Tuesday, August 22, 2023

ವಿಐಎಸ್‌ಎಲ್‌ನಲ್ಲಿ ಕೊನೆಗೂ ಉತ್ಪಾದನೆ ಆರಂಭಕ್ಕೆ ಕ್ಷಣಗಣನೆ

ಬಿಲಾಯ್‌ ಘಟಕದಿಂದ ೧೯ ವ್ಯಾಗನ್‌ಗಳಲ್ಲಿ ಬಂದು ತಲುಪಿದ ಬ್ಲೂಮ್‌ಗಳು

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಪುನಃ ಉತ್ಪಾದನೆ ಆರಂಭಿಸುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಮಂಗಳವಾರ ಕಾರ್ಖಾನೆ ತಲುಪಿವೆ. ಇವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.
    ಭದ್ರಾವತಿ, ಆ. ೨೨ :  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇದೀಗ ಪುನಃ ಉತ್ಪಾದನೆ ಆರಂಭಿಸುವುದು ಬಹುತೇಕ ಖಚಿತವಾಗಿದ್ದು, ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಮಂಗಳವಾರ ಕಾರ್ಖಾನೆ ತಲುಪಿವೆ. ಇದರಿಂದಾಗಿ ಕಾರ್ಖಾನೆ ಆಡಳಿತ ಮಂಡಳಿ ಹಾಗು ಕಾರ್ಮಿಕ ವಲಯದಲ್ಲಿ ಸಂತಸ ಮನೆ ಮಾಡಿದೆ.
    ಕಾರ್ಖಾನೆ ಮುಂಭಾಗದಲ್ಲಿ ಕಳೆದ ಸುಮಾರು ೮ ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ನಡೆಸುತ್ತಿರುವ ಹೋರಾಟಕ್ಕೆ ಒಂದು ಹಂತದಲ್ಲಿ ಜಯ ಲಭಿಸಿದೆ.  
    ಆ.೧೦ರಿಂದ ಕಾರ್ಖಾನೆಯಲ್ಲಿ ಬಾರ್‌ ಮಿಲ್‌ ಆರಂಭಿಸುವುದಾಗಿ ಉಕ್ಕು ಪ್ರಾಧಿಕಾರ  ಈ ಹಿಂದೆ ಘೋಷಿಸಿತ್ತು. ಅಲ್ಲದೆ ಈ ಕುರಿತು ಕಾರ್ಖಾನೆ ಅಧಿಕಾರಿಗಳು ಪ್ರಕಟಣೆ ಸಹ ಹೊರಡಿಸಿದ್ದರು. ಆದರೆ ಕಚ್ಛಾ ಸಾಮಾಗ್ರಿಗಳು ಪೂರೈಕೆಯಾಗದಿರುವುದು ಸೇರಿದಂತೆ ಕೆಲವು ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು.
    ಇದೀಗ ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳು ಉಕ್ಕು ಪ್ರಾಧಿಕಾರದ ಬಿಲಾಯ್‌ ಘಟಕದಿಂದ ಮೊದಲ ಹಂತವಾಗಿ ಸುಮಾರು ೧೯ ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಬಂದು ತಲುಪಿವೆ. ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು ಇವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.
    ಈ ನಡುವೆ ಗುತ್ತಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ, ಕಾರ್ಖಾನೆಯ ಆಧುನಿಕರಣ ಹಾಗೂ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ವಾಗುವವರೆಗೂ ನಮ್ಮ ಹೋರಾಟ ನಡೆಯಲಿದ್ದು, ಮುಂದಿನ  ಹೋರಾಟಗಳಲ್ಲೂ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.  

No comments:

Post a Comment