Tuesday, December 17, 2024

`ವಿಶ್ವ ಜಲ ದಿನಾಚರಣೆ'ಗೆ ಪೂರಕವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸಿ

ತಾಲೂಕು ಆಡಳಿತಕ್ಕೆ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ 

ಮುಂಬರುವ `ವಿಶ್ವ ಜಲ ದಿನಾಚರಣೆ' ಅಂಗವಾಗಿ ಕೆರೆ ಕಟ್ಟೆಗಳ ಉತ್ಸವ ನಡೆಯಲಿರುವುದರಿಂದ ಹಾಗು ಈ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನೂತನ ತಹಸೀಲ್ದಾರ್ ಪರಶುರಾಮ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ: ಮುಂಬರುವ `ವಿಶ್ವ ಜಲ ದಿನಾಚರಣೆ' ಅಂಗವಾಗಿ ಕೆರೆ ಕಟ್ಟೆಗಳ ಉತ್ಸವ ನಡೆಯಲಿರುವುದರಿಂದ ಹಾಗು ಈ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನೂತನ ತಹಸೀಲ್ದಾರ್ ಪರಶುರಾಮ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಸದ್ಯದಲ್ಲೇ ಜಿಲ್ಲಾಧಿಕಾರಿಗಳವರ ಸಮ್ಮುಖದಲ್ಲಿ ತಾಲೂಕು ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಒಂದು ಸಭೆ ನಡೆಯಲಿರುವುದರಿಂದ ತಾಲೂಕಿನಲ್ಲಿರುವ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿರುವ ಕೆರೆಗಳ ಪಟ್ಟಿಯನ್ನು ನೀಡುವುದು ಹಾಗೂ ಇತ್ತೀಚೆಗೆ ಸರ್ವೆ ನಡೆದಿರುವ ಕಸಬಾ-೧ ಸೀಗೆಬಾಗಿ ಗ್ರಾಮ ಸರ್ವೆ ನಂ.೫೭ರ ಬೆಂಡಿಕಟ್ಟೆ ಕೆರೆಯ ದಾಖಲೆ ಹಾಗೂ ಈ ಸಂಬಂಧ ತಮ್ಮ ಕಛೇರಿಯಿಂದ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡುವುದು. ತಾಲೂಕಿನ ಕಲ್ಲಹಳ್ಳಿ ಗ್ರಾಮಪಂಚಾಯತಿ ಸಿರಿಯೂರು ಸರ್ವೆ ನಂ.೪ರ ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಗ್ರಾಮಪಂಚಾಯತಿವತಿಯಿಂದ ತಾಲೂಕು ಕಛೇರಿಗೆ ಬಂದಿರುವ ಪತ್ರದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೋರಲಾಗಿದೆ. 
    ವಿಧಾನಸಭಾ ಕ್ಷೇತ್ರದ ದೊಣಭಘಟ್ಟ ಸರ್ವೆ ನಂ.೩೬ರ ದೊಡ್ಡಕೆರೆ, ತಡಸ ಸರ್ವೆ ನಂ.೭೨ರ ಕೆರೆ, ಹೊಳೆನೇರಳಕೆರೆ ಸರ್ವೆ ನಂ:೫೦ರ ದೊಡ್ಡಕೆರೆ ಹಾಗು ನಂಜಾಪುರ ಸರ್ವೆ, ನಂ.೧ರ ಸರ್ಕಾರಿ ಕೆರೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಿದ್ದಾಪುರ ಸರ್ವೆ ನಂ.೬೩ ಹಾಗೂ ಇದಕ್ಕೆ ಲಗತ್ತಾಗಿರುವ ಸರ್ವೆ ನಂಬರಿನ ಕೆರೆಗಳು ಮತ್ತು ಸರ್ವೆ ನಂ.೧೧೦ರ ಸರ್ಕಾರಿ ಕೆರೆ, ಜನ್ನಾಪುರ ಸರ್ವೆ ನಂ:೯೦ರ ಕೆರೆ ಮತ್ತು ಸೀಗೆಬಾಗಿ ಸರ್ವೆ ನಂ.೩೩ರ ಕೆರೆ ಸೇರಿದಂತೆ ಇನ್ನಿತರ ಕೆರೆಗಳ ಬೌಂಡರಿ ಕಾರ್ಯ ತುರ್ತಾಗಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. 
    ಟ್ರಸ್ಟ್ ಛೇರ್ಮನ್ ಆರ್. ವೇಣುಗೋಪಾಲ್, ವೈಸ್ ಛೇರ್ಮನ್ ಎನ್.ಎಲ್ ರಮಾದೇವಿ, ಗೌರವಾಧ್ಯಕ್ಷ ವಿಶ್ವೇಶ್ವರರಾವ್ ಗಾಯಕ್ವಾಡ್, ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ, ಸಂಚಾಲಕ ಎಂ.ವಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕೆ.ಎಸ್ ಶೈಲಜಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ಗೆ ರಾಜ್ಯ ಮಟ್ಟದ ದೇವಾಂಗರತ್ನ ಪ್ರಶಸ್ತಿ

ಶ್ರೀ ಗಾಯಿತ್ರಿ ಪೀಠ ಮಹಾಸಂಸ್ಥಾನ, ಹೇಮಕೋಟ, ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘ, ಬೆಂಗಳೂರು ವತಿಯಿಂದ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಮಠದಲ್ಲಿ ನಡೆದ ಶ್ರೀ ದೇವಲಮಹರ್ಷಿ ಜಯಂತೋತ್ಸವ ಸಮಾರಂಭದಲ್ಲಿ ಭದ್ರಾವತಿ ನಗರದ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ಭದ್ರಾವತಿ : ಶ್ರೀ ಗಾಯಿತ್ರಿ ಪೀಠ ಮಹಾಸಂಸ್ಥಾನ, ಹೇಮಕೋಟ, ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘ, ಬೆಂಗಳೂರು ವತಿಯಿಂದ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಮಠದಲ್ಲಿ ನಡೆದ ಶ್ರೀ ದೇವಲಮಹರ್ಷಿ ಜಯಂತೋತ್ಸವ ಸಮಾರಂಭದಲ್ಲಿ ನಗರದ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ನಾಗರಾಜ್‌ರವರ ನಾಲ್ಕು ದಶಕಗಳ ಯೋಗ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶ್ರೀ ಜಗದ್ಗುರು ದಯಾನಂದಪುರಿ ಸ್ವಾಮೀಜಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಪಿ. ಕಲಬುರ್ಗಿ, ಶ್ರೀ ಗಾಯಿತ್ರಿ ಪೀಠದ ಅಧ್ಯಕ್ಷ ಪಿ. ಗಿರಿಯಪ್ಪ, ಕಾರ್ಯದರ್ಶಿ ಎಚ್.ಎಸ್ ತಿಮ್ಮಶೆಟ್ಟಿ,  ರಾಷ್ಟ್ರೀಯ ದೇವಾಂಗ ಸಂಘದ ಅಧ್ಯಕ್ಷರಾದ ಅರುಣ್ ಗಂಗಾಧರ ವರೋಡೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ತುರುವೇಕೆರೆ ಮಾಜಿ ಶಾಸಕ ಎಂ.ಡಿ ಲಕ್ಷ್ಮೀನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಎಂಪಿಎಂ ನಿವೃತ್ತ ಕಾರ್ಮಿಕ ಬ್ರಹ್ಮಲಿಂಗಯ್ಯ ನಿಧನ

ಬ್ರಹ್ಮಲಿಂಗಯ್ಯ 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕ, ಉಜ್ಜನಿಪುರ ನಿವಾಸಿ ಬ್ರಹ್ಮಲಿಂಗಯ್ಯ(68) ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಸಹೋದರ, ಸಹೋದರಿ ಇದ್ದಾರೆ. ಇವರ ಅಂತ್ಯ ಸಂಸ್ಕಾರ ಡಿ. ೧೮ರ ಬುಧವಾರ ಬೆಳಿಗ್ಗೆ ಬೈಪಾಸ್ ರಸ್ತೆ ಸಮೀಪದ ಬಾಳೆಮಾರನಹಳ್ಳಿ-ತಿಮ್ಲಾಪುರ ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.
    ಬ್ರಹ್ಮಲಿಂಗಯ್ಯ ಎಂಪಿಎಂ ಕಾರ್ಖಾನೆಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ಹೊರಗೂ ಸಹ ಎಲೆಕ್ಟ್ರಿಕಲ್ ಕೆಲಸಗಳನ್ನು ನಿರ್ವಹಿಸುವ ಮೂಲಕ ಎಲೆಕ್ಟ್ರಿಕಲ್ ಬೊಮ್ಮಣ್ಣ ಎಂದೇ ಹೆಸರುವಾಸಿಯಾಗಿದ್ದರು. ಅಲ್ಲದೆ ಚೇತನ್ ಸೌಂಡ್ಸ್ ಮತ್ತು ಭದ್ರಾವತಿ ಬಾಯ್ಸ್ ಆರ್ಕೆಸ್ಟ್ರಾ ಮಾಲೀಕರಾಗಿದ್ದರು. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಭದ್ರಾವತಿ ಗುರು ಆರ್ಟ್ಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

Monday, December 16, 2024

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸಿ, ಕೆಲಸದ ದಿನ ಹೆಚ್ಚಿಸಿ

ಸಂಸದರಿಗೆ ಗುತ್ತಿಗೆ ಕಾರ್ಮಿಕರ ನಿಯೋಗ ಮನವಿ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವ ನಿಟ್ಟಿನಲ್ಲಿ ಹಾಗು ಕಾರ್ಖಾನೆ ಅಭಿವೃದ್ಧಿಗೆ ಗಮನ ಹರಿಸುವಂತೆ ಸೋಮವಾರ ಗುತ್ತಿಗೆ ಕಾರ್ಮಿಕರ ನಿಯೋಗ ಸಂಸದ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ ಮನವಿ ಮಾಡಿದೆ. 
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವ ನಿಟ್ಟಿನಲ್ಲಿ ಹಾಗು ಕಾರ್ಖಾನೆ ಅಭಿವೃದ್ಧಿಗೆ ಗಮನ ಹರಿಸುವಂತೆ ಸೋಮವಾರ ಗುತ್ತಿಗೆ ಕಾರ್ಮಿಕರ ನಿಯೋಗ ಸಂಸದ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ ಮನವಿ ಮಾಡಿದೆ. 
    ಗುತ್ತಿಗೆ ಕಾರ್ಮಿಕರ ನಿಯೋಗ ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರರನ್ನು ಭೇಟಿ ಮಾಡಿ, ಗುತ್ತಿಗೆ ಕಾರ್ಮಿಕರಿಗೆ ಯಾವುದೇ ರೀತಿಯ ಕೆಲಸದ ದಿನಗಳನ್ನು ಹೆಚ್ಚಿಸಿರುವುದಿಲ್ಲ ಮತ್ತು ಕಾರ್ಖಾನೆ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಹೊಂದುವ ಲಕ್ಷಣಗಳು ಕಂಡು ಬರುತ್ತಿಲ್ಲ.  ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡಲಾಯಿತು. 
    ಇದಕ್ಕೆ ಸಂಸದರು ಪ್ರತಿಕ್ರಿಯಿಸಿ, ಮುಂದಿನ ಎರಡು ತಿಂಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುವಂತೆ ಮಾಡುತ್ತೇನೆ. ಅತಿಶೀಘ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುವಂತೆ ಪುನಃ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ಕಾರ್ಖಾನೆಯನ್ನು ಉತ್ಪಾದನೆಯತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು ಎಂದು ಗುತ್ತಿಗೆ ಕಾರ್ಮಿಕರ ನಿಯೋಗ ತಿಳಿಸಿದೆ. 
    ನಿಯೋಗದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಹಾಗು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಡಿ.೨೨ರಂದು ಅಂತರ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿ

    ಭದ್ರಾವತಿ: ಅಂತರ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿ ಡಿ.೨೨ರ ಭಾನುವಾರ ನ್ಯೂಟೌನ್ ಜೆಟಿಎಸ್ ಶಾಲೆ ಸಮೀಪದಲ್ಲಿರುವ ಲಯನ್ಸ್ ಕ್ಲಬ್, ಶುಗರ್‌ಟೌನ್, ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.  
    ಪಂದ್ಯಾವಳಿಯಲ್ಲಿ ೧೬ ವರ್ಷ ವಯೋಮಿತಿಯವರಿಗೆ ಮಾತ್ರ ಅವಕಾಶವಿದ್ದು, ನೆರೆಹೊರೆ ಜಿಲ್ಲೆಯವರು ಈ ಪಂದ್ಯದಲ್ಲಿ ಭಾಗವಹಿಸಬಹುದು. ಮುಕ್ತ ವಿಭಾಗದಲ್ಲಿ ೫ ಟ್ರೋಫಿ ಹಾಗೂ ರು. ೫,೫೦೦ ನಗದು ಬಹುಮಾನಗಳಿದ್ದು, ಬಾಲಕ ಮತ್ತು ಬಾಲಕಿಯರ ವಯೋಮಿತಿ ವಿಭಾಗದಲ್ಲಿ ಯು-೧೬,೧೪,೧೨,೧೦ ಮತ್ತು ೮ ರಲ್ಲಿ ಪ್ರತಿ ವಿಭಾಗದಲ್ಲಿ ೫ ಟ್ರೋಫಿಗಳಿರುತ್ತದೆ. ಅತಿ ಚಿಕ್ಕ ಬಾಲಕ-ಬಾಲಕಿಗೆ ಪ್ರತ್ಯೇಕ ಟ್ರೋಫಿ, ಒಟ್ಟು ೫೭ ಟ್ರೋಫಿಗಳನ್ನು ನೀಡಲಾಗುವುದು. ಪಂದ್ಯ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭಗೊಂದು ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳುತ್ತದೆ. ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಡಿ.೨೧ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 

ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ ನಿಧನ

    ಎನ್. ಕೃಷ್ಣಮೂರ್ತಿ
    ಭದ್ರಾವತಿ : ನಗರದ ಹಿರಿಯ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಸದಸ್ಯ ಎನ್. ಕೃಷ್ಣಮೂರ್ತಿ(೭೮) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರರು ಇದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಕೃಷ್ಣಮೂರ್ತಿಯವರು ವಾರ್ಡ್ ನಂ.೩ರ ಚಾಮೇಗೌಡ ಏರಿಯಾದಲ್ಲಿ ವಾಸಿಸುತ್ತಿದ್ದು, ಹಲವು ವರ್ಷಗಳ ಕಾಲ ಹಳೇನಗರದ ಮಾಡಲ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪುರಸಭೆ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಮಾಡಲ್ ಕೋ-ಅಪರೇಟಿವ್ ಸೊಸೈಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಪುಟ್ಟಮ್ಮ ನಿಧನ

ಪುಟ್ಟಮ್ಮ 
    ಭದ್ರಾವತಿ: ನಗರದ ನಂಜಾಪುರ ನಿವಾಸಿ ಪುಟ್ಟಮ್ಮ(೬೫) ಸೋಮವಾರ ನಿಧನ ಹೊಂದಿದರು. ಇವರ ಅಂತ್ಯಕ್ರಿಯೆ ಸಂಜೆ ನೆರವೇರಿತು. 
    ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳು ಇದ್ದರು. ಈ ಹಿಂದೆ ನಗರಸಭೆ ವ್ಯಾಪ್ತಿಯ ವೇಲೂರುಶೆಡ್‌ನಲ್ಲಿ ವಾಸವಾಗಿದ್ದರು. ಇವರ ಪತಿ ಚಲುವಯ್ಯ ಜನವರಿ ತಿಂಗಳಿನಲ್ಲಿ ನಿಧನ ಹೊಂದಿದ್ದರು. ಪುಟ್ಟಮ್ಮ ಕೆಲವು ವರ್ಷಗಳಿಂದ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು.