Friday, January 19, 2024

ಡಿಎಸ್‌ಎಸ್ ಸುವರ್ಣ ಮಹೋತ್ಸವಕ್ಕೆ ಚಾಲನೆ : ದಲಿತರ ಏಳಿಗೆಗಾಗಿ ಶ್ರಮಿಸದ ಧೀಮಂತ ವ್ಯಕ್ತಿ ಪ್ರೊ. ಬಿ. ಕೃಷ್ಣಪ್ಪ

ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಹಿರಿಯ ಮುಖಂಡ ಜಿ. ಮೂರ್ತಿ

ಪ್ರೊ. ಬಿ. ಕೃಷ್ಣಪ್ಪ ಅವರು ಸಂಘಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದೀಗ ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಭದ್ರಾವತಿ ನಗರದಲ್ಲಿ ಚಾಲನೆ ನೀಡಲಾಯಿತು.

    ಭದ್ರಾವತಿ : ಪ್ರೊ. ಬಿ. ಕೃಷ್ಣಪ್ಪ ಅವರು ಸಂಘಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದೀಗ ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.
    ಇದಕ್ಕೂ ಮೊದಲು ನಗರದ ರಂಗಪ್ಪ ವೃತ್ತ, ಜೈಭೀಮ್ ನಗರದಿಂದ ಕಲಾ ತಂಡಗಳೊಂದಿಗೆ  ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ನಡೆಸಲಾಯಿತು. ನಂತರ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಸಮಿತಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
    ನಂತರ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಗೆ ಚಾಲನೆ ನೀಡಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಜಿ.ಮೂರ್ತಿ, ಬಿ. ಕೃಷ್ಣಪ್ಪ ಅವರು ಸದಾ ಕಾಲ ದಲಿತರ ಪರವಾದ ಚಿಂತನೆಗಳನ್ನು ಹೊಂದುವ ಮೂಲಕ ಅವರ ಏಳಿಗೆಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿ. ತಮ್ಮ ಸ್ವಂತ ಹಣದಲ್ಲಿಯೇ ಸಂಘಟನೆ ಕಟ್ಟುವ ಜೊತೆಗೆ ನಗರದ ವಿಐಎಸ್‌ಎಲ್ ಹಾಗು ಎಂಪಿಎಂ ಈ ಎರಡು ಅವಳಿ ಕಾರ್ಖಾನೆಗಳ ಕಾರ್ಮಿಕರು ನೀಡಿದ ತಲಾ ಎರಡು ರುಪಾಯಿ ಕೆಂಪು ನೋಟಿನ ಹಣದಲ್ಲಿ ಇಡೀ ರಾಜ್ಯಾದ್ಯಂತ ಸಂಘಟನೆ ವಿಸ್ತರಿಸಿದರು. ಆ ಮೂಲಕ ಹಲವು ಹೋರಾಟಗಳಲ್ಲಿ ಯಶಸ್ಸು ಸಾಧಿಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಟ್ಟರು ಎಂದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಆಶಯ ಹಾಗು ಸಂವಿಧಾನದ ಆಧಾರದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಲಾಗಿದೆ. ಇಂಥದೊಂದು ಸಂಘಟನೆವ ೫೦ ವರ್ಷಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


ಪ್ರೊ. ಬಿ. ಕೃಷ್ಣಪ್ಪ ಅವರು ಸಂಘಟಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇದೀಗ ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಭದ್ರಾವತಿ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.
    ಅನೇಕ ಚಳವಳಿಗಳು ಆರಂಭಗೊಂಡು ಕೆಲಕಾಲದಲ್ಲಿಯೇ ನಶಿಸಿವೆ. ಆದರೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ನಡುವೆ ಹುಟ್ಟಿದ ಚಳವಳಿಯಾಗಿದ್ದರಿಂದ ಇಂದಿಗೂ ಜೀವಂತವಾಗಿದೆ. ಸಾಮಾಜಿಕ ಮಾಧ್ಯಮಗಳಿಲ್ಲದ ಕಾಲದಲ್ಲಿಯೂ ಸದೃಢವಾಗಿ ಬಲಗೊಂಡ ಸಂಘಟನೆ ದಲಿತ ಸಂಘರ್ಷ ಸಮಿತಿ ಎಂದರು.
    ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ದಲಿತ ಸಂಘರ್ಷ ಸಮಿತಿ ಅನೇಕ ಕಾಯ್ದೆಗಳು ರೂಪಿಸಲು ಕಾರಣವಾಗಿದೆ. ಅನೇಕ ಬಡವರ ಜಮೀನುಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರಸ್ತುತ ದಲಿತರು ಅನೇಕ ಸೌಲಭ್ಯಗಳನ್ನು ಪಡೆಯುವಲ್ಲಿ ಕದಸಂಸ ಪಾತ್ರ ಪ್ರಮುಖವಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಸದಸ್ಯ ಚನ್ನಪ್ಪ, ಮುಖಂಡರುಗಳಾದ ಈಶ್ವರಪ್ಪ, ಪ್ರಸನ್ನಕುಮಾರ್, ರಂಗನಾಥ್, ಕಾಣಿಕ್ ರಾಜ್, ಎಸ್. ಉಮಾ, ಶಾಂತಿ, ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಗಂಗಾಧರ್, ವಿ. ವಿನೋದ್, ಜಿಂಕ್‌ಲೈನ್ ಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ೧೦೬ನೇ ಸಂಸ್ಥಾಪಕರ ದಿನಾಚರಣೆ : ಸರ್.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೬ನೇ ಸ್ಥಾಪನೆ ವರ್ಷದ ಅಂಗವಾಗಿ ಅತ್ಯುತ್ತಮ ಇಂಜಿನಿಯರ್, ರಾಜನೀತಿಜ್ಞ ಸರ್. ಮೋಕ್ಷ ಗುಂಡಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಖಾನೆ ವತಿಯಿಂದ ಗೌರವ ಸಲ್ಲಿಸಲಾಯಿತು.
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೬ನೇ ಸ್ಥಾಪನೆ ವರ್ಷದ ಅಂಗವಾಗಿ ಅತ್ಯುತ್ತಮ ಇಂಜಿನಿಯರ್, ರಾಜನೀತಿಜ್ಞ ಸರ್. ಮೋಕ್ಷ ಗುಂಡಂ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಖಾನೆ ವತಿಯಿಂದ ಗೌರವ ಸಲ್ಲಿಸಲಾಯಿತು.
    ಕಾರ್ಖಾನೆ ಆವರಣದಲ್ಲಿರುವ ಪ್ರತಿಮೆಗೆ ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಮತ್ತು ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಕೆ.ಎಸ್ ಸುರೇಶ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.  
    ಕಾರ್ಮಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಪ್ರಭಾರಿ ಅಧ್ಯಕ್ಷ ಎಂ.ಎಲ್ ಯೋಗೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಉಪಪ್ರಬಂಧಕ(ಸಿಬ್ಬಂದಿ) ಕೆ.ಎಸ್ ಶೋಭ ಸೇರಿದಂತೆ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.

Thursday, January 18, 2024

ಹಿರಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ ವಸಂತಕುಮಾರ್

ಭದ್ರಾವತಿ ತಾಲೂಕಿನ ಹಿರಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ ವಸಂತಕುಮಾರ್ ಹಾಗು ಉಪಾಧ್ಯಕ್ಷರಾಗಿ ನೇತ್ರಾವತಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ: ತಾಲೂಕಿನ ಹಿರಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಎಚ್.ಬಿ ವಸಂತಕುಮಾರ್ ಹಾಗು ಉಪಾಧ್ಯಕ್ಷರಾಗಿ ನೇತ್ರಾವತಿ ಆಯ್ಕೆಯಾಗಿದ್ದಾರೆ.
    ಉಳಿದಂತೆ ಸದಸ್ಯರಾಗಿ ಎಚ್.ಎಂ ಲೋಕೇಶ್, ಎಚ್.ಪಿ ಚಂದ್ರಶೇಖರ್, ಎಚ್.ಎಸ್ ಕುಮಾರ್, ಎಚ್.ಆರ್ ಜಗದೀಶ್, ಎಚ್.ಎ ಶಿವಣ್ಣ, ಎಂ. ಶಿವಕುಮಾರ್, ಸತ್ಯನಾರಾಯಣರಾವ್ ಮತ್ತು ಮಂಜುಳ ಸೇರಿದಂತೆ ೮ ಮಂದಿ ಆಯ್ಕೆಯಾಗಿದ್ದಾರೆ.
    ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರಿಗೆ ಹಿರಿಯೂರು ಗ್ರಾಮಸ್ಥರು, ಹಾಲು ಉತ್ಪಾದಕರು ಹಾಗು ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ.

ಜ.೨೨ರಂದು ನಗರಸಭೆ ಅಧ್ಯಕ್ಷರ ಚುನಾವಣೆ : ಲತಾ ಚಂದ್ರಶೇಖರ್ ಆಯ್ಕೆ ಬಹುತೇಕ ಖಚಿತ

ಲತಾ ಚಂದ್ರಶೇಖರ್
    ಭದ್ರಾವತಿ:  ನಗರಸಭೆ ಅಧ್ಯಕ್ಷರ ಚುನಾವಣೆ ಜ.೨೨ರಂದು ನಡೆಯಲಿದ್ದು, ಅಧ್ಯಕ್ಷರಾಗಿ ವಾರ್ಡ್ ನಂ. ೩೪ರ ಸದಸ್ಯೆ ಲತಾ ಚಂದ್ರಶೇಖರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
    ನಗರಸಭೆ ಆಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಮೀಸಲಾತಿ ಮೊದಲ ೩೦ ತಿಂಗಳ ಅವಧಿ ಒಪ್ಪಂದದಂತೆ ಹಂಚಿಕೆ ಮಾಡಿಕೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನಿರ್ದೇಶನದಂತೆ ಅರ್ಹ ಸದಸ್ಯರಿಗೆ ಬಿಡುಕೊಡಲಾಗುತ್ತಿದೆ. ಸಾಮಾನ್ಯ ಮಹಿಳಾ ಮೀಸಲು ಹೊಂದಿರುವ ಅಧ್ಯಕ್ಷ ಸ್ಥಾನ ಅಧಿಕಾರ ಈಗಾಗಲೇ ಗೀತಾ ರಾಜ್‌ಕುಮಾರ್, ಅನುಸುಧಾ ಮೋಹನ್ ಪಳನಿ ಮತ್ತು ಶೃತಿ ಸಿ. ವಸಂತಕುಮಾರ್ ಕೆ.ಸಿ ಒಟ್ಟು ೩ ಮಂದಿ ಸದಸ್ಯರು ಅನುಭವಿಸಿದ್ದಾರೆ. ಉಳಿದ ಅವಧಿಗೆ ವಾರ್ಡ್ ನಂ.೩೪ರ ಸದಸ್ಯೆ ಲತಾ ಚಂದ್ರಶೇಖರ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
    ಈ ಹಿಂದೆಯೇ ಅಧಿಕಾರ ಅನುಭವಿಸಬೇಕಾಗಿದ್ದ ಲತಾ ಚಂದ್ರಶೇಖರ್ ಅವರಿಗೆ ಮೀಸಲಾತಿ ಕೊನೆ ಅವಧಿ ಅಧಿಕಾರ ಬಿಟ್ಟುಕೊಡುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆ ಶೃತಿ ಸಿ. ವಸಂತಕುಮಾರ್ ಕೆ.ಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಜ.೨೨ರಂದು ಚುನಾವಣೆ ನಡೆಯಲಿದೆ.
    ಪ್ರಸ್ತುತ ನಗರಸಭೆಯಲ್ಲಿ ೧೮ ಕಾಂಗ್ರೆಸ್, ೧೨ ಜೆಡಿಎಸ್, ೪ ಬಿಜೆಪಿ ಹಾಗು ೧ ಪಕ್ಷೇತರ ಸದಸ್ಯರಿದ್ದಾರೆ. ಲತಾ ಚಂದ್ರಶೇಖರ್‌ರವರು ಮೂಲತಃ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಮೊದಲ ಬಾರಿಗೆ ವಾರ್ಡ್ ನಂ.೩೪ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
    ಜ.೨೨ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧ ಗಂಟೆವರೆಗೆ ನಾಮಪತ್ರ ಸಲ್ಲಿಕೆ, ಮಧ್ಯಾಹ್ನ ೧.೧೫ ರಿಂದ ೧.೩೦ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ. ೧.೩೦ರ ನಂತರ ಅಧ್ಯಕ್ಷ ಘೋಷಣೆ ನಡೆಯಲಿದೆ. ಈ ಸಂಬಂಧ ಜ.೧೦ರಂದು ಉಪವಿಭಾಗಾಧಿಕಾರಿ ಚುನಾವಣೆ ಸೂಚನೆ ಪತ್ರ ಹೊರಡಿಸಿದ್ದಾರೆ.

ದೇಹದಾರ್ಢ್ಯ ಪಟುವಿನ ಸಾವಿನ ಪ್ರಕರಣ ಮರುತನಿಖೆಗೆ ಆಗ್ರಹ

ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ಪೋಷಕರಿಂದ ಮನವಿ

ಭದ್ರಾವತಿ ನಗರದ ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ, ರಾಷ್ಟ್ರಮಟ್ಟದ ದೇಹದಾರ್ಢ್ಯ ಪಟುವಿನ ಸಾವಿನ ಪ್ರಕರಣ ಮರುತನಿಖೆಗೆ ಆಗ್ರಹಿಸಿ ಪೋಷಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
    ಭದ್ರಾವತಿ: ನಗರದ ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ, ರಾಷ್ಟ್ರಮಟ್ಟದ ದೇಹದಾರ್ಢ್ಯ ಪಟುವಿನ ಸಾವಿನ ಪ್ರಕರಣ ಮರುತನಿಖೆಗೆ ಆಗ್ರಹಿಸಿ ಪೋಷಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
    ದೇಹದಾರ್ಢ್ಯ ಪಟು ರತಿಲ ಕುಮಾರ್ ಮೇ.೧೩, ೨೦೨೩ರಂದು ಸಾವನ್ನಪ್ಪಿದ್ದರು. ಇವರ ಮೃತದೇಹ ಸಿರಿಯೂರು ವೀರಾಪುರ ನಾಲೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು.
    ಇದೀಗ ರತಿಲ ಕುಮಾರ್ ಅವರ ತಂದೆ ಇಂದ್ರೇಶ್ ಅವರು, ಅಂದು ಮದುವೆಗೆ ಹೋಗಿದ್ದ ರತಿಲ ಕುಮಾರ್‌ಗೆ ಬಾರ್ ಒಂದರಲ್ಲಿ ಕುಡಿಸಿ ಗಲಾಟೆ ಮಾಡಲಾಗಿತ್ತು. ನಂತರ ನಾಲೆಯ ಬಳಿ ಕರೆದುಕೊಂಡು ಹೋಗಿ ತಲೆಗೆ ಬಲವಾಗಿ ಹೊಡೆದು ನೀರಿಗೆ ತಳ್ಳಿ ಕೊಲೆ ಮಾಡಲಾಗಿದೆ. ಪೊಲೀಸರು ಯುಡಿಆರ್ ಪ್ರಕರಣವೆಂದು ದಾಖಲಿಸಿ ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
    ರತಿಲ ಕುಮಾರ್ ಸ್ನೇಹಿತರೊಂದಿಗೆ ಪೋಷಕರು ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ಕಳೆದ ಸುಮಾರು ೮ ತಿಂಗಳಿನಿಂದ ನ್ಯಾಯಕ್ಕಾಗಿ ಅಲೆಯುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗು  ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದು, ಐಪಿಸಿ ಸೆಕ್ಷನ್ ೩೦೨ರಡಿ ಕೊಲೆ ಪ್ರಕರಣ ದಾಖಲಿಸಿ ಮರು ತನಿಖೆ ಕೈಗೊಳ್ಳುವಂತೆ ಎಎಸ್‌ಪಿ ಕರಿಯಪ್ಪರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
    ರತಿಲ ಕುಮಾರ್ ಸಹೋದರಿ ದೀಪ್ತಿ, ಸ್ನೇಹಿತರಾದ ಅಂತೋಣಿ ವಿಲ್ಸನ್, ಮಂಜುನಾಥ್, ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, January 17, 2024

ಕುಂಚ ಕಲಾವಿದ ಹಫೀಜ್ ಉರ್ ರಹಮಾನ್ ನಿಧನ

 ಭದ್ರಾವತಿ:  ತಾಲೂಕು ಕುಂಚ ಕಲಾವಿದರ ಸಂಘದ ಖಜಾಂಚಿ ಹಫೀಜ್ ಉರ್ ರಹಮಾನ್(51) ಗುರುವಾರ  ಬೆಳಗ್ಗೆ  ನಿಧನ  ಹೊಂದಿದರು.
    ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರರು ಇದ್ದರು. ಕಳೆದ ಸುಮಾರು 2 ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.  ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
       ರಹಮಾನ್ ಅವರು ಜಮಾತೇ ಇಸ್ಲಾಂಮೀ ಹಿಂದ್ ಸಂಘಟನೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
       ಇವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.


ಜ.೧೯ರಂದು ಕ.ದ.ಸಂ.ಸ ಸುವರ್ಣ ಮಹೋತ್ಸವಕ್ಕೆ ಚಾಲನೆ : ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾಹಿತಿ

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿದರು.
    ಭದ್ರಾವತಿ : ಪ್ರೊ. ಬಿ.ಕೃಷ್ಣಪ್ಪರವರು ೧೯೭೪-೭೫ರಲ್ಲಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಆಶಯಗಳನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಚಳುವಳಿಯನ್ನು ಆರಂಭಿಸಿದರು.     ಪ್ರಸ್ತುತ ಸಮಿತಿ ೫೦ ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ. ಜ.೧೯ರಂದು ಸುವರ್ಣ ಮಹೋತ್ಸವಕ್ಕೆ ನಗರದಲ್ಲಿ ಚಾಲನೆ ನೀಡಲಾಗುವುದು ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶದಲ್ಲಿ ಆರ್‌ಎಸ್‌ಎಸ್ ಹೇಗೆ ತನ್ನದೇ ಆದ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆಯೋ, ಅದೇ ರೀತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಎಲ್ಲಾ ೩೧ ಜಿಲ್ಲೆಗಳಲ್ಲಿ ಬೆಳೆದು ನಿಂತಿದೆ. ಪ್ರೊ. ಬಿ. ಕೃಷ್ಣಪ್ಪ ಅವರು ೧೯೭೪ರಲ್ಲಿ ವಿಐಎಸ್‌ಎಲ್ ಕಾರ್ಮಿಕನ ಜೊತೆ ನಡೆದ ಅಸ್ಪೃಶ್ಯತೆ ನಡವಳಿಕೆ ಖಂಡಿಸಿ ಕಾರ್ಮಿಕರನ್ನು ಸಂಘಟಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಳುವಳಿಗೆ ನಾಂದಿ ಹಾಡಿದರು ಎಂದರು.
    ಸಮಿತಿ ನಡೆಸಿದ ಹೋರಾಟದ ಫಲವಾಗಿ ಬಗರ್‌ಹುಕುಂ ಚಳುವಳಿ, ಬೆತ್ತಲೆ ಸೇವೆ ಪದ್ಧತಿ ನಿಷೇಧ, ಜಾತಿನಿಂದನೆ ಕಾಯಿದೆ, ಪಿಟಿಸಿಲ್ ಕಾಯಿದೆ ಸೇರಿದಂತೆ ಅನೆಕ ಕಾಯಿದೆಗಳು ಜಾರಿಗೆ ಬಂದಿವೆ ಎಂದರು.
    ಜಾತಿ, ವರ್ಗ, ಧರ್ಮಬೇದವಿಲ್ಲದೆ ಎಲ್ಲಾ ರೀತಿಯ ಶೋಷಿತ ಜನರ ಧ್ವನಿಯಾಗಿ ಜನ್ಮತಾಳಿದ ಸಂಘಟನೆಗೆ ಇದೀಗ ೫೦ ವರ್ಷ ತುಂಬುತ್ತಿದ್ದು, ಇದರ ಸವಿನೆನಪಿಗಾಗಿ ಚಳುವಳಿಯ ತವರು ನೆಲದಲ್ಲಿ ಸುವರ್ಣಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ.  ಈ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಶೋಷಿತರ ಧ್ವನಿಯಾಗಿ ಜ. ೧೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ರಂಗಪ್ಪ ವೃತ್ತ, ಜೈಭೀಮ್ ನಗರದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ಸಾಗಲಿದೆ. ನಂತರ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಗುವುದು. ಕಾರ್ಯಕ್ರಮವನ್ನು ಶಾಕ ಬಿ.ಕೆ.ಸಂಗಮೆಶ್ವರ್ ಉದ್ಘಾಟಿಸಲಿದ್ದಾರೆ. ಪ್ರೊ. ಬಿ.ಕೃಷ್ಣಪ್ಪನವರು ಹುಟ್ಟುಹಾಕಿರುವ ಈ ಸಂಘಟನೆ ಯಾವುದೇ ಒಂದು ವರ್ಗ, ವ್ಯಕ್ತಿಗೆ ಸೇರಿದ ಸ್ವತ್ತಲ್ಲ.  ಈ ಕಾರ್ಯಕ್ರಮದ ಧ್ಯೇಯವಾಕ್ಯ ದಲಿತರ ಐಕ್ಯತೆ ಸಂಘರ್ಷ-ಆರದ ಶೋಷಿತರ ಹಣತೆ ಎಂಬ ಶೀರ್ಷಿಕೆಯನ್ನು ಹೊಂದಿದೆ. ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜ.೨೦ ತ್ತು ೨೧ರಂದು ಬಿಜಾಪುರ, ಆಲಮಟ್ಟಿ ಡ್ಯಾಂ, ಹರ್ಡೇಕರ್ ಮಂಜಪ್ಪ ಸ್ಮಾರಕ ಭವನದಲ್ಲಿ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿದೆ. ಅದೇ ರೀತಿ ಜಿಲ್ಲಾಮಟ್ಟದಲ್ಲಿ ಸಹ ಸಮಾವೇಶಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
      ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ. ರಂಗನಾಥ, ಪ್ರಮುಖರಾದ ಕಾಣಿಕ್ ರಾಜ್, ಸಂದೀಪ, ಈಶ್ವರಪ್ಪ, ನರಸಿಂಹ, ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.