Friday, October 18, 2024

ಎಸ್.ಎಸ್ ಸುಮಿತ್ರ ನಿಧನ

ಎಸ್.ಎಸ್ ಸುಮಿತ್ರ
    ಭದ್ರಾವತಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ಅಧ್ಯಕ್ಷೆ, ಸಾಹಿತಿ, ನಿವೃತ್ತ ಉಪನ್ಯಾಸಕಿ ಎಮೆರಿಟಸ್ ಡಾ. ವಿಜಯದೇವಿಯವರ ಅತ್ತಿಗೆ  ಎಸ್.ಎಸ್ ಸುಮಿತ್ರ(೭೨) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. 
       ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದರು. ಸುಮಿತ್ರಮ್ಮ ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಎಸ್.ಜಿ ಶಿವಶಂಕರಯ್ಯ ಅಂಡ್ ಸನ್ಸ್  ಪೆಟ್ರೋಲ್ ಬಂಕ್ ಮಾಲೀಕ ದಿವಂಗತ ಎಸ್.ಎಸ್ ಶಿವಾನಂದ್‌ರವರ ಪತ್ನಿಯಾಗಿದ್ದಾರೆ. ಹಳೇನಗರದ ಎಸ್.ಎಸ್.ಕೆ ಬಡಾವಣೆಯಲ್ಲಿ ವಾಸವಾಗಿದ್ದರು.  
    ಇವರ ಅಂತ್ಯಕ್ರಿಯೆ ಸಂಜೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಸುಮಿತ್ರಮ್ಮನವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಎಸ್.ಎಸ್ ಕುಮಾರಸ್ವಾಮಿ ಹಾಗು ಸಹೋದರರು ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅನ್ನಸಂತರ್ಪಣೆ

ಭದ್ರಾವತಿ ನಗರಸಭೆ ವ್ಯಾಪ್ತಿ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ  ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಗಣ ಹೋಮ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಭದ್ರಾವತಿ : ನಗರಸಭೆ ವ್ಯಾಪ್ತಿ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ  ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಗಣ ಹೋಮ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 
    ಈ ಬಾರಿ ವಿಶೇಷವಾಗಿ ಅಡುಗೆ ಭಟ್ಟನಾಗಿ ಅಡುಗೆ ತಯಾರಿಯಲ್ಲಿ ತೊಡಗಿರುವ ಗಣಪ ಹಾಗು ಸಹಾಯಕನಾಗಿರುವ ಮೂಷಿಕ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷದಂತೆ ಈ ಬಾರಿ ಸಹ ಬೆಳಿಗ್ಗೆ ಗಣ ಹೋಮ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ಜರುಗಿತು. 
    ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ನಗರಸಭೆ ಸದಸ್ಯೆ ಜನಶೀಲ ಸುರೇಶ್, ಸೇರಿದಂತೆ ಸುರಗಿತೋಪು ಹಾಗು ಸುತ್ತಮುತ್ತಲ ಪ್ರದೇಶಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 

ಇಸ್ಪೀಟ್ ಅಡ್ಡೆ ಮೇಲೆ ದಾಳಿ : ಪ್ರಕರಣ ದಾಖಲು

ಭದ್ರಾವತಿ: ತಾಲೂಕಿನ ಅತ್ತಿಗುಂದ ಚಾನಲ್ ಏರಿಯಾ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. 
ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಅತ್ತಿಗುಂದ ಚಾನಲ್ ಏರಿಯಾ ಹತ್ತಿರ ಪರಿಶೀಲನೆ ನಡೆಸಿದಾಗ ಚಂದ್ರಶೇಖರ್, ಮಂಜುನಾಥ ಸೇರಿದಂತೆ ೩-೪ ಜನರು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

Thursday, October 17, 2024

ಪ್ರಗತಿಪರ ರೈತ ಶ್ರೀಧರ್ ಜಮೀನಿನಲ್ಲಿ ಭೂಮಿ ಹುಣ್ಣಿಮೆ ಆಚರಣೆ

ಮಲೆನಾಡಿನ ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ಭದ್ರಾವತಿ ತಾಲೂಕಿನಾದ್ಯಂತ ಕೆಲವು ರೈತ ಕುಟುಂಬಗಳು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿವೆ. ಪ್ರಗತಿಪರ ರೈತ, ಭಂಡಾರ ಹಳ್ಳಿ ನಿವಾಸಿ ಶ್ರೀಧರ್‌ರವರು ತಮ್ಮ ಜಮೀನಿನಲ್ಲಿ ಗುರುವಾರ ಭೂಮಿ ಹುಣ್ಣಿಮೆ ಆಚರಿಸಿದರು. 
    ಭದ್ರಾವತಿ: ಮಲೆನಾಡಿನ ರೈತರ ನೆಚ್ಚಿನ ಹಬ್ಬ ಭೂಮಿ ಹುಣ್ಣಿಮೆ ತಾಲೂಕಿನಾದ್ಯಂತ ಕೆಲವು ರೈತ ಕುಟುಂಬಗಳು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿವೆ. ಪ್ರಗತಿಪರ ರೈತ, ಭಂಡಾರ ಹಳ್ಳಿ ನಿವಾಸಿ ಶ್ರೀಧರ್‌ರವರು ತಮ್ಮ ಜಮೀನಿನಲ್ಲಿ ಗುರುವಾರ ಭೂಮಿ ಹುಣ್ಣಿಮೆ ಆಚರಿಸಿದರು. 
    ಶ್ರೀಧರ್‌ರವರು ಭಂಡಾರಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಅಸಾಧಾರಣ ಸಾಧನೆಗಳನ್ನು ಮಾಡಿದ್ದು, ಇವರ ಸಾಧನೆಗೆ ಹಲವಾರು ಪ್ರಶಸ್ತಿ, ಬಿರುದುಗಳು ಸಂದಿವೆ. 
    ಈ ಬಾರಿ ಭೂಮಿ ಹುಣ್ಣಿಮೆ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಸಮಿತಿ ಅಧ್ಯಕ್ಷೆ, ಸಾಹಿತಿ, ನಿವೃತ್ತ ಉಪನ್ಯಾಸಕಿ ಎಮೆರಿಟಸ್ ಡಾ. ವಿಜಯದೇವಿ ಹಾಗು ಕನ್ನಡ ಸಾಹಿತ್ಯ, ಸಾಂಸ್ಕೃತಿ ವೇದಿಕೆ ತಾಲೂಕು ಅಧ್ಯಕ್ಷ, ಬಗರ್ ಹುಕುಂ ಸಮಿತಿ ಸದಸ್ಯೆ ಎಂ.ಎಸ್ ಸುಧಾಮಣಿ ಪಾಲ್ಗೊಂಡು ಹಬ್ಬದ ಸಂಭ್ರಮ ಹಂಚಿಕೊಂಡರು. ಪ್ರಗತಿಪರ ರೈತ ಶ್ರೀಧರ್ ಕುಟುಂಬ ವರ್ಗದವರು ಉಪಸ್ಥಿತರಿದ್ದರು. 

ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅನ್ನಸಂತರ್ಪಣೆ


    ಭದ್ರಾವತಿ : ನಗರಸಭೆ ವ್ಯಾಪ್ತಿ ಸುರಗಿತೋಪು ೪ನೇ ತಿರುವಿನ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಯುವಕರ ಸಂಘದ ವತಿಯಿಂದ  ಶ್ರೀ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅ.೧೮ರಂದು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. 
    ಈ ಬಾರಿ ವಿಶೇಷವಾಗಿ ಅಡುಗೆ ಭಟ್ಟನಾಗಿ ಅಡುಗೆ ತಯಾರಿಯಲ್ಲಿ ತೊಡಗಿರುವ ಗಣಪ ಹಾಗು ಸಹಾಯಕನಾಗಿರುವ ಮೂಷಿಕ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷದಂತೆ ಈ ಬಾರಿ ಸಹ ಬೆಳಿಗ್ಗೆ ಗಣ ಹೋಮ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ನಿವೃತ್ತ ಉಪ ವ್ಯವಸ್ಥಾಪಕ ಪದ್ಮನಾಭ ಗೊಲ್ಲ ನಿಧನ

ಪದ್ಮನಾಭ ಗೊಲ್ಲ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಉಪ ವ್ಯವಸ್ಥಾಪಕ ಪದ್ಮನಾಭ ಗೊಲ್ಲ(೮೨) ಬುಧವಾರ ನಿಧನ ಹೊಂದಿದರು.
    ಇವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಪದ್ಮನಾಭರವರು ವಿಐಎಸ್‌ಎಲ್ ಕಾರ್ಖಾನೆಯ ಅನಿಲ ಮತ್ತು ಇಂಧನ ಇಲಾಖೆಯಲ್ಲಿ ಉಪ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಜೋಗದಲ್ಲಿ ನಡೆಯಿತು. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ. 

ಮಹರ್ಷಿ ವಾಲ್ಮೀಕಿ ಎಂದಿಗೂ ಅವಿಸ್ಮರಣೀಯ : ಫೈಜ್ ನಟರಾಜ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ  ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ಭದ್ರಾವತಿ: ಮಾನವ ಸಮಾಜಕ್ಕೆ ಎಂದಿಗೂ ಅಗತ್ಯವಿರುವ ಶ್ರೀ ರಾಮಾಯಣ ಮಾಹಾಗ್ರಂಥ ನೀಡಿರುವ ಮಹರ್ಷಿ ವಾಲ್ಮೀಕಿ ಎಂದಿಗೂ ಅವಿಸ್ಮರಣೀಯ. ಅವರ ಆದರ್ಶ ಮೌಲ್ಯಗಳನ್ನು ನಾವುಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಚಳ್ಳಕೆರೆ, ತಳುಕು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಫೈಜ್ ನಟರಾಜ್ ಹೇಳಿದರು. 
    ಅವರು ಗುರುವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಹಾಗು ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ವತಿಯಿಂದ  ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. 
    ಈ ಮಾನವ ಸಮಾಜಕ್ಕೆ ಒಂದು ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ನೀಡಿದ ಸಮಾಜ ವಾಲ್ಮೀಕಿ ಸಮಾಜವಾಗಿದ್ದು, ಪ್ರತಿಯೊಬ್ಬರ ನಡುವಿನ ಭಾವನೆಗಳು, ಮೌಲ್ಯಗಳು, ಸಂಘರ್ಷಗಳಿಗೆ ರಾಮಾಯಣ ಸೂಕ್ತ ಉತ್ತರವಾಗಿದೆ. ಈ ಹಿನ್ನಲೆಯಲ್ಲಿ ಭೂತ ಕಾಲ, ವರ್ತಮಾನ ಹಾಗು ಭವಿಷ್ಯಕ್ಕೂ ರಾಮಾಯಣ ಪ್ರಸ್ತುತವಾಗಿದೆ. ರಾಮಾಯಣ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಸಮಾಜ ಇನ್ನೂ ಹೆಚ್ಚು ಸಂಘಟಿತಗೊಳ್ಳಬೇಕಾಗಿದೆ. ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಳಂಬವಾಗುತ್ತಿದ್ದು, ಶಾಸಕರು ನೆನೆಗುದಿಗೆ ಬಿದ್ದಿರುವ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಿ ಸಮುದಾಯ ಭವನ ಉದ್ಘಾಟಿಸುವ ವಿಶ್ವಾಸವಿದೆ ಎಂದರು. 
    ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್,  ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ್ ಬಿ. ಆನೇಕೊಪ್ಪ, ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ  ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ,   ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸವಿತ, ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್, ಸರ್ವಮಂಗಳ ಭೈರಪ್ಪ, ಟಿಪ್ಪು ಸುಲ್ತಾನ್, ಮಂಜುಳ ಸುಬ್ಬಣ್ಣ, ಪರ್ವೇಜ್, ಸೂಡ ಸದಸ್ಯ  ಎಚ್. ರವಿಕುಮಾರ್, ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಶಿವಾನಂದ, ಪ್ರಮುಖರಾದ ರಾಜೇಂದ್ರ, ಈಶ್ವರಪ್ಪ, ವಿ. ವಿನೋದ್, ವೆಂಕಟೇಶ್  ಉಜ್ಜನಿಪುರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
    ಇದಕ್ಕೂ ಬಿ.ಎಚ್ ರಸ್ತೆ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಹಾಗು ಡೊಳ್ಳು ಕುಣಿತ, ವೀರಗಾಸೆ ಕಲಾ ತಂಡಗಳೊಂದಿಗೆ ಉತ್ಸವ ಮೆರವಣಿಗೆ ನಡೆಸಲಾಯಿತು. ಕರ್ನಾಟಕ ಗ್ರಾಮೀಣಿ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮೆರವಣಿಗೆಗೆ ಚಾಲನೆನೀಡಿದರು. ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಮೆರವಣಿಗೆ ಸಭಾ ಭವನ ತಲುಪಿತು.