ಭದ್ರಾವತಿ ನಗರಸಭೆ ವತಿಯಿಂದ ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೋಮವಾರ ಅಧ್ಯಕ್ಷೆ ಶೃತಿ ವಸಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭದ್ರಾವತಿ : ಈ ಬಾರಿ ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಸಮಾಜ ಸೇವಕರಾದ ವೆಂಕಟರಮಣ ಶೇಟ್‌ರವರು ನಗರಸಭೆ ಆವರಣದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ ಎಂದರು.
ಪೌರಾಯುಕ್ತ ಎಚ್.ಎಂ ಮನುಕುಮಾರ್ ಮಾಹಿತಿ ನೀಡಿ, ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಮಾರ್ಗದರ್ಶನದಲ್ಲಿ ೩ ದಿನಗಳ ಕಾಲ ಸರಳವಾಗಿ ದಸರಾ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಸಂಬಂಧ ನಗರದ ವಿವಿಧ ಸಂಘ-ಸಂಸ್ಥೆಗಳ ಹಾಗು ದೇವಸ್ಥಾನ ಸಮಿತಿಗಳ ಸಲಹೆ-ಸಹಕಾರ ಪಡೆಯಾಗಿದೆ. ದಸರಾ ಆಚರಣೆಗಾಗಿ ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ನೇತೃತ್ವದಲ್ಲಿ ೧೧ ಜನ ಸದಸ್ಯರನ್ನೊಳಗೊಂಡ ಉಸ್ತುವಾರಿ ಸಮಿತಿ, ಸದಸ್ಯ ಬಷೀರ್ ಅಹಮದ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿ, ಸದಸ್ಯ ಆರ್. ಮೋಹನ್ ಕುಮಾರ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಹಿರಿಯ ಸದಸ್ಯ ವಿ. ಕದಿರೇಶ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಪ್ರಚಾರ ಮತ್ತು ಅಲಂಕಾರ ಸಮಿತಿ, ಸದಸ್ಯ ಬಸವರಾಜ ಬಿ. ಅನೇಕೊಪ್ಪ ನೇತೃತ್ವದಲ್ಲಿ ೧೪ ಸದಸ್ಯರನ್ನೊಳಗೊಂಡ ಮನರಂಜನಾ ಸಮಿತಿ, ಮಾಜಿ ಉಪಾಧ್ಯಕ್ಷ ಚನ್ನಪ್ಪ ನೇತೃತ್ವದಲ್ಲಿ ೧೫ ಸದಸ್ಯರನ್ನೊಳಗೊಂಡ ಕ್ರೀಡಾ ಸಮಿತಿ, ಸದಸ್ಯ ಮಣಿ ಎಎನ್‌ಎಸ್ ನೇತೃತ್ವದಲ್ಲಿ ೧೨ ಸದಸ್ಯರನ್ನೊಳಗೊಂಡ ದೇವರುಗಳ ಉತ್ಸವ ಸಮಿತಿ ಹಾಗು ಮಾಜಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ನೇತೃತ್ವದಲ್ಲಿ ೧೯ ಸದಸ್ಯರನ್ನೊಳಗೊಂಡ ಆಯುಧ ಪೂಜೆ ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದರು.
ಕನಕಮಂಟಪ ಮೈದಾನದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಈ ಬಾರಿ ಕುಸ್ತಿ ಪಂದ್ಯಾವಳಿ ವಿಜೇತರಾದವರಿಗೆ `ಭದ್ರಾವತಿ ಕೇಸರಿ' ಪ್ರಶಸ್ತಿ ನೀಡಲಾಗುವುದು. ಪ್ರತಿ ವರ್ಷದಂತೆ ಈ ಬಾರಿ ಸಹ ಮಹಿಳಾ ದಸರಾ ನಡೆಯಲಿದ್ದು, ಕನಕಮಂಟಪ ಮೈದಾನದಲ್ಲಿ ಬೆಂಗಳೂರಿನ ಕಲಾವಿದರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್‌ದು, ಸ್ಥಳೀಯ ಕಲಾವಿದರಿಂದ ನಗರಸಭೆ ಮುಂಭಾಗ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿವರ್ಷದಂತೆ ಈ ಬಾರಿ ಸಹ ಸಂಪ್ರದಾಯದಂತೆ ದೇವಾನುದೇವತೆಗಳ ಉತ್ಸವ ಮೆರವಣಿಗೆ ನಡೆಯಲಿದ್ದು, ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಷೀರ್ ಅಹಮದ್, ಬಸವರಾಜ ಬಿ. ಆನೇಕೊಪ್ಪ, ಚನ್ನಪ್ಪ, ಆರ್. ಮೋಹನ್‌ಕುಮಾರ್, ವಿ. ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.