ಭದ್ರಾವತಿ ಸೇಂಟ್ ಜೋಸೆಫ್ ಶಾಲೆಯಲ್ಲಿ ಸಿಬಿಎಸ್‌ಇ ಶಾಲೆಗಳ ಒಕ್ಕೂಟ ಸಹ್ಯಾಧ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ವತಿಯಿಂದ ಆಯೋಜಿಸಲಾಗಿದ್ದ ಅಧ್ಯಯನ-೪ ಶಿಕ್ಷಕರ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ರೆಹಮತ್ ತರೀಕೆರೆ ಮಾತನಾಡಿದರು.
ಭದ್ರಾವತಿ; ಪ್ರಸ್ತುತ ಶಿಕ್ಷಕರು ಕಾಲಘಟ್ಟಕ್ಕನುಗುಣವಾಗಿ ಮತ್ತೊಮ್ಮೆ ಬದಲಾಗಬೇಕಿದೆ. ಶಿಕ್ಷಕರೂ ಸಹ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ ಹೇಳಿದರು.
ಗಾಂಧಿನಗರದ ಸೇಂಟ್ ಜೋಸೆಫ್ ಶಾಲಾ ಆವರಣದಲ್ಲಿ ಸಿಬಿಎಸ್‌ಇ ಶಾಲೆಗಳ ಒಕ್ಕೂಟ, ಸಹ್ಯಾಧ್ರಿ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಅಧ್ಯಯನ-೪ ಶಿಕ್ಷಕರ ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸರ್ಕಾರಗಳು ಮಾಡುವ ಎಜುಕೇಷನ್ ಪಾಲಿಸಿ ಚೌಕಟ್ಟಿನಲ್ಲಿ ಆಟವಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಿಕ್ಷಕರುಗಳಿಗೆ ಸ್ವಾತಂತ್ರ್ಯ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾವುಗಳು ಅತ್ಯುತ್ತಮ ಶಿಕ್ಷಕರಾಗಬೇಕಾದರೆ ಸಮಾಜ ನಮಗೆ ಕೊಟ್ಟಿರುವ ಚಿತ್ರಕಲೆ, ಸಿನಿಮಾ ಸಾಹಿತ್ಯ, ಸಂಗೀತವನ್ನು ಆಸ್ವಾದಿಸಿ ಅರಗಿಸಿಕೊಳ್ಳುವ ಗುಣ ಹೊಂದಬೇಕು. ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುವಂತೆ ಎಲ್ಲಾ ವಿಚಾರಗಳ ಜ್ಞಾನ ಸಂಪಾದಿಸಬೇಕು. ಸಂಗೀತಗಾರರು, ಕಲಾ ನೈಪುಣ್ಯರು, ಉತ್ತಮ ಹಾಡುಗಾರರು ಲೇಖಕರನ್ನು ಶಾಲೆಗೆ ಕರೆಸಿ ಸಂವಾದ ಕಾರ್ಯಕ್ರಮಗಳನ್ನು ನಡೆಸಬೇಕು. ಆಗ ಮಾತ್ರ ಜ್ಞಾನ ಸಂಪಾದನೆ ಜೊತೆಗೆ ಮನುಷ್ಯತ್ವ ಗುಣವೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಯಾವುದೇ ದೇಶ ಒಂದು ಕ್ಷೇತ್ರಕ್ಕೆ ಮಾತ್ರ ಮಹತ್ವ ಕೊಟ್ಟರೆ ಆ ದೇಶ ಹೆಚ್ಚು ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಆ ದೇಶ ಅಂಗವಿಕಲತೆಯನ್ನು ಅನುಭವಿಸಿದಂತಾಗುತ್ತದೆ. ಸಮಾಜದ ಎಲ್ಲಾ ಕ್ಷೇತ್ರಗಳಿಗೂ ಮಹತ್ವ ಕೊಡಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ದೇಶ ಬಹಳ ದೂರ ಹೋಗಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ ಎಂದರು.
ಶಿಕ್ಷಕ ವೃತ್ತಿಯಲ್ಲಿ ಮಹಿಳೆಗೆ ಹೆಚ್ಚು ಸ್ಥಾನ ಕೊಡುತ್ತೇವೆ. ಆದರೆ ಆಕೆಯ ಸಾರ್ವಜನಿಕ ಬದುಕನ್ನು ಮುಕ್ತವಾಗಿ ಕೊಡದೆ ಕೌಟಂಬಿಕ ನೆಲೆಗಟ್ಟಿನಲ್ಲಿ ಕಟ್ಟಿದ್ದೇವೆ. ಅದನ್ನು ಪಡೆದುಕೊಳ್ಳುವ ಕೆಲಸ ಮಾಡಬೇಕಾಗಿದೆ. ಗುರುವನ್ನು ವೈಭವೀಕರಿಸುವ ಸಂಸ್ಕೃತಿ ನಮ್ಮದು. ಇಲ್ಲಿ ಗುರುಗಳಿಗೂ ವಿಧ್ಯಾರ್ಥಿಗಳಿಗೂ ಉತ್ತಮ ಬಾಂಧವ್ಯವಿರಬೇಕು. ಮೊಬೈಲ್‌ನಲ್ಲಿ ಇಂದು ಎಲ್ಲಾ ಮಕ್ಕಳಿಗೂ ಎಲ್ಲಾ ವಿಚಾರಗಳು ಸಿಗುತ್ತಿವೆ. ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರೂ ಸಹ ಸಾಕಷ್ಟು ಕಲಿಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಸಹೋದಯ ಕಾರ್ಯದರ್ಶಿ ಸುಕೇಶ ಶೇರಿಗಾರ್. ಸೇಂಟ್ ಜೋಸೇಪ್ ಶಾಲೆಯ ಅಧ್ಯಕ್ಷ ಟಿ. ಪುಷ್ಪರಾಜ್. ಪ್ರಾಂಶುಪಾಲರಾದ ಲತಾ ರಾಬರ್ಟ್. ಶೋಭಾ ರವೀಂದ್ರ. ನವೀನ ಎಂ ಪಾಯ್ಸ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳಿಗ್ಗೆ ಅಧ್ಯಯನ-೪ ಶಿಕ್ಷಕರ ವಾರ್ಷಿಕ ಸಮ್ಮೇಳನವನ್ನು ಇಸ್ರೋದ ಮಾಜಿ ಅಧ್ಯಕ್ಷ ಡಾ.ಬಿ.ಎನ್ ಸುರೇಶ್ ಉದ್ಘಾಟಿಸಿದರು. ಎಂ.ಡಿ & ಚೀಫ್ ಲರ್ನರ್ ಅಟ್ ಎಲ್‌ಎಕ್ಸ್‌ಎಲ್ ಐಡಿಯಾಸ್ ಸೈಯದ್ ಸುಲ್ತಾನ್ ಅಹಮದ್ ಮತ್ತು ಚೀಫ್ ಆಪರೇಟಿಂಗ್ ಆಫೀಸರ್, ಅಜೀಮ್ ಪ್ರೇಮ್‌ಜೀ ಫೌಂಡೇಷನ್ ಎಸ್. ಗಿರಿಧರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಸಿಬಿಎಸ್‌ಸಿ ಸುಮಾರು ೨೨ ಶಾಳೆಗಳ ಒಟ್ಟು ಸುಮಾರು ೧೨೦೦ ಶಿಕ್ಷಕರು ಪಾಲ್ಗೊಂಡಿದ್ದರು.
No comments:
Post a Comment