ಶನಿವಾರ, ಜನವರಿ 6, 2024

ಸೇವೆಯನ್ನು ಕರ್ತವ್ಯವೆಂದು ಭಾವಿಸಿ : ಬಿ.ಕೆ ಮೋಹನ್

ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಸಮಾರಂಭ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ: ಮಾನವರಾಗಿ ಹುಟ್ಟಿದ ಪ್ರತಿಯೊಬ್ಬರೂ ಸಹ ಸೇವೆಯನ್ನು ಕರ್ತವ್ಯ ಎಂದು ಭಾವಿಸಬೇಕು.  ಕ್ಷೇತ್ರದಲ್ಲಿ ಹಲವರು ಶ್ರೀಮಂತರಿದ್ದಾರೆ. ಆದರೆ ದಾನಿಗಳ ಸಂಖ್ಯೆ ಕಡಿಮೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ನಗರದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಬಡತನದಲ್ಲಿ ಹುಟ್ಟಿದರೂ ಶ್ರಮಪಟ್ಟು ಶ್ರೀಮಂತರಾಗಬೇಕು. ಅದೇರೀತಿ ಶ್ರೀಮಂತಿಕೆ ಬಂದ ಮೇಲೆ ದಾನಿಗಳಾಗಬೇಕು. ದೇವರು ಕೊಟ್ಟು ನೋಡುತ್ತಾನೆ. ಕೊಡದೆಯೂ ನೋಡುತ್ತಾನೆ. ಕೊಟ್ಟಾಗ ದಾನ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಆಗ ಮಾತ್ರ ದೇವರು ಮೆಚ್ಚುತ್ತಾನೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಅನೇಕ ಅನುದಾನ ರಹಿತ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ-ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ. ಸಂಘ-ಸಂಸ್ಥೆಗಳ ಸಹಕಾರವಿಲ್ಲದಿದ್ದರೆ ಶಿಕ್ಷಣ ವ್ಯವಸ್ಥೆ ಅತಂತ್ರವಾಗುತ್ತದೆ ಎಂದರು.
    ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟ್ರಸ್ಟಿ ತಸ್ಮೈ ಕಿರಣ್ ಅಧ್ಯಕ್ಷತೆ ವಹಿಸಿದ್ದರು.
    ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ. ಬಸವರಾಜ್, ಜ್ಞಾನೇಶ್ವರಿ ವಿದ್ಯಾವರ್ಧಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ್, ಸಾಹಿತಿ ಜೆ.ಎನ್ ಬಸವರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಂದಿನಿ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು. ಅಪೇಕ್ಷ ಮಂಜುನಾಥ್ ಸ್ವಾಗತಿಸಿದರು. ಅಣ್ಣಪ್ಪ ನಿರೂಪಿಸಿ, ವಂದಿಸಿದರು.

ಶುಕ್ರವಾರ, ಜನವರಿ 5, 2024

ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಆಹ್ವಾನ

ಶ್ರೀರಾಮ ಚಂದ್ರನ ಭಾವಚಿತ್ರ, ಮಂತ್ರಾಕ್ಷತೆ, ಆಹ್ವಾನ ಪತ್ರಿಕೆ ನೀಡಿದ ಬಿಜೆಪಿ ಕಾರ್ಯಕರ್ತರು

ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಭದ್ರಾವತಿ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ತೆರಳಿ ಆಹ್ವಾನಿಸಿದರು.
    ಭದ್ರಾವತಿ: ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿ ಆಹ್ವಾನಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ನಿವಾಸಕ್ಕೆ ತೆರಳಿದ ಕಾರ್ಯಕರ್ತರು ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಹತ್ವ ವಿವರಿಸಿ ಆಯೋಧ್ಯಾಪತಿ ಶ್ರೀರಾಮ ಚಂದ್ರನ ಭಾವಚಿತ್ರ, ಮಂತ್ರಾಕ್ಷತೆ ಹಾಗು ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಎಸ್. ಕುಮಾರ್, ಯುವ ಮುಖಂಡ ಬಿ.ಎಸ್ ಗಣೇಶ್, ನ್ಯಾಯವಾದಿ ವಿನಾಯಕ್ ಅವರಿಗೂ ಸಹ ಆಹ್ವಾನ ಪತ್ರಿಕೆ ನೀಡಿ ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
    ಬಿಜೆಪಿ ಕಾರ್ಯಕರ್ತರಾದ ರಾಜಶೇಖರ್ ಉಪ್ಪಾರ, ಸುಬ್ರಮಣ್ಯ ಸೇರಿದಂತೆ ಇನ್ನಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ : ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಹಿಂದೂಪರ ಸಂಘಟನೆಗಳಿಂದ ಬಿಡುಗಡೆಗೆ ಆಗ್ರಹ : ಮನವಿ

ಕರಸೇವಕರ ಬಂಧನ ಖಂಡಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷದ ವತಿಯಿಂದ ಭದ್ರಾವತಿ ಮಾಧವಚಾರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ನಂತರ ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ಕರಸೇವಕರ ಬಂಧನ ಖಂಡಿಸಿ ವಿಶ್ವ ಹಿಂದೂ ಪರಿಷದ್, ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷದ ವತಿಯಿಂದ ನಗರದ ಮಾಧವಚಾರ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
    ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ನಾನು ರಾಮಭಕ್ತ, ನಾನು ಕರಸೇವಕ ತಾಕತ್ತು ಇದ್ದರೆ ಬಂಧಿಸಿ ಎಂದು ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ `ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಧಿಕ್ಕಾರ, ರಾಮನ ಭಕ್ತರು ನಾವೆಲ್ಲ. ಟಿಪ್ಪು ಸಂತತಿ ಬೇಕಿಲ್ಲ. ಹನುಮನ ಸಂತತಿ ನಾವೆಲ್ಲ. ಬಾಬರ್ ಸಂತತಿ ಬೇಕಿಲ್ಲ' ಎಂಬ ಘೋಷಣೆಗಳನ್ನು ಹಾಕುವ ಮೂಲಕ ಬಂಧಿಸಲಾಗಿರುವ ಕರಸೇವಕರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ದತ್ತ ಮಾಲಾಧಾರಿಗಳ ಮೇಲೆ ಪೊಲೀಸ್ ತನಿಖೆ ಹಾಗು ರಾಜ್ಯದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗಳನ್ನು ಖಂಡಿಸಿದರು. ನಂತರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ಹಾ. ರಾಮಪ್ಪ, ಜಿ. ಶಿವರಾಜ್, ವಿ. ಕದಿರೇಶ್, ಎನ್. ವಿಶ್ವನಾಥರಾವ್, ಬಿ.ಕೆ ಶ್ರೀನಾಥ್, ಕೆ.ಎನ್ ಶ್ರೀಹರ್ಷ, ಎಂ.ಎಸ್ ಸುರೇಶಪ್ಪ, ಚನ್ನೇಶ್, ರಾಜಶೇಖರ ಉಪ್ಪಾರ, ಶಿವಕುಮಾರ್, ರಾಘವನ್ ವಡಿವೇಲು, ಚಂದ್ರಪ್ಪ, ರಾಮಲಿಂಗಯ್ಯ, ಎಂ. ಮಂಜುನಾಥ್, ಗೋಕುಲ್ ಕೃಷ್ಣ, ಎಂ. ಪ್ರಭಾಕರ್, ಕಾರಾನಾಗರಾಜ್, ಧನುಷ್ ಬೋಸ್ಲೆ, ಹೇಮಾವತಿ ವಿಶ್ವನಾಥ್, ಮಂಜುಳ, ಲತಾ, ಅನ್ನಪೂರ್ಣ, ರೇಖಾ ಪದ್ಮಾವತಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಜ.೬ರಂದು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ

    ಭದ್ರಾವತಿ : ಹಳೇನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಜ.೬ರಂದು ಬೆಳಿಗ್ಗೆ ೧೦ ಗಂಟೆಗೆ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಬಡ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿ. ಬಸವರಾಜ್, ಜ್ಞಾನೇಶ್ವರಿ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷೆ ಟಿ.ಆರ್ ವಿನೋದಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಟ್ರಸ್ಟಿ ತಸ್ಮೈ ಕಿರಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಗುರುವಾರ, ಜನವರಿ 4, 2024

ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛತೆಗೆ ದಲಿತ ವಿದ್ಯಾರ್ಥಿಗಳ ದುರ್ಬಳಕೆ

ಸೂಕ್ತ ಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಆಗ್ರಹ

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಅತ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸಲು ದುರ್ಬಳಕೆ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯ ಹಾಗು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿ ಪರಿಶಿಷ್ಟ ಜಾತಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ಆಗ್ರಹಿಸಿ ದೂರು ಸಲ್ಲಿಸಿದೆ.
    ಭದ್ರಾವತಿ : ತಾಲೂಕಿನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಅತ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸಲು ದುರ್ಬಳಕೆ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯ ಹಾಗು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿ ಪರಿಶಿಷ್ಟ ಜಾತಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ಆಗ್ರಹಿಸಿದೆ.
    ಶಾಲೆಯಲ್ಲಿ ೧ ರಿಂದ ೭ನೇ ತರಗತಿವರೆಗೆ ಪರಿಶಿಷ್ಟ ಜಾತಿ ದಲಿತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯ ಶಂಕರಪ್ಪ ಮತ್ತು ಸಿಬ್ಬಂದಿಗಳು ಶೌಚಾಲಯ ಸ್ವಚ್ಛಗೊಳಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಪ್ರಜ್ಞಾವಂತ ಶಿಕ್ಷಕರು ಈ ಕೃತ್ಯವೆಸಗುವ ಮೂಲಕ ದಲಿತ ಸಮುದಾಯಕ್ಕೆ ಅವಮಾನಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ಗೋಪಾಲಪ್ಪ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
    ಸಮಿತಿ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಜಿಲ್ಲಾ ಸಂಘಟನಾ ಸಂಚಾಲಕ ಆರ್. ಹರೀಶ್, ಜಿಲ್ಲಾ ಸಂಚಾಲಕ ಎಸ್. ಗೋವಿಂದರಾಜು, ತಾಲೂಕು ವಿದ್ಯಾರ್ಥಿ ಒಕ್ಕೂಟದ ಟಿ. ಮಹೇಶ್ ಕುಮಾರ್(ಅತ್ತಿಗುಂದ), ಎಚ್.ಎಲ್ ಅಣ್ಣಪ್ಪ, ಮಂಜಣ್ಣ, ಸಂತೋಷ್, ಡಿ. ನರಸಿಂಹಮೂರ್ತಿ, ನವೀನ್, ರಾಜು, ವರದರಾಜು, ಷಣ್ಮುಗಂ, ಜಯಪ್ಪ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಡಿ. ಮೋಹಿತ್ ಬಿ.ಕಾಂ ಪದವಿಯಲ್ಲಿ ೯ನೇ ರ್‍ಯಾಂಕ್

ಡಿ. ಮೋಹಿತ್
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ ನಿವಾಸಿ ಡಿ. ಮೋಹಿತ್ ಕುವೆಂಪು ವಿಶ್ವ ವಿದ್ಯಾನಿಲಯದ ಅಂತಿಮ ವರ್ಷದ ಬಿ.ಕಾಂ ಪದವಿಯಲ್ಲಿ ೯ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
    ಡಿ. ಮೋಹಿತ್ ಶಿವಮೊಗ್ಗ ಎನ್‌ಇಎಸ್ ಕಾಲೇಜ್ ಆಫ್ ಅಡ್ವಾನ್ಸ್ ಸ್ಟಡೀಸ್ ವಿದ್ಯಾರ್ಥಿಯಾಗಿದ್ದು, ಕೆಎಸ್‌ಆರ್‌ಟಿಸಿ ನೌಕರ ಕೆ. ದಿನೇಶ್-ವಿನುತ್ ದಂಪತಿ ಪುತ್ರರಾಗಿದ್ದಾರೆ. ಡಿ. ಮೋಹಿತ್ ಅವರನ್ನು ನಗರದ ಪ್ರಮುಖರು ಅಭಿನಂದಿಸಿದ್ದಾರೆ.

ಕೋಟ್ಯಾಂತರ ರು. ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿ : ದೂರು

ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪ : ತನಿಖೆಗೆ ಆಗ್ರಹ

   ಅರಣ್ಯ ಪ್ರದೇಶ ಒತ್ತುವರಿ ಮಾಡಲು ಮರಗಳನ್ನು ಕಡಿತಲೆ ಮಾಡಿ, ಬೆಂಕಿ ಹಾಕಿರುವುದು.
 ಭದ್ರಾವತಿ : ಹುಣಸೆ ನೆಡುತೋಪಿನಲ್ಲಿ ಅಕ್ರಮವಾಗಿ ಮರಕಡಿತಲೆ ಮಾಡಿ ಅರಣ್ಯ ಒತ್ತುವರಿ ಮಾಡಿರುವ ಘಟನೆ   ಭದ್ರಾವತಿ ವಿಭಾಗದ ತರೀಕೆರೆ ವಲಯದ ಬಲ್ಲಾವರ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ತಿಳಿಸಿದ್ದಾರೆ.


ತರೀಕೆರೆ ವಲಯ ಅರಣ್ಯಾಧಿಕಾರಿಗಳ ಕಛೇರಿ ಫಲಕ
    ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮತ್ತು ಈ-ಮೇಲ್‌ನಲ್ಲಿ ದೂರು ಸಲ್ಲಿಸಲಾಗಿದೆ. ಭದ್ರಾವತಿ ವಿಭಾಗದ ತರೀಕೆರೆ ವಲಯದ ನಂದಿಬಟ್ಲು, ಕಿರು ಅರಣ್ಯ ಪ್ರದೇಶದ ಬಲ್ಲಾವರ ಸರ್ವೆ ನಂ.೨೨ರ ಹುಣಸೆ ನೆಡುತೋಪಿನಲ್ಲಿ ನೂರಾರು ಹುಣಸೆ ಮತ್ತು ಇತರೆ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಸುಮಾರು ೪ ರಿಂದ ೫ ಎಕರೆ ಅರಣ್ಯ ಒತ್ತುವರಿ ಮಾಡಿದ್ದು, ಸುಮಾರು ೮ ರಿಂದ ೧೦ ಕೋ.ರು. ಅಧಿಕ ಬೆಲೆ ಬಾಳುವ ರಸ್ತೆ ಪಕ್ಕದ ಅರಣ್ಯ ಪ್ರದೇಶ ಅಬ್ಬು ಎಂಬಾತ ಒತ್ತುವರಿ ಮಾಡಿಕೊಳ್ಳಲು ತರೀಕೆರೆ ವಲಯದ ಅರಣ್ಯಾಧಿಕಾರಿ(ಆರ್‌ಎಫ್‌ಓ) ಆಸೀಫ್ ಅಹಮದ್‌ರವರ ನೇರ ಕೈವಾಡವಿರುವ ಬಗ್ಗೆ ಅನುಮಾನವಿದ್ದು, ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.

    ಸಾಮಾಜಿಕ ಹೋರಾಟಗಾರ ಶಿವಕುಮಾರ್
    ಹಾಸನ ಅರಣ್ಯ ವಿಭಾಗದಲ್ಲಿ ನಡೆದಿರುವ ಮರಗಳ ಕಡಿತಲೆ ಪ್ರಕರಣ ಮಾಸುವ ಮೊದಲೇ ಅದೇ ರೀತಿ ಪ್ರಕರಣ ಇಲ್ಲಿ ಕಂಡು ಬಂದಿದೆ. ನೂರಾರು ಮರಗಳನ್ನು ಕಡಿತಲೆ ಮಾಡಿರುವ, ಕೋಟ್ಯಾಂತರ ರು. ಬೆಲೆ ಬಾಳುವ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ಹಾಗು ಈ ಕೃತ್ಯಕ್ಕೆ ಸಹಕರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ. ತಕ್ಷಣ ಭದ್ರಾವತಿ ವಿಭಾಗದ ಡಿಎಫ್‌ಓ, ತರೀಕೆರೆ ಉಪವಿಭಾಗದ ಎಸಿಎಫ್, ತರೀಕೆರೆ ವಲಯದ ಆರ್‌ಎಫ್‌ಓ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.