Sunday, December 31, 2023

ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ ‘ಆಯುಷ್’ ಕಾರ್ಯಾರಂಭಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ 'ಆಯುಷ್' ಭಾನುವಾರ ಕಾರ್ಯಾರಂಭಗೊಂಡಿತು.
    ಭದ್ರಾವತಿ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ 'ಆಯುಷ್' ಕಾರ್ಯಾರಂಭಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಭಾನುವಾರ ಚಾಲನೆ ನೀಡಿದರು.
    ಆಯುಷ್ ವೈದ್ಯರಾದ ಡಾ. ಎಂ. ಅರುಣ ಕುಮಾರಿ, ಡಾ. ದಿವ್ಯ, ಡಾ. ಟಿ.ಸಿ ವಿನಯ್, ಪ್ರಶಾಂತ್, ಡಾ. ಸಿ. ವಿಕ್ರಮ್, ಡಾ. ಎಚ್.ಎಸ್ ಸತೀಶ್, ಡಾ. ಚಂದ್ರಶೇಖರ್ ವೈ ನಾಗನೂರ್ ಒಟ್ಟು ೭ ಜನರ ತಂಡ ಚಿಕಿತ್ಸಾ ಕೇಂದ್ರ ಆರಂಭಿಸಿದ್ದಾರೆ.
    ಗಾಂಧಿನಗರದ ೨ನೇ ಅಡ್ಡ ರಸ್ತೆಯಲ್ಲಿರುವ ಭದ್ರಾ ನರ್ಸಿಂಗ್ ಹೋಂ ಪಕ್ಕದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಆಯುಷಿ ತಜ್ಞ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ವಿಚಾರಣೆ ಹಾಗು ಔಷಧಿ ವಿತರಣೆ ಕೊಠಡಿ, ವೈದ್ಯರ ಕೊಠಡಿ, ತಪಾಸಣಾ ಹಾಗು ಚಿಕಿತ್ಸಾ ಕೊಠಡಿಗಳನ್ನು ಒಳಗೊಂಡಿದೆ.
    ಕಾರ್ಯ ಚಿಕಿತ್ಸಾ(ಜನರಲ್ ಮೆಡಿಸಿನ್)ವಿಭಾಗ, ಮೂಳೆ ಮತ್ತು ಸಂಧಿರೋಗ ಚಿಕಿತ್ಸಾ ವಿಭಾಗ, ನರ ಮತ್ತು ಮನೋರೋಗ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಸೌಂದರ್ಯ ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ಕಣ್ಣು, ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ ಕಾರ್ಯ ನಿರ್ವಹಿಸಲಿವೆ.
    ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರಸಭಾ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಜಗನ್ನಾಥ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕಿ ಅಮೂಲ್ಯ, ನರಸಿಂಹಮೂರ್ತಿ, ಭದ್ರಗಿರಿ ದೇವಸ್ಥಾನ ಸಮಿತಿ ಪ್ರಮುಖರಾದ ಎ. ಚಂದ್ರಘೋಷನ್, ಮಂಜುನಾಥ್, ನಾಗರಾಜ್, ಸೋಮ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡು ಶುಭಾ ಹಾರೈಸಿದರು.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕೇವಲ ಭಾಷಣಗಳಿಗೆ ಸೀಮಿತ, ಜವಾಬ್ದಾರಿ ಅರಿಯಲಿ ; ಬಿ.ಕೆ ಸಂಗಮೇಶ್ವರ್

ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ

ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಭದ್ರಾವತಿ ನಗರದ ಜನ್ನಾಪುರ ಉಂಬ್ಳೆಬೈಲು ರಸ್ತೆಯಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ವರ್ಷದ ದಿನದರ್ಶಿಕೆ ಶಾಸಕ ಬಿ.ಕೆ ಸಂಗಮೇಶ್ವರ್ ಬಿಡುಗಡೆಗೊಳಿಸಿದರು.
    ಭದ್ರಾವತಿ: ಕ್ಷೇತ್ರದ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಶೂನ್ಯವಾಗಿದ್ದು, ಕೇವಲ ಭಾಷಣಗಳಿಗೆ ಸೀಮಿತವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಟೀಕಿಸಿದರು.
    ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ನಗರದ ಜನ್ನಾಪುರ ಉಂಬ್ಳೆಬೈಲು ರಸ್ತೆಯಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕೆಂದರು.
    ಸಮಾಜದಲ್ಲಿ ಬಹಳಷ್ಟು ಮಂದಿ ಶ್ರೀಮಂತರಿದ್ದಾರೆ. ಆದರೆ ಸೇವಾ ಭಾವನೆ ಎಂಬುದು ಎಲ್ಲರಲ್ಲೂ ಇರುವುದಿಲ್ಲ. ಪ್ರತಿಯೊಬ್ಬರು ಸೇವಾ ಮನೋಭಾವನೆ ಹೊಂದಿರಬೇಕು. ಆಗ ಮಾತ್ರ ಮುಖಂಡರುಗಳಾಗಿ ಬೆಳೆಯಲು ಸಾಧ್ಯ ಎಂದರು.
    ನಗರಸಭೆ ಸದಸ್ಯ ಚೆನ್ನಪ್ಪ ಮಾತನಾಡಿ, ಅಧಿಕಾರ ಇದ್ದರೆ ಅಭಿವೃದ್ಧಿ ಯೋಜನೆ ತರಬಹುದು. ಆದರೆ ಎಲ್ಲ ಸಮಾಜದವರನ್ನು ಸಮಾನತೆಯಿಂದ ಕೊಂಡೊಯ್ಯುವುದು ಮುಖ್ಯ. ಈ ನಿಟ್ಟಿನಲ್ಲಿ ಶಾಸಕ ಸಂಗಮೇಶ್ವರ್ ಆಡಳಿತ ದೇಶಕ್ಕೆ ಮಾದರಿ ಎಂದರು.
    ನಗರ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಮುಖಂಡ ಸತ್ಯ ಕೋಡಿಹಳ್ಳಿ, ಪತ್ರಕರ್ತ ಅನಂತಕುಮಾರ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹಾಗು ನಗರಸಭಾ ಸದಸ್ಯ ಕಾಂತರಾಜ್, ಟ್ರಸ್ಟ್ ಪದಾಧಿಕಾರಿಗಳಾದ ಅಧ್ಯಕ್ಷ ಲಾಜರ್, ಗೌರವಾಧ್ಯಕ್ಷ ಎನ್.ಆರ್ ಜಯರಾಜ್, ಉಪಾಧ್ಯಕ್ಷರಾದ ರಾಮಪ್ಪ, ವಿ. ಮುನೇನಕೊಪ್ಪ, ಸಹಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಕೋಶಾಧ್ಯಕ್ಷ ಮಹೇಶ್ವರಪ್ಪ, ನಿರ್ದೇಶಕರಾದ ವಿ.ಎಚ್ ಶಿವಣ್ಣ, ಎಸ್.ಎಚ್ ಹನುಮಂತರಾವ್, ಎಲ್. ಬಸವರಾಜಪ್ಪ, ಡಿ. ಸುಬ್ರಮಣಿ, ನಾಗರಾಜ್, ಆರ್. ಕಾಮಾಕ್ಷಿ, ಎನ್. ರೂಪ, ವಿಲ್ಸನ್‌ಬಾಬು ಮತ್ತು ಕೆ. ಆಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸೇರಿದಂತೆ ಹಲವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಅನಂತಕುಮಾರರನ್ನು ಅಭಿನಂದಿಸಿ ಗೌರವಿಸಲಾಯಿತು.

ಜ.೨ರಂದು ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ : ಎಂ.ಎಸ್ ಸುಧಾಮಣಿ

 ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜ.೨ರಂದು ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂಎಸ್ ಸುಧಾಮಣಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ : ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜ.೨ರಂದು ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂಎಸ್ ಸುಧಾಮಣಿ ತಿಳಿಸಿದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ ಅಂದು ಬೆಳಿಗ್ಗೆ  ೧೦ಗಂಟೆಗೆ ಭದ್ರಾ ಕಾಲೋನಿ ಭದ್ರಾ ಪ್ರೌಢಶಾಲೆ ೯ನೇ ತರಗತಿ ವಿದ್ಯಾರ್ಥಿನಿ ಸಿಂಚನ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶ್ರೀ ಸತ್ಯಸಾಯಿ ಪ್ರೌಢಶಾಲೆ ೮ನೇ ತರಗತಿ ವಿದ್ಯಾರ್ಥಿನಿ ಕೆ.ಆರ್ ಸೇವಂತಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
    ಶಾಸಕ ಡಿಕೆ ಸಂಗಮೇಶ್ವರ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ಇದಕ್ಕೂ ಮೊದಲು ಬೆಳಿಗ್ಗೆ ೯.೩೦ಕ್ಕೆ ಪ್ರಶಾಂತಿ ಸೇವಾ ಟ್ರಸ್ಟ್ ಜಂಟಿ ಕಾರ್ಯದರ್ಶಿ ಶಿವಪ್ಪ ರಾಷ್ಟ್ರಧ್ವಜಾರೋಹಣ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ನಾಡಧ್ವಜಾರೋಹಣ ಹಾಗು ಎಂ.ಎಸ್ ಸುಧಾಮಣಿ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.
    ಉದ್ಘಾಟನೆ ಸಮಾರಂಭದ ನಂತರ ಕವಿಗೋಷ್ಠಿ, ಕಥಾಗೋಷ್ಠಿ ಮತ್ತು ಪ್ರಚಲಿತ ವಿದ್ಯಾಮಾನಗಳು ಕುರಿತ ಗೋಷ್ಠಿ ನಡೆಯಲಿವೆ. ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಿಕ್ಷಣ ಸಂಯೋಜಕ ರವಿಕುಮಾರ್, ಉದ್ಯಮಿ ಬಿ.ಕೆ ಜಗನ್ನಾಥ್, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಸಮಾಜ ಸೇವಕ ವೆಂಕಟರಮಣಶೇಟ್, ಸಿದ್ದಪ್ಪ ಮತ್ತು ಎಚ್.ಪಿ ಪ್ರಸನ್ನ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೋಡ್ಲು ಯಜ್ಞಯ್ಯ, ಜೆ. ಉಮಾಪತಿ, ಎಚ್. ತಿಮ್ಮಪ್ಪ, ಗಂಗರಾಜ್, ಬಿ. ಕಾಂತಪ್ಪ, ತಿಪ್ಪಮ್ಮ ಮತ್ತು ಬಿ.ಎಸ್ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, December 30, 2023

ಜ.೧ರಂದು ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ನಾರಾಯಣಗೌಡ
    ಭದ್ರಾವತಿ: ವರ್ಷದ ಮೊದಲ ದಿನವೇ ನಗರದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.
    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಜ.೧ರಂದು ಮಧ್ಯಾಹ್ನ ೧೨ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಯುತ್ತಿದ್ದು,  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Friday, December 29, 2023

ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ : ಡಾ. ವಿದ್ಯಾಶಂಕರ್‌ಗೆ ಪ್ರಶಸ್ತಿ

ಡಾ. ವಿದ್ಯಾಶಂಕರ್
    ಭದ್ರಾವತಿ : ಗುಜರಾತ್ ಅಹಮದಾಬಾದ್‌ನಲ್ಲಿ ನಡೆದ ವಿಜ್ಞಾನ ಭಾರತೀಯ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಿದ್ಯಾಶಂಕರ್ ಅವರು ಮಂಡಿಸಿದ 'ಭಾರತೀಯ ವೇದಗಳಲ್ಲಿ ತಂತ್ರಜ್ಞಾನ' ಎಂಬ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ ಲಭಿಸಿದೆ.
    ಮೂಲತಃ ನಗರದ ನಿವಾಸಿಯಾಗಿರುವ ಡಾ. ವಿದ್ಯಾಶಂಕರ್ ಅವರು ಈಗಾಗಲೇ ರಾಷ್ಟ್ರ ಹಾಗು ರಾಜ್ಯಮಟ್ಟದ ಹಲವಾರು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಈ ಬಾರಿ ವಿಶೇಷವಾಗಿ 'ಭಾರತೀಯ ವೇದಗಳಲ್ಲಿ ತಂತ್ರಜ್ಞಾನ' ಎಂಬ ಪ್ರಬಂಧ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರನ್ನು ಕಾಲೇಜಿನ ಉಪನ್ಯಾಸಕ ವೃಂದದವರು, ನಗರದ ಗಣ್ಯರು ಅಭಿನಂದಿಸಿದ್ದಾರೆ.

ಡಿ.೩೦ರಂದು ನಗರಸಭೆ ಸಾಮಾನ್ಯ ಸಭೆ


ಭದ್ರಾವತಿ: ನಗರಸಭೆ ಸಾಮಾನ್ಯ ಸಭೆ ಡಿ.೩೦ರ ಶನಿವಾರ ಬೆಳಿಗ್ಗೆ  ೧೧ ಗಂಟೆಗೆ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸದಸ್ಯರು ಸಭೆಯಲ್ಲಿ ತಪ್ಪದೇ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್ ಕೋರಿದ್ದಾರೆ.

ಡಿ.೩೧ರಂದು ‘ಆಯುಷ್’ ತಜ್ಞ ಚಿಕಿತ್ಸಾ ಕೇಂದ್ರ ಕಾರ್ಯಾರಂಭ

ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ 'ಆಯುಷ್' ಡಿ.೩೧ರಿಂದ ಭದ್ರಾವತಿಯಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಆಯುಷಿ ವೈದ್ಯ ವೃಂದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
    ಭದ್ರಾವತಿ: ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಆಯುರ್ವೇದ ತಜ್ಞ ಚಿಕಿತ್ಸಾ ಕೇಂದ್ರ 'ಆಯುಷ್' ಡಿ.೩೧ರಿಂದ ಕಾರ್ಯಾರಂಭಗೊಳ್ಳಲಿದೆ ಎಂದು ಆಯುಷಿ ವೈದ್ಯ ವೃಂದ ತಿಳಿಸಿದೆ.
    ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಜ್ಞ ವೈದ್ಯರು, ಇಲ್ಲಿಯೇ ಹುಟ್ಟಿ ಬೆಳೆದು ಆಯುರ್ವೇದದಲ್ಲಿ ಉನ್ನತ ಶಿಕ್ಷಣ ಪಡೆದು ಸ್ವಂತ ಆಯುರ್ವೇದ ಕ್ಲಿನಿಕ್‌ಗಳನ್ನು ನಗರದಲ್ಲಿ ತೆರೆದು ಸುಮಾರು ೧೦-೧೨ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಹೆಚ್ಚಿನ ಅನುಭವ ಹೊಂದಿದ್ದು, ಎಲ್ಲಾ ರೀತಿಯ ರೋಗಗಳಿಗೂ ಚಿಕಿತ್ಸೆ ನೀಡಲಾಗುವುದು. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಒಂದೇ ಕಡೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ಕೇಂದ್ರ ಆರಂಭಿಸುವ ಉದ್ದೇಶದಿಂದ ಇದೀಗ ಆಯುಷಿ ಕೇಂದ್ರ ತೆರೆಯಲಾಗುತ್ತಿದೆ ಎಂದರು.
    ೫ ಜನರನ್ನೊಳಗೊಂಡ ಆಯುಷಿ ವೈದ್ಯ ವೃಂದ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದೆ. ಆರಂಭಿಕವಾಗಿ ಗಾಂಧಿನಗರದ ೨ನೇ ಅಡ್ಡ ರಸ್ತೆಯಲ್ಲಿರುವ ಭದ್ರಾ ನರ್ಸಿಂಗ್ ಹೋಂ ಪಕ್ಕದಲ್ಲಿ ಆಯುಷಿ ತಜ್ಞ ಚಿಕಿತ್ಸಾ ಕೇಂದ್ರ ತೆರೆಯಲಾಗುತ್ತಿದೆ. ಡಿ.೩೧ರಂದು ಬೆಳಿಗ್ಗೆ ೧೧ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
    ಪತ್ರಿಕಾಗೋಷ್ಠಿಯಲ್ಲಿ ವೈದ್ಯರಾದ ಡಾ. ಎಂ. ಅರುಣ ಕುಮಾರಿ, ಡಾ. ದಿವ್ಯ, ಡಾ. ಟಿ.ಸಿ ವಿನಯ್, ಡಾ. ಪ್ರಶಾಂತ್ ಮತ್ತು  ಡಾ. ಸಿ. ವಿಕ್ರಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.