Monday, October 9, 2023

ಜಮೀನು ವ್ಯಾಜ್ಯ : ಪತಿಯೇ ಪತ್ನಿಗೆ ವಿಷ ಕುಡಿಯಲು ಪ್ರಚೋದನೆ

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ದೃಶ್ಯ ವೈರಲ್

ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಬಂದ ಮಹಿಳೆ ಸೇರಿದಂತೆ ಸುಮಾರು ಹತ್ತಿಪ್ಪತ್ತು ಜನರ ಎದುರು ಮತ್ತೋರ್ವ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದಿದೆ.
    ಭದ್ರಾವತಿ: ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಬಂದ ಮಹಿಳೆ ಸೇರಿದಂತೆ ಸುಮಾರು ಹತ್ತಿಪ್ಪತ್ತು ಜನರ ಎದುರು ಮತ್ತೋರ್ವ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದಿದೆ.
    ಮಧುಮಾಲಾ ವಿಷ ಕುಡಿದ ಮಹಿಳೆಯಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಇವರ ಪತಿ ಗಿರೀಶ್ ಪಾಟೀಲ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಘಟನೆ ವಿವರ:
     ಚಂದ್ರಮ್ಮ ಎಂಬುವರು ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ತನ್ನ ಪಾಲಿನ ಜಮೀನಿನಲ್ಲಿ ಅಡಕೆ ಕೊಯ್ಲು ಮಾಡಲು ಖಾಸಗಿ ಕ್ಯಾಮೆರಾಮೆನ್ ಜೊತೆಗೆ ತೆರಲಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಗಿರೀಶ್ ಪಾಟೀಲ್ ಹಾಗು ಪತ್ನಿ ಮಧುಮಾಲಾ ಅವರ ಕುಟಂಬ ವ್ಯಾಜ್ಯ ತೆಗೆದಿದೆ. ಈ ವೇಳೆ ಮಧುಮಾಲಾ ವಿಷದ ಬಾಟಲಿ ಹಿಡಿದು ಕುಡಿಯಲು ಮುಂದಾಗಿದ್ದು, ಪತಿಯೇ ವಿಷ ಕುಡಿಯುವಂತೆ ಪ್ರಚೋದಿಸಿದ್ದಾರೆ. ಮಧುಮಾಲಾ ಸುಮಾರು ಅರ್ಧ ಬಾಟಲಿಯಷ್ಟು ವಿಷ ಕುಡಿದಿದ್ದು, ಈ ನಡುವೆ ಸ್ಥಳದಲ್ಲಿ ಹತ್ತಿಪ್ಪತ್ತು ಜನರಿದ್ದರೂ ಸಹ ಯಾರು ವಿಷ ಕುಡಿಯದಂತೆ ತಡೆಯಲಿಲ್ಲ ಎನ್ನಲಾಗಿದೆ. ಈ ಎಲ್ಲಾ ಘಟನೆಗಳು ಚಿತ್ರೀಕರಣಗೊಂಡಿದೆ.
    ಈ ಸಂಬಂಧ ಗಿರೀಶ್ ಪಾಟೀಲ್ ವಿರುದ್ಧ ಚಂದ್ರಮ್ಮ ಪತ್ನಿಗೆ ವಿಷ ಕುಡಿಯಲು ಪ್ರಚೋದಿಸಿದ್ದು, ಅಲ್ಲದೆ ಕ್ಯಾಮೆರಾಮೆನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಈ ನಡುವೆ ಪೊಲೀಸರು ಚೇತರಿಕೆಯಲ್ಲಿರುವ ಮಧುಮಾಲಾ ಹೇಳಿಕೆ ಪಡೆಯಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ.  
    ಘಟನೆಗೆ ಸಂಬಂಧಿಸಿದ ಚಿತ್ರೀಕರಣಗೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪತಿ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಜ್ಜನ್ ಜೈನ್ ನಿಧನ

ಸಜ್ಜನ್ ಜೈನ್
    ಭದ್ರಾವತಿ: ನಗರದ ಜೈನ್ ರುದ್ರಭೂಮಿ ಸಂಸ್ಥಾಪಕ ದಿ.ಪಾರಸ್‌ಮಲ್ ಜೈನ್‌ರವರ ಪುತ್ರ ಸಜ್ಜನ್ ಜೈನ್(೪೯) ಭಾನುವಾರ ನಿಧನ ಹೊಂದಿದರು.
    ಪತ್ನಿ ಗೀತಾ ಸಜ್ಜನ್ ಜೈನ್ ಹಾಗು ೩ ಪತ್ರಿಯರು ಇದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಸೋಮವಾರ ಜೈನ್ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿತು.  
    ಇವರ ನಿಧನಕ್ಕೆ ಕಾಂಚನಾ ಹೋಟೆಲ್ ವಾಗೀಶ್, ಜಿಕ್‌ಲೈನ್ ನಿವಾಸಿಗಳು, ಜೈನ್ ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಭದ್ರಾವತಿ ನಗರಸಭೆ : ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಣೆ

ಭದ್ರಾವತಿ ನಗರಸಭೆ ವತಿಯಿಂದ ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೋಮವಾರ ಅಧ್ಯಕ್ಷೆ ಶೃತಿ ವಸಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ : ಈ ಬಾರಿ ೩ ದಿನಗಳ ಕಾಲ ಸರಳವಾಗಿ ನಾಡಹಬ್ಬ ದಸರಾ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಹೇಳಿದರು.
    ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಸಮಾಜ ಸೇವಕರಾದ ವೆಂಕಟರಮಣ ಶೇಟ್‌ರವರು ನಗರಸಭೆ ಆವರಣದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬ ದಸರಾ ಉದ್ಘಾಟಿಸಲಿದ್ದಾರೆ ಎಂದರು.
    ಪೌರಾಯುಕ್ತ ಎಚ್.ಎಂ ಮನುಕುಮಾರ್ ಮಾಹಿತಿ ನೀಡಿ, ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಮಾರ್ಗದರ್ಶನದಲ್ಲಿ ೩ ದಿನಗಳ ಕಾಲ ಸರಳವಾಗಿ ದಸರಾ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಸಂಬಂಧ ನಗರದ ವಿವಿಧ ಸಂಘ-ಸಂಸ್ಥೆಗಳ ಹಾಗು ದೇವಸ್ಥಾನ ಸಮಿತಿಗಳ ಸಲಹೆ-ಸಹಕಾರ ಪಡೆಯಾಗಿದೆ.  ದಸರಾ ಆಚರಣೆಗಾಗಿ ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ನೇತೃತ್ವದಲ್ಲಿ ೧೧ ಜನ ಸದಸ್ಯರನ್ನೊಳಗೊಂಡ ಉಸ್ತುವಾರಿ ಸಮಿತಿ, ಸದಸ್ಯ ಬಷೀರ್ ಅಹಮದ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿ, ಸದಸ್ಯ ಆರ್. ಮೋಹನ್ ಕುಮಾರ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಹಿರಿಯ ಸದಸ್ಯ ವಿ. ಕದಿರೇಶ್ ನೇತೃತ್ವದಲ್ಲಿ ೧೩ ಸದಸ್ಯರನ್ನೊಳಗೊಂಡ ಪ್ರಚಾರ ಮತ್ತು ಅಲಂಕಾರ ಸಮಿತಿ, ಸದಸ್ಯ ಬಸವರಾಜ ಬಿ. ಅನೇಕೊಪ್ಪ ನೇತೃತ್ವದಲ್ಲಿ ೧೪ ಸದಸ್ಯರನ್ನೊಳಗೊಂಡ ಮನರಂಜನಾ ಸಮಿತಿ, ಮಾಜಿ ಉಪಾಧ್ಯಕ್ಷ ಚನ್ನಪ್ಪ ನೇತೃತ್ವದಲ್ಲಿ ೧೫ ಸದಸ್ಯರನ್ನೊಳಗೊಂಡ ಕ್ರೀಡಾ ಸಮಿತಿ, ಸದಸ್ಯ ಮಣಿ ಎಎನ್‌ಎಸ್ ನೇತೃತ್ವದಲ್ಲಿ ೧೨ ಸದಸ್ಯರನ್ನೊಳಗೊಂಡ ದೇವರುಗಳ ಉತ್ಸವ ಸಮಿತಿ ಹಾಗು ಮಾಜಿ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ನೇತೃತ್ವದಲ್ಲಿ ೧೯ ಸದಸ್ಯರನ್ನೊಳಗೊಂಡ ಆಯುಧ ಪೂಜೆ ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದರು.
    ಕನಕಮಂಟಪ ಮೈದಾನದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಈ ಬಾರಿ ಕುಸ್ತಿ ಪಂದ್ಯಾವಳಿ ವಿಜೇತರಾದವರಿಗೆ `ಭದ್ರಾವತಿ ಕೇಸರಿ' ಪ್ರಶಸ್ತಿ ನೀಡಲಾಗುವುದು. ಪ್ರತಿ ವರ್ಷದಂತೆ ಈ ಬಾರಿ ಸಹ ಮಹಿಳಾ ದಸರಾ ನಡೆಯಲಿದ್ದು, ಕನಕಮಂಟಪ ಮೈದಾನದಲ್ಲಿ ಬೆಂಗಳೂರಿನ ಕಲಾವಿದರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್‌ದು, ಸ್ಥಳೀಯ ಕಲಾವಿದರಿಂದ ನಗರಸಭೆ ಮುಂಭಾಗ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.  
    ಪ್ರತಿವರ್ಷದಂತೆ ಈ ಬಾರಿ ಸಹ ಸಂಪ್ರದಾಯದಂತೆ ದೇವಾನುದೇವತೆಗಳ ಉತ್ಸವ ಮೆರವಣಿಗೆ ನಡೆಯಲಿದ್ದು, ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಷೀರ್ ಅಹಮದ್, ಬಸವರಾಜ ಬಿ. ಆನೇಕೊಪ್ಪ, ಚನ್ನಪ್ಪ, ಆರ್. ಮೋಹನ್‌ಕುಮಾರ್, ವಿ. ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, October 8, 2023

ಛಾಯಾಗ್ರಾಹಕ ಜಾನ್ಸನ್ ನಿಧನ


ಜಾನ್ಸನ್

    ಭದ್ರಾವತಿ: ತಾಲೂಕು ಛಾಯಾಗ್ರಾಹಕರ ಸಂಘದ ನಿರ್ದೇಶಕ, ಕವಲಗುಂದಿ ನಿವಾಸಿ ಜಾನ್ಸನ್(ಕಿಚ್ಚ)(31) ನಿಧನ ಹೊಂದಿದರು.

    ತಾಯಿ, ಸಹೋದರ, ಸಹೋದರಿ ಇದ್ದರು. ಭಾನುವಾರ ಸಂಜೆ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತರ ಸಮಾದಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

    ತಾಲೂಕು ಛಾಯಾ ಗ್ರಾಹಕರ ಸಂಘ, ಛಾಯ ಗ್ರಾಹಕರ ಪತ್ತಿನ ಸಹಕಾರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀ ರಾಮ ಹಿಂದೂ ಸೇವಾ ಸಮಿತಿ ಗಣಪತಿ ವಿಸರ್ಜನೆ

ಭದ್ರಾವತಿ ಕೂಲಿಬ್ಲಾಕ್ ಶೆಡ್ ಶ್ರೀರಾಮ ದೇವಾಲಯ ಸಮೀಪ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ನಡೆಯಿತು.
    ಭದ್ರಾವತಿ: ನಗರದ ಕೂಲಿಬ್ಲಾಕ್ ಶೆಡ್ ಶ್ರೀರಾಮ ದೇವಾಲಯ ಸಮೀಪ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ನಡೆಯಿತು.
      ಪ್ರತಿವರ್ಷದಂತೆ ಈ ಬಾರಿ ಸಹ ಹೋಮ-ಹವನ, ವಿಶೇಷ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಸಂಜೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ ಸೇರಿದಂತೆ ಕಲಾತಂಡಗಳೊಂದಿಗೆ ನಡೆಯಿತು.

ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ(ಮಲ್ಪಿ-ಸ್ಟೇಟ್) ೧೬೪ನೇ ಶಾಖೆ ಉದ್ಘಾಟನೆ


ಭದ್ರಾವತಿ ನಗರದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ(ಮಲ್ಪಿ-ಸ್ಟೇಟ್) ೧೬೪ನೇ ಶಾಖೆಯನ್ನು ಆನಂದಪುರ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
    ಭದ್ರಾವತಿ: ನಗರದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ(ಮಲ್ಪಿ-ಸ್ಟೇಟ್) ೧೬೪ನೇ ಶಾಖೆಯನ್ನು ಆನಂದಪುರ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
    ಸಂಸದ ಅಣ್ಣಾಸಾಹೇಬ್ ಶಂಕರ ಜೊಲ್ಲೆ ಸಂಸ್ಥಾಪಕ ಹಾಗು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಸಹ ಸಂಸ್ಥಾಪಕರಾಗಿರುವ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ವಿಸ್ತರಣೆಗೊಳ್ಳುತ್ತಿದ್ದು, ಪ್ರಸಕ್ತ ಸಾಲಿನ ಜುಲೈ ಅಂತ್ಯಕ್ಕೆ ಸುಮಾರು ೩.೫ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸುಮಾರು ೩೫ ಕೋ. ರು. ಲಾಭದಲ್ಲಿ ಮುನ್ನಡೆಯುತ್ತಿದೆ. ಇದೀಗ ನಗರದಲ್ಲಿ ನೂತನ ಶಾಖೆ ಆರಂಭಗೊಂಡಿದ್ದು, ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಶುಭ ಕೋರಿದರು.
    ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಸೊಸೈಟಿ ವ್ಯವಸ್ಥಾಪಕ ಸುರೇಶ್, ಎಸ್. ರಾಜಶೇಖರ್ ಉಪ್ಪಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ.೨, ೩ ಪುಟ್ಟಪರ್ತಿ ಯಾತ್ರೆ-ಪ್ರಶಾಂತಿ ನಿಲಯಕ್ಕೆ

ಪುಟ್ಟಪರ್ತಿ
    ಭದ್ರಾವತಿ: ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಪ್ರೇಮ ಮತ್ತು ಸೇವೆಯ ಸಮರ್ಪಣೆ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ನ.೨ ಮತ್ತು ೩ ರಂದು 'ಪುಟ್ಟಪರ್ತಿ ಯಾತ್ರೆ-ಪ್ರಶಾಂತಿ ನಿಲಯಕ್ಕೆ' ಹಮ್ಮಿಕೊಳ್ಳಲಾಗಿದೆ.
    ಪುಟ್ಟಪರ್ತಿ, ಸಾಯಿ ಕುಲ್ವಂತ್ ಹಾಲ್, ಪ್ರಶಾಂತಿ ನಿಲಯದಲ್ಲಿ ಸುರ್ವಣ ಮಹೋತ್ಸವ ಸಂಭ್ರಮಾಚರಣೆ ನಡೆಯಲಿದೆ. ಯಾತ್ರೆಯಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು, ಸಾಯಿ ಭಕ್ತರು ಹಾಗು ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ೩೦ ಬಸ್‌ಗಳನ್ನು ನಿಯೋಜಿಸಲಾಗಿದೆ.
    ಯಾತ್ರೆ ವೇಳಾಪಟ್ಟಿ: ನ.೧ರಂದು ರಾತ್ರಿ ೮ ಗಂಟೆಗೆ ಹೊರಡುವುದು. ಬೆಳಗಿನ ಜಾವ ೩ ಗಂಟೆಗೆ ಪುಟ್ಟಪರ್ತಿ ತಲುಪುವುದು. ನ.೩ರಂದು ಮಧ್ಯಾಹ್ನ ೧.೩೦ಕ್ಕೆ ಪುಟ್ಟಪರ್ತಿಯಿಂದ ಹೊರಟು ಸಂಜೆ ೭ ಗಂಟೆಗೆ ಭದ್ರಾವತಿ ತಲುಪುವುದು. ಒಬ್ಬರಿಗೆ ೧,೧೦೦ ರು. ವೆಚ್ಚವಾಗಲಿದೆ. ಆಸಕ್ತರು ವ್ಯವಸ್ಥಾಪಕರು, ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಮೊ: ೯೧೪೧೬೪೨೪೩೨ ಅಥವಾ ೭೩೫೩೨೯೨೩೩೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ.