Sunday, October 6, 2024

ದಸರಾ ಅಡುಗೆ ಸ್ಪರ್ಧೆ : ಬಂಟರ ಮಹಿಳಾ ವೇದಿಕೆ ಮೊದಲ ಬಹುಮಾನ

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ನಗರದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಬಂಟರ ಮಹಿಳಾ ವೇದಿಕೆ ಮೊದಲ ಬಹುಮಾನ ಪಡೆದುಕೊಂಡಿತು. 
    ಭದ್ರಾವತಿ : ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ನಗರದ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಬಂಟರ ಮಹಿಳಾ ವೇದಿಕೆ ಮೊದಲ ಬಹುಮಾನ ಪಡೆದುಕೊಂಡಿತು. 
    ಪ್ರತಿವರ್ಷ ನಾಡಹಬ್ಬ ಅಂಗವಾಗಿ ಅಡುಗೆ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸ್ಪರ್ಧೆಯಲ್ಲಿ ಸುಮಾರು ೨೨ ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಮೊದಲ ಬಹುಮಾನ ಬಂಟರ ಮಹಿಳಾ ವೇದಿಕೆ, ೨ನೇ ಬಹುಮಾನ ಭೂತನಗುಡಿ ಸೂರ್ಯನಾರಾಯಣ ಸ್ವಸಹಾಯ ಸಂಘ ಹಾಗು ತೃತೀಯ ಬಹುಮಾನ ಸಿದ್ದರೂಢನಗರದ ಸಾಧನ ಯೋಗ ಕೇಂದ್ರ ಪಡೆದುಕೊಂಡಿತು. 
    ಮೊದಲ ಬಹುಮಾನ ೩ ಸಾವಿರ ರು. ನಗದು, ಪ್ರಶಸ್ತಿ ಪತ್ರ, ಎರಡನೇ ಬಹುಮಾನ ೨ ಸಾವಿರ ರು. ನಗದು, ಪ್ರಶಸ್ತಿ ಪತ್ರ ಹಾಗು ಮೂರನೇ ಬಹುಮಾನ ೧ ಸಾವಿರ ರು. ನಗದು, ಪ್ರಶಸ್ತಿ ಪತ್ರ ನೀಡಲಾಯಿತು. 
    ಸ್ಪರ್ಧೆಯನ್ನು ಬಿ.ಎಚ್ ರಸ್ತೆ ದುರ್ಗಾ ನರ್ಸಿಂಗ್ ಹೋಂ ತಜ್ಞ ವೈದ್ಯೆ ಡಾ. ಅಶಿತಾ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment