ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿ ಅಭಿಯಾನ ಭದ್ರಾವತಿ ತಾಲೂಕಿನ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಶನಿವಾರ ಜರುಗಿತು.
ಭದ್ರಾವತಿ : ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿ ಅಭಿಯಾನ ತಾಲೂಕಿನ ಭದ್ರಾ ಕಾಲೋನಿ ಭದ್ರಾ ಪ್ರೌಢ ಶಾಲೆಯಲ್ಲಿ ಶನಿವಾರ ಜರುಗಿತು.
ಶಿವಮೊಗ್ಗ ಸಿಇಎನ್ ಅಪರಾಧ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಧರ್ಮನಾಯ್ಕ್ ಹಾಗೂ ಲಿಂಗರಾಜ್‌ರವರು ಸೈಬರ್ ಅಪರಾಧ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ನಾವು ಬ್ಯಾಂಕಿನವರು ಎಂದು ಹೇಳಿಕೊಂಡು ದೂರವಾಣಿ ಮುಖಾಂತರ ಓ.ಟಿ.ಪಿ ಹೇಳಿ ಎಂದು ಸುಳ್ಳು ಹೇಳಿ ಬ್ಯಾಂಕಿನ ಅಕೌಂಟ್‌ನಲ್ಲಿರುವ ಹಣ ಕದಿಯುವ ದಂಧೆಕೋರರ ಬಗ್ಗೆ ವಿವರಿಸಿದರು.
ಡಿಜಿಟಲ್ ಕಂಟ್ರೋಲರ್ ಹಾಗೂ ಫೋನ್‌ಗಳನ್ನು ಹೇಗೆ ಹ್ಯಾಕ್ ಮಾಡುತ್ತಾರೆ ಮತ್ತು ನಮ್ಮ ಖಾತೆಯಲ್ಲಿರುವ ಹಣ ಹೇಗೆ ಎಗರಿಸುತ್ತಾರೆ. ಲೋನ್‌ಗಳನ್ನು ಕೊಡುತ್ತೇವೆ ಎಂದು, ಕೆವೈಸಿ ಮಾಡಿಸುತ್ತೇವೆ ಎಂದು ಹೀಗೆ ನಾನಾ ಸುಳ್ಳುಗಳನ್ನು ಹೇಳಿ ನಮ್ಮ ಡಿಜಿಟಲ್ ದಾಖಲೆಗಳನ್ನು, ಆಧಾರ್ ನಂಬರ್ ಓಟಿಪಿ ಪಡೆಯುವುದರ ಮೂಲಕ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಖಾತೆಯಲ್ಲಿರುವ ಹಣ ಹೇಗೆ ಎಗರಿಸುತ್ತಾರೆ ಎಂಬುದನ್ನು ತಿಳಿಸಿದರು.
ಮೊಬೈಲ್‌ನಲ್ಲಿ ಹಲವಾರು ಗೇಮ್‌ಗಳನ್ನು ಡೌನ್ಲೋಡ್ ಮಾಡುವುದರ ಮೂಲಕ, ಬೇರೆ ಬೇರೆ ಅಪ್ಲಿಕೇಷನ್‌ಗಳನ್ನು ಸಕ್ರಿಯಗೊಳಿಸುವುದರ ಮೂಲಕ ನಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು, ಸಂಪರ್ಕ ಸಂಖ್ಯೆಗಳನ್ನು ಬೇರೆಯವರು ಬಹಳ ಸುಲಭವಾಗಿ ಪಡೆದು ನಮ್ಮನ್ನು ಡಿಜಿಟಲ್ ಮೂಲಕ ನಿಯಂತ್ರಿಸುತ್ತಾರೆ ಎಂದು ಎಚ್ಚರಿಸಿದರು. ಅಲ್ಲದೆ ಮಕ್ಕಳು ಸೈಬರ್ ಅಪರಾಧಗಳ ಕುರಿತು ತಾವು ತಿಳಿದುಕೊಂಡು ತಮ್ಮ ಪೋಷಕರಿಗೆ ತಿಳಿಸಬೇಕು. ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕೆಂದರು. ಮುಖ್ಯ ಶಿಕ್ಷಕ ಸಿ.ಎಸ್ ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶ್ರೀನಿವಾಸ ಟಿ. ಜಾಜೂರ್, ಶಶಿಕುಮಾರ್, ಸೌಮ್ಯ ಹಾಗು ಸಿಬ್ಬಂದಿಗಳಾದ ಆಶಾ, ಬಾಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.