ಭದ್ರಾವತಿ : ಆಟೋ ಚಾಲಕರೊಬ್ಬರು ತಮ್ಮ ಆಟೋಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶಿಷ್ಟವಾಗಿ ಅಲಂಕಾರ ಮಾಡುವ ಮೂಲಕ ಕನ್ನಡಾಭಿಮಾನಿ ಪ್ರದರ್ಶಿಸಿದ್ದಾರೆ.
ಜನ್ನಾಪುರ ನಿವಾಸಿ, ಆಟೋ ಚಾಲಕ ಶಂಕರ್ ಇತ್ತೀಚಿಗೆ ಸುಮಾರು ೩ ಲಕ್ಷ ರು. ವೆಚ್ಚದಲ್ಲಿ ಹೊಸ ಆಟೋ ಖರೀದಿಸಿದ್ದಾರೆ. ಆಟೋ ನಂಬಿ ಬದುಕು ಸಾಗಿಸುತ್ತಿರುವ ಇವರು ಕನ್ನಡಾಭಿಮಾನಿಯಾಗಿದ್ದು, ಹೊಸ ಆಟೋಗೆ ಈ ಬಾರಿ ವಿಶೇಷವಾಗಿ ಹಿಂಬದಿಯಲ್ಲಿ ಹೂವಿನ ಕರ್ನಾಟಕ ಭೂಪಟ, ಆಟೋ ಒಂದು ಬದಿಯಲ್ಲಿ ಬೃಹತ್ ಕನ್ನಡ ಧ್ವಜ, ಒಳಭಾಗದಲ್ಲಿ ಕೆಂಪು, ಹಳದಿಯೊಂದಿಗೆ ಆಲಂಕರಿಸಲಾಗಿದೆ. ಮುಂಭಾಗದಲ್ಲಿ ಬೃಹತ್ ಗಾತ್ರದ ಕನ್ನಡದ ಪುಷ್ಪ ಮಾಲೆ, ಬಿಳಿ ಗುಲಾಬಿ ಹೂಗಳಿಂದ ಹಾಗು ಕೆಂಪು, ಹಳದಿಗಳಿಂದ ಅಲಂಕರಿಸಲಾಗಿದೆ. ಒಟ್ಟಾರೆ ಆಟೋ ಎಲ್ಲರ ಕಣ್ಮನ ಸೆಳೆದಿದೆ.
ಆಟೋ ಶಂಕರ್ ಪ್ರತಿಕ್ರಿಯಿಸಿ, ನಾನು ಯಾವ ಚಲನಚಿತ್ರ ನಟರ ಅಭಿಮಾನಿಯಲ್ಲ. ಬದಲಿಗೆ ಕನ್ನಡದ ಅಭಿಮಾನಿಯಾಗಿದ್ದು, ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಾನೇ ಸ್ವಯಂ ಪ್ರೇರಣೆಯಿಂದ ಆಟೋ ವಿಶೇಷವಾಗಿ ಅಲಂಕರಿಸಿದ್ದೇನೆ ಎಂದರು.
ಜನ್ನಾಪುರ ವ್ಯಾಪ್ತಿಯಲ್ಲಿ ದಿನವಿಡೀ ಈ ಆಟೋ ಸಂಚಾರ ಬಹುತೇಕ ಜನರಲ್ಲಿ ತಮ್ಮಲ್ಲಿನ ಕನ್ನಡದ ಅಸ್ಮಿತೆಯನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಸಾಮಾನ್ಯ ಆಟೋ ಚಾಲಕನ ಕನ್ನಡಾಭಿಮಾನಕ್ಕೆ ಒಂದು ನಮನವಿರಲಿ.
ಭದ್ರಾವತಿ ಜನ್ನಾಪುರ ನಿವಾಸಿ, ಆಟೋ ಚಾಲಕ ಶಂಕರ್ ಇತ್ತೀಚಿಗೆ ಸುಮಾರು ೩ ಲಕ್ಷ ರು. ವೆಚ್ಚದಲ್ಲಿ ಹೊಸ ಆಟೋ ಖರೀದಿಸಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿಶೇಷವಾಗಿ ಅಲಂಕಾರಗೊಳಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.