Tuesday, November 21, 2023

ನ.೨೨ರಂದು ಕಟ್ಟಡ ಕಾರ್ಮಿಕರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮುಂಭಾಗ ಪ್ರತಿಭಟನೆ

    ಭದ್ರಾವತಿ: ಕಟ್ಟಡ ಕಾರ್ಮಿಕರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.೨೨ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಗಳ ಪ್ರಮುಖರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಫಲಾನುಭವಿಗಳ ಮಕ್ಕಳಿಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಶೈಕ್ಷಣಿಕ ಸಹಾಯಧನ ಯೋಜನೆಯಲ್ಲಿ ಶೇ.೮೦ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ಸಹಾಯಧನ ಕಡಿತಗೊಳಿಸುವುದನ್ನು ಕೈಬಿಟ್ಟು ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿಗಳಿಗೂ ಸಹಾಯಧನ ನೀಡಬೇಕೆಂದು ಆಗ್ರಹಿಸಿದರು.
    ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯಡಿ ಫಲಾನುಭವಿ ಹಾಗು ಅವಲಂಬಿತರು ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಮುಂಗಡ ಹಣ ಪಾವತಿ ಮಾಡದೆ ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿಕೊಡುವ ಜೊತೆಗೆ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚ ಮಂಡಳಿ ಭರಿಸುವುದು. ಅಪಘಾತ ಪರಿಹಾರ ಸಹಾಯ ಧನ ೮ ಲಕ್ಷ ರು., ಸಂಪೂರ್ಣ ಶಾಶ್ವತ ದುರ್ಬಲತೆಗೆ ೫ ಲಕ್ಷ ರು. ಹಾಗು ಭಾಗಶಃ ದುರ್ಬಲತೆಗೆ ೩ ಲಕ್ಷ ರು. ನೀಡುವುದು. ೩ ವರ್ಷ ಸದಸ್ಯತ್ವದೊಂದಿಗೆ ೬೦ ವರ್ಷ ಪೂರೈಸಿದ ಫಲಾಭವಿಗೆ ಮರಣ ನಂತರ ಅಂತ್ಯಕ್ರಿಯೆ ವೆಚ್ಚ ೨೫ ಸಾವಿರ ರು. ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.  
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಭಿಲಾಷ್, ಚಂದ್ರಶೇಖರ್, ಅಂತೋಣಿ ಕ್ರೂಸ್, ಸಮಿವುಲ್ಲಾ, ವಿ. ವಿನೋದ್, ಮನೋಹರ್, ಶಿವಣ್ಣಗೌಡ, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹನಿಟ್ರ್ಯಾಪ್ ಪ್ರಕರಣ : ಮೈಸೂರು ಮೂಲದ ಐವರ ಸೆರೆ

ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಹನಿಟ್ರ್ಯಾಪ್ ಪ್ರಕರಣವೊಂದನ್ನು ಬೇಧಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ: ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಹನಿಟ್ರ್ಯಾಪ್ ಪ್ರಕರಣವೊಂದನ್ನು ಬೇಧಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಮೈಸೂರು ಮೂಲದ ಶ್ವೇತಾ, ವಿನಾಯಕ, ಮಹೇಶ್, ಅರುಣ್‌ಕುಮಾರ್ ಹಾಗೂ ಹೇಮಂತ್ ಬಂಧಿಸಲಾಗಿದ್ದು, ೧ ಕಾರು ಮತ್ತು ೭ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಶರತ್ ಎಂಬುವರ ದೂರು ಆಧರಿಸಿ, ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಐವರನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ.
    ಘಟನೆ ವಿವರ :
    ನಗರದ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಶರತ್‌ಕುಮಾರ್‌ಗೆ ಮೈಸೂರಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಶ್ವೇತಾ ಪರಿಚಯ ಮಾಡಿಕೊಂಡಿದ್ದಳು. ನಂತರ ವಾಟ್ಸಪ್‌ನಲ್ಲಿ ಬೆತ್ತಲೆಯಾಗಿ ಮಹಿಳೆಯೋರ್ವಳು ವಿಡಿಯೋ ಕಾಲ್ ಮಾಡಿದ್ದಳು. ೨೦ ಲಕ್ಷ ರು. ಹಣ ನೀಡುವಂತೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
    ಈ ಐವರ ತಂಡ ಶರತ್‌ಕುಮಾರ್ ಬಳಿ ೧ ಲಕ್ಷ ರು. ಕಿತ್ತುಕೊಂಡಿದ್ದು,  ಅಲ್ಲದೆ ಹಲ್ಲೆ ನಡೆಸಿ ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿ   ಒತ್ತಾಯ ಪೂರ್ವಕವಾಗಿ ೨೫ ಲಕ್ಷ ರು. ಸಾಲ ಪಡೆದುಕೊಂಡಿರುವುದಾಗಿ ಸಹಿ ಹಾಕಿಸಿಕೊಂಡು ಎರಡು ದಿನಗಳ ಕಾಲ ಕೂಡಿ ಹಾಕಿದ್ದರು ಎನ್ನಲಾಗಿದೆ.
    ಮೈಸೂರಿನಿಂದ ತಪ್ಪಿಸಿಕೊಂಡು ಬಂದ ಶರತ್‌ಕುಮಾರ್ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ  ದಾಖಲಿಸಿದ್ದು, ದೂರನ್ನು ಆಧರಿಸಿ, ಹಣ ವರ್ಗಾವಣೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಐವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಅಧಿಕಾರಿಗಳು ನಿರ್ಲಕ್ಷಿಸದಿರಿ : ಎಚ್.ಎಸ್ ಸುರೇಶ್

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ವತಿಯಿಂದ ಸಾರ್ವಜನಿಕ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ ; ಲೋಕಾಯುಕ್ತ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಅಧಿಕಾರಿಗಳು ನಿರ್ಲಕ್ಷ್ಯವಾಗಿ ಪರಿಗಣಿಸಬಾರದು. ಸಭೆಗೆ ಕಡ್ಡಾಯವಾಗಿ ಪಾಲ್ಗೊಂಡು ಸಮಸ್ಯೆ ಇತ್ಯರ್ಥಗೊಳಿಸಲು ಸಹಕರಿಸಬೇಕೆಂದು ಲೋಕಾಯುಕ್ತ ಪೊಲೀಸ್ ಜಿಲ್ಲಾ ನಿರೀಕ್ಷಕ ಎಚ್.ಎಸ್ ಸುರೇಶ್ ಕೋರಿದರು.
    ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು, ಸಭೆಗೆ ಹಾಜರಾದ ಅಧಿಕಾರಿಗಳ ಮಾಹಿತಿ ಪಡೆದರು. ಶೇ.೫೦ರಷ್ಟು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
    ಸಣ್ಣ ಆಮೀಷಗಳಿಗೆ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳದಿರಿ. ಜನತೆಯ ಕೆಲಸಗಳನ್ನು ಕೇವಲ ಸಬೂಬು ಹೇಳದೆ ಸಕಾಲಕ್ಕೆ ಪೂರ್ಣಗೊಳಿಸಿ. ಅಧಿಕಾರಿಗಳ ಹಂತದಲ್ಲಿ ಕೆಲಸಗಳು ಆಗದಿದ್ದಾಗ ಲೋಕಾಯುಕ್ತಕ್ಕೆ ದೂರುಗಳು ಬರುತ್ತವೆ. ಆದ್ದರಿಂದ ಇಂತಹ ದೂರುಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಅಧಿಕಾರಿಗಳು ಕುಂದುಕೊರತೆ ಸಭೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು.
    ಸಾರ್ವಜನಿಕರ ದೂರುಗಳನ್ನು ಲಘುವಾಗಿ ಪರಿಗಣಿಸದಿರಿ. ಕೇವಲ ಅರ್ಜಿ ಪಡೆಯುವುದು ಮುಖ್ಯವಲ್ಲ. ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಭದ್ರಾವತಿಗೆ ಸಂಬಂಧಿಸಿದಂತೆ ೫ ಅರ್ಜಿಗಳು ಬಂದಿದ್ದು, ಅಧಿಕಾರಿಗಳು ಹಾಜರಾಗದಿರುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತವೆ ಎಂದರು.
    ತಾಲೂಕು ಆಡಳಿತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಸಮಸ್ಯೆಗಳನ್ನು ಸಾಧ್ಯವಾದಷ್ಟು ಆರಂಭಿಕ ಹಂತದಲ್ಲಿಯೇ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಸಲಹೆ ವ್ಯಕ್ತಪಡಿಸಿದರು.
    ಸಭೆಯಲ್ಲಿ ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಉಪತಹಸೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಬಿ ಶಿವಪ್ರಸಾದ್, ತಾಲೂಕು ಪಂಚಾಯಿತಿ ಉಪೇಂದ್ರ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೇತ್ರಾವತಿ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ : ಕಾರ್ಮಿಕ ವಲಯದಲ್ಲಿ ಸಂತಸ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನೇತ್ರಾವತಿ ಹಾಗು ಇವರ ಬೆಂಬಲಿಗರು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ: ನಿರಂತರ ಹೋರಾಟದ ಮೂಲಕ ಗಮನ ಸೆಳೆದಿರುವ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನೇತ್ರಾವತಿ ಹಾಗು ಇವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಕ್ಕೆ ಇಲ್ಲಿನ ಕಾರ್ಮಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
    ಹಲವಾರು ವರ್ಷಗಳಿಂದ ಆಮ್ ಆದ್ಮಿ ಪಾರ್ಟಿ(ಎಎಪಿ) ಸಂಘಟಿಸುವ ಜೊತೆಗೆ ಹಲವಾರು ಹೋರಾಟಗಳ ಮೂಲಕ ನೇತ್ರಾವತಿಯವರು ಗುರುತಿಸಿಕೊಂಡಿದ್ದು, ಈ ಹಿಂದೆ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಶಿವಮೊಗ್ಗದಿಂದ ಕಾರ್ಖಾನೆ ಮುಖ್ಯದ್ವಾರದವರೆಗೂ ಪಾದಯಾತ್ರೆ ನಡೆಸಿ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಕಾರ್ಖಾನೆ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸುವ ಮೂಲಕ ಗಮನ ಸೆಳೆದಿದ್ದರು. ಅವರು ಕಾರ್ಮಿಕರು ಹಾಗು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹೊಂದಿರುವ ಕಾಳಜಿಗೆ ವ್ಯಕ್ತವಾಗಿತ್ತು.
    ಕಳೆದ ಕೆಲವು ದಿನಗಳ ಹಿಂದೆ ನೇತ್ರಾವತಿ ಹಾಗು ಅವರ ಬೆಂಬಲಿಗರು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕಾರ್ಮಿಕ ಮುಖಂಡ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರ ಕಾರ್ಮಿಕ ಮುಖಂಡರು ಸಂತಸ ವ್ಯಕ್ತಪಡಿಸುವ ಜೊತೆಗೆ ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಹಾಗು ಮೈಸೂರು ಕಾಗದ ಕಾರ್ಖಾನೆ ಪುನಃ ಆರಂಭಗೊಳ್ಳಲು ಇನ್ನೂ ಹೆಚ್ಚಿನ ಹೋರಾಟದ ಅನಿವಾರ್ಯತೆ ಇದ್ದು, ನೇತ್ರಾವತಿಯವರು ಈ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ.

Monday, November 20, 2023

ಮನುಷ್ಯರ ಬದುಕು ಉತ್ತಮವಾಗಿರಲು ಧರ್ಮವೇ ದಿಕ್ಸೂಚಿ : ರಂಭಾಪುರಿ ಶ್ರೀ

ಭದ್ರಾವತಿ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಹುತ್ತಾ ಸಹ್ಯಾದ್ರಿ ಬಡಾವಣೆಯ ಶ್ರೀ ರಂಗನಾಥ ಕೃಪದಲ್ಲಿ ಸಮಾಜ ಸೇವಕ ದಿವಂಗತ ಬಿ.ಎಚ್. ಮಹಾದೇವಪ್ಪ ಕುಟುಂಬ ವರ್ಗದವರು ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ನಂತರ ಜರುಗಿದ ಧರ್ಮಸಭೆಯಲ್ಲಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.
    ಭದ್ರಾವತಿ: ಮನುಷ್ಯರ ಬದುಕು ಉತ್ತಮವಾಗಿರಲು ಧರ್ಮವೇ ದಿಕ್ಸೂಚಿ. ಸಜ್ಜನ ವ್ಯಕ್ತಿಗಳ ಹಾಗು ಆದರ್ಶ ವ್ಯಕ್ತಿಗಳ ಒಡನಾಟದಿಂದ ಸಕಲ ಶ್ರೇಯಸ್ಸು ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.
    ಭಗವತ್ಪಾದರು ಸೋಮವಾರ ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಹುತ್ತಾ ಸಹ್ಯಾದ್ರಿ ಬಡಾವಣೆಯ ಶ್ರೀ ರಂಗನಾಥ ಕೃಪದಲ್ಲಿ ಸಮಾಜ ಸೇವಕ ದಿವಂಗತ ಬಿ.ಎಚ್. ಮಹಾದೇವಪ್ಪ ಕುಟುಂಬ ವರ್ಗದವರು ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡು ನಂತರ ನಡೆದ ಧರ್ಮಸಭೆಯಲ್ಲಿ ಆರ್ಶೀವಚನ ನೀಡಿದರು.
    ಧರ್ಮ ಎಂದರೆ ನುಡಿಯುವ ಮಾತಲ್ಲ. ಜೀವನದ ನಿಜವಾದ ಆಚರಣೆ. ಅದೊಂದು ಜೀವನ ವಿಧಾನ. ಜೀವನ ಎಂಬುದು ತೆರೆದಿಟ್ಟ ಪುಸ್ತಕ. ಮೊದಲ ಹಾಗು ಕೊನೆಪುಟವನ್ನು ದೇವರು ಬರೆದಿರುತ್ತಾನೆ. ನಡುವಿನ ಪುಟಗಳನ್ನು ನಾವು ರೂಪಿಸಿಕೊಳ್ಳಬೇಕು. ಮೊದಲಪುಟ ಹುಟ್ಟು ಕೊನೆಯ ಪುಟ ಸಾವು. ನಡುವಿನ ಬದುಕಿನ ಪುಟಗಳನ್ನು ಸಮೃದ್ಧವಾಗಿ ರೂಪಿಸಿಕೊಳ್ಳಬೇಕಿರುವುದು ಅವರವರ ಜವಾಬ್ದಾರಿ ಎಂದರು.
    ಪ್ರಸ್ತುತ ದಿನಗಳಲ್ಲಿ ತಂದೆ-ತಾಯಿ, ಗುರು-ಶಿಷ್ಯರ ನಡುವಿನ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಇದರಿಂದಾಗಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಭಗವತ್ಪಾದರು, ಧರ್ಮ ಕಾರ್ಯಗಳಿಂದ ಇಡೀ ಕುಟುಂಬಕ್ಕೆ ಸದ್ಭಾವನೆ ದೊರೆಯಲು ಸಾಧ್ಯ ಎಂದರು.
    ಬಿಳಕಿ ಹಿರೇಮಠದ ಪೀಠಾಧ್ಯಕ್ಷರಾದ ಷ|| ಬ್ರ|| ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಪ್ರಾಚೀನವಾದ ಧರ್ಮ. ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಧರ್ಮ ಮತ್ತು ಸಂಸ್ಕೃತಿ ಸಮಾಜವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುತ್ತವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
    ಸಮಾರಂಭದಲ್ಲಿ ತೀರ್ಥಹಳ್ಳಿ ಮಳಲಿಮಠದ ಷ|| ಬ್ರ|| ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಮಾರಂಭದ ಆಯೋಜಕರಾದ ಮನು ಮತ್ತು ಸ್ವಾಮಿ ಪಾಲ್ಗೊಂಡಿದ್ದರು. ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಗೀತಾ ರಾಜ್‌ಕುಮಾರ್, ಉದ್ಯಮಿ ಬಿ.ಕೆ.ಜಗನ್ನಾಥ್, ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ, ಆರ್. ಮಹೇಶ್‌ಕುಮಾರ್, ಅಡವೀಶಯ್ಯ, ರೂಪೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಯಕಿ ಶಾಂತ ಆನಂದ್ ಕಾರ್ಯಕ್ರಮ ನಿರೂಪಿಸಿದರು.


Sunday, November 19, 2023

ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ : ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸನ್ಮಾನ

ಭದ್ರಾವತಿ ಸಿದ್ಧಾರೂಢನಗರದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೬೮ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ: ಸಿದ್ಧಾರೂಢನಗರದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೬೮ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಿದ್ದಾರೂಢನಗರದ ಶ್ರೀ ಶೃಗೇರಿ ಶಂಕರ ಮಠದ ಸಮೀಪ ೨ ದಿನಗಳ ಕಾಲ ಆಯೋಜಿಸಿದ್ದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ಪ್ರಾಚಾರ್ಯ ಎಚ್. ಭುವನೇಶ್ವರ್ `ಕನ್ನಡದ ಸ್ಥಿತಿ, ಗತಿ' ಕುರಿತು ಉಪನ್ಯಾಸ ನೀಡಿದರು. ಹಿರಿಯ ನಾಗರೀಕರು ಹಾಗು ಪಿಯುಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ರಾಜ್ಯ ಪ್ರಶಸ್ತಿ ಪುರಸ್ಕೃತ ಹಾರೋನಹಳ್ಳಿಸ್ವಾಮಿ ನೇತೃತ್ವದ ಚಿಂತನ ಕಲಾವೃಂದದಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಜೇಡಿಕಟ್ಟೆ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಉದ್ಯಮಿ ಬಿ.ಕೆ ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗಾಯಕ ಬಿ.ಎ ಮಂಜುನಾಥ್, ಎಸ್. ವಾಗೀಶ್, ಪೂರ್ಣಿಮಾ ಸಿದ್ದಲಿಂಗಯ್ಯ,  ಲಕ್ಷ್ಮೀಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡ ಭಾಷೆ ಕುರಿತು ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ : ಹಾರೋನಹಳ್ಳಿಸ್ವಾಮಿ

ಭದ್ರಾವತಿ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಹಿರಿಯೂರು ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾರೋನಹಳ್ಳಿಸ್ವಾಮಿ ಉದ್ಘಾಟಿಸಿದರು.
    ಭಧ್ರಾವತಿ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹಿರಿಯೂರು ಎಸ್.ಬಿ.ಎಂ.ಎಂ.ಆರ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾರೋನಹಳ್ಳಿಸ್ವಾಮಿ ಹೇಳಿದರು.
    ಅವರು ಭಾನುವಾರ ಹಳೇನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳಲ್ಲಿ ಕನ್ನಡ ಭಾಷೆ ಕುರಿತು ಅಭಿಮಾನ ಬೆಳೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಮನೆ-ಮನಗಳಲ್ಲಿ ಕನ್ನಡ ಭಾಷೆ ಆರಂಭವಾಗಬೇಕು. ಸಮೃದ್ಧವಾದ ಭಾಷೆ ಕುರಿತು ಹೆಚ್ಚಿನ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.
    ಸಮಾಜದ ಅಧ್ಯಕ್ಷೆ ಆರ್.ಎಸ್ ಶೋಭ ಅಧ್ಯಕ್ಷತೆ ವಹಿಸಿದ್ದರು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಉದ್ಯಮಿ ಬಿ.ಕೆ ಜಗನ್ನಾಥ ಅವರ ಮೊಮ್ಮಗ ಆದ್ಯಂತ್ ನಂದೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಮಕ್ಕಳಾದ ಯು. ಅಕ್ಷಯ್‌ಕುಮಾರ್, ಪುಣ್ಯಶ್ರೀ ಪಿ. ಕುಂಬಾರ್, ಸುಮುಖ್ ರುದ್ರದೇವ್ ಎಚ್.ವಿ, ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ, ಗೌರವ ಸಲಹೆಗಾರರಾದ ನಾಗರತ್ನ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್ ಕೋಠಿ ಉಪಸ್ಥಿತರಿದ್ದರು.
    ಶ್ರೀಯ ಸ್ವಾಗತಿಸಿ, ಜಿ.ಎನ್ ತೃಪ್ತಿ ಪ್ರಾರ್ಥಿಸಿದರು. ಎಸ್. ಪ್ರಜ್ಞಾ ನಿರೂಪಿಸಿದರು.