Friday, September 29, 2023

ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತನೆ : ಪ್ರಕರಣ ದಾಖಲು


    ಭದ್ರಾವತಿ: ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.

    ಹಳೇನಗರ ಪೊಲೀಸ್ ಠಾಣಾಧಿಕಾರಿ-1 ಶರಣಪ್ಪ ಅವರು ಸಿಬ್ಬಂದಿ ಮೌನೇಶ್ ಜೊತೆ ಗಸ್ತು ಕರ್ತವ್ಯದಲ್ಲಿರುವಾಗ ರೈಲ್ವೆ ನಿಲ್ದಾಣದ ಕಡೆ ಹೋಗುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ವ್ಯಕ್ತಿಯೋರ್ವ ನಿಂತುಕೊಂಡು ಅನುಮಾನಾಸ್ಪದವಾಗಿ ಹಾಗು ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿಯೇ ಬಿಟ್ಟರೆ ಸಾರ್ವಜನಿಕ ಶಾಂತಿಗೆ ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂದು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ನಂತರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೆ.30 ಪೌರಕಾರ್ಮಿಕರಿಗೆ ರಜೆ

ಭದ್ರಾವತಿ : ನಗರಸಭೆ ವತಿಯಿಂದ ಈ ಬಾರಿ ಪೌರಕಾರ್ಮಿಕರ ದಿನಾಚರಣೆ ಸೆ.30ರಂದು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪೌರಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ.

    ಪೌರಕಾರ್ಮಿಕರ ದಿನಾಚರಣೆಗೆ ಸರ್ಕಾರ ರಜೆ ಘೋಷಿಸಿದ್ದು, ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಮನವಿ ಮಾಡಿದ್ದಾರೆ.

ಬಿಸಿ ಮುಟ್ಟದ ಕರ್ನಾಟಕ ಬಂದ್ : ವಕೀಲರ ಸಂಘ ಬೆಂಬಲ

ಕರ್ನಾಟಕ ಬಂದ್ ಬೆಂಬಲಿಸಿ ಭದ್ರಾವತಿಯಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ರಸ್ತೆ ತಡೆ ನಡೆಸಲಾಯಿತು.

    ಭದ್ರಾವತಿ : ರಾಜ್ಯಾದ್ಯಂತ ಶುಕ್ರವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಗರದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

    ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಬಿ.ಎಚ್ ರಸ್ತೆಯಲ್ಲಿ ಕೆಲವೆಡೆ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದವು. ಉಳಿದಂತೆ ಪೆಟ್ರೋಲ್ ಬಂಕ್, ಹೋಟೆಲ್, ಮಾಲ್, ಕ್ಲಿನಿಕ್, ಬ್ಯಾಂಕ್, ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸರ್ಕಾರಿ ಹಾಗು ಖಾಸಗಿ ಬಸ್ ಸಂಚಾರ ವಿರಳವಾಗಿತ್ತು. ಉಳಿದಂತೆ ವಾಹನಗಳ ಸಂಚಾರ ಎಂದಿನಂತೆ ಕಂಡು ಬಂದಿತು.

    ವಕೀಲರಿಂದ ರಸ್ತೆ ತಡೆ :

    ಕರ್ನಾಟಕ ಬಂದ್ ಬೆಂಬಲಿಸಿ ತಾಲೂಕು ವಕೀಲರ ಸಂಘದ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ವಕೀಲರು ಕಲಾಪಗಳಿಂದ ಹೊರಗುಳಿದು ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಕಾವೇರಿ ನೀರು ತಮಿಳುನಾಡಿಗೆ ಬಿಡದೆ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.

    ಮಳೆ ಇಲ್ಲದೆ ಇದೀಗ ರಾಜ್ಯದೆಲ್ಲೆಡೆ ಬರಗಾಲ ಎದುರಾಗಿದ್ದು, ರಾಜ್ಯದಲ್ಲಿ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ರಾಜ್ಯದ ಜನರ ಹಿತಕಾಪಾಡಬೇಕೆಂದರು.

ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ನಗರದ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.


ಸೆ.30ರಂದು ಪೌರಕಾರ್ಮಿಕರ ದಿನಾಚರಣೆ

    ಭದ್ರಾವತಿ:ನಗರಸಭೆ ವತಿಯಿಂದ ಈ ಬಾರಿ ಪೌರಕಾರ್ಮಿಕರ ದಿನಾಚರಣೆ ಸೆ.30ರಂದು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಹಮ್ಮಿಕೊಳ್ಳಲಾಗಿದೆ.

    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದವರೆಗೂ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.

    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿರುವವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಕೋರಿದ್ದಾರೆ.

Thursday, September 28, 2023

ಟಾರ್ಪಲ್ ನಲ್ಲಿ ಮುಚ್ಚಿಟ್ಟಿದ್ದ ಅಡಕೆ ಕಳವು

    ಭದ್ರಾವತಿ: ಬೇಯಿಸಿ ಒಣಗಲು ಟಾರ್ಪಲ್‌ ನಲ್ಲಿ ಹರಡಿ ಮುಚ್ಚಿಟ್ಟಿದ್ದ ಅಡಕೆಯನ್ನು ಕಳವು ಮಾಡಿರುವ ಘಟನೆ ಹಳೇ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ಸುರೇಶ್ ಎಂಬುವರು ಸುಮಾರು 5 ಕ್ವಿಂಟಲ್ ಅಡಕೆ ರಾಶಿಯನ್ನು ರಾತ್ರಿ ಟಾರ್ಪಲ್ ನಲ್ಲಿ ಹರಡಿ ಮುಚ್ಚಿಟ್ಟಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಯಾರೋ ಟಾರ್ಪಲ್ ಸರಿಸಿ ಅಡಕೆ ರಾಶಿಯಲ್ಲಿ ಸುಮಾರು 12 ಸಾವಿರ ರು. ಮೌಲ್ಯದ 25 ಕೆ.ಜಿಯಷ್ಟು ಅಡಕೆಯನ್ನು ತುಂಬಿಕೊಂಡು ಹೋಗಿರುತ್ತಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರವಾದಿ ಮಹಮದ್ ಫೈಗಂಬರ್ ಹುಟ್ಟುಹಬ್ಬ : ರಕ್ತದಾನ ಶಿಬಿರ

ಪ್ರವಾದಿ ಮಹಮದ್ ಫೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಅಂಗವಾಗಿ ಗುರುವಾರ ಭದ್ರಾವತಿ ತಾಲೂಕಿನ ಹೊಳೆನೇರಲಕೆರೆ ಅಲ್ ಖಸ್ವ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಭದ್ರಾವತಿ : ಪ್ರವಾದಿ ಮಹಮದ್ ಫೈಗಂಬರ್ ಅವರ ಹುಟ್ಟುಹಬ್ಬ ಈದ್ ಮಿಲಾದ್ ಅಂಗವಾಗಿ ಗುರುವಾರ ತಾಲೂಕಿನ ಹೊಳೆನೇರಲಕೆರೆ ಅಲ್ ಖಸ್ವ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಶಿವಮೊಗ್ಗ ಮಿಡ್ ಟೌನ್, ರೋಟರಿ ಚಾರಿಟಿ ಫೌಂಡೇಷನ್, ರೋಟರಿ ರಕ್ತ ಕೇಂದ್ರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದಲ್ಲಿ 36 ಮಂದಿ ರಕ್ತದಾನ ಮಾಡಿದರು.

    ಇತ್ತೀಚೆಗೆ ಟ್ರಸ್ಟ್ ಉದ್ಘಾಟನೆಗೊಂಡಿದ್ದು, ಸಮಾಜ ಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ನ.4, 5ರಂದು ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ : ದೊಡ್ಡಣ್ಣ

ಭದ್ರಾವತಿಯಲ್ಲಿ ನ.4, 5ರಂದು ಆಯೋಜಿಸಲಾಗಿರುವ ವಿಐಎಸ್ಎಲ್ ಶತಮಾನೋತ್ಸವ ಸಂಭ್ರಮ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಭವಿಷ್ಯದ ಪೀಳಿಗೆಗೆ ಉಳಿಸಿಕೊಂಡಬೇಕೆಂಬ ಏಕೈಕ ಉದ್ದೇಶದೊಂದಿಗೆ ಶತಮಾನೋತ್ಸವ ಸಂಭ್ರಮ ನ.4 ಮತ್ತು 5 ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಕಾರ್ಖಾನೆಯ ನಿವೃತ್ತ ಉದ್ಯೋಗಿ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಹೇಳಿದರು.

    ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಮಹಾರಾಜರಾಗಿದ್ದ ಯದುವಂಶದ ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಸುವರ್ಣ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಾಯ ಅವರ ಮಾರ್ಗದರ್ಶನದಂತೆ ಈ ಬೃಹತ್ ಉದ್ಯಮವನ್ನು 1923 ರಲ್ಲಿ ಸ್ಥಾಪಿಸಲಾಯಿತು. ಬಾಬಬುಡನ್‌ಗಿರಿ ಹಾಗೂ ಕೆಮ್ಮಣ್ಣು ಗುಂಡಿಗಳಲ್ಲಿ ಇದ್ದ ಅಪಾರ ಖನಿಜ ನಿಕ್ಷೇಪಗಳನ್ನು ಬಳಸಿಕೊಳ್ಳುವುದು ಮತ್ತು ಕಬ್ಬಿಣ, ಉಕ್ಕು ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಎರಕಹೊಯ್ದ ಕಬ್ಬಿಣ, ಕಬ್ಬಿಣದ ಕೊಳವೆ ಹಾಗೂ ರೋಲಿಂಗ್ ಮಿಕ್ಸ್ ಮತ್ತು ಸಿಮೆಂಟ್ ಪ್ಲಾಂಟ್ ಅನ್ನು ನಂತರ ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಗೆ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಎಂದು ನಾಮಕರಣ ಮಾಡಲಾಯಿತು ಎಂದರು.

    1975 ರಲ್ಲಿ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಅಮಿಟೆಡ್ (VISL) ಎಂಬುದಾಗಿ ಮರುನಾಮಕರಣವಾಯಿತು. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು 1989ರಲ್ಲಿ ಕಾರ್ಖಾನೆಯನ್ನು ಅಂಗಸಂಸ್ಥೆಯಾಗಿ ಸೇರಿಸಿ ನಂತರ 1998 ರಲ್ಲಿ ವಿಲೀನಗೊಳಿಸಿಕೊಂಡಿತು. ಸರ್ ಎಂ ವಿಶ್ವೇಶ್ವರಯ್ಯನವರ ನಿಸ್ವಾರ್ಥ ಸೇವೆ ಮತ್ತು ಮುಂದಾಲೋಚನೆಯಿಂದ ಕ್ಷೇತ್ರದ ಜೀವನಾಡಿಯಾಗಿ ಉಳಿದು ಲಕ್ಷಾಂತರ

ಜನರಿಗೆ ಬದುಕು ನಿರ್ಮಿಸಿಕೊಟ್ಟ ನಾಡಿನ ಹೆಮ್ಮೆಯ ಈ ಕಾರ್ಖಾನೆ ಇದೀಗ 100 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಶತಮಾನೋತ್ಸವದ ಸಂಭ್ರಮಾಚರಣೆ ನಡೆಸಲಾಗುತ್ತಿದೆ ಎಂದರು.

    ಈ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ವರ್ಗ, ಕಾರ್ಮಿಕ ವರ್ಗ - ಗುತ್ತಿಗೆದಾರರು ಮತ್ತು ಇವರೆಲ್ಲರ ಕುಟುಂಬಗಳು ಒಂದೆಡೆ ಸೇರಿ ನ. 4 ಮತ್ತು 5 ರಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಅಧಿಕಾರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವರು ಸೇರಿದಂತೆ ಪ್ರತಿಯೊಬ್ಬರು ಸಂತೋಷದಿಂದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಸಂತ ಶ್ರೇಷ್ಠರ ಸಾನ್ನಿಧ್ಯದಲ್ಲಿ ಮೈಸೂರು ಸಂಸ್ಥಾನದ ಇಂದಿನ ಮಹಾರಾಜರನ್ನು ಗೌರವದಿಂದ ಆಹ್ವಾನಿಸಿ ಅವರ ವಂಶಸ್ಥರ ಕೊಡುಗೆಯನ್ನು ಸ್ಮರಿಸೋಣ ಎಂದರು.

    ದೇಶದ ಮತ್ತು ರಾಜ್ಯದ ಹಲವಾರು ಪ್ರತಿಷ್ಠಿತರು ಮತ್ತು ಜಿಲ್ಲೆಯ ಪುರಜನರು ಒಂದೆಡೆ ಆಚರಿಸುವ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಕಲಾವಿದರಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ಮಾದರಿಯ ಮೆರವಣಿಗೆ ಹಾಗೂ ಕಾರ್ಖಾನೆಯ ಗತವೈಭವ ಸಾರುವ ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಇದು ಬಹುವೆಚ್ಚದ ಸಮಾರಂಭವಾಗಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಬೆಕೆಂದರು.

    ಪತ್ರಿಕಾಗೋಷ್ಠಿಯಲ್ಲಿ ವಿಐಎಸ್ಎಲ್ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ರೇವಣ್ಣ ಸಿದ್ದಯ್ಯ, ಕಾರ್ಯದರ್ಶಿ ಜಿ. ಅಮೃತ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್. ರಘುರಾಂ, ಎನ್.ಟಿ ಸತ್ಯನಾರಾಯಣ, ಎಸ್‌. ಅಡವೀಶಯ್ಯ, ಬಿ.ಜಿ ರಾಮಲಿಂಗಯ್ಯ, ಬಿ. ಮಂಜುನಾಥ್, ಎಸ್. ನರಸಿಂಹಚಾರ್, ಜೆ. ಜಗದೀಶ್, ಯು.ಎ ಬಸಂತ್ ಕುಮಾರ್, ಬಿ.ಸಿ ಶೈಲಶ್ರೀ, ಡಿ. ಕುಮಾರ್, ಎಚ್.ಜಿ. ಸುರೇಶ್, ಕುಮಾರಸ್ವಾಮಿ, ಪಿ. ರಾಕೇಶ್, ಡಿ. ತ್ರಿವೇಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.