆಯಿತು.
      ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಮಲ್ಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಸಂಚಾಲಕ ಕೆ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಪ್ರಸ್ತಾವಿಕ ನುಡಿಗಳನ್ನಾಡಿದರು.    
       ಜಿಲ್ಲಾ  ಸಂಚಾಲಕ ಚಿನ್ನಯ್ಯ, ಮುಖಂಡರಾದ ಕರ್ನಾಟಕ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ದೇವೇಂದ್ರಪ್ಪ,  ಸಿ. ಜಯಪ್ಪ, ಜಿ. ರಾಜು, ಕಾಣಿಕ್ ರಾಜ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tuesday, August 22, 2023

ಜೆಡಿಎಸ್‌ ಎಸ್‌ಸಿ ಘಟಕ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವೆಂಕಟೇಶ್‌ ರಾಜೀನಾಮೆ

ಭದ್ರಾವತಿ ಜಾತ್ಯಾತೀತ ಜನತಾದಳ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಂಗಳವಾರ ಉಜ್ಜನಿಪುರ ವೆಂಕಟೇಶ್‌ ರಾಜೀನಾಮೆ ಸಲ್ಲಿಸಿದ್ದಾರೆ.
    ಭದ್ರಾವತಿ, ಆ. ೨೨ : ಜಾತ್ಯಾತೀತ ಜನತಾದಳ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಂಗಳವಾರ ಉಜ್ಜನಿಪುರ ವೆಂಕಟೇಶ್‌ ರಾಜೀನಾಮೆ ಸಲ್ಲಿಸಿದ್ದಾರೆ.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಕಳೆದ ಸುಮಾರು ೮ ತಿಂಗಳಿನಿಂದ ಪ್ರಧಾನ ಕಾರ್ಯದರ್ಶಿ ಹುದ್ದೆ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣಗಳಿಂದ ಹುದ್ದೆ ನಿರ್ವಹಿಸಲು ಸಾಧ್ಯವಾಗದಿರುವ ಹಿನ್ನಲೆಯಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ವೆಂಕಟೇಶ್‌ ಮನವರಿಕೆ ಮಾಡಿದ್ದಾರೆ.

ವಿಐಎಸ್‌ಎಲ್‌ನಲ್ಲಿ ಕೊನೆಗೂ ಉತ್ಪಾದನೆ ಆರಂಭಕ್ಕೆ ಕ್ಷಣಗಣನೆ

ಬಿಲಾಯ್‌ ಘಟಕದಿಂದ ೧೯ ವ್ಯಾಗನ್‌ಗಳಲ್ಲಿ ಬಂದು ತಲುಪಿದ ಬ್ಲೂಮ್‌ಗಳು

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಪುನಃ ಉತ್ಪಾದನೆ ಆರಂಭಿಸುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಮಂಗಳವಾರ ಕಾರ್ಖಾನೆ ತಲುಪಿವೆ. ಇವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.
    ಭದ್ರಾವತಿ, ಆ. ೨೨ :  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಪುನಃ ಉತ್ಪಾದನೆ ಆರಂಭಿಸುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಮಂಗಳವಾರ ಕಾರ್ಖಾನೆ ತಲುಪಿವೆ. ಇದರಿಂದಾಗಿ ಕಾರ್ಖಾನೆ ಆಡಳಿತ ಮಂಡಳಿ ಹಾಗು ಕಾರ್ಮಿಕ ವಲಯದಲ್ಲಿ ಸಂತಸ ಮನೆ ಮಾಡಿದೆ.
    ಕಾರ್ಖಾನೆ ಮುಂಭಾಗದಲ್ಲಿ ಕಳೆದ ಸುಮಾರು ೮ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕೆ ಒಂದು ಹಂತದಲ್ಲಿ ಜಯ ಲಭಿಸಿದೆ.  
    ಆ.೧೦ರಿಂದ ಕಾರ್ಖಾನೆಯಲ್ಲಿ ಬಾರ್‌ ಮಿಲ್‌ ಆರಂಭಿಸುವುದಾಗಿ ಉಕ್ಕು ಪ್ರಾಧಿಕಾರ  ಈ ಹಿಂದೆ ಘೋಷಿಸಿತ್ತು. ಅಲ್ಲದೆ ಈ ಕುರಿತು ಕಾರ್ಖಾನೆ ಅಧಿಕಾರಿಗಳು ಪ್ರಕಟಣೆ ಸಹ ಹೊರಡಿಸಿದ್ದರು. ಆದರೆ ಕಚ್ಛಾ ಸಾಮಾಗ್ರಿಗಳು ಪೂರೈಕೆಯಾಗದಿರುವುದು ಸೇರಿದಂತೆ ಕೆಲವು ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು.
    ಇದೀಗ ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಉಕ್ಕು ಪ್ರಾಧಿಕಾರದ ಬಿಲಾಯ್‌ ಘಟಕದಿಂದ ಮೊದಲ ಹಂತವಾಗಿ ಸುಮಾರು ೧೯ ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಬಂದು ತಲುಪಿವೆ. ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು ಇವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.
    ಈ ನಡುವೆ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ, ಕಾರ್ಖಾನೆಯ ಆಧುನಿಕರಣ ಹಾಗೂ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ವಾಗುವವರೆಗೂ ನಮ್ಮ ಹೋರಾಟ ನಡೆಯಲಿದ್ದು, ಮುಂದಿನ  ಹೋರಾಟಗಳಲ್ಲೂ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.  

ಪಾರ್ವತಿ ಸಾಲೇರ ಇಂಜಿನಿಯರಿಂಗ್‌ನಲ್ಲಿ ಪ್ರಥಮ ‌ರ‍್ಯಾಂಕ್ : ಸನ್ಮಾನ

ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ  ಇಂಜಿನಿಯರಿಂಗ್‌ ಪರೀಕ್ಷೆಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಪ್ರಥಮ ‌ರ‍್ಯಾಂಕ್ ಪಡೆದ ಭದ್ರಾವತಿ ನಗರದ ಜನ್ನಾಪುರ ನಿವಾಸಿ ಪಾರ್ವತಿ ಸಾಲೇರ .ಜೆ ಅವರನ್ನು ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨೨: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ  ಇಂಜಿನಿಯರಿಂಗ್‌ ಪರೀಕ್ಷೆಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಪ್ರಥಮ ‌ರ‍್ಯಾಂಕ್ ಪಡೆದ ನಗರದ ಜನ್ನಾಪುರ ನಿವಾಸಿ ಪಾರ್ವತಿ ಸಾಲೇರ .ಜೆ ಅವರನ್ನು ನ್ಯೂಟೌನ್‌ ಅಮಲೋದ್ಭವಿ ಮಾತೆ ದೇವಾಲಯದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಪಾರ್ವತಿ ಸಾಲೇರ .ಜೆ ಅವರು ಜಮೀನ್ದಾರ್‌ ಜ್ಯೋತಿ ಸಾಲೇರ .ಎಸ್‌ ಹಾಗು ಐಶ್ವರ್ಯ ದಂಪತಿಯ ಪುತ್ರಿಯಾಗಿದ್ದು, ಇವರು ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ೬ ಚಿನ್ನದ ಪದಕದೊಂದಿಗೆ ಪ್ರಥಮ ‌ರ‍್ಯಾಂಕ್ ಪಡೆದುಕೊಂಡು ಕೀರ್ತಿತಂದಿದ್ದಾರೆ. ವಿಶೇಷವಾಗಿ ಪಾರ್ವತಿಯವರು ಕ್ಷೇತ್ರದಲ್ಲಿ ೨ ಬಾರಿ ಶಾಸಕರಾಗಿ ನಿಧನ ಹೊಂದಿರುವ ಸಾಲೇರ ಎಸ್‌ ಸಿದ್ದಪ್ಪ ಅವರ ಮೊಮ್ಮಗಳು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
    ಇವರ ಸಾಧನೆಯನ್ನು ಅಭಿನಂದಿಸಿ ದೇವಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಧರ್ಮಗುರು ಫಾದರ್‌ ಲಾನ್ಸಿ ಡಿಸೋಜ, ಕಾರ್ಯದರ್ಶಿ ಅಂತೋಣಿ ವಿಲ್ಸನ್‌, ಸೈಂಟ್‌ ಚಾರ್ಲ್ಸ್‌ ಸಂಸ್ಥೆಯ ಸುಪೀರಿಯರ್‌ ಸಿಸ್ಟರ್‌ ಜೆಸಿಂತಾ ಡಿಸೋಜಾ, ವ್ಯಾಲೆಂಟೀನಾ ಸಿಕ್ವೆರಾ, ಆರ್.ಎಸ್‌ ಪೀಟರ್‌ ಜೋಸೆಫ್‌, ಅಂತೋನಿ ಕ್ರೂಸ್‌ , ಸಲಿನ್‌ ಗೊನ್ಸಲ್ವಿಸ್‌, ರೋಸಿ ಡಿಸೋಜ, ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಕಲಚೇತನ ಕ್ರೀಡಾಪಟು ಎಸ್. ಜ್ಯೋತಿ ಸಾಧನೆ

ಯರೇಹಳ್ಳಿ ಗ್ರಾಮ ಪಂಚಾಯಿತಿ ಅಭಿನಂದನೆ

ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣೀನರಸೀಪುರ ಗ್ರಾಮದ ನಿವಾಸಿ, ವಿಕಲಚೇತನ ಕ್ರೀಡುಪಟು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್. ಜ್ಯೋತಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರನ್ನು ಮಂಗಳವಾರ ಗ್ರಾಮ ಪಂಚಾಯಿತಿ ಸನ್ಮಾನಿಸಿ ಅಭಿನಂದಿಸಿತು.
    ಭದ್ರಾವತಿ, ಆ. ೨೨ : ತಾಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣೀನರಸೀಪುರ ಗ್ರಾಮದ ನಿವಾಸಿ, ವಿಕಲಚೇತನ ಕ್ರೀಡುಪಟು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್. ಜ್ಯೋತಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ಮಲೇಷಿಯಾದಲ್ಲಿ ಜರುಗಿದ ಕ್ರೀಡಾಕೂಟದ  ಪ್ಯಾರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು  ದೇಶಕ್ಕೆ ಕೀರ್ತಿ ತಂದಿದ್ದಾರೆ.  ಜ್ಯೋತಿಯವರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಇವರ ಸಾಧನೆಯನ್ನು ರಾಜ್ಯ ಸರ್ಕಾರ ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಜ್ಯೋತಿಯವರು ಸಾಧನೆ ಮಾಡಿರುವುದು ಉಕ್ಕಿನ ನಗರದ ಕೀರ್ತಿ ಪತಾಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
    ಯರೇಹಳ್ಳಿ ಗ್ರಾಮ ಪಂಚಾಯಿತಿ ಅಭಿನಂದನೆ:
    ಜ್ಯೋತಿಯವರ ಸಾಧನೆಯನ್ನು ಯರೇಹಳ್ಳಿ ಗ್ರಾಮ ಪಂಚಾಯಿತಿ ಪ್ರಶಂಸಿಸುವ ಜೊತೆಗೆ ಅಭಿನಂದಿಸಿದೆ. ಮಂಗಳವಾರ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಶಾಂತಬಾಯಿ ರಮೇಶ್‌ .ಬಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗು ಸಿಬ್ಬಂದಿಗಳು  ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.  

ಬೆರಳು ಮುದ್ರೆ ಪರಿಶೀಲನೆ : ತಲೆಮರೆಸಿಕೊಂಡಿದ್ದ ವ್ಯಕ್ತಿ ಸೆರೆ

ಭದ್ರಾವತಿ ಬೆರಳು ಮುದ್ರೆ ಪರಿಶೀಲನೆ ಮೂಲಕ ೬ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ಪತ್ತೆ ಮಾಡುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಭದ್ರಾವತಿ, ಆ. ೨೨: ಬೆರಳು ಮುದ್ರೆ ಪರಿಶೀಲನೆ ಮೂಲಕ ೬ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ಪತ್ತೆ ಮಾಡುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.


    ಆಕಾಶ್ ಗೌಡ ಅಲಿಯಾಸ್ ಅಪ್ಪ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ರಾತ್ರಿ ಗಸ್ತು ವೇಳೆಯಲ್ಲಿ ಈತ ಅನುಮಾನಸ್ಪದವಾಗಿ ಸಿಕ್ಕಿ ಬಿದ್ದಿದ್ದಾನೆ. ತಕ್ಷಣ ಜಾಗೃತರಾದ ಪೊಲೀಸರು ಎಂಸಿಸಿಟಿಎನ್‌ಎಸ್ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನ ಮೂಲಕ ಈತನ ಬೆರಳು ಮುದ್ರೆ ಪರಿಶೀಲನೆ ನಡೆಸಿದ್ದು, ೬ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಈತನನ್ನು ಬಂಧಿಸಿ ಮುಂದಿನ ಕ್ರಮ ಕ್ರೈಗೊಂಡಿದ್ದಾರೆ.
    ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಹಾಗು ಪೊಲೀಸ್ ಉಪಾಧೀಕ್ಷಕ ನಾಗರಾಜ್ ಅಭಿನಂದಿಸಿದ್ದಾರೆ.

ಆ.೨೯ರಂದು ಶ್ರೀಕೃಷ್ಣ ವೇಷ ಪ್ರದರ್ಶನ

    ಭದ್ರಾವತಿ, ಆ. ೨೨ : ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಆ.೨೯ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ.
    ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಪ್ರದರ್ಶನ ಮಧ್ಯಾಹ್ನ ೧.೩೦ಕ್ಕೆ ನಡೆಯಲಿದ್ದು, ಪ್ರದರ್ಶನದಲ್ಲಿ ೫ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗು ಸಿಹಿ ವಿತರಿಸಲಾಗುವುದು ಎಂದು ತರುಣಭಾರತಿ ಶಿಶುಮಂದಿರದ ಸಂಚಾಲಕಿ ಸರ್ವಮಂಗಳ ತಿಳಿಸಿದ್ದಾರೆ.