Thursday, August 31, 2023

ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವ

ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕುಳುವ ಸಮಾಜ(ಕೊರಚ-ಕೊರಮ-ಕೊರವ) ಹಾಗು ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವದಲ್ಲಿ ಕೊರಚ-ಕೊರಮ-ಕೊರವ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಆ. 31: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕುಳುವ ಸಮಾಜ(ಕೊರಚ-ಕೊರಮ-ಕೊರವ) ಹಾಗು ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಹಯೋಗದೊಂದಿಗೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯನವರ 916ನೇ ಜಯಂತ್ಯೋತ್ಸವ ನಡೆಯಿತು.
    ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ದಲಿತ ನೌಕರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ಉಪನ್ಯಾಸ ನೀಡಿದರು.
    ತಹಸೀಲ್ದಾರ್ ಗ್ರೇಡ್-2 ವಿ. ರಂಗಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ನಗರಸಭೆ ಮಾಜಿ ಸದಸ್ಯ ಶಿವರಾಜ್, ದಲಿತ ನೌಕರರ ಒಕ್ಕೂಟದ ತಾಲೂಕು ಗೌರವಾಧ್ಯಕ್ಷ ಎಂ. ಈಶ್ವರಪ್ಪ, ಯುವ ಮುಖಂಡ ಬಿ.ಎಂ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೊರಚ-ಕೊರಮ-ಕೊರವ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ಶ್ರೀ ನುಲಿಯ ಚಂದಯ್ಯನವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಶ್ರೀನಿವಾಸ್ ಜಾಜೂರ್ ನಿರೂಪಿಸಿ, ನಾಗೇಶ್ ಸ್ವಾಗತಿಸಿ, ನವೀನ್ ವಂದಿಸಿದರು.

ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ : ಮಾಲಾ ಅಕ್ಕ

ಭದ್ರಾವತಿ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ಭದ್ರಾವತಿ, ಆ. ೩೧ : ನಗರದ ನ್ಯೂಟೌನ್‌ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ಸಹಯೋಗದೊಂದಿಗೆ ಪವಿತ್ರ ರಕ್ಷಾ ಬಂಧನ ಆಚರಿಸಲಾಯಿತು.
    ವಿಶ್ವ ವಿದ್ಯಾಲಯದ ಮಾಲಾ ಅಕ್ಕ ಮಾತನಾಡಿ,  ರಾಖಿಯನ್ನು ಕೈಗೆ ಕಟ್ಟಲಾಗುತ್ತದೆ. ಕೈಗಳು ನಾವು ಮಾಡುವ ಕರ್ಮಗಳ
ಸೂಚಕವಾಗಿದೆ. ನಮ್ಮ ಕರ್ತವ್ಯಗಳನ್ನು ನಾವು ಹೆಚ್ಚಾಗಿ ಕೈಗಳಿಂದಲೇ ಮಾಡುತ್ತೇವೆ. ಕೆಲವು ಕಾರ್ಯಗಳನ್ನು ಮಾಡಲು ಸಾಧ್ಯವಾಗದಿದ್ದರೆ "ನಮ್ಮ ಕೈಗಳು ಬಂಧಿತವಾಗಿವೆ" ಎಂದು ಹೇಳುತ್ತೇವೆ. ನಮ್ಮಿಂದ ತಪ್ಪು ಕರ್ಮಗಳು ಆಗದಂತೆ ರಕ್ಷಾ ಬಂಧನವು ನಮ್ಮನ್ನು "ಕಟ್ಟಿಹಾಕುತ್ತದೆ" ಅಥವಾ ತಪ್ಪಿಸುತ್ತದೆ. ರಾಖಿಯನ್ನು ಕಟ್ಟಿಸಿಕೊಂಡ ಕೈಗಳು ಸದಾ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
    ಕೈಗೆ ಕಟ್ಟಿದ ರಾಖಿಯ ದಾರವು ಭಗವಂತನ ಕೈಯಲ್ಲಿದೆ. ಇದುವೇ ʻʻಬಂಧನʼʼದ ಅರ್ಥವಾಗಿದೆ. ನಮ್ಮ ಜೀವನದ ಸೂತ್ರವು ಭಗವಂತನ ಕೈಯಲ್ಲಿ ಸುರಕ್ಷಿತವಾಗಿದೆ. ಭಗವಂತನೊಬ್ಬನೇ ನಮಗೆ ರಕ್ಷಕನು, ಇತರರು ಯಾರೂ ಅಲ್ಲ. ಕೆಟ್ಟ ಕಾರ್ಯಗಳು ನಮ್ಮಿಂದ ಆಗದಿರುವುದು  ಇದುವೇ ರಕ್ಷಣೆಯ ಅರ್ಥ, ಜ್ಞಾನ ಮತ್ತು ಅನುಭೂತಿಯಿಂದ ಮಾತ್ರ ಇದು ಸಾಧ್ಯ. ಈ ಜಗತ್ತಿನಲ್ಲಿ ಸರ್ವರಿಗೂ ರಕ್ಷಣೆಯ ಅವಶ್ಯಕತೆ ಇದೆ. ನಾವು ಒಬ್ಬ ಭಗವಂತನ ಛತ್ರ ಛಾಯೆಯಲ್ಲಿ ಇರುವುದೇ ನಿಜವಾದ ರಕ್ಷಣೆಯಾಗಿದೆ ಎಂದರು.
    ಸಹೋದರ - ಸಹೋದರಿ ಸಂಬಂಧವು ದಿವ್ಯತೆಯನ್ನು ಸೂಚಿಸುತ್ತದೆ. ನಮ್ಮ ಎಲ್ಲ ಸಂಬಂಧಗಳಲ್ಲಿ ಸ್ಥಿತಿಯನ್ನು ತರಿಸುತ್ತದೆ. ಈ ದಿವ್ಯ ಸಂಬಂಧವು ಸತ್ಯ ಪ್ರೇಮ, ನಂಬಿಕೆ, ವಿಶ್ವಾಸ, ನಿಸ್ವಾರ್ಥತೆ ಮತ್ತು ಸ್ವಚ್ಛತೆಯಿಂದ ಮಾತ್ರ ರೂಪುಗೊಳ್ಳುತ್ತದೆ. ರಾಖಿಯ ದಾರವು ಪವಿತ್ರತೆ, ಶಾಂತಿ ಹಾಗೂ ಸಮೃದ್ಧಿಯನ್ನೂ ಹಾಗು ದಾರದ ಗಂಟು ದಿವ್ಯ ಉದ್ದೇಶದ ಪ್ರತಿ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ರಾಖಿಯ ಹೂ ನಮ್ಮ ಜೀವನದಲ್ಲಿ ನಾವು ಧಾರಣೆ ಮಾಡಬೇಕಾಗಿರುವ ದಿವ್ಯ ಗುಣಗಳ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌  ಹಾಗು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಭಕ್ತರು  ಪಾಲ್ಗೊಂಡಿದ್ದರು.  ಆಶ್ರಮದ ಆಶ್ರಮದ ಸೇವಾಕರ್ತರು ಉಪಸ್ಥಿತರಿದ್ದರು.
    ಮಾಲಾ ಅಕ್ಕ ಪ್ರತಿಯೊಬ್ಬರಿಗೂ ರಾಖಿ ಕಟ್ಟುವ ಮೂಲಕ ಸಿಹಿ ವಿತರಿಸಿದರು. ಬ್ರಹ್ಮ ಭೋಜನದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪುತ್ರ


    ಭದ್ರಾವತಿ, ಆ. 30: ಮಗನೊಬ್ಬ ಕುಡಿದ ಅಮಲಿನಲ್ಲಿ ತನ್ನ ತಾಯಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ  ನಡೆದಿದೆ.
     ಸುಲೋಚನಮ್ಮ(57) ಕೊಲೆಯಾದ ದುರ್ದೈವಿ. ಮಗ ಸಂತೋಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಟ್ರ್ಯಾಕ್ಟರ್‌ ಚಾಲಕನಾಗಿರುವ  ಸಂತೋಷ್ ಕುಡಿತದ ಚಟಕ್ಕೆ ಬಲಿಯಾಗಿದ್ದು, ಆಗಾಗ ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
    ಇದರಿಂದ ಬೇಸತ್ತ ತಾಯಿ ಸುಲೋಚನಮ್ಮ ಮಗನೊಂದಿಗೆ ವಾಸವಿರದೆ  ಪ್ರತ್ಯೇಕವಾಗಿ ವಾಸವಾಗಿದ್ದರು.  ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತಾಯಿ ಮನೆಗೆ ಬಂದಿದ್ದ ಸಂತೋಷ್ ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ನೀಡಲು ನಿರಾಕರಿಸಿದ ತಾಯಿಯೊಂದಿಗೆ ಜಗಳಕ್ಕಿಳಿದು ಅಲ್ಲಿಯೇ ಇದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
      ಸೋಮವಾರ ಮಧ್ಯಾಹ್ನ ಪಕ್ಕದ ಮನೆಯ ಮಹಿಳೆಯೊಬ್ಬರು ಸುಲೋಚನಮ್ಮ ಅವರ ಮನೆಗೆ ಹೋದಾಗ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಸುಲೋಚನಮ್ಮ ಅವರ ಮೊದಲ ಮಗ ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್  ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, August 30, 2023

ಶ್ರೀ ಕೃಷ್ಣ ವೇಷ ಪ್ರದರ್ಶನ : 200ಕ್ಕೂ ಹೆಚ್ಚು ಮಕ್ಕಳು

ಭದ್ರಾವತಿಯಲ್ಲಿ ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಮಂಗಳವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
    ಭದ್ರಾವತಿ : ತರುಣಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಪ್ರದರ್ಶನ ಮಂಗಳವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್ ರಾಜೇಶ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ತರುಣ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
    ನಗರದ 35 ಶಾಲೆಗಳ 5 ವರ್ಷದೊಳಗಿನ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗು ಸಿಹಿ ವಿತರಿಸಲಾಯಿತು.
    ಲಯನ್ಸ್ ಕ್ಲಬ್ ಖಜಾಂಚಿ ಎನ್. ಶ್ರೀನಿವಾಸ್, ತರುಣ ಭಾರತಿ ವಿದ್ಯಾ ಕೇಂದ್ರದ ಕಾರ್ಯದರ್ಶಿ ಗಿರೀಶ್, ತರುಣ ಭಾರತಿ ವಿಶ್ವಸ್ಥ ಮಂಡಳಿ ಪ್ರಮುಖರಾದ ಡಾ. ಡಾ. ಮಹಾಬಲೇಶ್ವರ, ಮಧುಕರ್ ಕಾನಿಟ್ಕರ್, ಎಸ್.ಎನ್ ಸುಭಾಷ್, ನಂದಿನಿ ಮಲ್ಲಿಕಾರ್ಜುನ, ಶಿಶುಮಂದಿರದ ಸಂಚಾಲಕಿ ಸರ್ವಮಂಗಳ, ಸುಜಾತ, ಸವಿತಾ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.

ʻಗೃಹ ಲಕ್ಷ್ಮೀʼ ಯೋಜನೆ ನೇರ ಸಂವಾದ ಯಶಸ್ವಿ

ನಗರಸಭೆಯಿಂದ ೯ ಸ್ಥಳಗಳಲ್ಲಿ ವ್ಯವಸ್ಥೆ

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಬುಧವಾರ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರು ಮೈಸೂರಿನಲ್ಲಿ ಚಾಲನೆ ನೀಡಿದ್ದು, ಈ ಸಂಬಂಧ ಭದ್ರಾವತಿ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ  ಸಂವಾದ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್‌ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಆ. ೩೦ :  ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ ೨,೦೦೦ ರು. ನೀಡುವ ಮಹತ್ವಾಕಾಂಕ್ಷೆ  ʻಗೃಹ ಲಕ್ಷ್ಮೀ ʼ ಯೋಜನೆಗೆ ಬುಧವಾರ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿ ಅವರು ಮೈಸೂರಿನಲ್ಲಿ ಚಾಲನೆ ನೀಡಿದ್ದು, ಈ ಸಂಬಂಧ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ  ಸಂವಾದ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್‌ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಒಟ್ಟು ೯ ಸ್ಥಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿತ್ತು.  ಆಯಾ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.
    ಕಾರ್ಯಕ್ರಮದಲ್ಲಿ ʻಗೃಹಲಕ್ಷ್ಮೀʼ ಯೋಜನೆ ಫಲಾನುಭವಿಗಳು, ಮಹಿಳಾ ಸಂಘ-ಸಂಸ್ಥೆಗಳ ಪ್ರಮುಖರು, ಕಾಂಗ್ರೆಸ್‌ ಮಹಿಳಾ ಘಟಕದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
    ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೇರ  ಸಂವಾದ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ನಾಗರಾಜಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್‌, ನಗರಸಭಾ ಸದಸ್ಯಾದ ಜಾರ್ಜ್‌, ಆರ್.‌ ಶ್ರೇಯಸ್‌, ಶಶಿಕಲಾ ಬಿ.ಎಸ್‌ ನಾರಾಯಣಪ್ಪ, ಅನುಪಮ ಚನ್ನೇಶ್‌, ಪೌರಾಯುಕ್ತ ಎಚ್.ಎಂ ಮನುಕುಮಾರ್‌, ಕಂದಾಯಾಧಿಕಾರಿ ರಾಜ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಎಸ್.‌ ಕುಮಾರ್‌  ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಐಎಸ್‌ಎಲ್‌ ನಿವೃತ್ತ ಉದ್ಯೋಗಿ ಮಂಜುನಾಥ್‌ ಯಲ್ಲೋಜಿ ನಿಧನ

ಮಂಜುನಾಥ್‌ ಯಲ್ಲೋಜಿ
    ಭದ್ರಾವತಿ, ಆ. ೩೦: ವಿಐಎಸ್‌ಎಲ್‌ ಕಾರ್ಖಾನೆ ನಿವೃತ್ತ ಉದ್ಯೋಗಿ, ಕಬಡ್ಡಿ ಕ್ರೀಡಾ ತರಬೇತಿದಾರ ಮಂಜುನಾಥ್‌ ಯಲ್ಲೋಜಿ(೬೬) ಮಂಗಳವಾರ ರಾತ್ರಿ ನಿಧನ ಹೊಂದಿದರು.
    ಇಬ್ಬರು ಗಂಡು ಇದ್ದಾರೆ. ವಿಐಎಸ್‌ಎಲ್‌ ಅತಿಥಿ ಗೃಹದಲ್ಲಿ ಪ್ರಭಾರ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮಂಜುನಾಥ್‌ರವರು ಮೂಲತಃ ಕಬಡ್ಡಿ ಕ್ರೀಡಾಪಟು ಆಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಅಲ್ಲದೆ ತರಬೇತಿದಾರರಾಗಿ  ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿದ್ದರು.
    ಇವರ ನಿಧನಕ್ಕೆ ವಿಐಎಸ್‌ಎಲ್‌ ಕಾರ್ಖಾನೆ  ಕಾರ್ಯಪಾಲಕ ನಿರ್ದೇಶಕ ಬಿ.ಎಲ್‌ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.‌ ಪ್ರವೀಣ್‌ಕುಮಾರ್‌, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌,  ಅಧಿಕಾರಿಗಳು, ಕಾರ್ಮಿಕರು ಹಾಗು ಗುತ್ತಿಗೆ ಕಾರ್ಮಿಕರು ಮತ್ತು ನಿವೃತ್ತ ಕಾರ್ಮಿಕರು, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Tuesday, August 29, 2023

ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ

ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ ಕುರಿತು ಮಂಗಳವಾರ ಭದ್ರಾವತಿಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  
    ಭದ್ರಾವತಿ, ಆ. ೨೯ : ಶ್ರೀ ನಾರಾಯಣಗುರು ವಿಚಾರ ವೇದಿಕೆ(ಈಡಿಗ ಸಮಾಜದ ೨೬ ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀ ಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮಧ್ಯಾಹ್ನ ೧೨ ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಎನ್. ನಟರಾಜ್‌ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಅವರ ೧೬೯ನೇ ಜಯಂತ್ಯೋತ್ಸವ ಅರ್ಥಪೂರ್ಣವಾಗಿ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ವೇದಿಕೆ ಹೆಚ್ಚಿನ ಶ್ರಮವಹಿಸುತ್ತಿದೆ ಎಂದರು.
    ಅಂದು ಬೆಳಿಗ್ಗೆ ೧೦.೩೦ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರದೊಂದಿಗೆ ಲೋಯರ್‌ ಹುತ್ತಾದಿಂದ ತಾಲೂಕು ಪಂಚಾಯಿತಿವರೆಗೂ ಮೆರವಣಿಗೆ ನಡೆಯಲಿದ್ದು, ನಂತರ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್‌ ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ್‌ ಉಪನ್ಯಾಸ ನೀಡಲಿದ್ದಾರೆ.
    ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‌ ಈರೆಗೊಡು, ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್‌, ಆರ್ಯ ಈಡಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ ಪುಟ್ಟಸ್ವಾಮಿಗೌಡ, ವೇದಿಕೆ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕೋಗಲೂರು ತಿಪ್ಪೇಸ್ವಾಮಿ, ಗಂಗಾಧರ್‌ ಸೇರಿದಂತೆ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.