Sunday, November 19, 2023

ಕನ್ನಡ ಭಾಷೆ ಕುರಿತು ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ : ಹಾರೋನಹಳ್ಳಿಸ್ವಾಮಿ

ಭದ್ರಾವತಿ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಹಿರಿಯೂರು ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾರೋನಹಳ್ಳಿಸ್ವಾಮಿ ಉದ್ಘಾಟಿಸಿದರು.
    ಭಧ್ರಾವತಿ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹಿರಿಯೂರು ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾರೋನಹಳ್ಳಿಸ್ವಾಮಿ ಹೇಳಿದರು.
    ಅವರು ಭಾನುವಾರ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳಲ್ಲಿ ಕನ್ನಡ ಭಾಷೆ ಕುರಿತು ಅಭಿಮಾನ ಬೆಳೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಮನೆ-ಮನಗಳಲ್ಲಿ ಕನ್ನಡ ಭಾಷೆ ಆರಂಭವಾಗಬೇಕು. ಸಮೃದ್ಧವಾದ ಭಾಷೆ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.
    ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭ ಅಧ್ಯಕ್ಷತೆ ವಹಿಸಿದ್ದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಉದ್ಯಮಿ ಬಿ.ಕೆ ಜಗನ್ನಾಥ ಅವರ ಮೊಮ್ಮಗ ಆದ್ಯಂತ್ ನಂದೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಮಕ್ಕಳಾದ ಯು. ಅಕ್ಷಯ್‌ಕುಮಾರ್, ಪುಣ್ಯಶ್ರೀ ಪಿ. ಕುಂಬಾರ್, ಸುಮುಖ್ ರುದ್ರದೇವ್ ಎಚ್.ವಿ, ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಗೌರವ ಸಲಹೆಗಾರರಾದ ನಾಗರತ್ನ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್ ಕೋಠಿ ಉಪಸ್ಥಿತರಿದ್ದರು.
    ಶ್ರೀಯ ಸ್ವಾಗತಿಸಿ, ಜಿ.ಎನ್ ತೃಪ್ತಿ ಪ್ರಾರ್ಥಿಸಿದರು. ಎಸ್. ಪ್ರಜ್ಞಾ ನಿರೂಪಿಸಿದರು.  

Saturday, November 18, 2023

ಕನ್ನಡ ಭಾಷೆ ಮತ್ತಷ್ಟು ಉಜ್ವಲಗೊಳ್ಳಲು ಕನ್ನಡಾಭಿಮಾನ ಬೆಳೆಯಲಿ : ಡಾ. ಎಂ. ಬಸವರಾಜಪ್ಪ

ಭದ್ರಾವತಿಯಲ್ಲಿ ಶನಿವಾರ ಭೂಮಿಕಾ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕರ್ನಾಟಕ ಸಂಭ್ರಮ ೬೮ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಶಿಕ್ಷಣ ಇಲಾಖೆ ಸಂಯೋಜಕ ಡಾ. ಎಂ. ಬಸವರಾಜಪ್ಪ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ : ಕನ್ನಡ ಭಾಷೆ ಮತ್ತಷ್ಟು ಉಜ್ವಲಗೊಳ್ಳಲು ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಬೆಳೆಯಬೇಕೆಂದು ಶಿಕ್ಷಣ ಇಲಾಖೆ ಸಂಯೋಜಕ ಡಾ. ಎಂ. ಬಸವರಾಜಪ್ಪ ಹೇಳಿದರು.
    ಅವರು ಶನಿವಾರ ಭೂಮಿಕಾ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕರ್ನಾಟಕ ಸಂಭ್ರಮ ೬೮ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ವಿಶ್ವದಾದ್ಯಂತ ಕನ್ನಡ ಭಾಷೆ ವಿಸ್ತಾರಗೊಳ್ಳಬೇಕೆಂಬ ಆಶಯ ವೇದಿಕೆ ಹೊಂದಿರುವುದು ಅದರ ಹೆಸರು ಹಾಗು ಲಾಂಛನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ನಮ್ಮಲ್ಲಿ ಕನ್ನಡಾಭಿಮಾನವಿದ್ದಲ್ಲಿ ಭಾಷೆ ಸಹ ಬೆಳವಣಿಗೆ ಹೊಂದುತ್ತದೆ. ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯಲ್ಲಿ ಹಲವು ವಿಭಿನ್ನತೆ, ವೈಶಿಷ್ಟತೆಯನ್ನು ಕಾಣಬಹುದಾಗಿದೆ. ಎಲ್ಲರನ್ನೂ ಸೇರಿಸುವ, ಎಲ್ಲರನ್ನು ಒಳಗೊಂಡಿರುವ ಭಾಷೆ ಕನ್ನಡ ಎಂಬುದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವೈದ್ಯ ಸಾಹಿತಿ, ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಮಾತನಾಡಿ, ಮೊದಲು ನಾವೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಕನ್ನಡ ಭಾಷೆ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ವೇದಿಕೆ ಕನ್ನಡ ನಾಡು, ನಡೆ-ನುಡಿ ಬಿಂಬಿಸುವ ಮೂಲಕ ಜಾಗೃತಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
    ವೇದಿಕೆ ಗೌರವಾಧ್ಯಕ್ಷ ಕೆ. ಲಕ್ಷ್ಮಣ್‌ರಾವ್, ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಸಿ.ಎಲ್ ಮುನಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರು ಕಾಲಘಟ್ಟಕ್ಕನುಗುಣವಾಗಿ ಮತ್ತೊಮ್ಮೆ ಬದಲಾಗಬೇಕಿದೆ : ಪ್ರೊ. ರಹಮತ್ ತರೀಕೆರೆ

ಭದ್ರಾವತಿ ಸೇಂಟ್ ಜೋಸೆಫ್ ಶಾಲೆಯಲ್ಲಿ ಸಿಬಿಎಸ್‌ಇ ಶಾಲೆಗಳ ಒಕ್ಕೂಟ ಸಹ್ಯಾಧ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ವತಿಯಿಂದ ಆಯೋಜಿಸಲಾಗಿದ್ದ ಅಧ್ಯಯನ-೪ ಶಿಕ್ಷಕರ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ರೆಹಮತ್ ತರೀಕೆರೆ ಮಾತನಾಡಿದರು.
    ಭದ್ರಾವತಿ;  ಪ್ರಸ್ತುತ ಶಿಕ್ಷಕರು ಕಾಲಘಟ್ಟಕ್ಕನುಗುಣವಾಗಿ ಮತ್ತೊಮ್ಮೆ ಬದಲಾಗಬೇಕಿದೆ. ಶಿಕ್ಷಕರೂ ಸಹ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ ಹೇಳಿದರು.
    ಗಾಂಧಿನಗರದ ಸೇಂಟ್ ಜೋಸೆಫ್ ಶಾಲಾ ಆವರಣದಲ್ಲಿ ಸಿಬಿಎಸ್‌ಇ ಶಾಲೆಗಳ ಒಕ್ಕೂಟ, ಸಹ್ಯಾಧ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಅಧ್ಯಯನ-೪ ಶಿಕ್ಷಕರ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ದಿನಗಳಲ್ಲಿ ಸರ್ಕಾರಗಳು ಮಾಡುವ ಎಜುಕೇಷನ್ ಪಾಲಿಸಿ ಚೌಕಟ್ಟಿನಲ್ಲಿ ಆಟವಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು,  ಶಿಕ್ಷಕರುಗಳಿಗೆ ಸ್ವಾತಂತ್ರ್ಯ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ನಾವುಗಳು ಅತ್ಯುತ್ತಮ ಶಿಕ್ಷಕರಾಗಬೇಕಾದರೆ ಸಮಾಜ ನಮಗೆ ಕೊಟ್ಟಿರುವ ಚಿತ್ರಕಲೆ, ಸಿನಿಮಾ ಸಾಹಿತ್ಯ, ಸಂಗೀತವನ್ನು ಆಸ್ವಾದಿಸಿ ಅರಗಿಸಿಕೊಳ್ಳುವ ಗುಣ ಹೊಂದಬೇಕು.  ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುವಂತೆ ಎಲ್ಲಾ ವಿಚಾರಗಳ ಜ್ಞಾನ ಸಂಪಾದಿಸಬೇಕು. ಸಂಗೀತಗಾರರು, ಕಲಾ ನೈಪುಣ್ಯರು, ಉತ್ತಮ ಹಾಡುಗಾರರು ಲೇಖಕರನ್ನು ಶಾಲೆಗೆ ಕರೆಸಿ ಸಂವಾದ ಕಾರ್ಯಕ್ರಮಗಳನ್ನು ನಡೆಸಬೇಕು. ಆಗ ಮಾತ್ರ ಜ್ಞಾನ ಸಂಪಾದನೆ ಜೊತೆಗೆ ಮನುಷ್ಯತ್ವ ಗುಣವೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
    ಯಾವುದೇ ದೇಶ ಒಂದು ಕ್ಷೇತ್ರಕ್ಕೆ ಮಾತ್ರ ಮಹತ್ವ ಕೊಟ್ಟರೆ ಆ ದೇಶ ಹೆಚ್ಚು ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ.  ಆ ದೇಶ ಅಂಗವಿಕಲತೆಯನ್ನು ಅನುಭವಿಸಿದಂತಾಗುತ್ತದೆ. ಸಮಾಜದ ಎಲ್ಲಾ ಕ್ಷೇತ್ರಗಳಿಗೂ ಮಹತ್ವ ಕೊಡಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ದೇಶ ಬಹಳ ದೂರ ಹೋಗಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ ಎಂದರು.
    ಶಿಕ್ಷಕ ವೃತ್ತಿಯಲ್ಲಿ ಮಹಿಳೆಗೆ ಹೆಚ್ಚು ಸ್ಥಾನ ಕೊಡುತ್ತೇವೆ. ಆದರೆ ಆಕೆಯ ಸಾರ್ವಜನಿಕ ಬದುಕನ್ನು ಮುಕ್ತವಾಗಿ ಕೊಡದೆ ಕೌಟಂಬಿಕ ನೆಲೆಗಟ್ಟಿನಲ್ಲಿ ಕಟ್ಟಿದ್ದೇವೆ. ಅದನ್ನು ಪಡೆದುಕೊಳ್ಳುವ ಕೆಲಸ ಮಾಡಬೇಕಾಗಿದೆ. ಗುರುವನ್ನು ವೈಭವೀಕರಿಸುವ ಸಂಸ್ಕೃತಿ ನಮ್ಮದು.  ಇಲ್ಲಿ ಗುರುಗಳಿಗೂ ವಿಧ್ಯಾರ್ಥಿಗಳಿಗೂ ಉತ್ತಮ ಬಾಂಧವ್ಯವಿರಬೇಕು. ಮೊಬೈಲ್‌ನಲ್ಲಿ ಇಂದು ಎಲ್ಲಾ ಮಕ್ಕಳಿಗೂ ಎಲ್ಲಾ ವಿಚಾರಗಳು ಸಿಗುತ್ತಿವೆ. ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರೂ ಸಹ ಸಾಕಷ್ಟು ಕಲಿಯಬೇಕಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಸಹೋದಯ ಕಾರ್ಯದರ್ಶಿ ಸುಕೇಶ ಶೇರಿಗಾರ್. ಸೇಂಟ್ ಜೋಸೇಪ್ ಶಾಲೆಯ ಅಧ್ಯಕ್ಷ ಟಿ. ಪುಷ್ಪರಾಜ್. ಪ್ರಾಂಶುಪಾಲರಾದ ಲತಾ ರಾಬರ್ಟ್. ಶೋಭಾ ರವೀಂದ್ರ. ನವೀನ ಎಂ ಪಾಯ್ಸ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಬೆಳಿಗ್ಗೆ ಅಧ್ಯಯನ-೪ ಶಿಕ್ಷಕರ ವಾರ್ಷಿಕ ಸಮ್ಮೇಳನವನ್ನು ಇಸ್ರೋದ ಮಾಜಿ ಅಧ್ಯಕ್ಷ ಡಾ.ಬಿ.ಎನ್ ಸುರೇಶ್ ಉದ್ಘಾಟಿಸಿದರು. ಎಂ.ಡಿ & ಚೀಫ್ ಲರ್ನರ್ ಅಟ್ ಎಲ್‌ಎಕ್ಸ್‌ಎಲ್ ಐಡಿಯಾಸ್ ಸೈಯದ್ ಸುಲ್ತಾನ್ ಅಹಮದ್ ಮತ್ತು ಚೀಫ್ ಆಪರೇಟಿಂಗ್ ಆಫೀಸರ್, ಅಜೀಮ್ ಪ್ರೇಮ್‌ಜೀ ಫೌಂಡೇಷನ್ ಎಸ್. ಗಿರಿಧರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
    ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಸಿಬಿಎಸ್‌ಸಿ ಸುಮಾರು ೨೨ ಶಾಳೆಗಳ ಒಟ್ಟು ಸುಮಾರು ೧೨೦೦ ಶಿಕ್ಷಕರು ಪಾಲ್ಗೊಂಡಿದ್ದರು.

ವಿದ್ಯೆ, ಪ್ರತಿಭೆ ಯಾರು ಕದಿಯಾಲಾಗದು : ಶೃತಿ ಸಿ. ವಸಂಕುಮಾರ್ ಕೆ.ಸಿ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಉದ್ಘಾಟಿಸಿದರು.
    ಭದ್ರಾವತಿ: ವಿದ್ಯೆ ಮತ್ತು ಪ್ರತಿಭೆ ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೂಲಕ ಉತ್ತಮ ಸಾಧನೆ ದಾರಿಯಲ್ಲಿ ಮುನ್ನಡೆಯಬೇಕೆಂದು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಬಾಬಾ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳು ಕಲಿಕೆಗೆ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಹಕಾರಿಯಾಗಿದೆ ಎಂದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ವರ್ಷ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡುತ್ತಿದೆ ಎಂದರು.
    ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್, ನಿರ್ದೇಶಕರಾದ ಎಂ.ಆರ್ ರೇವಣಪ್ಪ, ವೈ.ಎನ್ ಶ್ರೀಧರಗೌಡ, ಎಚ್.ಎಸ್ ಮಾಯಮ್ಮ, ಸುಮತಿ ಕಾರಂತ್, ಪ್ರೌಢಶಾಲಾ ಶಿಕ್ಷಕರ ಸಂಘದ ಕೆ. ಬಸವರಾಜಪ್ಪ, ಆರ್. ಬಸವರಾಜ, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಶ್ರೀ ಸತ್ಯ ಸಾಯಿಬಾಬಾ ಶಾಲೆ ಶಿಕ್ಷಕಿ ತುಳಸಿಬಾಯಿ ನಿರೂಪಿಸಿದರು. ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಒಟ್ಟು ೨೬ ಕ್ಲಸ್ಟರ್‌ಗಳಿಂದ ಸುಮಾರು ೧೨೦೦ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.

ಸಿದ್ಧಾರೂಢನಗರದಲ್ಲಿ ರಾಜ್ಯೋತ್ಸವ: ಬಿಳಕಿ ಶ್ರೀಗಳಿಂದ ಧ್ವಜಾರೋಹಣ

ಭದ್ರಾವತಿ ಸಿದ್ಧಾರೂಢನಗರದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೬೮ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ ಬಿಳಕಿ ಹಿರೇಮಠದ ಷ|| ಬ್ರ|| ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು.
    ಭದ್ರಾವತಿ: ಸಿದ್ಧಾರೂಢನಗರದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೬೮ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ ಬಿಳಕಿ ಹಿರೇಮಠದ ಷ|| ಬ್ರ|| ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು.
    ಸಿದ್ದಾರೂಢನಗರದ ಶ್ರೀ ಶೃಗೇರಿ ಶಂಕರ ಮಠದ ಸಮೀಪ ೨ ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿದ್ದು, ನಗರಸಭೆ ಪೌರಾಯುಕ್ತ ಮನುಕುಮಾರ್, ಜೇಡಿಕಟ್ಟೆ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಶಾಂತಕುಮಾರ್, ಲಕ್ಷ್ಮೀಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನ.೧೯ರ ಸಂಜೆ ೬ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಚಾರ್ಯ ಎಚ್. ಭುವನೇಶ್ವರ್ `ಕನ್ನಡದ ಸ್ಥಿತಿ, ಗತಿ' ಕುರಿತು ಉಪನ್ಯಾಸ ನೀಡಲಿದ್ದಾರೆ. ಹಿರಿಯ ನಾಗರೀಕರಿಗೆ, ಪಿಯುಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

Friday, November 17, 2023

ಮಹೇಶ್ವರ ನಾಯಕ್‌ಗೆ ಗ್ರಂಥಾಲಯ ಇಲಾಖೆ ಸಿಬ್ಬಂದಿ ಸೇವಾ ಪುರಸ್ಕಾರ

ಡಿ. ಮಹೇಶ್ವರ ನಾಯಕ್
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕ ಹಾಗು ಮಾಹಿತಿ ಸಹಾಯಕರಾದ ಡಿ. ಮಹೇಶ್ವರ ನಾಯಕ್ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಿಬ್ಬಂದಿ ಸೇವಾ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
    ಕಲ್ಪನಹಳ್ಳಿ ತಾಂಡ ನಿವಾಸಿಯಾಗಿರುವ ಮಹೇಶ್ವರ ನಾಯಕ್ ಅವರು ಹಲವಾರು ವರ್ಷಗಳಿಂದ ಮೇಲ್ವಿಚಾರಕ ಹಾಗು ಮಾಹಿತಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
    ಸೊರಬದಲ್ಲಿ ನ.೨೦ರಂದು ನಡೆಯಲಿರುವ ಗ್ರಂಥಾಲಯ ಸಪ್ತಾಹ ಆಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಮಹೇಶ್ವರ ನಾಯಕ್ ಅವರನ್ನು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗು ಕಾರ್ಯದರ್ಶಿ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.  

ಪೌರಕಾರ್ಮಿಕರಿಗೆ ಸೌಲಭ್ಯ ಒದಗಿಸುವುದು ಎಲ್ಲರ ಜವಾಬ್ದಾರಿ : ಶೃತಿ ವಸಂತಕುಮಾರ್

ಭದ್ರಾವತಿ ಜೈಭೀಮ್ ನಗರದ ಸಮುದಾಯ ಭವನದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗು ನಗರಸಭೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ನಗರಸಭೆ ಠೇವಣಿವಂತಿಕೆ ಕಾಮಗಾರಿಯಡಿ ಜೈಭೀಮ್ ನಗರದಲ್ಲಿ ನಿರ್ಮಾಣಗೊಂಡಿರುವ ಪೌರಕಾರ್ಮಿಕರ ಗೃಹಗಳಿಗೆ ಒಳಚಂರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಉದ್ಘಾಟಿಸಿದರು.
    ಭದ್ರಾವತಿ : ಪೌರಕಾರ್ಮಿಕರು ನಗರಸಭೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದು, ಇವರಿಗೂ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಹೇಳಿದರು.
    ಅವರು ಶುಕ್ರವಾರ ಜೈಭೀಮ್ ನಗರದ ಸಮುದಾಯ ಭವನದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗು ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಗರಸಭೆ ಠೇವಣಿವಂತಿಕೆ ಕಾಮಗಾರಿಯಡಿ ನಗರದ ಜೈಭೀಮ್ ನಗರದಲ್ಲಿ ನಿರ್ಮಾಣಗೊಂಡಿರುವ ಪೌರಕಾರ್ಮಿಕರ ಗೃಹಗಳಿಗೆ ಒಳಚಂರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಪೌರಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಮನೆಗಳು ಸಕಲ ಸೌಲಭ್ಯಗಳಿಂದ ಕೂಡಿದ್ದು, ಸುಸಜ್ಜಿತವಾಗಿ ನಿರ್ಮಾಣಗೊಳಿಸಲಾಗಿದೆ. ನಗರದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖ. ಅದೇ ರೀತಿ ಪೌರಕಾರ್ಮಿಕರ ಆರೋಗ್ಯ ಕಾಪಾಡುವುದು ನಗರಸಭೆಯ ಕರ್ತವ್ಯ. ಈ ನಿಟ್ಟಿನಲ್ಲಿ ನಗರಸಭೆ ಹಲವು ಕ್ರಮಗಳನ್ನುಕೈಗೊಂಡಿದೆ ಎಂದರು.
ಪೌರಾಯುಕ್ತ ಮನುಕುಮಾರ್ ಮಾತನಾಡಿ, ಜಿ+ 3 ಗುಂಪು ಮನೆ ಯೋಜನೆಯಡಿ 74 ಪೌರಕಾರ್ಮಿಕರಿಗೆ ಮನೆಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ 71 ಪೌರಕಾರ್ಮಿಕರು ಹೊಸದಾಗಿ ನೇಮಕಗೊಂಡಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಸಹ ಮನೆಗಳನ್ನು ಒದಗಿಸಲಾಗುವುದು ಎಂದರು.
    ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯರಾದ ಮಣಿ ಎಎನ್‌ಎಸ್, ಬಸವರಾಜ್ ಬಿ ಆನೇಕೊಪ್ಪ, ಉದಯಕುಮಾರ್, ಜಾರ್ಜ್, ಆರ್. ಮೋಹನ್ ಕುಮಾರ್, ಲತಾ ಚಂದ್ರಶೇಖರ್, ಅನುಪಮ ಚನ್ನೇಶ್, ಮಂಜುಳ ಸುಬ್ಬಣ್ಣ, ಶಶಿಕಲಾ ನಾರಾಯಣಪ್ಪ, ಬಿ.ಎಂ ಮಂಜುನಾಥ್(ಟೀಕು), ರಿಯಾಜ್ ಅಹಮದ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಕುಮಾರ್, ಗುತ್ತಿಗೆದಾರ ದೇವೇಂದ್ರ, ನಗರಸಭೆ ಮೇಸ್ತ್ರಿಗಳಾದ ವಿಜಯ್, ದಾನಂ, ನರಸಿಂಹ, ಎನ್. ಗೋವಿಂದ, ಎನ್. ಪ್ರಸನ್ನಕುಮಾರ್, ರಾಜೇಶ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.
    ನಗರಸಭೆ ಸದಸ್ಯ ಚನ್ನಪ್ಪ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಹಮದ್ ಗೌಸ್ ನಿರೂಪಿಸಿ, ವಂದಿಸಿದರು. ನಗರಸಭೆ ಪೌರಕಾರ್ಮಿಕರು, ಜೈಭೀಮ್ ನಗರದ ನಿವಾಸಿಗಳು ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.