![](https://blogger.googleusercontent.com/img/a/AVvXsEi7jjunjRWCXBGbKpl7lPw9CXnTD5oBAkn42p03201mJmRvbhE2jChIMEV0n1gHLhfn78uznOaEKBnw-0YKHRmW0zIFrFL-FeCWiOPWuujrieEZ1RxyxDHFqahi-QffCeRu3kCYS-8-bK3NGqTeyqkK0n2Q-_KzXxegpgX1PUUPLNK7c_pnX7RkiL-Z5U4f=w400-h253-rw)
ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಶ್ರೀ ಗುರುಸಿದ್ಧಶಿವಾಚಾರ್ಯ ಸ್ವಾಮಿಗಳ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳ ೫೬ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗು ಧರ್ಮ ಸಮಾರಂಭ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
ಭದ್ರಾವತಿ: ಪ್ರತಿಯೊಂದು ಧರ್ಮದಲ್ಲಿಯೂ ಆದರ್ಶ, ಮೌಲ್ಯಗಳನ್ನು ಕಾಣುತ್ತೇವೆ. ಮಾನವರ ಪ್ರಗತಿಗೆ ಧರ್ಮವೇ ದಿಕ್ಸೂಚಿ ಹೊರತು, ಅನ್ಯಮಾರ್ಗವಲ್ಲ. ವೀರಶೈವ ಧರ್ಮ ಸಾಮರಸ್ಯದ ಸೇತುವೆ ನಿರ್ಮಿಸುವ ಕೆಲಸ ಮಾಡುತ್ತಿದೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಶ್ರೀ ಗುರು ಸಿದ್ಧಶಿವಾಚಾರ್ಯ ಸ್ವಾಮಿಗಳ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮಿಗಳ ೫೬ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗು ಧರ್ಮ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜನಮನ ಪರಿಶುದ್ಧಿಗೆ ವೀರಶೈವ ಧರ್ಮ ಸಹಕಾರಿ. ಅಂತರಂಗ-ಬಹಿರಂಗ ಶುಚಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಎಲ್ಲಾ ಧರ್ಮಗಳ ಸಾರ ಈ ಧರ್ಮದಲ್ಲಿ ಅಡಕವಾಗಿದೆ ಎಂದರು.
ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ವಿಶಾಲ ಅರ್ಥವನ್ನು ಅಳವಡಿಸಿಕೊಂಡಿದ್ದು, ಈ ನಿಟ್ಟಿನಲ್ಲಿಯೇ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪೋಷಕರು ಮಕ್ಕಳಲ್ಲಿ ಧಾರ್ಮಿಕ ವಿಚಾರಗಳನ್ನು ಕಲಿಸುತ್ತಿಲ್ಲ. ಧಾರ್ಮಿಕ ವ್ಯವಸ್ಥೆಯ ಬಗ್ಗೆ ಸಂಸ್ಕಾರ ಮತ್ತು ಸದ್ವಿಚಾರಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದರಿಂದ ಸಮಾಜ ಅಧಃಪತನದ ಕಡೆ ಸಾಗುತ್ತಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸಮಾರಂಭದಿಂದ ಅನೇಕ ಸ್ವಾಮೀಜಿಗಳನ್ನು ಒಂದೇ ಕಡೆ ನೋಡುವ ಸೌಭಾಗ್ಯ ಭಕ್ತರಿಗೆ ದೊರಕಿದೆ. ಜಾತಿಗಳು ಯಾವುದೇ ಆದರೂ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಜಗದ್ಗುರುಗಳ ಮೂಲಮಂತ್ರ ಸರ್ವಜನಾಂಗ ಒಗ್ಗೂಡಿಸುವುದಾಗಿದೆ ಎಂದರು.
ತಂದೆ-ತಾಯಿ ಗಳಿಸಿದ ಪುಣ್ಯದ ಫಲವಾಗಿ ಮಕ್ಕಳಾದ ನನಗೆ ಮತ್ತು ಸಹೋದರ ವಿಜಯೇಂದ್ರರಿಗೆ ಉತ್ತಮ ಸ್ಥಾನಮಾನಗಳು ದೊರೆತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ- ಭಾಗ್ಯಗಳಿಗಿಂತ ನಮ್ಮ ಆರೋಗ್ಯ ಭಾಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಮುಖ್ಯ ಎಂದರು.
ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸದಾ ಕಾಲ ಪ್ರತಿಯೊಂದು ಕಾರ್ಯದಲ್ಲೂ ಶ್ರೀ ಮಠದ ಲಿಂಗೈಕ್ಯ ಶ್ರೀಗಳ ಹಾಗು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಭಗವತ್ಪಾದರ ಆಶೀರ್ವಾದವಿದೆ. ಈ ಹಿನ್ನಲೆಯಲ್ಲಿ ನಿರೀಕ್ಷೆಗೂ ಮೀರಿ ಶ್ರೀ ಮಠ ಭಕ್ತರ ಮನಸ್ಸಿನಲ್ಲಿ ಉಳಿದುಕೊಂಡು ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರು.
ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹ ವ್ಯವಸ್ಥಾಪಕ ನಿರ್ದೇಶಕ, ವೈದ್ಯ ಡಾ. ಧನಂಜಯ ಸರ್ಜಿ ಆಹಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು.
ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್ ಚನ್ನಬಸಪ್ಪ, , ನಗರಸಭೆ ಸದಸ್ಯರಾದ ಬಿ.ಕೆ.ಮೋಹನ್, ಚೆನ್ನಪ್ಪ, ಮುಖಂಡರುಗಳಾದ ಸಿದ್ದಲಿಂಗಯ್ಯ, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಎಸ್.ಕುಮಾರ್, ಆರ್.ಎಸ್.ಶೋಭಾ, ರೂಪ ನಾಗರಾಜ್, ಎಚ್. ಮಂಜುನಾಥ್, ಡಾ. ಜಿ.ಎಂ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಎಸ್. ವಾಗೀಶ್ ಸ್ವಾಗತಿಸಿದರು. ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ನಿರೂಪಿಸಿದರು. ದಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.