Monday, October 7, 2024

ನಿರಂತರ ಅಭ್ಯಾಸದಿಂದ ಉತ್ತಮ ಸಾಧನೆ : ಮಹೇಶ್ವರಪ್ಪ

ಭದ್ರಾವತಿ ಹಳೇನಗರದ ಕನಕಮಂಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ 
ಭದ್ರಾವತಿ: ಯಾವುದಾದರೂ ಗುರಿ ಹೊಂದಿ ನಿರಂತರ  ತೊಡಗಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ. ಕುಸ್ತಿಪಟುಗಳು ವರ್ಷದ ಎಲ್ಲಾ ದಿನ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಯಾರು ಬೇಕಾದರೂ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಕುಸ್ತಿಪಟು ಮಹೇಶ್ವರಪ್ಪ ಹೇಳಿದರು. 
ಅವರು ಸೋಮವಾರ ಹಳೇನಗರದ ಕನಕಮಂಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. 
ಕುಸ್ತಿಪಟುಗಳು ದೈಹಿಕವಾಗಿ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೆ ಏಕಾಗ್ರತೆ, ಸಾಮರಸ್ಯ ಬೆಳೆಸಿಕೊಳ್ಳಬಹುದಾಗಿದೆ. ಕುಸ್ತಿ ಕ್ರೀಡೆಗೆ ಹೆಚ್ಚಿನ ಮಹತ್ವವಿದ್ದು, ಅಲ್ಲದೆ ಕುಸ್ತಿಪಟುಗಳಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವಿದೆ ಎಂದರು. 
ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ದಸರಾ ನಾಡಹಬ್ಬ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ನಾಡಹಬ್ಬ ದಸರಾ ಆಚಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರ ಸೇವಾ ಕಾರ್ಮಿಕರ ಸೇವಾ ಸಂಘದ ಅಧ್ಯಕ್ಷ ಚೇತನ್ ಕುಮಾರ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್ ಸೇರಿದಂತೆ ಇನ್ನಿತರರು. ಉಪಸ್ಥಿತರಿದ್ದರು. 
ನಗರದ ಹಿರಿಯ ಕುಸ್ತಿ ಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸ್ವಾಗತಿಸಿದರು. 
 

ವಿಐಎಸ್‌ಎಲ್ ಕಾರ್ಖಾನೆ ತಾಮ್ರದ ವೈಂಡಿಂಗ್ ವೈರ್ ಕಳ್ಳತನ ಪ್ರಕರಣ : ಇಬ್ಬರ ಸೆರೆ

ನ್ಯೂಟೌನ್ ಪೊಲೀಸರ ಕಾರ್ಯಾಚರಣೆ, ೧,೩೬,೫೦೦ ಮೌಲ್ಯದ ಸ್ವತ್ತು ವಶ

ಭದ್ರಾವತಿ ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ತಾಮ್ರದ ವೈಂಡಿಂಗ್ ವೈರ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
   ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ತಾಮ್ರದ ವೈಂಡಿಂಗ್ ವೈರ್ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ನ್ಯೂಟೌನ್ ಠಾಣೆ  ಪೊಲೀಸರು ಯಶಸ್ವಿಯಾಗಿದ್ದಾರೆ. 
    ಹೊಸ ಕೋಡಿಹಳ್ಳಿ ಗ್ರಾಮ ದೇವರನರಸೀಪುರದ ನಿವಾಸಿ ವೆಂಕಟೇಶ ಅಲಿಯಾಸ್ ಬುಡ್ಡಾ(೨೯) ಹಾಗೂ ಎಕ್ಸಿನಾ ಕಾಲೋನಿ ನಿವಾಸಿ ಮುನೀರ್ ಜಾನ್ ಅಲಿಯಾಸ್ ತಿಕಲ(೩೬) ಇಬ್ಬರನ್ನು ಬಂಧಿಸಿ ಕಳ್ಳತನ ಮಾಡಲಾಗಿದ್ದ ತಾಮ್ರದ ತಂತಿ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಆಟೋ ಸೇರಿದಂತೆ ಒಟ್ಟು ೧,೩೬,೫೦೦ ರು. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
  ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಮಾರ್ಗದರ್ಶನದಲ್ಲಿ ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ನೇತೃತ್ವದಲ್ಲಿ ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಟಿ.ಪಿ ರಮೇಶ್, ಸಿಬ್ಬಂದಿಗಳಾದ ಮಂಜಪ್ಪ, ನವೀನ್ ಮತ್ತು ಪ್ರಸನ್ನರವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.  
     ಸೆ. ೮ ರಂದು ರಾತ್ರಿ  ಕಾರ್ಖಾನೆಯ ಸೆಂಟ್ರಲ್ ಎಲೆಕ್ಟ್ರಿಕಲ್ ವರ್ಕ್ ಶಾಪ್‌ನಲ್ಲಿ ರಿಪೇರಿ ಮಾಡಲು ತಂದಿದ್ದ, ವೆಲ್ಡಿಂಗ್ ಮಷಿನ್‌ನಲ್ಲಿದ್ದ ೩೫,೦೦೦ ತಾಮ್ರದ ವೈಂಡಿಂಗ್‌ಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಕಾರ್ಖಾನೆಯ ಭದ್ರತಾ ವಿಭಾಗದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

Sunday, October 6, 2024

ದಸರಾ ಅಡುಗೆ ಸ್ಪರ್ಧೆ : ಬಂಟರ ಮಹಿಳಾ ವೇದಿಕೆ ಮೊದಲ ಬಹುಮಾನ

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ನಗರದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಬಂಟರ ಮಹಿಳಾ ವೇದಿಕೆ ಮೊದಲ ಬಹುಮಾನ ಪಡೆದುಕೊಂಡಿತು. 
    ಭದ್ರಾವತಿ : ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ನಗರದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಬಂಟರ ಮಹಿಳಾ ವೇದಿಕೆ ಮೊದಲ ಬಹುಮಾನ ಪಡೆದುಕೊಂಡಿತು. 
    ಪ್ರತಿವರ್ಷ ನಾಡಹಬ್ಬ ಅಂಗವಾಗಿ ಅಡುಗೆ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸ್ಪರ್ಧೆಯಲ್ಲಿ ಸುಮಾರು ೨೨ ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಮೊದಲ ಬಹುಮಾನ ಬಂಟರ ಮಹಿಳಾ ವೇದಿಕೆ, ೨ನೇ ಬಹುಮಾನ ಭೂತನಗುಡಿ ಸೂರ್ಯನಾರಾಯಣ ಸ್ವಸಹಾಯ ಸಂಘ ಹಾಗು ತೃತೀಯ ಬಹುಮಾನ ಸಿದ್ದರೂಢನಗರದ ಸಾಧನ ಯೋಗ ಕೇಂದ್ರ ಪಡೆದುಕೊಂಡಿತು. 
    ಮೊದಲ ಬಹುಮಾನ ೩ ಸಾವಿರ ರು. ನಗದು, ಪ್ರಶಸ್ತಿ ಪತ್ರ, ಎರಡನೇ ಬಹುಮಾನ ೨ ಸಾವಿರ ರು. ನಗದು, ಪ್ರಶಸ್ತಿ ಪತ್ರ ಹಾಗು ಮೂರನೇ ಬಹುಮಾನ ೧ ಸಾವಿರ ರು. ನಗದು, ಪ್ರಶಸ್ತಿ ಪತ್ರ ನೀಡಲಾಯಿತು. 
    ಸ್ಪರ್ಧೆಯನ್ನು ಬಿ.ಎಚ್ ರಸ್ತೆ ದುರ್ಗಾ ನರ್ಸಿಂಗ್ ಹೋಂ ತಜ್ಞ ವೈದ್ಯೆ ಡಾ. ಅಶಿತಾ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜ್ಞಾನದೀಪಿಕಾ ಶಾಲೆಯ ಬಾಲಕಿಯರು ವಿಭಾಗಮಟ್ಟಕ್ಕೆ ಆಯ್ಕೆ


ಭದ್ರಾವತಿ ತಾಲೂಕಿನ ಯರೇಹಳ್ಳಿಯ ಜ್ಞಾನ ದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಶನಿವಾರ ಜರುಗಿದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದ ೧೪ ವರ್ಷದೊಳಗಿನ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ಯರೇಹಳ್ಳಿಯ ಜ್ಞಾನ ದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಶನಿವಾರ ಜರುಗಿದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದ ೧೪ ವರ್ಷದೊಳಗಿನ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನದೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
    ಸಿ. ಅರ್ಪಿತ ೧೦೦ ಮೀ. ಓಟದಲ್ಲಿ ಪ್ರಥಮ, ೬೦೦ ಮೀ. ತೃತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ(ಆಡಳಿತ) ಎಸ್.ಆರ್ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುಳಾ ರಾಜಶೇಖರ್. ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು, ತರಬೇತುದಾರ ಸುನಿಲ್ ರಾವ್ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

Saturday, October 5, 2024

ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರಿಗೆ ನವದುರ್ಗಿಯರ ವಿಶೇಷ ಅಲಂಕಾರ

ಭದ್ರಾವತಿ ನಗರದ ಹೊಸಸೇತುವೆ ರಸ್ತೆಯ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಅಲ್ಲದೆ ನವದುರ್ಗಿಯರ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ. ಶನಿವಾರ ಧನ್ವಂತರಿ ಮಹಾವಿಷ್ಣು ಅಲಂಕಾರ ಕೈಗೊಳ್ಳಲಾಗಿತ್ತು. 
    ಭದ್ರಾವತಿ : ನಗರದ ಹೊಸಸೇತುವೆ ರಸ್ತೆಯ ಭದ್ರಾ ನದಿ ದಡದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಾಡಹಬ್ಬ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಅಲ್ಲದೆ ನವದುರ್ಗಿಯರ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ಪ್ರತಿ ದಿನ ಸಂಜೆ ಅಮ್ಮನವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಅನ್ನಸಂತರ್ಪಣೆ ನೆರವೇರಿಸಿಕೊಂಡು ಬರಲಾಗುತ್ತಿದೆ. 
ಈ ಬಾರಿ ಬನಶಂಕರಿ ಅಮ್ಮನವರಿಗೆ ಮೊದಲ ದಿನ ಪುಷ್ಪಾಲಂಕಾರ, ಎರಡನೇ ದಿನ ಸ್ಕಂದ ಮಾತಾ ಅಲಂಕಾರ ಹಾಗು ಮೂರನೇ ದಿನ ಧನ್ವಂತರಿ ಮಹಾವಿಷ್ಣು ಅಲಂಕಾರ ಕೈಗೊಳ್ಳಲಾಗಿತ್ತು. 
    ದೇವಸ್ಥಾನ ಸೇವಾ ಸಮಿತಿ ಹಾಗು ದೇವಾಂಗ ಸಮಾಜದ ಪ್ರಮುಖರು, ನಗರದ ದಾನಿಗಳು, ಸೇವಾಕರ್ತರು ಹಾಗು ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಅಮ್ಮನವರ ಅಲಂಕಾರ ಕಣ್ತುಂಬಿಕೊಳ್ಳುತ್ತಿದ್ದಾರೆ. 

ಬನ್ನಿ ಮುಡಿಯುವ ಖಡ್ಗಕ್ಕೆ ತಹಸೀಲ್ದಾರ್ ವಿಶೇಷ ಪೂಜೆ

ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಭದ್ರಾವತಿ ಹಳೇನಗರದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ತಾಲೂಕು ದಂಡಾಧಿಕಾರಿ ಕೆ.ಆರ್ ನಾಗರಾಜು ಬನ್ನಿ ಮುಡಿಯಲು ಬಳಸುವ ಖಡ್ಗಕ್ಕೆ ಪೂಜೆ ಸಲ್ಲಿಸಿದರು. 
    ಭದ್ರಾವತಿ : ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ಹಳೇನಗರದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ತಾಲೂಕು ದಂಡಾಧಿಕಾರಿ ಕೆ.ಆರ್ ನಾಗರಾಜು ಬನ್ನಿ ಮುಡಿಯಲು ಬಳಸುವ ಖಡ್ಗಕ್ಕೆ ಪೂಜೆ ಸಲ್ಲಿಸಿದರು. 
    ನಗರಸಭೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ನಾಡಹಬ್ಬ ದಸರಾ ಆಚರಣೆ ಅದ್ದೂರಿಯಾಗಿ ನಡೆಯುತ್ತಿದ್ದು, ಹಳೇನಗರದ ಕನಕಮಂಟಪ ಮೈದಾನದಲ್ಲಿ ಅ.೧೨ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ತಹಸೀಲ್ದಾರ್‌ರವರು ಬನ್ನಿ ಮುಡಿಯುತ್ತಿದ್ದಾರೆ. ನಂತರ ಸಿಡಿಮದ್ದು ಪ್ರದರ್ಶನ ಹಾಗು ರಾವಣ ಸಂಹಾರದೊಂದಿಗೆ ಹಬ್ಬ ಸಂಪನ್ನಗೊಳ್ಳಲಿದೆ. 
    ಬನ್ನಿ ಮುಡಿಯಲು ಶ್ರೀ ಕಾಳಿಕಾ ದೇವಿ ಖಡ್ಗ ಬಳಸುವುದು ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ದಸರಾ ಆಚರಣೆ ಮೊದಲ ದಿನದಂದು ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. 
    ಉಪತಹಸೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್ ಹಾಗು ಕಾಳಿಕಾ ದೇವಿ ದೇವಸ್ಥಾನದ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ : ಎಂ. ಮಣಿ ಎಎನ್‌ಎಸ್

ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ, ವಿಮುಖರಾಗದಿರಿ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸರ್. ವಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡ ಮೊದಲ ಬಹುಮಾನ ಪಡೆದುಕೊಂಡಿತು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಸೇರಿದಂತೆ ಇನ್ನಿತರರು ಬಹುಮಾನಗಳನ್ನು ವಿತರಿಸಿದರು. 
    ಭದ್ರಾವತಿ: ಕ್ಷೇತ್ರದಲ್ಲಿರುವ ಕ್ರೀಡಾಪಟುಗಳಿಗೆ ಶಾಸಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ನಾನು ಸಹ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಆರ್ಥಿಕವಾಗಿ ನೆರವು ನೀಡುತ್ತೇನೆ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಭರವಸೆ ನೀಡಿದರು. 
    ಅವರು ಶನಿವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. 
    ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಪ್ರಸ್ತುತ ನಾವುಗಳು ಕ್ರೀಡೆಗಳಿಂದ ವಂಚಿತರಾದ್ದಲ್ಲಿ ಭವಿಷ್ಯದಲ್ಲಿ ಮತ್ತೊಮ್ಮೆ ಅವಕಾಶಗಳು ಸಿಗುವುದಿಲ್ಲ. ಕ್ರೀಡೆಗಳಿಂದ ಉತ್ತಮ ಆರೋಗ್ಯದ ಜೊತೆಗೆ ದೈಹಿಕ ಹಾಗು ಮಾನಸಿಕವಾಗಿ ಬೆಳವಣಿಗೆ ಹೊಂದಬಹುದು. ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ತಗಲುವ ಸಂಪೂರ್ಣ ವೆಚ್ಚ ನಾನು ಭರಿಸಲು ಸಿದ್ದವಾಗಿದ್ದೇನೆ. ಈ ಹಿನ್ನಲೆಯಲ್ಲಿ ಯಾರು ಸಹ ಕ್ರೀಡೆಗಳಿಂದ ವಿಮುಖರಾಗಬಾರದು ಎಂದರು. 
     ಸರ್. ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡಕ್ಕೆ ಮೊದಲ ಬಹುಮಾನ: 
    ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಸರ್. ವಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. ಕೊನೆಯ ಅಂತಿಮ ಪಂದ್ಯದಲ್ಲಿ ಶಿವಮೊಗ್ಗ ಮಾಚೇನಹಳ್ಳಿ ಮಲ್ನಾಡ್ ಕ್ರಿಕೆಟರ್‍ಸ್ ತಂಡದ ವಿರುದ್ಧ ಜಯ ಸಾಧಿಸಿ ೨೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ತನ್ನದಾಗಿಸಿಕೊಂಡಿತು. ಉಳಿದಂತೆ ದ್ವಿತೀಯ ಸ್ಥಾನ ಪಡೆದ ಮಲ್ನಾಡ್ ಕ್ರಿಕೆಟರ್‍ಸ್ ತಂಡ ೧೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ಪಡೆದುಕೊಂಡಿತು. 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಬಹುಮಾನಗಳನ್ನು ವಿತರಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಾಡಹಬ್ಬ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್, ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಯುವ ಮುಖಂಡ ವೈ. ನಟರಾಜ್, ಶ್ರೀನಿವಾಸ್(ಪೋಟೋ ಗ್ರಾಫರ್) ಸೇರಿದಂತೆ ನಗರಸಭೆ ಹಾಲಿ ಮತ್ತು ಮಾಜಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.