Tuesday, August 29, 2023

ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯ ಲೋಕಾರ್ಪಣೆ

ಭದ್ರಾವತಿ ಆನೆಕೊಪ್ಪ, ಎಂಪಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಈ ಸಂಬಂಧ ನೂತನ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಆ. 29: ನಗರದ ಆನೆಕೊಪ್ಪ, ಎಂಪಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆ ನಾಗಪೂಜೆ, ಆಲಯ ಪ್ರವೇಶ, ಗೋ ಪೂಜೆ, ಮಹಾಪ್ರತಿಷ್ಠೆ, ನಂತರ ಚಂಡಿಕಾ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಆನೆಕೊಪ್ಪ, ಉಜ್ಜನಿಪುರ, ಕಾಗದನಗರ, ತಿಮ್ಲಾಪುರ, ಬುಳ್ಳಾಪುರ, ಜೆಪಿಎಸ್ ಕಾಲೋನಿ, ಸುರಗಿತೋಪು, ಹುಡ್ಕೋ ಕಾಲೋನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು.

ಭದ್ರಾವತಿ ವಿವಿಧೆಡೆ ಜಿಲ್ಲಾ ಯೋಜನಾ ನಿರ್ದೇಶಕರ ಭೇಟಿ : ಪರಿಶೀಲನೆ

ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ಭದ್ರಾವತಿ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೨೯ : ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗು ಕನಕಮಂಟಪ ಮೈದಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ ಹಾಗು ಪುಟ್ ಪಾತ್ ಪರಿಶೀಲನೆ ನಡೆಸಿದರು.

    ನಗರಸಭೆ ಕಂದಾಯಾಧಿಕಾರಿ ರಾಜ್ ಕುಮಾರ್, ಕಿರಿಯ ಇಂಜಿನಿಯರ್ ಗಳಾದ ಕೆ. ಪ್ರಸಾದ್, ಸಂತೋಷ್ ಪಾಟೀಲ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, August 28, 2023

ಎಸ್‌ಎವಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಭದ್ರಾವತಿ ನ್ಯೂಟೌನ್‌ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್‌ಎವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
    ಭದ್ರಾವತಿ, ಆ. ೨೮:  ನಗರದ ನ್ಯೂಟೌನ್‌ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್‌ಎವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡು ಕೀರ್ತಿ ತಂದಿದ್ದಾರೆ.
    ನಗರದ ವಿಐಎಸ್‌ಎಲ್‌  ಕ್ರೀಡಾಂಗಣದಲ್ಲಿ ಸಂತ ಚಾರ್ಲ್ಸ್ ಪದವಿ ಪೂರ್ವ ಕಾಲೇಜಿನ ಸಹಕಾರದೊಂದಿಗೆ ಜರುಗಿದ ೨ ದಿನಗಳ  21 ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಸ್. ಧನುಶ್ ವೈಯಕ್ತಿಕವಾಗಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು,  ಅಲ್ಲದೆ  ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಹಾಗೂ ಒಟ್ಟು ಸಮಗ್ರ ಪ್ರಶಸ್ತಿಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
    ಈ ಕಾಲೇಜು ಕಳೆದ ೫ ವರ್ಷಗಳಿಂದ ನಿರಂತರವಾಗಿ ಸಮಗ್ರ ಪ್ರಶಸ್ತಿ ಪಡೆಯುತ್ತಿರುವುದು ವಿಶೇಷವಾಗಿದ್ದು, ವಿಜೇತ ವಿದ್ಯಾರ್ಥಿಗಳನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವದಿಸಿದ್ದಾರೆ.  
    ಕಾಲೇಜಿನ  ಆಡಳಿತಾಧಿಕಾರಿ ಬಿ. ಜಗದೀಶ್‌,   ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಲೋಹಿತ್, ಕಾಲೇಜಿನ ಉಪನ್ಯಾಸಕರು ಹಾಗು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.    

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ : ಪ್ರಕರಣ ದಾಖಲು

ಭದ್ರಾವತಿ, ಆ. ೨೮ : ಹಳೇನಗರ ವ್ಯಾಪ್ತಿಯಲ್ಲಿ ಪ್ರವೀಣ್ ಎಂಬ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ತಂಡವನ್ನು ಪತ್ತೆಹಚ್ಚಲಾಗಿದೆ.
  ನಗರಸಭೆ ಉದ್ಯಾನವನ ಹಿಂಭಾಗದಲ್ಲಿರುವ ಭದ್ರಾ ಹೊಳೆಯ ದಡದಲ್ಲಿ ಇಸ್ಪೀಟು ಜೂಜಾಟದಲ್ಲಿ ೪-೬ ಜನರ ತಂಡ ಜೂಜಾಟದಲ್ಲಿ ತೊಡಗಿದ್ದನ್ನು ಪತ್ತೆಮಾಡಿ ಪ್ರಕರಣ ದಾಖಲಿಸಲಾಗಿದೆ.

ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಸೆ.೩೧ರಿಂದ ೩ ದಿನಗಳ ಕಾಲ ಆರಾಧನಾ ಮಹೋತ್ಸವ

ಶ್ರೀ ರಾಘವೇಂದ್ರ ಗುರು ಸಾರ್ವಭೌಮರು
    ಭದ್ರಾವತಿ, ಆ. ೨೮: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿಯಿಂದ ೩೫೨ನೇ ರಥೋತ್ಸವ ಮತ್ತು ಆರಾಧನಾ ಮಹೋತ್ಸವ ಆ.೩೧ ರಿಂದ ಸೆ.೨ರವರೆಗೆ ೩ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
    ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಕೃಪಾಶೀರ್ವಾದದೊಂದಿಗೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ೩೫೨ನೇ ಮಹೋತ್ಸವ ಮತ್ತು ಆರೋಧನಾ ಮಹೋತ್ಸವ ಜರುಗಲಿದೆ. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ಸುಪ್ರಭಾತ, ೭ಕ್ಕೆ ಪಂಚಾಮೃತ ಅಭಿಷೇಕ, ೮ಕ್ಕೆ ಭಕ್ತರ ಮನೆಗಳಲ್ಲಿ ಪಾದಪೂಜೆ ಮತ್ತು ೮.೩೦ಕ್ಕೆ ಡೋಲೋತ್ಸವ ನಡೆಯಲಿದೆ.
    ಆ.೩೧ರಂದು ಗಾಂಧಿನಗರ, ಕೇಶವಪುರ ಹಾಗು ಹೊಸಮನೆ ಬಡಾವಣೆ ವ್ಯಾಪ್ತಿಯಲ್ಲಿ, ಸೆ.೧ರಂದು ಹಳೇನಗರದ ಬ್ರಾಹ್ಮಣರ ಬೀದಿಯ  ಭಕ್ತರ ಮನೆಗಳಲ್ಲಿ ಹಾಗು ೨ರಂದು ಮಠದಲ್ಲಿ ಪಾದಪೂಜೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿ ಸಹ ಮಠದಲ್ಲಿ ತುಲಾಭಾರ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.

ಅತ್ಯುತ್ತಮ ವಿಜ್ಞಾನ, ತಂತ್ರಜ್ಞಾನ ಸಾಕ್ಷ್ಯಚಿತ್ರಕ್ಕಾಗಿ ಡಾ. ದೇಬ್ಜಾನಿ ಹಾಲ್ಡರ್‌ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಆರ್‌ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೇಬ್ಜಾನಿ ಹಾಲ್ಡರ್ ಅವರು ೬೯ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ಬೆಂಗಳೂರು, ಆ. ೨೮: ಆರ್‌ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೇಬ್ಜಾನಿ ಹಾಲ್ಡರ್ ಅವರು ೬೯ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ಅವರ 'ಎಥೋಸ್ ಆಫ್ ಡಾರ್ಕ್‌ನೆಸ್' ಸಾಕ್ಷ್ಯಚಿತ್ರಕ್ಕಾಗಿ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
    ಸಾಕ್ಷ್ಯಚಿತ್ರವು ಸಿನಿಮಾದ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಮತ್ತು ಅದನ್ನು ಬೆಳೆಯಲು ಕಾರಣವಾದವರ ಕುರಿತಾಗಿನ ಉದ್ಯಮದ ಕುರುಡುತನವನ್ನು ವಿವರಿಸುತ್ತದೆ. ದೃಶ್ಯಗಳು ಮತ್ತು ಪ್ರತಿಭೆಗಳಿಗೆ ಸಮಾಜದ ಹೊಗಳಿಕೆಯ ನಡುವೆ, ಇದರ ನಿಜವಾದ ನಾಯಕರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಚಿತ್ರವು ಈ ನಿರ್ಲಕ್ಷಿತ ಸಿನಿಮಾ ತಂತ್ರಜ್ಞಾನ ಜಗತ್ತಿನ ನಿಜವಾದ ನಾಯಕರನ್ನು ಪರಿಚಯಿಸಿಕೊಡುವ ಯತ್ನ ಮಾಡುತ್ತದೆ.
    ಡಾ. ದೇಬ್ಜಾನಿ ಹಾಲ್ಡರ್ ಪ್ರತಿಕ್ರಿಯಿಸಿ, '೬೯ ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಅರ್ಹವಾದ ಮನ್ನಣೆಗಾಗಿ ನಾವು ನಿಜವಾಗಿಯೂ ಗೌರವ ಮತ್ತು ಕೃತಜ್ಞರಾಗಿರುತ್ತೇವೆ. 'ಎಥೋಸ್ ಆಫ್ ಡಾರ್ಕ್ನೆಸ್' ಸಾಕ್ಷ್ಯಚಿತ್ರವು ಸಿನಿಮಾದಲ್ಲಿ ಆಗಾಗ್ಗೆ ಕಡೆಗಣಿಸಲ್ಪಟ್ಟ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಪರದೆಯ ಹಿಂದೆ ಕೆಲಸ ಮಾಡುವವರು ಅಪರಿಚಿತರಾಗಿರುತ್ತಾರೆ. ನನ್ನ ಸಹ ನಿರ್ದೇಶಕ ಅವಿಜಿತ್ ಬ್ಯಾನರ್ಜಿ ಸೇರಿದಂತೆ ನನ್ನ ತಂಡದ ಎಲ್ಲಾ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ' ಎಂದರು.
    ಆರ್‌ವಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವೈ.ಎಸ್.ಆರ್. ಮೂರ್ತಿ, ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್ ಕುಲಪತಿ ಡಾ.ಪಿಯುಷ್ ರಾಯ್ ಮಾತನಾಡಿ, ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಭೂಮಿ ಮೇಲೆ ಜೀವಿಗಳಿಗೆ ಮಳೆ ಇಲ್ಲದೆ ಬದುಕಿಲ್ಲ : ಡಾ.ಎಸ್.ಎಸ್ ಸತ್ಯನಾರಾಯಣ

ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ನಾಡು-ನುಡಿ ವೇದಿಕೆ ಭೂಮಿಕಾ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಕವಿಗಳ ಋತು ವಿಲಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಆ. ೨೮ : ಮಳೆ ಇಲ್ಲದೆ ಭೂಮಿ ಮೇಲೆ ಯಾವ ಜೀವಿಯೂ ಬದುಕುಲಾರದು. ಈ ಹಿನ್ನಲೆಯಲ್ಲಿ ಮಳೆ ಬರಲೇ ಬೇಕು. ಕವಿಗಳ ಆಶಯ ಸಹ ಇದೆ ಆಗಿದ್ದು, ಈ ನಿಟ್ಟಿನಲ್ಲಿ ಕನ್ನಡದ ಕವಿಗಳು ವರ್ಷದ ಮಳೆ ಋತು ಕುರಿತು ತಮ್ಮದೇ ಭಾವನೆ ವ್ಯಕ್ತಪಡಿಸಿದ್ದಾರೆಂದು ವಿಮರ್ಶಕ ಡಾ.ಎಚ್.ಎಸ್ ಸತ್ಯನಾರಾಯಣ ಹೇಳಿದರು.
    ಅವರು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ನಾಡು-ನುಡಿ ವೇದಿಕೆ ಭೂಮಿಕಾ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಕವಿಗಳ ಋತು ವಿಲಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಳೆಯಿಲ್ಲದೆ ಇಳೆಯುಂಟೆ? ಭೂಮಿಯ ಮೇಲಿನ ಜೀವಕೋಟಿ ಬದುಕುಳಿಯಲು ಮಳೆ ಬೇಕು. ಹಾಗೆಂದೇ ಕನ್ನಡ ಕವಿಗಳು ವರ್ಷ ಋತುವನ್ನು ಬಣ್ಣಿಸಿರುವ ಪರಿ ಅನನ್ಯವಾಗಿದೆ. ಪಂಪ, ರನ್ನ, ಹರಿಹರ, ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ಆಧುನಿಕ ಕವಿಗಳು ಮಳೆಯನ್ನು ಜೀವನಾಡಿಯಾಗಿ ಕಂಡಿರುವ ಬಗೆಯನ್ನು  ವಿವರಿಸಿದರು.
    ಬಿಎಂಶ್ರೀ, ಬೇಂದ್ರೆ, ಕುವೆಂಪು, ಪುತೀನ ಕೆ.ಎಸ್ ನರಸಿಂಹಸ್ವಾಮಿ, ಜಿ.ಎಸ್ ಶಿವರುದ್ರಪ್ಪ, ಕಣವಿ, ನಿಸಾರ್ ಅಹಮದ್, ಸು.ರಂ ಎಕ್ಕುಂಡಿ ಕಂಬಾರ, ಎಂ.ಆರ್ ಕಮಲ, ಪ್ರತಿಭಾ ನಂದಕುಮಾರ್ ಮುಂತಾದವರ ಕವಿತೆಗಳಲ್ಲಿ ಚಿತ್ರಿತವಾಗಿರುವ ಮಳೆಯ ವರ್ಣನೆಯನ್ನು ಸಭೆಗೆ ಪರಿಚಯಿಸಿದರು. ಅಲ್ಲದೆ ಜನಪದದ ಅನೇಕ ಮಳೆಯ ಹಾಡುಗಳನ್ನು ಉಲ್ಲೇಖಿಸುತ್ತಾ ಕನ್ನಡದ ಸುಪ್ರಸಿದ್ಧ ಕವಿಗಳ ರಚನೆಗಳನ್ನು ಚರ್ಚಿಸಿದರು.
    ವೇದಿಕೆ ಅಧ್ಯಕ್ಷ ಅಧ್ಯಕ್ಷ ಡಾ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಕವಿಗಳು ಕಂಡ ಋತು ವಿಲಾಸವನ್ನು ಅಭ್ಯಸಿಸುವುದೇ ಒಂದು ಸೊಗಸೆಂದು ಬಣ್ಣಿಸಿದರು. ಈ ಬಗೆಯ ಕಾರ್ಯಕ್ರಮದಿಂದಲಾದರೂ ವರುಣ ದೇವ ಮಳೆಯನ್ನು ಕರುಣಿಸಲೆಂದು ಆಶಿಸಿದರು.
    ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ವೀಣಾ ಭಟ್ ಸ್ವಾಗತಿಸಿದರು. ಸದಸ್ಯರಾದ ಕೆ. ಆನಂದ್ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಡಾ. ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ರಾಮಾಚಾರಿ ವಂದಿಸಿದರು.