Saturday, October 12, 2024

ಆಯುಧಪೂಜೆ ದಿನದಂದು ಧಾರಾಕಾರ ಮಳೆ : ಜನಜೀವನ ಅಸ್ತವ್ಯಸ್ತ

ಭದ್ರಾವತಿ ನಗರದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಲ್ಲದೆ ರಸ್ತೆ ಪಕ್ಕದ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. 
    ಭದ್ರಾವತಿ: ನಗರದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ಇದರಿಂದಾಗಿ ಕೆಲವು ಗಂಟೆಗಳವರೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು.
    ಹಳ್ಳಕೊಳ್ಳಗಳ್ಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ  ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಲ್ಲದೆ ರಸ್ತೆ ಪಕ್ಕದ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಆಯುಧಪೂಜೆ ದಿನದಂದು ಮಳೆಯಾಗಿರುವುದು ಕೆಲವು ಗಂಟೆಗಳವರೆಗೆ ಹಬ್ಬದ ಸಂಭ್ರಮ ಕುಸಿಯುವಂತೆ ಮಾಡಿತು.
    ವ್ಯಾಪಾರ ವಹಿವಾಟು ಸ್ಥಗಿತ :
    ಸಂಜೆ ಏಕಾಏಕಿ ಧಾರಕಾರವಾಗಿ ಮಳೆಯಾದ ಹಿನ್ನಲೆಯಲ್ಲಿ ಹೂ-ಹಣ್ಣು, ತರಕಾರಿ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ, ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ಭರ್ಜರಿ ವ್ಯಾಪಾರ ವಹಿವಾಟು ನಡೆದಿದ್ದು, ಸಂಜೆ ಧಾರಾಕಾರ ಮಳೆಯಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಜನರು ಮನೆಯಿಂದ ಹೊರಬಾರದೆ ಮನೆಗಳಲ್ಲಿ ಉಳಿದುಕೊಂಡಿದ್ದು, ಹೆಚ್ಚಿನ ವ್ಯಾಪಾರ ವಹವಾಟಿನ ನಿರೀಕ್ಷೆ ಹೊಂದಿದ್ದ ವ್ಯಾಪಾರಸ್ಥರು ಹಾಗು ವರ್ತಕರಲ್ಲಿ ನಿರಾಸೆ ಉಂಟು ಮಾಡಿತು. 
    ರಾತ್ರಿ ಕತ್ತಲಿನಲ್ಲಿ ಕಳೆದ ಜನರು : 
    ಧಾರಕಾರ ಮಳೆ ಹಿನ್ನಲೆಯಲ್ಲಿ  ಸಂಜೆ ವಿದ್ಯುತ್ ಸ್ಥಗಿತಗೊಂಡಿದ್ದು, ಮಧ್ಯರಾತ್ರಿವರೆಗೂ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಅಲ್ಲಲ್ಲಿ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳು ಕಂಡು ಬಂದಿದ್ದು, ಶನಿವಾರ ಬೆಳಿಗ್ಗೆ ಕೆಲವು ತಾಸು ವಿದ್ಯುತ್ ವ್ಯತ್ಯಯ ಉಂಟಾಯಿತು. ಮೆಸ್ಕಾಂ ಸಿಬ್ಬಂದಿಗಳು ರಾತ್ರಿಯಿಂದಲೇ ಸಣ್ಣಪುಟ್ಟ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಿದರು. 

ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿದ ಸ್ವಾಮಿಯ ರಥೋತ್ಸವ


ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶನಿವಾರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶನಿವಾರ ಸ್ವಾಮಿಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. 
    ರಥೋತ್ಸವ ಅಂಗವಾಗಿ ಬೆಳಿಗ್ಗೆ ಕಲಾ ಹೋಮ, ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ನಂತರ ರಥೋತ್ಸವ ನೆರವೇರಿತು. ವಿಶೇಷ ಪೂಜೆ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. 
    ರಥೋತ್ಸವಕ್ಕೆ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಚಾಲನೆ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶ್ರೀಕಾಂತ್, ಅಭಿರಾಮ್, ಕೌಶಿಕ್, ಸುಬ್ರಮಣ್ಯ, ಕೃಷ್ಣಪ್ಪ, ಪ್ರದೀಪ್, ಮಲ್ಲಿಕಾರ್ಜುನ್, ಸಂತೋಷ್, ರಮಾಕಾಂತ್, ನರಸಿಂಹಚಾರ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿತ್ತು. 
    ಉಪತಹಸೀಲ್ದಾರ್ ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್ ಸೇರಿದಂತೆ ವಿವಿಧ ನಗರದ ವಿವಿಧೆಡೆಗಳಿಂದ ಸಾವಿರಾರರು ಭಕ್ತಾಧಿಗಳು ರಥೋತ್ಸವ ಕಣ್ತುಂಬಿಕೊಳ್ಳುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು.  

Wednesday, October 9, 2024

ವಿಶಿಷ್ಟ ವೇಷ ಭೂಷಣಗಳ ನೃತ್ಯ ಸ್ಪರ್ಧೆ : ಡಾ. ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘ ಪ್ರಥಮ ಸ್ಥಾನ

ಭದ್ರಾವತಿಯಲ್ಲಿ ನಾಡ ಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಕನಕ ಮಂಟಪ ಮೈದಾನದಲ್ಲಿ ಜರುಗಿದ ಮಹಿಳಾ ದಸರಾ ಸಾಂಸ್ಕೃತಿಕ ಚಟುವಟಿಕೆ ವಿವಿಧ ವಿಶಿಷ್ಟ ವೇಷ ಭೂಷಣಗಳ ನೃತ್ಯ ಸ್ಪರ್ಧೆಗಳಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘ ಪ್ರಥಮ ಸ್ಥಾನ ಪಡೆದುಕೊಂಡಿದೆ.
    ಭದ್ರಾವತಿ: ನಾಡ ಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಕನಕ ಮಂಟಪ ಮೈದಾನದಲ್ಲಿ ಜರುಗಿದ ಮಹಿಳಾ ದಸರಾ ಸಾಂಸ್ಕೃತಿಕ ಚಟುವಟಿಕೆ ವಿವಿಧ ವಿಶಿಷ್ಟ ವೇಷ ಭೂಷಣಗಳ ನೃತ್ಯ ಸ್ಪರ್ಧೆಗಳಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘ ಪ್ರಥಮ ಸ್ಥಾನ ಪಡೆದುಕೊಂಡಿದೆ.
    ವಿಶಿಷ್ಟ ವೇಷ ಭೂಷಣಗಳ ನೃತ್ಯ ಸ್ಪರ್ಧೆಗಳಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮಹಿಳಾ ಸಂಘ ಎಲ್ಲರ ಗಮನ ಸೆಳೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು.  ಪ್ರಥಮ ಸ್ಥಾನದೊಂದಿಗೆ ೪ ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರ ತನ್ನದಾಗಿಸಿಕೊಂಡಿತು.
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕಂದಾಯಾಧಿಕಾರಿ ಓಂಕಾರಪ್ಪ, ಸಮುದಾಯ ಸಂಘಟನಾಧಿಕಾರಿ ಎಂ. ಸುಹಾಸಿನಿ,ನಿವೃತ್ತ ಪ್ರಾಚಾರ್ಯ ಶಿವಬಸಪ್ಪ, ಉಪನ್ಯಾಸಕಿ ಎಸ್. ಸೃಷ್ಟಿ ಸೇರಿದಂತೆ ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. 

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಉತ್ತಮ ಸೇವೆಗೆ ಸಹಕಾರ ನೀಡಲು ಬದ್ಧ

ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರು ಹಾಗು ಸಿಬ್ಬಂದಿಗಳನ್ನು ನೇಮಕಗೊಳಿಸುವ ಜೊತೆಗೆ ಉತ್ತಮ ಸೇವೆ ಕಲ್ಪಿಸಿಕೊಡಲು ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದ್ದೇನೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು. 
    ಅವರು ಬುಧವಾರ ಸುಮಾರು ೧.೯೫ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಹೊಸ ಕಟ್ಟಡದಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳು, ವೈದ್ಯರು ಹಾಗು ಸಿಬ್ಬಂದಿಗಳು ನೇಮಕಗೊಳಿಸುವಂತೆ ಮನವಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಸೇವೆ ಈ ಆಸ್ಪತ್ರೆಯಿಂದ ಲಭಿಸುವಂತಾಗಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯನ್ನು ತಾಯಿ-ಮಕ್ಕಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಹಾಗು ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. 
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಈ ಅಸ್ಪತ್ರೆ ನೂತನ ಕಟ್ಟಡ ಉದ್ಘಾಟನೆಗೊಳ್ಳಲು ಶಾಸಕರ ಪರಿಶ್ರಮ ಹೆಚ್ಚಿನದ್ದಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ವೈದ್ಯರು ಹಾಗು ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಸದ್ಬಳಕೆ ಮಾಡಿಕೊಳ್ಳಕೊಂಡು ಉತ್ತಮ ಸೇವೆ ನೀಡಬೇಕೆಂದರು. 


    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಈ ಕಟ್ಟಡ ಈ ಹಿಂದೆಯೇ ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಶಾಸಕರ ಶ್ರಮದಿಂದ ಇದೀಗ ಉದ್ಘಾಟನೆಗೊಂಡಿದೆ. ಇದು ಶಾಸಕರು ಬಡ ವರ್ಗದ ಜನರಿಗೆ ನೀಡುತ್ತಿರುವ ಕೊಡುಗೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ಅತಿ ಅವಶ್ಯಕ ಎಂಬುದನ್ನು ಶಾಸಕರು ಸೇರಿದಂತೆ ನಮ್ಮ ಕುಟುಂಬ ವರ್ಗದವರಿಗೆ ತಿಳಿದಿದೆ. ಈ ಹಿನ್ನಲೆಯಲ್ಲಿ ಶಾಸಕರು ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದರು. 
    ಈ ವ್ಯಾಪ್ತಿಯ ನಗರಸಭೆ ಸದಸ್ಯ ಚನ್ನಪ್ಪ ನೂತನ ಕಟ್ಟಡ ನಿರ್ಮಾಣಗೊಳ್ಳಲು ಕಾರಣಕರ್ತರಾದ ಶಾಸಕರು, ಆರೋಗ್ಯ ಸಚಿವರು ಹಾಗು ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. 
    ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಶಶಿಕಲಾ ನಾರಾಯಣಪ್ಪ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಎರೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಂ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪಿ.ಜಿ ವಿಶ್ವನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸ್ವಾಗತಿಸಿದರು. 

Tuesday, October 8, 2024

ವಾಹನ ಅಡ್ಡಗಟ್ಟಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣ

೩ ಆರೋಪಿಗಳಿಗೆ ೭ ವರ್ಷ, ೧ ತಿಂಗಳು ಸಾದಾ ಸೆರೆವಾಸ 

ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ೩ ಆರೋಪಿಗಳು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ೭ ವರ್ಷ ೧ ತಿಂಗಳು ಸಾದಾ ಸೆರೆವಾಸ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. 
    ಶಿವಮೊಗ್ಗ ನಗರದ ನಿವಾಸಿಗಳಾದ ಸಯ್ಯದ್ ಇಬ್ರಾಹಿಂ ಅಲಿಯಾಸ್ ರಹಿಲ್(೨೩), ಮೊಹಮ್ಮದ್ ಮುಸ್ತಫಾ(೨೨) ಮತ್ತು ಮೊಹಮ್ಮದ್ ಅಲ್ಲಾಭಕ್ಷಿ (೨೨) ಶಿಕ್ಷೆಗೊಳಗಾದ ಆರೋಪಿಗಳು. 
    ಅನ್ವರ್ ಕಾಲೋನಿಯ ನಿವಾಸಿ ಮೊಹಮ್ಮದ್ ಖಾಲೀದ್(೨೧) ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ಬೆದರಿಸಿ ನಗದು ಹಣ, ಮೊಬೈಲ್ ಮತ್ತು ವಾಚ್ ಕಿತ್ತು ಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಅಂದಿನ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 
    ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ವಿಚಾರಣೆ ನಡೆಸಿ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ  ಪ್ರಕರಣದ ವಾದ ಮಂಡಿಸಿದ್ದರು. 

ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ : ಅ.೧೨ರಂದು ಸ್ವಾಮಿಯ ರಥೋತ್ಸವ

ವಿಶೇಷ ಅಲಂಕಾರದ ಮೂಲಕ ಶ್ರೀ ಮನ್ನಾರಾಯಣನ ದಶಾವತಾರ ಕಿರು ಪರಿಚಯ 

ಭದ್ರಾವತಿ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅ.೮ರ ಮಂಗಳವಾರದ ವರೆಗೆ ೬ ದಿನಗಳ ಕಾಲ ಸ್ವಾಮಿಗೆ ಕೈಗೊಂಡಿರುವ ವಿಶೇಷ ಅಲಂಕಾರಗಳು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆ, ಮಿಲ್ಟ್ರಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶರನ್ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅ.೧೨ರಂದು ಸ್ವಾಮಿಯ ರಥೋತ್ಸವ ನಡೆಯಲಿದೆ. 
ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮನ್ನಾರಾಯಣನ ದಶಾವತಾರ ಕಿರು ಪರಿಚಯ ಮಾಡುವ ನಿಟ್ಟಿನಲ್ಲಿ ಶ್ರೀನಿವಾಸ ಸ್ವಾಮಿಗೆ ಪ್ರತಿದಿನ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ಭಕ್ತರ ಗಮನ ಸೆಳೆಯಲಾಗುತ್ತಿದೆ. 
   ಬ್ರಹ್ಮದೇವ ಸೃಷ್ಟಿಕರ್ತನಾದರೆ, ವಿಷ್ಣು ಸ್ಥಿತಿಸ್ಥಾಪಕ, ಶಿವ ಲಯಕರ್ತ. ತ್ರಿಮೂರ್ತಿಗಳಲ್ಲಿ ಸ್ಥಿತಿಸ್ಥಾಪಕ ಶ್ರೀಮನ್ನಾರಾಯಣ ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಟರನ್ನು ಸಂರಕ್ಷಿಸುವ ಸಲುವಾಗಿ ಧರೆಯಲ್ಲಿ ಹತ್ತು ಅವತಾರಗಳನ್ನೆತ್ತಿಹನು. ಲೋಕ ಕಲ್ಯಾರ್ಥವಾಗಿ ವಿಷ್ಣು ಎತ್ತಿದ ಈ ಎಲ್ಲಾ ಅವತಾರಗಳ ಹಾಗು ಈ  ಅವತಾರಗಳಿಗೆ ಕಾರಣವಾದ ಜಯ ವಿಜಯದ ಶಾಪ ವೃತ್ತಾಂತದ ಕಿರುಪರಿಚಯ ಮಾಡಲಾಗುತ್ತಿದೆ. 
     ಮೊದಲ ದಿನ ಮತ್ಸ್ಯಾವತಾರ : 
    ಪ್ರಳಯ ಕಾಲದಲ್ಲಿ ಅಪೌರುಷೇಯಗಳಾದ ವೇದಗಳನ್ನು ನಾಶವಾಗದಂತೆ ಸಂರಕ್ಷಿಸುವ ಸಲುವಾಗಿ ಹಾಗು ಪ್ರಳಯದ ನಂತರ ಮಹಾನ್ವೇದಗಳನ್ನು ಋಷಿ ಮುನಿಗಳಿಗೆ ಪುನಃ ನೀಡುವ ಸಲುವಾಗಿ ನಾರಾಯಣನು ಎತ್ತಿದ ಅವತಾರವೇ ಮತ್ಸ್ಯಾವತಾರ. ಮೊದಲ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಎರಡನೇ ದಿನ ಕೂರ್ಮಾವತಾರ :
    ಕೂರ್ಮ ಅರ್ಥಾತ್ ಆಮೆಯ ಅವತಾರವನ್ನು ವಿಷ್ಣು ಎತ್ತಿದ್ದು ಲೋಕ ಕಲ್ಯಾಣಾರ್ಥವಾಗಿಯೇ. ಕಲ್ಪವೃಕ್ಷ, ಕಾಮಧೇನು, ಐರಾವತ, ಅಮೃತವೇ ಮೊದಲಾದ ಅತ್ಯಮೂಲ್ಯಗಳನ್ನು ಪಡೆಯಲು ಮಂದಾರ ಪರ್ವತವನ್ನು ಕಡಗೋಲು ಮಾಡಿ ವಾಸುಕಿ ಎಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಸಮುದ್ರ ಮಂಥನ ಮಾಡುತ್ತಿದ್ದ ಕಾಲದಲ್ಲಿ ಮಂದಾರ ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ವಿಷ್ಣು ಎತ್ತಿದ ಎರೆಡನೇ ಅವತಾರವೇ ಕೂರ್ಮಾವತಾರ. ಎರಡನೇ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಮೂರನೇ ದಿನ ವರಾಹಾವತಾರ : 
  ದಾನವನಾದ ಹಿರಣ್ಯಾಕ್ಷನು ತನ್ನ ಶಕ್ತಿ, ಬಲ, ವರಬಲ, ಗರ್ವದಿಂದ ಭೂದೇವಿಯನ್ನು ಸಮುದ್ರದಲ್ಲಿ ಬಚ್ಚಿಟ್ಟ ಸಂದರ್ಭದಲ್ಲಿ ಭೂದೇವಿಯನ್ನು ರಕ್ಷಿಸುವ ಸಲುವಾಗಿ ಹಾಗು ದುಷ್ಟನಾಗಿದ್ದ ಹಿರಣ್ಯಾಕ್ಷನನ್ನು ಸಂಹರಿಸುವ ಸಲುವಾಗಿ ವಿಷ್ಣು ಎತ್ತಿದ ಅವತಾರವೇ ವರಹಾವಾತಾರ. ಮೂರನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ನಾಲ್ಕನೇ ದಿನ ನರಸಿಂಹಾವತಾರ : 
  ಹಿರಣ್ಯಾಕ್ಷನ ಸೋದರನಾದ ಹಿರಣ್ಯ ಕಶಿಪು ವರಬಲದಿಂದ, ಬುಜಭಲದಿಂದ ನರನನ್ನೂ, ದೇವಾನುದೇವತೆಗಳನ್ನು ಕಾಡಿ, ಮಹಾ ಗರ್ವಿಷ್ಟನಾಗಿ  ಧರ್ಮವನ್ನು ಮರೆತು ದುರಾಚಾರಿಯಾದಾಗ, ಆತನ ಮಗ ಪರಮ ವಿಷ್ಣು ಭಕ್ತನಾದ ಬಾಲ ಪ್ರಹ್ಲಾದನ ಭಕ್ತಿಯ ಕೋರಿಕೆಗೆ ಕಂಬದಿಂದ ಅವತರಿಸಿ ಹಿರಣ್ಯ ಕಶಿಪುವನ್ನು ಸಂಹರಿಸಲು ವಿಷ್ಣು ಎತ್ತಿದ ಅವತಾರವೇ ನರಸಿಂಹಾವತಾರ. ೪ನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಐದನೇ ದಿನ ವಾಮಾನಾವತಾರ : 
ಇಂದ್ರ ಪದವಿಯ ಮೇಲೆ ಕಣ್ಣಿಟ್ಟಿದ್ದ ದಾನ ವಾಸುರನಾದ ಬಲಿಚಕ್ರವರ್ತಿಯಿಂದ ಮೂರು ಅಡಿ ಜಾಗವನ್ನು ದಾನವಾಗಿ ಪಡೆದು ಒಂದು ಅಡಿಯಲ್ಲಿ ಭೂಮಿಯನ್ನು, ಮತ್ತೊಂದು ಅಡಿಯಲ್ಲಿ ಆಕಾಶವನ್ನು ಅಳೆದ ವಾಮನ ಮೂರನೇ ಅಡಿಯನ್ನು ಬಳಿಕ ತಲೆಯ ಮೇಲಿಟ್ಟು ಪಾತಾಳಕ್ಕೆ ತುಳಿದ. ಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರವೇ ವಾಮಾನಾವತಾರ. ಐದನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಆರನೇ ದಿನ ಪರಶುರಾಮವತಾರ : 
ಲೋಕ ಕಂಟಕರಾಗಿ ಮುಗ್ಧ ಜನರ ಮೇಲೆ ದಾಳಿ ಮಾಡುತ್ತಿದ್ದ ಕ್ಷತ್ರಿಯ ಕುಲವನ್ನೇ ನಾಶ ಮಾಡಲು ವಿಷ್ಣು ಎತ್ತಿದ ಅವತಾರವೇ ಪರಶುರಾಮವತಾರ. ಈ ಅವತಾರದಲ್ಲಿ ಪರಶುರಾಮರು ೨೧ ಬಾರಿ ಭೂ ಪ್ರದಕ್ಷಣೆ ಮಾಡಿ ದುಷ್ಠರಾದ ಎಲ್ಲ ಕ್ಷತ್ರಿಯರನ್ನು ಸಂಹರಿಸುವ ಮೂಲಕ ಧರ್ಮ ಸಂಸ್ಥಾಪನೆ ಮಾಡಿದರು. ಆರನೇ ದಿನ ಈ ಅಲಂಕಾರ ಕೈಗೊಳ್ಳಲಾಗಿತ್ತು. 
    ಅ.೧೨ರಂದು ಸ್ವಾಮಿಯ ರಥೋತ್ಸವ : 
    ಶ್ರೀ ಶೀನಿವಾಸ ದೇವರ ರಥೋತ್ಸವ ಅ.೧೨ರ ಮಧ್ಯಾಹ್ನ ೧೨ ಗಂಟೆಗೆ ನಡೆಯಲಿದ್ದು, ಇದಕ್ಕೂ ಮೊದಲು ಕಲಾಹೋಮ ಜರುಗಲಿದೆ. ರಥೋತ್ಸವದ ನಂತರ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ. 

ನಾಡಹಬ್ಬ ದಸರಾ ಕಬಡ್ಡಿ ಪಂದ್ಯಾವಳಿ : ಸೊರಬ ತಂಡ ಪ್ರಥಮ, ಬಿವೈಕೆ ದ್ವಿತೀಯ ಬಹುಮಾನ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸೊರಬ ತಾಲೂಕಿನ ಕಬಡ್ಡಿ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. 
    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸೊರಬ ತಾಲೂಕಿನ ಕಬಡ್ಡಿ ತಂಡ ಮೊದಲ ಬಹುಮಾನ ಪಡೆದುಕೊಂಡಿದೆ. 
    ನಗರದ ಬಿವೈಕೆ ತಂಡ ಎರಡನೇ ಬಹುಮಾನ ಪಡೆದುಕೊಂಡಿದ್ದು, ಮೊದಲನೇ ಬಹುಮಾನ ಪಡೆದುಕೊಂಡ ಸೊರಬ ತಂಡ ೨೦ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ಮತ್ತು ಎರಡನೇ ಬಹುಮಾನ ಪಡೆದ ಬಿವೈಕೆ ತಂಡ ೧೫ ಸಾವಿರ ರು. ನಗದು, ಟ್ರೋಫಿ ಹಾಗು ಪ್ರಶಸ್ತಿ ಪತ್ರ ತಮ್ಮದಾಗಿಸಿಕೊಂಡಿವೆ. ಅತ್ಯುತ್ತಮ ಆಟಗಾರರಾದ ಓಂಪ್ರಕಾಶ್ ಹಾಗೂ ಮಂಜುನಾಯ್ಕ್‌ರವರಿಗೆ ವೈಯಕ್ತಿಕವಾಗಿ ಪ್ರೋತ್ಸಾಹಧನ ನೀಡಲಾಯಿತು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಸದಸ್ಯರು, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಮುಖಂಡರಾದ ಎಸ್. ಕುಮಾರ್, ಬದರಿನಾರಾಯಣ, ಎಸ್.ಎಸ್ ಭೈರಪ್ಪ, ಮೋಹನ್ ಪಳನಿ, ಹಿರಿಯ ಕಬಡ್ಡಿ ಕ್ರೀಡಾಪಟುಗಳಾದ ರಂಗನಾಥ್, ಸಿದ್ದಯ್ಯ ಸೇರಿದಂತೆ ಇನ್ನಿತರರು ಬಹುಮಾನ ವಿತರಿಸಿದರು.