Thursday, November 23, 2023

ಪದವೀಧರ-ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ : ತಹಶೀಲ್ದಾರ್ ಕೆ.ಆರ್.ನಾಗರಾಜ್

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ನೈರುತ್ಯ ಪದವೀಧರ ಹಾಗು ಶಿಕ್ಷಕರ ಕರಡು ಮತದಾರರ ಪಟ್ಟಿ ಕುರಿತು ತಹಸೀಲ್ದಾರ್ ಕೆ.ಆರ್ ನಾಗರಾಜ್ ಗುರುವಾರ ಮಾಹಿತಿ ನೀಡಿದರು.
    ಭದ್ರಾವತಿ: ನೈರುತ್ಯ ಪದವೀಧರ ಹಾಗು ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗು ಆಕ್ಷೇಪಣೆಗಳಿದ್ದಲ್ಲಿ ಡಿ.೯ರೊಳಗಾಗಿ ಸಲ್ಲಿಸುವಂತೆ ತಹಶೀಲ್ದಾರ್ ಕೆ.ಆರ್ ನಾಗರಾಜ್ ತಿಳಿಸಿದರು.
    ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನೈರುತ್ಯ ಪದವೀಧರ ಹಾಗು ಶಿಕ್ಷಕರ ಕರಡು ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದರು.
    ಶಿಕ್ಷಕರ ಕ್ಷೇತ್ರದ ಮತದಾನಕ್ಕಾಗಿ ಕಡ್ಡಾಯವಾಗಿ ೩ ವರ್ಷ ಸೇವೆ ಸಲ್ಲಿಸಿರಬೇಕು. ಪ್ರಸ್ತುತ ಮತಕ್ಷೇತ್ರದಲ್ಲಿ ೨೨೫ ಪುರುಷ ಹಾಗು ೧೮೫ ಮಹಿಳಾ ಮತದಾರರು ಸೇರಿದಂತೆ ಒಟ್ಟು ೪೧೦ ಮತದಾರರಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ೧,೫೦೫ ಪುರುಷ ಹಾಗು ೧,೩೦೭ ಮಹಿಳಾ ಮತದಾರರು, ಇತರೆ ೧ ಸೇರಿದಂತೆ ಒಟ್ಟು ೨೮೧೩ ಮತದಾರರಿದ್ದಾರೆ.  ಕ್ಷೇತ್ರದಲ್ಲಿ ೫ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಹೊಳೆಹೊನ್ನೂರಿನಲ್ಲಿ ೧, ಬಿ.ಆರ್.ಪಿ ೧ ಹಾಗು  ನಗರ ವ್ಯಾಪ್ತಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
    ಚುನಾವಣೆ ಸಂಬಂಧ ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಲಾಗಿದೆ. ಇದೀಗ ಮತದಾರರಿಗೆ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತಿದೆ. ಡಿ. ೯ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.  
    ಉಪ ತಹಶೀಲ್ದಾರ್ ರಾಧಕೃಷ್ಣ ಭಟ್, ಚುನಾವಣಾ ಶಿರಸ್ತೇದಾರ್ ಎನ್.ಎಂ ಬಸವರಾಜ್, ಚುನಾವಣಾ ಶಾಖೆ ಸಿಬ್ಬಂದಿ ರವಿ, ಸೌಜನ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, November 22, 2023

ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ವಿಜಯದಾಸರ ಆರಾಧನೆ

ಅಖಿಲ ಭಾರತ ಮಾಧ್ವ ಮಹಾ ಮಂಡಳಿ ತಾಲೂಕು ಶಾಖೆ ವತಿಯಿಂದ ಬುಧವಾರ ಸುಳಾದಿದಾಸರೆಂದೇ ಖ್ಯಾತರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಆರಾಧನಾ ಮಹೋತ್ಸವ ಅಂಗವಾಗಿ ನಗರಸಂಕೀರ್ತನೆ ನಡೆಯಿತು.
    ಭದ್ರಾವತಿ : ಅಖಿಲ ಭಾರತ ಮಾಧ್ವ ಮಹಾ ಮಂಡಳಿ ತಾಲೂಕು ಶಾಖೆ ವತಿಯಿಂದ ಬುಧವಾರ ಸುಳಾದಿದಾಸರೆಂದೇ ಖ್ಯಾತರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಆರಾಧನಾ ಮಹೋತ್ಸವ ಅಂಗವಾಗಿ ನಗರಸಂಕೀರ್ತನೆ ನಡೆಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪಂಡಿತ್ ಮೃತ್ತಿಕಾ ಗುರುರಾಜಾಚಾರ್ ಅವರಿಂದ ವಿಜಯದಾಸರ ಕೃತಿಗಳ ಕುರಿತು ಪ್ರವಚನ ಜರುಗಿತು.  
    ಮಠದಲ್ಲಿರುವ ಬೃಂದಾವನಗಳಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಅಖಿಲ ಭಾರತ ಮಾಧ್ವ ಮಹಾ ಮಂಡಳಿ ತಾಲೂಕು ಅಧ್ಯಕ್ಷ ಜಯತೀರ್ಥ, ಪ್ರಮುಖರಾದ ವೆಂಕಟೇಶ ರಾವ್, ಗೋಪಾಲಾಚಾರ್, ಶ್ರೀನಿವಾಸಚಾರ್, ರಮಾಕಾಂತ್, ಕಲ್ಲಾಪುರ ರಾಮಚಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ : ಹಿಮೋಗ್ಲೋಬಿನ್ ತಪಾಸಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಭದ್ರಾವತಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಅಂಗವಾಗಿ  ಹಿಮೋಗ್ಲೋಬಿನ್ ತಪಾಸಣಾ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ೬ ತಿಂಗಳ ಮಗುವಿನಿಂದ ಹಿಡಿದು ಹದಿಹರೆಯದವರು, ಗರ್ಭಿಣಿ, ಬಾಣಂತಿ ಸೇರಿದಂತೆ ಎಲ್ಲರನ್ನೂ ರಕ್ತಹೀನತೆಯಿಂದ ಮುಕ್ತಗೊಳಿಸುವುದು ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಗುರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿಮೋಗ್ಲೋಬಿನ್ ತಪಾಸಣಾ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ರಕ್ತಹೀನತೆ ಕುರಿತು ಜಾಗೃತಿ ಮೂಡಿಸುವುದು, ಆಹಾರ ಸೇವನೆ ಕುರಿತು ಆರೋಗ್ಯ ಶಿಕ್ಷಣ ನೀಡುವುದು ಹಾಗು ಚಿಕಿತ್ಸೆ ನೀಡಿ ತಡೆಗಟ್ಟುವುದು ಶಿಬಿರದ ಉದ್ದೇಶವಾಗಿದೆ. ಎಲ್ಲರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.  
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಶಿಬಿರ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಿ.ಎಫ್ ಕುಟ್ರಿ ಅಧ್ಯಕ್ಷತೆ ವಹಿಸಿದ್ದರು.   ವೇದಿಕೆಯಲ್ಲಿ ನಗರಸಭೆ ಸದಸ್ಯ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಂಬೇಡ್ಕರ್ ಜಾನಪದ ತಂಡದಿಂದ ಜಾಗೃತಿ ಗೀತೆಗಳನ್ನು ಹಾಡಲಾಯಿತು. ವೈದ್ಯ ಡಾ. ದತ್ತಾತ್ರೇಯ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಬಾಯಿ ನಿರೂಪಿಸಿದರು. ಆನಂದ ಮೂರ್ತಿ ವಂದಿಸಿದರು.

ಭದ್ರಾವತಿ-ಲಕ್ಕವಳ್ಳಿ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ

ಶಾಸಕರಾದ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಎಚ್ ಶ್ರೀನಿವಾಸ್‌ರವರ ಪ್ರಯತ್ನದ ಫಲವಾಗಿ ಭದ್ರಾವತಿ ಮತ್ತು ಲಕ್ಕವಳ್ಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೂತನವಾಗಿ ಸರ್ಕಾರಿ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ: ಶಾಸಕರಾದ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಎಚ್ ಶ್ರೀನಿವಾಸ್‌ರವರ ಪ್ರಯತ್ನದ ಫಲವಾಗಿ ಭದ್ರಾವತಿ ಮತ್ತು ಲಕ್ಕವಳ್ಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೂತನವಾಗಿ ಸರ್ಕಾರಿ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
    ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅವರು ಹಸಿರು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
    ಪ್ರಮುಖರು ಮಾತನಾಡಿ, ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಬಹಳ ದಿನಗಳಿಂದ ಹೆಚ್ಚಿನ ಬೇಡಿಕೆ ಇದೆ. ಇದನ್ನು ಅರಿತು ಇದೀಗ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
    ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಕೆ. ಸುದೀಪ್‌ಕುಮಾರ್, ಕಾಂತರಾಜ್, ಲತಾ ಚಂದ್ರಶೇಖರ್, ಟಿಪ್ಪುಸುಲ್ತಾನ್, ಮುಖಂಡರಾದ ಬಿ.ಕೆ ಶಿವಕುಮಾರ್, ಕೃಷ್ಣನಾಯ್ಕ  ಹಾಗು ಕೆಎಸ್‌ಆರ್‌ಟಿಸಿ ಬಸ್ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಕ್ರೀಡಾಪಟುಗಳಿಗೆ ಪ್ರಶಸ್ತಿ : ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಕ್ರೀಡಾಪಟುಗಳು ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್‌ಹಾಲ್‌ನಲ್ಲಿ ನಡೆದ ಕರ್ನಾಟಕ ಸಬ್-ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಮತ್ತು ಮಾಸ್ಟರ್‍ಸ್ ಇಕ್ವಿಪ್ಡ್ ಮತ್ತು ಕ್ಲಾಸಿಕ್ ಪುರುಷ ಮತ್ತು ಮಹಿಳೆಯರ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಕ್ರೀಡಾಪಟುಗಳು ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್‌ಹಾಲ್‌ನಲ್ಲಿ ನಡೆದ ಕರ್ನಾಟಕ ಸಬ್-ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಮತ್ತು ಮಾಸ್ಟರ್‍ಸ್ ಇಕ್ವಿಪ್ಡ್ ಮತ್ತು ಕ್ಲಾಸಿಕ್ ಪುರುಷ ಮತ್ತು ಮಹಿಳೆಯರ ಬೆಂಚ್ ಪ್ರೆಸ್ ಚಾಂಪಿಯನ್‌ಶಿಪ್ ಪಂದ್ಯಾವಳಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಕ್ರೀಡಾಪಟುಗಳಾದ ಭದ್ರಾವತಿ ಕಾರಂತ್ ವ್ಯಾಯಾಮ ಶಾಲೆಯ ಪಾಂಡುರಂಗ(ಮಾಸ್ಟರ್-೪) ಮತ್ತು ಪ್ರತೀಕ್ಷ(ಸಬ್-ಜ್ಯೂನಿಯರ್), ಶಿವಮೊಗ್ಗ ಫಿಟ್‌ಕೇರ್ ವ್ಯಾಯಾಮ ಶಾಲೆಯ ಎ.ಜಿ ಅಶ್ವಿನಿ(ಜ್ಯೂನಿಯರ್) ಮತ್ತು ಪಿ. ದೀಪಕ್(ಜ್ಯೂನಿಯರ್), ಮೆರೀನ್ ಫಿಟ್ನೆಸ್ ವ್ಯಾಯಾಮ ಶಾಲೆಯ ವರ್ಷಿತ್ ಎಸ್. ರಾವ್(ಜ್ಯೂನಿಯರ್) ಹಾಗು ಸ್ಟೀಡಿಯಂ ವ್ಯಾಯಾಮ ಶಾಲೆಯ ಎಂ.ವೈ ವೆಂಕಟೇಶ್(ಮಾಸ್ಟರ್-೧) ಬಹುಮಾನಗಳನ್ನು ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ನಡೆಯಲಿರುವ ನ್ಯಾಷನಲ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
    ಕ್ರೀಡಾಪಟುಗಳನ್ನು ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ವೈ. ನಟರಾಜ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಂತ್, ಹಿರಿಯ ಕ್ರೀಡಾಪಟುಗಳಾದ ಎ. ಮಸ್ತಾನ್, ಡಾ. ಶಿವರುದ್ರಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

Tuesday, November 21, 2023

ನ.೨೨ರಂದು ಕಟ್ಟಡ ಕಾರ್ಮಿಕರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮುಂಭಾಗ ಪ್ರತಿಭಟನೆ

    ಭದ್ರಾವತಿ: ಕಟ್ಟಡ ಕಾರ್ಮಿಕರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.೨೨ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಗಳ ಪ್ರಮುಖರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಫಲಾನುಭವಿಗಳ ಮಕ್ಕಳಿಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಶೈಕ್ಷಣಿಕ ಸಹಾಯಧನ ಯೋಜನೆಯಲ್ಲಿ ಶೇ.೮೦ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ಸಹಾಯಧನ ಕಡಿತಗೊಳಿಸುವುದನ್ನು ಕೈಬಿಟ್ಟು ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿಗಳಿಗೂ ಸಹಾಯಧನ ನೀಡಬೇಕೆಂದು ಆಗ್ರಹಿಸಿದರು.
    ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯಡಿ ಫಲಾನುಭವಿ ಹಾಗು ಅವಲಂಬಿತರು ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಮುಂಗಡ ಹಣ ಪಾವತಿ ಮಾಡದೆ ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿಕೊಡುವ ಜೊತೆಗೆ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚ ಮಂಡಳಿ ಭರಿಸುವುದು. ಅಪಘಾತ ಪರಿಹಾರ ಸಹಾಯ ಧನ ೮ ಲಕ್ಷ ರು., ಸಂಪೂರ್ಣ ಶಾಶ್ವತ ದುರ್ಬಲತೆಗೆ ೫ ಲಕ್ಷ ರು. ಹಾಗು ಭಾಗಶಃ ದುರ್ಬಲತೆಗೆ ೩ ಲಕ್ಷ ರು. ನೀಡುವುದು. ೩ ವರ್ಷ ಸದಸ್ಯತ್ವದೊಂದಿಗೆ ೬೦ ವರ್ಷ ಪೂರೈಸಿದ ಫಲಾಭವಿಗೆ ಮರಣ ನಂತರ ಅಂತ್ಯಕ್ರಿಯೆ ವೆಚ್ಚ ೨೫ ಸಾವಿರ ರು. ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.  
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಭಿಲಾಷ್, ಚಂದ್ರಶೇಖರ್, ಅಂತೋಣಿ ಕ್ರೂಸ್, ಸಮಿವುಲ್ಲಾ, ವಿ. ವಿನೋದ್, ಮನೋಹರ್, ಶಿವಣ್ಣಗೌಡ, ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹನಿಟ್ರ್ಯಾಪ್ ಪ್ರಕರಣ : ಮೈಸೂರು ಮೂಲದ ಐವರ ಸೆರೆ

ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಹನಿಟ್ರ್ಯಾಪ್ ಪ್ರಕರಣವೊಂದನ್ನು ಬೇಧಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ: ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಹನಿಟ್ರ್ಯಾಪ್ ಪ್ರಕರಣವೊಂದನ್ನು ಬೇಧಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಮೈಸೂರು ಮೂಲದ ಶ್ವೇತಾ, ವಿನಾಯಕ, ಮಹೇಶ್, ಅರುಣ್‌ಕುಮಾರ್ ಹಾಗೂ ಹೇಮಂತ್ ಬಂಧಿಸಲಾಗಿದ್ದು, ೧ ಕಾರು ಮತ್ತು ೭ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಶರತ್ ಎಂಬುವರ ದೂರು ಆಧರಿಸಿ, ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಐವರನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ.
    ಘಟನೆ ವಿವರ :
    ನಗರದ ಪೆಟ್ರೋಲ್ ಬಂಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಶರತ್‌ಕುಮಾರ್‌ಗೆ ಮೈಸೂರಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಶ್ವೇತಾ ಪರಿಚಯ ಮಾಡಿಕೊಂಡಿದ್ದಳು. ನಂತರ ವಾಟ್ಸಪ್‌ನಲ್ಲಿ ಬೆತ್ತಲೆಯಾಗಿ ಮಹಿಳೆಯೋರ್ವಳು ವಿಡಿಯೋ ಕಾಲ್ ಮಾಡಿದ್ದಳು. ೨೦ ಲಕ್ಷ ರು. ಹಣ ನೀಡುವಂತೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
    ಈ ಐವರ ತಂಡ ಶರತ್‌ಕುಮಾರ್ ಬಳಿ ೧ ಲಕ್ಷ ರು. ಕಿತ್ತುಕೊಂಡಿದ್ದು,  ಅಲ್ಲದೆ ಹಲ್ಲೆ ನಡೆಸಿ ಬಲವಂತವಾಗಿ ಮೈಸೂರಿಗೆ ಕರೆದುಕೊಂಡು ಹೋಗಿ   ಒತ್ತಾಯ ಪೂರ್ವಕವಾಗಿ ೨೫ ಲಕ್ಷ ರು. ಸಾಲ ಪಡೆದುಕೊಂಡಿರುವುದಾಗಿ ಸಹಿ ಹಾಕಿಸಿಕೊಂಡು ಎರಡು ದಿನಗಳ ಕಾಲ ಕೂಡಿ ಹಾಕಿದ್ದರು ಎನ್ನಲಾಗಿದೆ.
    ಮೈಸೂರಿನಿಂದ ತಪ್ಪಿಸಿಕೊಂಡು ಬಂದ ಶರತ್‌ಕುಮಾರ್ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ  ದಾಖಲಿಸಿದ್ದು, ದೂರನ್ನು ಆಧರಿಸಿ, ಹಣ ವರ್ಗಾವಣೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಐವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.