ಶನಿವಾರ, ನವೆಂಬರ್ 18, 2023

ಕನ್ನಡ ಭಾಷೆ ಮತ್ತಷ್ಟು ಉಜ್ವಲಗೊಳ್ಳಲು ಕನ್ನಡಾಭಿಮಾನ ಬೆಳೆಯಲಿ : ಡಾ. ಎಂ. ಬಸವರಾಜಪ್ಪ

ಭದ್ರಾವತಿಯಲ್ಲಿ ಶನಿವಾರ ಭೂಮಿಕಾ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕರ್ನಾಟಕ ಸಂಭ್ರಮ ೬೮ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಶಿಕ್ಷಣ ಇಲಾಖೆ ಸಂಯೋಜಕ ಡಾ. ಎಂ. ಬಸವರಾಜಪ್ಪ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ : ಕನ್ನಡ ಭಾಷೆ ಮತ್ತಷ್ಟು ಉಜ್ವಲಗೊಳ್ಳಲು ಪ್ರತಿಯೊಬ್ಬರಲ್ಲೂ ಕನ್ನಡಾಭಿಮಾನ ಬೆಳೆಯಬೇಕೆಂದು ಶಿಕ್ಷಣ ಇಲಾಖೆ ಸಂಯೋಜಕ ಡಾ. ಎಂ. ಬಸವರಾಜಪ್ಪ ಹೇಳಿದರು.
    ಅವರು ಶನಿವಾರ ಭೂಮಿಕಾ ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ವತಿಯಿಂದ ತರೀಕೆರೆ ರಸ್ತೆಯ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕರ್ನಾಟಕ ಸಂಭ್ರಮ ೬೮ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ವಿಶ್ವದಾದ್ಯಂತ ಕನ್ನಡ ಭಾಷೆ ವಿಸ್ತಾರಗೊಳ್ಳಬೇಕೆಂಬ ಆಶಯ ವೇದಿಕೆ ಹೊಂದಿರುವುದು ಅದರ ಹೆಸರು ಹಾಗು ಲಾಂಛನದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ನಮ್ಮಲ್ಲಿ ಕನ್ನಡಾಭಿಮಾನವಿದ್ದಲ್ಲಿ ಭಾಷೆ ಸಹ ಬೆಳವಣಿಗೆ ಹೊಂದುತ್ತದೆ. ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯಲ್ಲಿ ಹಲವು ವಿಭಿನ್ನತೆ, ವೈಶಿಷ್ಟತೆಯನ್ನು ಕಾಣಬಹುದಾಗಿದೆ. ಎಲ್ಲರನ್ನೂ ಸೇರಿಸುವ, ಎಲ್ಲರನ್ನು ಒಳಗೊಂಡಿರುವ ಭಾಷೆ ಕನ್ನಡ ಎಂಬುದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವೈದ್ಯ ಸಾಹಿತಿ, ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಮಾತನಾಡಿ, ಮೊದಲು ನಾವೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಕನ್ನಡ ಭಾಷೆ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ವೇದಿಕೆ ಕನ್ನಡ ನಾಡು, ನಡೆ-ನುಡಿ ಬಿಂಬಿಸುವ ಮೂಲಕ ಜಾಗೃತಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
    ವೇದಿಕೆ ಗೌರವಾಧ್ಯಕ್ಷ ಕೆ. ಲಕ್ಷ್ಮಣ್‌ರಾವ್, ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಸಿ.ಎಲ್ ಮುನಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ