Tuesday, December 3, 2024

ವಿಐಎಸ್‌ಎಲ್ ಕಾರ್ಖಾನೆ ಕುರಿತು ಚರ್ಚೆ : ಬಿ.ವಿ ಶ್ರೀನಿವಾಸ್ ಭರವಸೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮೂಲತಃ ನಗರದ ನಿವಾಸಿ ಬಿ.ವಿ ಶ್ರೀನಿವಾಸ್ ಭೇಟಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದರು. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಸುರಗಿತೋಪು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮೂಲತಃ ನಗರದ ನಿವಾಸಿ ಬಿ.ವಿ ಶ್ರೀನಿವಾಸ್ ಭೇಟಿ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದರು. 
    ಈ ಸಂದರ್ಭದಲ್ಲಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಹಾಗು ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಕಲ್ಪಿಸಿಕೊಡುವ ಮೂಲಕ ಅವರ ಹಿತರಕ್ಷಣೆ ಮಾಡುವಂತೆ ಸ್ಥಳಿಯರು ಮನವಿ ಮಾಡಿದರು. 
    ಶೀಘ್ರದಲ್ಲಿ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಈ ಸಂಬಂಧ ಚರ್ಚಿಸುವುದಾಗಿ ಬಿ.ವಿ ಶ್ರೀನಿವಾಸ್ ಭರವಸೆ ನೀಡಿದರು.
    ದೇವಸ್ಥಾನದ ಪ್ರಧಾನ ಅರ್ಚಕ ಮುರಳೀಧರ, ಮುಖಂಡರಾದ ರಾಮಕೃಷ್ಣ, ಕಾಶಿ, ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ರತ್ನಾಪುರ ಗ್ರಾಮದ ಮನೆಯೊಂದರ ಮುಂಭಾಗ ಮಾಟಮಂತ್ರ : ಸ್ಥಳೀಯರಲ್ಲಿ ಆತಂಕ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 
    ಭದ್ರಾವತಿ: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಮನೆಯೊಂದರ ಮುಂಭಾಗ ಮಾಟಮಂತ್ರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 
  ಡಿ.೧ರ ಅಮಾವಾಸ್ಯೆ ದಿನ ರಾತ್ರಿ ರತ್ನಾಪುರ ಗ್ರಾಮದ ಮಂಜ ಅಲಿಯಾಸ್ ಕುಳ್ಳಮಂಜ ಎಂಬುವರ ಮನೆಯ ಮುಂದೆ ಮಾಟಮಂತ್ರ ಮಾಡಲಾಗಿದ್ದು, ಯಾರು ಎಂಬುದು ತಿಳಿದಿಲ್ಲ. ಅದೇ ದಿನ ದೇವಸ್ಥಾನಕ್ಕೆಂದು ಹೊರ ಜಿಲ್ಲೆಗೆ ಹೋಗಿದ್ದ ಮಂಜ ಹಾಗೂ ಅವರ ಮನೆಯವರು ಮನೆಯಲ್ಲಿ ಇಬ್ಬರು ಮಕ್ಕಳು ಮಾತ್ರ ಇದ್ದು, ಮಧ್ಯರಾತ್ರಿ ಅವಘಡ ನಡೆದಿದೆ. ಸ್ಥಳದಲ್ಲಿ ಮೀನುಗಳು, ಮೊಟ್ಟೆಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು ಇನ್ನಿತರ ಪದಾರ್ಥಗಳು ಪತ್ತೆಯಾಗಿವೆ.
    ಬಾಳೆಹಣ್ಣಿನಲ್ಲಿ ವಿಕೃತವಾಗಿ ಬರೆದ ಹೆಸರುಗಳು ಹಾಗೂ ಅವರ ಕುಟುಂಬಗಳು ನಾಶವಾಗಲಿ ಎಂದು ಬರೆದಿರುತ್ತಾರೆ. ಇದರಿಂದ ಅವರ ಕುಟುಂಬ ಭಯಭೀತರಾಗಿದ್ದು, ಅಕ್ಕಪಕ್ಕದ ಮನೆಯವರು ಸಹಿತ ಭಯಭಿತರಾಗಿದ್ದಾರೆ.  ಪೊಲೀಸರು ರಾತ್ರಿ ವೇಳೆ ಗ್ರಾಮಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. 

ಅಮಲಾಮಾತಾ ಆಸ್ಪತ್ರೆಗೆ ಬೆಂಕಿ ನಂದಿಸುವ ಉಪಕರಣ ವಿತರಣೆ

ಎನ್‌ಎಸ್‌ಯುಐ ವತಿಯಿಂದ ಭದ್ರಾವತಿ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು. 
    ಭದ್ರಾವತಿ : ಎನ್‌ಎಸ್‌ಯುಐ ವತಿಯಿಂದ ಹಿರಿಯೂರು ಹಾಗು ಸಿಂಗನಮನೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಿರಿಯೂರಿನ ಅಮಲಾಮಾತಾ ಆಸ್ಪತ್ರೆಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ಉಚಿತವಾಗಿ ವಿತರಿಸಲಾಯಿತು. 
    ಅಮಲಾಮಾತಾ ಆಸ್ಪತ್ರೆಗೆ ಪ್ರತಿದಿನ ರೋಗಿಗಳು ಹಾಗು ಅವರ ಕುಟುಂಬಸ್ಥರು ಸೇರಿದಂತೆ ಸಾವಿರಾರು ಮಂದಿ ಆಗಮಿಸುತ್ತಿದ್ದು, ಅಲ್ಲದೆ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ಹಾಗು ಸಿಬ್ಬಂದಿ ವರ್ಗದವರು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಬೆಂಕಿ ನಂದಿಸುವ ಉಪಕರಣ ಇಲ್ಲದಿರುವುದನ್ನು ಮನಗಂಡು ತುರ್ತು ಸಂದರ್ಭದಲ್ಲಿ ನೆರವಾಗಲು ಬೆಂಕಿ ನಂದಿಸುವ ಉಪಕರಣ ವಿತರಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಲಾಯಿತು. 
    ಅಮಲಾಮಾತಾ ಆಸ್ಪತ್ರೆಯ ವ್ಯವಸ್ಥಾಪಕಿ ಡಾ. ಮೇರಿ ಹಾಗೂ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಶ್, ಎನ್‌ಎಸ್‌ಯುಐ ಗೌರವ ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷ ಗಂಗಾಧರ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Monday, December 2, 2024

ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ವರ್ಗಾವಣೆ : ಅಭಿನಂದನೆ

ಭದ್ರಾವತಿ ತಾಲೂಕು ದಂಡಾಧಿಕಾರಿಯಾಗಿ ಕಳೆದ ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 
    ಭದ್ರಾವತಿ: ತಾಲೂಕು ದಂಡಾಧಿಕಾರಿಯಾಗಿ ಕಳೆದ ಸುಮಾರು ೧ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್-೧ ತಹಸೀಲ್ದಾರ್ ಕೆ.ಆರ್ ನಾಗರಾಜು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದು, ಇವರನ್ನು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಅಭಿನಂದಿಸಲಾಯಿತು. 
    ಕಳೆದ ಕೆಲವು ದಿನಗಳ ಹಿಂದೆ ಇವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಈ ಹಿನ್ನಲೆಯಲ್ಲಿ ಇವರನ್ನು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ತಹಸೀಲ್ದಾರ್ ಕಛೇರಿಗೆ ತೆರಳಿ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಡಿಎಸ್‌ಎಸ್ ಮುಖಂಡ ಈಶ್ವರಪ್ಪ ಹಾಗು ಸಮಿತಿ ಪ್ರಮುಖರು ಉಪಸ್ಥಿತರಿದ್ದರು. 
    ತಾಲೂಕು ಕಛೇರಿಯಲ್ಲಿ ಗ್ರೇಡ್-೨ ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಗಮ್ಮ ಅವರಿಂದ ತೆರವಾದ ಹುದ್ದೆ ಕೆಲವು ತಿಂಗಳುಗಳಿಂದ ಖಾಲಿ ಇದ್ದು, ಈ ಹುದ್ದೆಗೆ ಇದೀಗ ಸರ್ಕಾರ ಹೊಸದಾಗಿ ಗ್ರೇಡ್-೨ ತಹಸೀಲ್ದಾರ್ ನೇಮಕಗೊಳಿಸಿ ಆದೇಶ ಹೊರಡಿಸಿದೆ. 

ವಿಐಎಸ್‌ಎಲ್ ನಿವೃತ್ತ ನೌಕರ ಮಹಾದೇವಪ್ಪ ನಿಧನ

ಮಹಾದೇವಪ್ಪ 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಮಹಾದೇವಪ್ಪ(೭೩) ನಿಧನ ಹೊಂದಿದರು. 
    ಪತ್ನಿ, ೩ ಗಂಡು, ೨ ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಸಂಸ್ಕಾರ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದಲ್ಲಿ ಸೋಮವಾರ ನೆರವೇರಿತು. ಮಹಾದೇವಪ್ಪರವರು ವಿಐಎಸ್‌ಎಲ್ ಕಾರ್ಖಾನೆ ಕ್ಯಾಂಟೀನ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. 

ಕೃಷ್ಣಾಜಿ ರಾವ್ ನಿಧನ

ಕೃಷ್ಣಾಜಿ ರಾವ್ 
    ಭದ್ರಾವತಿ: ತಾಲೂಕಿನ ತಡಸ ಗ್ರಾಮದ ನಿವಾಸಿ, ಮರಾಠ ಸಮಾಜದ ಮುಖಂಡರಾದ ಕೃಷ್ಣಾಜಿ ರಾವ್ ನಿಧನ ಹೊಂದಿದರು. 
    ಇವರ ಅಂತ್ಯಕ್ರಿಯೆ ತಡಸ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ನೆರವೇರಿತು. ಕೃಷ್ಣಾಜಿ ರಾವ್‌ರವರು ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದ ನಿರ್ದೇಶಕ ಟಿ.ಕೆ ರಮೇಶ್‌ರವರ ತಂದೆಯಾಗಿದ್ದಾರೆ. ಇವರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. 

೧ ಕಳವು ಪ್ರಕರಣ ಬೇಧಿಸಿ ೧೦ ದ್ವಿಚಕ್ರ ವಾಹನ ಪತ್ತೆ : ಇಬ್ಬರ ಸೆರೆ

ನ್ಯೂಟೌನ್ ಪೊಲೀಸರ ಕಾರ್ಯಾಚರಣೆ : ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ 

ದ್ವಿಚಕ್ರ ವಾಹನ ಕಳವು ಪ್ರಕರಣವೊಂದನ್ನು ಬೇಧಿಸಿದ ಭದ್ರಾವತಿ ನಗರದ ನ್ಯೂಟೌನ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ಕಳವು ಮಾಡಲಾಗಿದ್ದ ೧೦ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ. 
    ಭದ್ರಾವತಿ: ದ್ವಿಚಕ್ರ ವಾಹನ ಕಳವು ಪ್ರಕರಣವೊಂದನ್ನು ಬೇಧಿಸಿದ ನಗರದ ನ್ಯೂಟೌನ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ಕಳವು ಮಾಡಲಾಗಿದ್ದ ೧೦ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ. 
    ಜೂ.೪ ರಂದು ಅಂತರಗಂಗೆ ವಾಸಿ ಎಸ್. ಷಣ್ಮುಖಪ್ಪ(೬೦) ತಮ್ಮ ಬಜಾಜ್ ಸಿ.ಟಿ-೧೦೦ ದ್ವಿಚಕ್ರ ವಾಹನ ನಗರದ ಬಿಳಕಿ ಕ್ರಾಸ್ ಹತ್ತಿರ ರೇಣುಕಾಂಬ ರೆಸ್ಟೋರೆಂಟ್ ಮುಂದೆ ನಿಲ್ಲಿಸಿದ್ದು, ಪುನಃ ಕೆಲಸ ಮುಗುಸಿಕೊಂಡು ಬಂದಾಗ ಅವರ ವಾಹನ ಕಳವು ಮಾಡಲಾಗಿತ್ತು. ಪ್ರಕರಣ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 
    ಪ್ರಕರಣ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಧೀಕ್ಷಕ ಕೆ.ಆರ್ ನಾಗರಾಜುರವರ ಮೇಲ್ವಿಚಾರಣೆ ಯಲ್ಲಿ, ನಗರ ವೃತ್ತ ನಿರೀಕ್ಷಕ  ಶ್ರೀಶೈಲ ಕುಮಾರ್ ನೇತೃತ್ವದಲ್ಲಿ ಠಾಣಾ ಉಪ ನಿರೀಕ್ಷಕ ಟಿ. ರಮೇಶ ಮತ್ತು ಸಹಾಯಕ ಠಾಣಾ ಉಪ ನಿರೀಕ್ಷಕ ಟಿ.ಪಿ ಮಂಜಪ್ಪ ಹಾಗೂ ಸಿಬ್ಬಂದಿಗಳಾದ ನವೀನ, ಪ್ರಸನ್ನ ಮತ್ತು ಬಿ.ಎಂ ರಘುರವರನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. 
    ತನಿಖಾ ತಂಡ ನ.೨೮ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು, ಕೋಟೆ ಅಗ್ರಹಾರ ವೃತ್ತ, ಸುಗ್ಗಿಹಳ್ಳಿ ಹತ್ತಿರದ ನಿವಾಸಿ ಎಲೆಕ್ಟ್ರಿಷಿಯನ್ ಕೆಲಸ ಮಾಡುವ ಎಂ.ಬಿ ನವೀನ ಕುಮಾರ್(೩೨) ಹಾಗು ತಾಲೂಕಿನ ವೀರಾಪುರ ಗ್ರಾಮ ಬಸ್ ನಿಲ್ದಾಣ ಎದುರಿನ ಗುಜರಿ ವ್ಯಾಪಾರಿ ಉಮ್ಮರ್ ಬೇಗ್(೨೬) ಅವರನ್ನು ಬಂಧಿಸಲಾಗಿದೆ. 
    ಈ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ನವೀನ ಈತನು ನಗರ ವ್ಯಾಪ್ತಿಯಲ್ಲಿ ಒಟ್ಟು ೧೦ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ಅದರಲ್ಲಿ ೭ ದ್ವಿಚಕ್ರ ವಾಹನಗಳನ್ನು ಗುಜುರಿ ವ್ಯಾಪಾರಿ ಉಮ್ಮರ್ ಬೇಗ್‌ಗೆ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ.   
    ನ್ಯೂಟೌನ್ ಪೊಲೀಸ್ ಠಾಣೆ ೬, ಹಳೇನಗರ ಪೊಲೀಸ್ ಠಾಣೆ ೩ ಮತ್ತು ಹೊಸಮನೆ ಪೊಲೀಸ್ ಠಾಣೆ ೧ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು ೧೦ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಅಂದಾಜು ಮೌಲ್ಯ ೫೫ ಸಾವಿರ ರೂಗಳ ಒಟ್ಟು ೩ ದ್ವಿಚಕ್ರ ವಾಹನಗಳನ್ನು ಮತ್ತು ೭ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿ ಗಳಿಸಿದ್ದ ರು. ೨,೧೦,೦೦೦ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ೬೦ ಸಾವಿರ ರು. ಪಲ್ಸರ್ ದ್ವಿಚಕ್ರ ವಾಹನ ಸೇರಿ ಒಟ್ಟು ರು. ೩,೨೫,೦೦೦ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.