Tuesday, October 22, 2024

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಬಹುತೇಕ ಕ್ಷೇತ್ರಗಳಿಂದ ಅವಿರೋಧ ಆಯ್ಕೆ

ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ನಡುವೆ ಪೈಪೋಟಿ : ಅ.೨೮ರಂದು ಮತದಾನ 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಛೇರಿ. 
    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಕೆಲವು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
    ಕೃಷಿ ಇಲಾಖೆ ಮತಕ್ಷೇತ್ರದಿಂದ ದೇವೇಂದ್ರಪ್ಪ ಕಡ್ಲೇರ, ಪಶುಪಾಲನಾ ಮತ್ತು ವೈದ್ಯ ಸೇವಾ ಇಲಾಖೆ ಮತಕ್ಷೇತ್ರದಿಂದ ಡಾ.ಸಿ.ಬಿ ರಮೇಶ್, ಕಂದಾಯ ಇಲಾಖೆ ಮತಕ್ಷೇತ್ರದಿಂದ ಕೆ.ಆರ್ ಪ್ರಶಾಂತ್ ಮತ್ತು ರವಿಕುಮಾರ್, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಹಾಗು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮತಕ್ಷೇತ್ರದಿಂದ ಎ. ಲಲಿತಾ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಪಿಎಂಜಿಎಸ್.ವೈ ಯೋಜನೆ ಹಾಗು ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲೀಕರಣ ಇಲಾಖೆ ಮತಕ್ಷೇತ್ರದಿಂದ ಜಾನ್ ನಿರ್ಮಲ್ ಮತ್ತು ಬಿ.ಎಚ್ ಕೃಷ್ಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಛೇರಿ ಮತಕ್ಷೇತ್ರದಿಂದ ಸಿ.ಎ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗು ಅಲ್ಪಸಂಖ್ಯಾತರ ಇಲಾಖೆ ಮತಕ್ಷೇತ್ರದಿಂದ ಆರ್. ಅಶೋಕ್‌ರಾವ್, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಮತಕ್ಷೇತ್ರದಿಂದ ಎಚ್.ಎಸ್ ರಾಮಕೃಷ್ಣ, ಖಜಾನೆ ಇಲಾಖೆ ಮತಕ್ಷೇತ್ರದಿಂದ ಎ.ಸಿ ಮಮತ, ನ್ಯಾಯಾಂಗ ಇಲಾಖೆಯಿಂದ ಕೆ. ಮುರಳಿಧರ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಜಿ. ಲಕ್ಷ್ಮೀಕಾಂತ ಮತ್ತು ಸಿ. ವೆಂಕಟೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತಕ್ಷೇತ್ರದಿಂದ ಡಿ. ನಾಗರತ್ನ, ಮೀನುಗಾರಿಕೆ, ತೂಕ ಮತ್ತು ಅಳತೆ ಇಲಾಖೆ ಹಾಗು ಸಾರಿಗೆ ಇಲಾಖೆ ಮತಕ್ಷೇತ್ರದಿಂದ ಬಿ.ಕೆ ನಾರಾಯಣ ಮೂರ್ತಿ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಮತಕ್ಷೇತ್ರದಿಂದ ಆರ್. ಜನಾರ್ಧನ, ಅಬಕಾರಿ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಮತಕ್ಷೇತ್ರದಿಂದ ಸುನಿಲ್ ಕಲ್ಲೂರ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಹಾಗು ಸಾಂಖ್ಯಿಕ ಇಲಾಖೆ ಮತಕ್ಷೇತ್ರದಿಂದ ಎಂ. ಮಾಲತಿ ಹಾಗು ಗ್ರಂಥಾಲಯ ಇಲಾಖೆ ಹಾಗು ಕಾರ್ಮಿಕ ಇಲಾಖೆ ಮತಕ್ಷೇತ್ರದಿಂದ ರಾಜ್‌ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಉಳಿದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳು ಮತಕ್ಷೇತ್ರದ ಒಟ್ಟು ೩ ಸ್ಥಾನಗಳಿಗೆ ಜೇನಮ್ಮ, ಎಸ್. ನಾಗರತ್ನಮ್ಮ, ಯು. ಮಹಾದೇವಪ್ಪ, ಮುಕ್ತಿಯಾರ್ ಅಹಮದ್, ಎಸ್.ಕೆ ಮೋಹನ್, ರಮೇಶ್ ನಾಯ್ಕ, ಎ. ರಂಗನಾಥ, ವೈ.ಎನ್ ಶಶಿಧರಗೌಡ ಮತ್ತು ಎಚ್.ಎಸ್ ಸುಮಾ, ಸರ್ಕಾರಿ ಪ್ರೌಢಶಾಲೆ ಮತ ಕ್ಷೇತ್ರದ ೧ ಸ್ಥಾನಕ್ಕೆ ವಿ. ಮೋತಿನಾಯ್ಕ, ಜಿ. ಶಿವಾನಾಯ್ಕ ಮತ್ತು ಬಿ. ಸಿದ್ದಬಸಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜುಗಳು ಮತ್ತು ಪದವಿ ಕಾಲೇಜುಗಳು ಮತಕ್ಷೇತ್ರದ ೧ ಸ್ಥಾನಕ್ಕೆ ಬಿ. ಚನ್ನಯ್ಯ, ಎಸ್. ಚಂದ್ರಶೇಖರಪ್ಪ, ಎಂ.ಆರ್ ತಿಪ್ಪೇಸ್ವಾಮಿ ಮತ್ತು ಎಂ. ವೆಂಕಟೇಶ್, ಅರಣ್ಯ ಇಲಾಖೆ ಮತಕ್ಷೇತ್ರದ ೧ ಸ್ಥಾನ ಸ್ಥಾನಕ್ಕೆ ಕಾಂತೇಶ್ ನಾಯ್ಕ ಮತ್ತು ಡಿ. ವೆಂಕಟೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತಕ್ಷೇತ್ರದ ಒಟ್ಟು ೪ ಸ್ಥಾನಗಳಿಗೆ ಉಮೇಶಪ್ಪ, ಡಾ.ಎಚ್.ಎಸ್ ಗಿರೀಶ್, ಎಚ್.ಎಂ ನಾಗರಾಜಪ್ಪ, ಪದ್ಮರಾಜ ಶೆಟ್ಟಿ, ಕೆ. ರಮೇಶ್, ಆರ್. ರೀನಾ ಮತ್ತು ಶ್ರೀನಿವಾಸ್ ಎಚ್. ಬಾಗೋಡಿ, ಎಂ.ಎಚ್ ಹರೀಶ್, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗು ಸಬಲೀಕರಣ ಮತ್ತು ಮುದ್ರಾಂಕಗಳ ಇಲಾಖೆ  ಮತಕ್ಷೇತ್ರದ ೧ ಸ್ಥಾನಕ್ಕೆ ಸಿ.ಎನ್ ಮಮತ, ಎಚ್.ಎಲ್ ಮಂಜಾನಾಯ್ಕ ಮತ್ತು ಎನ್. ವಿನಯ್, ತಾಂತ್ರಿಕ ಶಿಕ್ಷಣ ಇಲಾಖೆ(ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಕಿರಿಯ ತಾಂತ್ರಿಕ ಶಾಲೆ) ಮತಕ್ಷೇತ್ರದ ೧ ಸ್ಥಾನಕ್ಕೆ ತಮ್ಮಣ್ಣ, ಟಿ. ತಿಮ್ಮಪ್ಪ ಮತ್ತು ಎಂ.ಎನ್ ಬಸವರಾಜು ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಮತಕ್ಷೇತ್ರದ ೧ ಸ್ಥಾನಕ್ಕೆ ಎಸ್.ಎನ್ ಚಂದ್ರಶೇಖರ್ ಮತ್ತು ಎಂ. ಪುಟ್ಟಲಿಂಗಮೂರ್ತಿ ಸ್ಪರ್ಧಿಸಿದ್ದಾರೆ. ಅ.೨೮ರಂದು ಮತದಾನ ನಡೆಯಲಿದ್ದು, ಇದೆ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣಾಧಿಕಾರಿಯಾಗಿರುವ ನಿವೃತ್ತ ಉಪತಹಸೀಲ್ದಾರ್ ಎಸ್. ಮೈಲಾರಯ್ಯ ತಿಳಿಸಿದ್ದಾರೆ. 

ಇಆರ್‌ವಿ ಅಧಿಕಾರಿಗಳಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆ ರಕ್ಷಣೆ

    ಭದ್ರಾವತಿ : ನಗರದ ಹೊಸಸೇತುವೆ ಬಳಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆಯೊಬ್ಬರನ್ನು ಇಆರ್‌ವಿ ಅಧಿಕಾರಿಗಳು ರಕ್ಷಿಸಿರುವ ಘಟನೆ ೨ ದಿನಗಳ ಹಿಂದೆ ನಡೆದಿದೆ. 
    ಹೊಸಸೇತುವೆ ಬಳಿ ವೃದ್ಧ ಮಹಿಳೆಯೊಬ್ಬರು ಭದ್ರಾ ನದಿಯಲ್ಲಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಇಆರ್‌ವಿ ಅಧಿಕಾರಿಗಳಾದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಬಿನೇಶ್ ಹಾಗು ಶಿವಮೊಗ್ಗ ಡಿಎಆರ್ ಸಿಬ್ಬಂದಿ ಚಾಲಕ ಶಿವಶರಣರವರು ಸ್ಥಳೀಯರ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಯತ್ನಿಸಲು ಕಾರಣ ತಿಳಿದು ಸಮಾಧಾನಪಡಿಸಿ ಕರೆ ತಂದಿದ್ದಾರೆ. ಬಿನೇಶ್ ಹಾಗು ಶಿವಶರಣರವರ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಶಂಸಿಸಿದೆ. 
 

ಭದ್ರಾವತಿ ನಗರದ ಹೊಸಸೇತುವೆ ಬಳಿ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ಮಹಿಳೆಯೊಬ್ಬರನ್ನು ಇಆರ್‌ವಿ ಅಧಿಕಾರಿಗಳು ರಕ್ಷಿಸಿರುವ ಘಟನೆ ೨ ದಿನಗಳ ಹಿಂದೆ ನಡೆದಿದೆ. 

Monday, October 21, 2024

ಬೊಮ್ಮನಕಟ್ಟೆಯಲ್ಲಿ ಓ.ಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು


    ಭದ್ರಾವತಿ : ಮಸೀದಿಯೊಂದರ ಮುಂದಿನ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ. 
    ಪೇಪರ್‌ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ಎಸ್.ಎಲ್ ಭರತ್ ಅ.೨೦ರಂದು ಗಸ್ತು ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಬೊಮ್ಮನಕಟ್ಟೆ ಕೂಬಾ ಮಸೀದಿ ಮುಂದಿನ ರಸ್ತೆಯಲ್ಲಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಓ.ಸಿ, ಮಟ್ಕಾ ಜೂಜಾಟ : ಪ್ರಕರಣ ದಾಖಲು



ಭದ್ರಾವತಿ : ರಸ್ತೆ ಪಕ್ಕದಲ್ಲಿ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿ ಪ್ರವೀಣ್‌ರವರು ಅ.೧೯ರಂದು ಗಸ್ತು ಕರ್ತವ್ಯದಲ್ಲಿದ್ದಾಗ ಸಂಜೆ ಖಚಿತ ಮಾಹಿತಿ ಮೇರೆಗೆ ನಗರದ ಗುಂಡಪ್ಪ ಶೆಡ್ ರಸ್ತೆ ಪಕ್ಕದಲ್ಲಿ ಪರಿಶೀಲನೆ ನಡೆಸಿದಾಗ ವ್ಯಕ್ತಿಯೋರ್ವ ಓ.ಸಿ, ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮಾದಕ ವಸ್ತು ಗಾಂಜಾ ಸೇವನೆ : ಪ್ರಕರಣ ದಾಖಲು

    

    ಭದ್ರಾವತಿ : ಹೊಸಮನೆ ಸಂತೆ ಮೈದಾನ ಏರಿಯಾದಲ್ಲಿ ಮಾದಕ ವಸ್ತು ಸೇವನೆ ಮಾಡಿ ಅಮಲಿನಿಂದ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಸಿಬ್ಬಂದಿ ಹಣಮಂತ ಅಮಾತಿ ಅ.೧೯ರಂದು ಗಸ್ತು ಕರ್ತವ್ಯದಲ್ಲಿದ್ದಾಗ ವ್ಯಕ್ತಿಯೋರ್ವ ಅಮಲಿನಿಂದ ವರ್ತಿಸುತ್ತಿರುವುದು ಕಂಡು ಬಂದಿದ್ದು, ಈತ ಸಾರ್ವಜನಿಕರಿಗೆ ತೊಂದರೆ ನೀಡಬಹುದೆಂಬ ಅನುಮಾನದ ಮೇರೆಗೆ ವಶಕ್ಕೆ ಪಡೆದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಲಾಗಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಮಾಜ ಸೇವಾ ಕಾರ್ಯ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ

ಆರ್‌ಎಸ್‌ಎಸ್ ಮೂಲ ಉದ್ದೇಶ : ಅರಳಿಹಳ್ಳಿ ಪ್ರಕಾಶ್ 


ಭದ್ರಾವತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ವತಿಯಿಂದ ವಿಜಯ ದಶಮಿ ಅಂಗವಾಗಿ ಪಥ ಸಂಚಲನ ನಡೆಯಿತು. 
    ಭದ್ರಾವತಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಪ್ರಾರಂಭವಾದ ಅಂದಿನಿಂದ ಇಂದಿನವರೆಗೆ ಅನೇಕ ರೀತಿಯ ಹಲವಾರು ಸವಾಲು, ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿಕೊಂಡು ತನ್ನ ಸೇವಾ ಕಾರ್ಯದ ಮೂಲಕ ನಿರಂತರವಾಗಿ ವಿಸ್ತರಿಸಿ ಬೆಳೆದುಕೊಂಡು ಬಂದಿದೆ ಎಂದು ಸಂಘದ ವಿಭಾಗ ಶಾರೀರಿಕ್ ಪ್ರಮುಖ್ ಅರಳಿಹಳ್ಳಿ ಪ್ರಕಾಶ್ ಹೇಳಿದರು.
    ಅವರು ವಿಜಯ ದಶಮಿ ಅಂಗವಾಗಿ ನಗರದಲ್ಲಿ ಏರ್ಪಡಿಸಲಾಗಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡು ನಂತರ ಹಳೇನಗರದ ಶ್ರೀ ವೀರಶೈವ ಸಭಾ ಭವನದಲ್ಲಿ ಜರುಗಿದ ಸಂಘದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  
    ಸಂಘದ ಮೂಲ ಉದ್ದೆಶ ಸಮಾಜ ಸೇವಾ ಕಾರ್ಯ. ಅದಕ್ಕಾಗಿ ಶಾಖೆಯ ಮೂಲಕ ವ್ಯಕ್ತಿ ನಿರ್ಮಾಣ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯವನ್ನು ಮಾಡುತ್ತಿದೆ. ವ್ಯಕ್ತಿ ಉತ್ತಮ ವ್ಯಕ್ತಿಯಾದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಉತ್ತಮ ವ್ಯಕ್ತಿಗಳನ್ನು ಸಮಾಜದಲ್ಲಿ ತಯಾರು ಮಾಡುತ್ತಿದೆ ಎಂದರು.
    ಸಂಘವು ಪ್ರಾರಂಭ ಆದ ಅಂದಿನಿಂದ ಇಂದಿನವರೆಗೆ ಸಮಾಜದ ಯಾವ ಕ್ಷೇತ್ರವನ್ನೂ ಬಿಡದೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸೇವಾ ಚಟುವಟಿಕೆ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ದೇಶಕ್ಕೆ ಸಂಕಷ್ಟ ಎದುರಾದಾಗ ಸಂಘವು ದೇಶದ ಬೆನ್ನೆಲುಬಾಗಿ ನಿಂತಿದೆ. ಅದು ಯಾವುದೇ ರೀತಿಯದ್ದಾಗಿರಬಹುದು ಪ್ರಕೃತಿವಿಕೋಪ, ನೆರೆಹಾವಳಿ, ಬರ, ಯುದ್ಧ ಸನ್ನಿವೇಶ ಇತ್ಯಾದಿಗಳು. ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಿರುವುದನ್ನು ಸ್ಮರಿಸಿದರು.
    ಸಮಾಜದಲ್ಲಿ ಐದು ಪರಿವರ್ತನೆಗಳನ್ನು ತರಲು ಸಂಘ ಉದ್ದೇಶಿಸಿ ಅದರಂತೆ ಕಾರ್ಯೋನ್ಮುಖವಾಗುತ್ತಿದೆ. ಜಾತಿ ಮನೆಗಳು ಹೋಗಿ ಹಿಂದೂ ಮನೆಗಳಾಗಬೇಕು. ಎಲ್ಲ್ಲರ ಜೊತೆ ಸಮಾಜದಲ್ಲಿ ಸಾಮರಸ್ಯ ನಿರ್ಮಾಣ ಮಾಡಬೇಕು. ಸ್ವದೇಶಿ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಹಾಗು ಅದನ್ನು ಅನುಷ್ಟಾನಕ್ಕೆ ತರಬೇಕು. ನಾಗರೀಕ ಶಿಷ್ಟಾಚಾರದೊಂದಿಗೆ ಸಂವಿಧಾನದ ನಿಯಮದಂತೆ ನಡೆದುಕೊಳ್ಳಬೇಕು. ಸಂಘದ ಕಾರ್ಯ ಚಟುವಟಿಕೆಗಳನ್ನು ಹಂತ ಹಂತವಾಗಿ ಹೆಚ್ಚುತ್ತಾ ವಿಸ್ತರಿಸಬೇಕು. ಅದಕ್ಕೆ ತಕ್ಕುದಾಗಿ ಸ್ವಯಂ ಸೇವಕರನ್ನು ತಯಾರು ಮಾಡಿ ಅವರ ಮೂಲಕ ಸಮಾಜದಲ್ಲಿ ನಾವು ಬಯಸಿದ ಬದಲಾವಣೆಯನ್ನು ತರಬೇಕು. ಇದು ಪ್ರತಿಯೊಬ್ಬ ಸ್ವಯಂ ಸೇವಕರ ಜವಾಬ್ದಾರಿ ಕರ್ತವ್ಯವಾಗಿದೆ ಎಂದರು. ನಗರ ಸಂಘ ಚಾಲಕ್ ಬಿ.ಎಚ್ ಶಿವಕುಮಾರ್ ಉಪಸ್ಥಿತಿರಿದ್ದರು.
    ಇದಕ್ಕೂ ಮೊದಲು ಹಳೇನಗರದ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆಕರ್ಷಕ ಗಣವೇಶಧಾರಿ ಸ್ವಯಂ ಸೇವಕರ ಪಥ ಸಂಚಲನ ಆರಂಭಗೊಂಡು ತಾಲೂಕು ಕಚೇರಿ ರಸ್ತೆ, ರಂಗಪ್ಪ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ,  ಮಾಧವಾಚಾರ್ ವೃತ್ತ, ಎನ್‌ಎಸ್‌ಟಿ ರಸ್ತೆ, ವಾಸವಿ ಮಹಲ್ ರಸ್ತೆ, ಬಸವೇಶ್ವರ ವೃತ್ತ, ಕುಂಬಾರರ ಬೀದಿ, ಉಪ್ಪಾರ ಬೀದಿ, ಶ್ರೀ ಹಳದಮ್ಮ ದೇವಿ ಬೀದಿ, ನಂತರ ಹೊಸ ಸೇತುವೆ ರಸ್ತೆಯಲ್ಲಿ ಸಾಗಿ ಕಂಚಿನ ಬಾಗಿಲು ವೃತ್ತದ ಮೂಲಕ ಶ್ರೀ ವೀರಶೈವ ಸಭಾಭವನ ತಲುಪಿತು. 

ಶ್ರೀ ಅಂಗಾಳ ಪರಮೇಶ್ವರಿ, ಮುನೇಶ್ವರ ಸ್ವಾಮಿ ವಿಗ್ರಹಗಳ ಪ್ರತಿಷ್ಠಾಪನೆ

ಭದ್ರಾವತಿ ನಗರದ ಜನ್ನಾಪುರ ಗಣೇಶ್ ಕಾಲೋನಿ, ಹಾಲಪ್ಪ ಶೆಡ್‌ನಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಸೋಮವಾರ ವಿಜೃಂಭಣೆಯಿಂದ ಜರುಗಿತು.  
    ಭದ್ರಾವತಿ: ನಗರದ ಜನ್ನಾಪುರ ಗಣೇಶ್ ಕಾಲೋನಿ, ಹಾಲಪ್ಪ ಶೆಡ್‌ನಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಸೋಮವಾರ ವಿಜೃಂಭಣೆಯಿಂದ ಜರುಗಿತು.  
ಬೆಳಗಿನ ಜಾವ ಗಣಹೋಮ, ಆದಿವಾಸಿ ಹೋಮ, ಕಲಾ ಹೋಮ ನಡೆಯಲಿದ್ದು, ನಂತರ ಮಲ್ಲೇಶ್ವರ ಸಭಾಭವನ ಪಕ್ಕದ ಶ್ರೀ ಈಶ್ವರ ದೇವಾಲಯದಿಂದ ಗಂಗೆ ಪೂಜೆಯನ್ನು ೧೦೧ ಗಂಗೆ ತುಂಬಿದ ಕಲಶಗಳನ್ನು ಹೊತ್ತು ತಂದು ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ನಂತರ ಕಲಶದ ನೀರಿನಿಂದ ಅಭಿಷೇಕ ನಡೆಸಲಾಯಿತು.  ಅಮ್ಮನವರಿಗೂ ಹಾಗು ಮುನೇಶ್ವರ ಸ್ವಾಮಿಯವರಿಗೂ ಅಲಂಕಾರ ಮಾಡಿ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ದೇವಾಲಯ ಲೋಕಾರ್ಪಣೆಗೊಳಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. 
ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಅರ್ಪಣೆ :
ವಿಗ್ರಹ ಪ್ರತಿಷ್ಠಾಪನೆ ನಂತರ ಬೃಹತ್ ಹೂವಿನ ಹಾರ ವ್ಯಾದಗಳೊಂದಿಗೆ ಕ್ರೇನ್ ಮೂಲಕ ಮೆರವಣಿಗೆಯಲ್ಲಿ ತಂದು ಅಮ್ಮನವರಿಗೆ ಮತ್ತು ಮುನೇಶ್ವರ ಸ್ವಾಮಿಯವರಿಗೆ ಅರ್ಪಿಸಲಾಯಿತು. ಮೆರವಣಿಗೆಯಲ್ಲಿ ವಯೋವೃದ್ಧರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು ಕುಣಿದು ಸಂಭ್ರಮಿಸಿದರು. 
ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನದ ಪ್ರಮುಖರಾದ ಅಧ್ಯಕ್ಷ ವಿಕಾಸ್ ರಾಜ್, ಖಜಾಂಚಿ ಮೋಹನ್ ಕುಮಾರ್, ಕಾರ್ಯದರ್ಶಿ ಆಕಾಶ್, ಸಾಗರ್, ಕೇಶವ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಜನ್ನಾಪುರ, ಗಣೇಶ್ ಕಾಲೋನಿ, ಹಾಲಪ್ಪ ಶೆಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.  
 

ಭದ್ರಾವತಿ ನಗರದ ಜನ್ನಾಪುರ ಗಣೇಶ್ ಕಾಲೋನಿ, ಹಾಲಪ್ಪ ಶೆಡ್‌ನಲ್ಲಿ ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಅಮ್ಮನವರ ಹಾಗು ಮುನೇಶ್ವರ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಸೋಮವಾರ ವಿಜೃಂಭಣೆಯಿಂದ ಜರುಗಿತು.  ವಿಗ್ರಹ ಪ್ರತಿಷ್ಠಾಪನೆ ನಂತರ ಬೃಹತ್ ಹೂವಿನ ಹಾರ ವ್ಯಾದಗಳೊಂದಿಗೆ ಕ್ರೇನ್ ಮೂಲಕ ಮೆರವಣಿಗೆಯಲ್ಲಿ ತಂದು ಅಮ್ಮನವರಿಗೆ ಮತ್ತು ಮುನೇಶ್ವರ ಸ್ವಾಮಿಯವರಿಗೆ ಅರ್ಪಿಸಲಾಯಿತು.