Friday, January 5, 2024

ಜ.೬ರಂದು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ

    ಭದ್ರಾವತಿ : ಹಳೇನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಜ.೬ರಂದು ಬೆಳಿಗ್ಗೆ ೧೦ ಗಂಟೆಗೆ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ. ಬಸವರಾಜ್, ಜ್ಞಾನೇಶ್ವರಿ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷೆ ಟಿ.ಆರ್ ವಿನೋದಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಟ್ರಸ್ಟಿ ತಸ್ಮೈ ಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Thursday, January 4, 2024

ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛತೆಗೆ ದಲಿತ ವಿದ್ಯಾರ್ಥಿಗಳ ದುರ್ಬಳಕೆ

ಸೂಕ್ತ ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಆಗ್ರಹ

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಅತ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸಲು ದುರ್ಬಳಕೆ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯ ಹಾಗು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿ ಪರಿಶಿಷ್ಟ ಜಾತಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ಆಗ್ರಹಿಸಿ ದೂರು ಸಲ್ಲಿಸಿದೆ.
    ಭದ್ರಾವತಿ : ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಅತ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸಲು ದುರ್ಬಳಕೆ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯ ಹಾಗು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿ ಪರಿಶಿಷ್ಟ ಜಾತಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ಆಗ್ರಹಿಸಿದೆ.
    ಶಾಲೆಯಲ್ಲಿ ೧ ರಿಂದ ೭ನೇ ತರಗತಿವರೆಗೆ ಪರಿಶಿಷ್ಟ ಜಾತಿ ದಲಿತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯ ಶಂಕರಪ್ಪ ಮತ್ತು ಸಿಬ್ಬಂದಿಗಳು ಶೌಚಾಲಯ ಸ್ವಚ್ಛಗೊಳಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಪ್ರಜ್ಞಾವಂತ ಶಿಕ್ಷಕರು ಈ ಕೃತ್ಯವೆಸಗುವ ಮೂಲಕ ದಲಿತ ಸಮುದಾಯಕ್ಕೆ ಅವಮಾನಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಗೋಪಾಲಪ್ಪ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
    ಸಮಿತಿ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಜಿಲ್ಲಾ ಸಂಘಟನಾ ಸಂಚಾಲಕ ಆರ್. ಹರೀಶ್, ಜಿಲ್ಲಾ ಸಂಚಾಲಕ ಎಸ್. ಗೋವಿಂದರಾಜು, ತಾಲೂಕು ವಿದ್ಯಾರ್ಥಿ ಒಕ್ಕೂಟದ ಟಿ. ಮಹೇಶ್ ಕುಮಾರ್(ಅತ್ತಿಗುಂದ), ಎಚ್.ಎಲ್ ಅಣ್ಣಪ್ಪ, ಮಂಜಣ್ಣ, ಸಂತೋಷ್, ಡಿ. ನರಸಿಂಹಮೂರ್ತಿ, ನವೀನ್, ರಾಜು, ವರದರಾಜು, ಷಣ್ಮುಗಂ, ಜಯಪ್ಪ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ. ಮೋಹಿತ್ ಬಿ.ಕಾಂ ಪದವಿಯಲ್ಲಿ ೯ನೇ ರ್‍ಯಾಂಕ್

ಡಿ. ಮೋಹಿತ್
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ ನಿವಾಸಿ ಡಿ. ಮೋಹಿತ್ ಕುವೆಂಪು ವಿಶ್ವ ವಿದ್ಯಾನಿಲಯದ ಅಂತಿಮ ವರ್ಷದ ಬಿ.ಕಾಂ ಪದವಿಯಲ್ಲಿ ೯ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
    ಡಿ. ಮೋಹಿತ್ ಶಿವಮೊಗ್ಗ ಎನ್‌ಇಎಸ್ ಕಾಲೇಜ್ ಆಫ್ ಅಡ್ವಾನ್ಸ್ ಸ್ಟಡೀಸ್ ವಿದ್ಯಾರ್ಥಿಯಾಗಿದ್ದು, ಕೆಎಸ್‌ಆರ್‌ಟಿಸಿ ನೌಕರ ಕೆ. ದಿನೇಶ್-ವಿನುತ್ ದಂಪತಿ ಪುತ್ರರಾಗಿದ್ದಾರೆ. ಡಿ. ಮೋಹಿತ್ ಅವರನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.

ಕೋಟ್ಯಾಂತರ ರು. ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿ : ದೂರು

ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪ : ತನಿಖೆಗೆ ಆಗ್ರಹ

   ಅರಣ್ಯ ಪ್ರದೇಶ ಒತ್ತುವರಿ ಮಾಡಲು ಮರಗಳನ್ನು ಕಡಿತಲೆ ಮಾಡಿ, ಬೆಂಕಿ ಹಾಕಿರುವುದು.
 ಭದ್ರಾವತಿ : ಹುಣಸೆ ನೆಡುತೋಪಿನಲ್ಲಿ ಅಕ್ರಮವಾಗಿ ಮರಕಡಿತಲೆ ಮಾಡಿ ಅರಣ್ಯ ಒತ್ತುವರಿ ಮಾಡಿರುವ ಘಟನೆ   ಭದ್ರಾವತಿ ವಿಭಾಗದ ತರೀಕೆರೆ ವಲಯದ ಬಲ್ಲಾವರ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ತಿಳಿಸಿದ್ದಾರೆ.


ತರೀಕೆರೆ ವಲಯ ಅರಣ್ಯಾಧಿಕಾರಿಗಳ ಕಛೇರಿ ಫಲಕ
    ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮತ್ತು ಈ-ಮೇಲ್‌ನಲ್ಲಿ ದೂರು ಸಲ್ಲಿಸಲಾಗಿದೆ. ಭದ್ರಾವತಿ ವಿಭಾಗದ ತರೀಕೆರೆ ವಲಯದ ನಂದಿಬಟ್ಲು, ಕಿರು ಅರಣ್ಯ ಪ್ರದೇಶದ ಬಲ್ಲಾವರ ಸರ್ವೆ ನಂ.೨೨ರ ಹುಣಸೆ ನೆಡುತೋಪಿನಲ್ಲಿ ನೂರಾರು ಹುಣಸೆ ಮತ್ತು ಇತರೆ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸುಮಾರು ೪ ರಿಂದ ೫ ಎಕರೆ ಅರಣ್ಯ ಒತ್ತುವರಿ ಮಾಡಿದ್ದು, ಸುಮಾರು ೮ ರಿಂದ ೧೦ ಕೋ.ರು. ಅಧಿಕ ಬೆಲೆ ಬಾಳುವ ರಸ್ತೆ ಪಕ್ಕದ ಅರಣ್ಯ ಪ್ರದೇಶ ಅಬ್ಬು ಎಂಬಾತ ಒತ್ತುವರಿ ಮಾಡಿಕೊಳ್ಳಲು ತರೀಕೆರೆ ವಲಯದ ಅರಣ್ಯಾಧಿಕಾರಿ(ಆರ್‌ಎಫ್‌ಓ) ಆಸೀಫ್ ಅಹಮದ್‌ರವರ ನೇರ ಕೈವಾಡವಿರುವ ಬಗ್ಗೆ ಅನುಮಾನವಿದ್ದು, ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.

    ಸಾಮಾಜಿಕ ಹೋರಾಟಗಾರ ಶಿವಕುಮಾರ್
    ಹಾಸನ ಅರಣ್ಯ ವಿಭಾಗದಲ್ಲಿ ನಡೆದಿರುವ ಮರಗಳ ಕಡಿತಲೆ ಪ್ರಕರಣ ಮಾಸುವ ಮೊದಲೇ ಅದೇ ರೀತಿ ಪ್ರಕರಣ ಇಲ್ಲಿ ಕಂಡು ಬಂದಿದೆ. ನೂರಾರು ಮರಗಳನ್ನು ಕಡಿತಲೆ ಮಾಡಿರುವ, ಕೋಟ್ಯಾಂತರ ರು. ಬೆಲೆ ಬಾಳುವ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ಹಾಗು ಈ ಕೃತ್ಯಕ್ಕೆ ಸಹಕರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ತಕ್ಷಣ ಭದ್ರಾವತಿ ವಿಭಾಗದ ಡಿಎಫ್‌ಓ, ತರೀಕೆರೆ ಉಪವಿಭಾಗದ ಎಸಿಎಫ್, ತರೀಕೆರೆ ವಲಯದ ಆರ್‌ಎಫ್‌ಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Wednesday, January 3, 2024

ಅದ್ದೂರಿಯಾಗಿ ಜರುಗುತ್ತಿರುವ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಕಣ್ಮನ ಸೆಳೆಯುತ್ತಿರುವ ಅಮ್ಮನವರ ಅಲಂಕಾರ, ಬೃಹತ್ ಅನ್ನಸಂತರ್ಪಣೆ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಕಳೆದ ೩ ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿದ್ದು, ಸೋಮವಾರ ಸರಸ್ವತಿ ಅಲಂಕಾರ ಹಾಗು ಬುಧವಾರ ನೋಟುಗಳ ಮೂಲಕ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗುತ್ತಿತ್ತು. ಅಮ್ಮನವರ ಅಲಂಕಾರ ಕಣ್ಮನ ಸೆಳೆಯಿತು.
    ಭದ್ರಾವತಿ: ನಗರದ ಬಿ.ಎಚ್ ರಸ್ತೆ ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ಸಹ ಕಳೆದ ೩ ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿದ್ದು, ಬುಧವಾರ ಬೃಹತ್ ಅನ್ನಸಂತರ್ಪಣೆ ನೆರವೇರಿತು.
    ಸೋಮವಾರ ಭದ್ರಾ ನದಿಯಿಂದ ಶಕ್ತಿ ತೀರ್ಥದ ಬಿಂದಿಗೆ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ಮಾಡಲಾಯಿತು. ಮಂಗಳವಾರ ಸಂಜೆ ಅಗ್ನಿಕುಂಡ ತ್ರಿಶೂಲ ಮುದ್ರೆಯೊಂದಿಗೆ ದೇವಸ್ಥಾನಕ್ಕೆ ಭದ್ರಾನದಿಯಿಂದ ಶಕ್ತಿ ಕರಗ ತರಲಾಯಿತು.
    ಬುಧವಾರ ಬೆಳಿಗ್ಗೆ ೫ ಗಂಟೆ ಸಮಯದಲ್ಲಿ ಪೊಂಗಲ್ ನಡೆಯಿತು. ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೪ ಗಂಟೆವರೆಗೂ ಬೃಹತ್ ಅನ್ನ ಸಂತರ್ಪಣೆ ನೆರವೇರಿತು. ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಸಂಜೆ ೭ ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ಮೆರವಣಿಗೆ ಹಾಗು ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಜ.೪ರ ಗುರುವಾರ ಸಂಜೆ ೭ ಗಂಟೆಗೆ ತಮಿಳುನಾಡಿನ ತಿರುಚಿ ಶಿವನ್ ಶಕ್ತಿ ನಾಟಕ ಮಂಡಳಿ ಚೆನ್ನೈ ಬಾಯ್ಸ್ ಹಾಗು ಸ್ನೇಹ ಆರ್ಕೇಸ್ಟ್ರಾ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
    ಅಮ್ಮನವರಿಗೆ ವಿಶೇಷ ಅಲಂಕಾರ :
    ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗುತ್ತಿದ್ದು, ಸೋಮವಾರ ಸರಸ್ವತಿ ಅಲಂಕಾರ ಹಾಗು ಬುಧವಾರ ನೋಟುಗಳ ಮೂಲಕ ಲಕ್ಷ್ಮೀ ಅಲಂಕಾರ ಕೈಗೊಳ್ಳಲಾಗುತ್ತಿತ್ತು. ಅಮ್ಮನವರ ಅಲಂಕಾರ ಕಣ್ಮನ ಸೆಳೆಯಿತು.
ಮಾರಿಯಮ್ಮ ದೇವಾಲಯ ಕಮಿಟಿ ಅಧ್ಯಕ್ಷ ಎ. ಮಾಧು ನೇತೃತ್ವದಲ್ಲಿ ಈ ಬಾರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಪ್ರತಿ ದಿನ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ.

ಹೊಂಬಾಳಮ್ಮ ನಿಧನ

ಹೊಂಬಾಳಮ್ಮ
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ ಜಿ. ಬೊಮ್ಮಯ್ಯ ಅವರ ತಾಯಿ ಹೊಂಬಾಳಮ್ಮ(೮೫) ಬುಧವಾರ ನಿಧನ ಹೊಂದಿದರು.
    ಹೊಂಬಾಳಮ್ಮ ಅವರಿಗೆ ಜಿ. ಬೊಮ್ಮಯ್ಯ ಹಾಗು ಲಿಮ್ಕಾ ದಾಖಲೆ ಪ್ರಶಸ್ತಿ ಪುರಸ್ಕೃತ ಕಲಾವಿದ ಬಿ. ಗುರು ಸೇರಿದಂತೆ ಮೊಮ್ಮಕ್ಕಳು ಇದ್ದರು. ಉಜ್ಜನಿಪುರ ಬಣ್ಣದ ಮನೆಯಲ್ಲಿ ವಾಸವಾಗಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಬೈಪಾಸ್ ರಸ್ತೆ, ಬುಳ್ಳಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ಭರತನಾಟ್ಯ : ಶಿವಮೊಗ್ಗ-ಭದ್ರಾವತಿ ನೃತ್ಯ ಕಲಾವಿದರಿಗೆ ಮೆಚ್ಚುಗೆ

ಭದ್ರಾವತಿ: ಜೆ.ಎಸ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್‌ಸೆಂಟರ್ ಭರತನಾಟ್ಯ ನೃತ್ಯ ಕಲಾವಿದರು ಭರತನಾಟ್ಯ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ಭದ್ರಾವತಿ: ಜೆ.ಎಸ್ ಫೈನ್ ಆರ್ಟ್ಸ್ ಅಕಾಡೆಮಿ ವತಿಯಿಂದ ತಮಿಳುನಾಡಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಭರತನಾಟ್ಯ ನೃತ್ಯ ಕಲಾವಿದರು ಭರತನಾಟ್ಯ ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    ತಮಿಳುನಾಡಿನ ವೆಲ್ಲೂರಿನ ಶ್ರೀ ಲಕ್ಷ್ಮೀನಾರಾಯಣಿ ಗೋಲ್ಡನ್ ಟೆಂಪಲ್‌ನಲ್ಲಿ ಜ.೧ರಂದು ಆಯೋಜಿಸಲಾಗಿದ್ದ ನೃತ್ಯ ವೈಭವ ಕಾರ್ಯಕ್ರಮದಲ್ಲಿ  ಶಿವಮೊಗ್ಗ-ಭದ್ರಾವತಿ ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್‌ಸೆಂಟರ್ ಭರತನಾಟ್ಯ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
    ವಿದೂಷಿ ಪುಷ್ಪಾಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಈ ಕಲಾವಿದರು ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಇವರನ್ನು ಪುಷ್ಪಾಪರ್‌ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಹಾಗು ವಿವಿಧ ಸಂಘ-ಸಂಸ್ಥೆಗಳು, ಭರತನಾಟ್ಯ ಕಲಾವಿದರು ಅಭಿನಂದಿಸಿದ್ದಾರೆ.