Tuesday, December 17, 2024

ಗುತ್ತಿಗೆದಾರ ಆರ್. ಶ್ರೀನಿಧಿ ನಿಧನ


ಆರ್. ಶ್ರೀನಿಧಿ 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದ ನಿವಾಸಿ, ಗುತ್ತಿಗೆದಾರ ಆರ್. ಶ್ರೀನಿಧಿ(೩೪) ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದರು. 
    ತಂದೆ, ತಾಯಿ, ಪತ್ನಿ, ಪುತ್ರಿ ಹಾಗು ಸಹೋದರ ನಗರಸಭೆ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ತಾಲೂಕಿನ ಬಾಬಳ್ಳಿಯಲ್ಲಿರುವ ಇವರ ತೋಟದಲ್ಲಿ ನೆರವೇರಿತು. 
    ಶ್ರೀನಿಧಿಯವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು, ತಾಲೂಕು ಕುರುಬ ಸಮಾಜದ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಎಸ್. ವಂದನಾಗೆ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ

ಭದ್ರಾವತಿ ನಗರದ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಎಸ್. ವಂದನಾ ಶಿವಮೊಗ್ಗದಲ್ಲಿ ಜರುಗಿದ ೩೭ನೇ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ: ನಗರದ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಎಸ್. ವಂದನಾ ಶಿವಮೊಗ್ಗದಲ್ಲಿ ಜರುಗಿದ ೩೭ನೇ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 
    ವಂದನಾ ೧೦೦ ಮೀ. ಮತ್ತು ೨೦೦ ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಸಕಲೇಶ್,  ಐಕ್ಯೂಎಸಿ ಸಂಚಾಲಕ ಡಾ. ಪ್ರಸನ್ನ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎ. ಪ್ರವೀಣ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ವಿದ್ಯಾರ್ಥಿನಿ ಎಸ್. ವಂದನಾರನ್ನು ಅಭಿನಂದಿಸಿದ್ದಾರೆ.  

ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳೇ ದಲಿತರ ಉದ್ಧಾರಕ್ಕೆ ಮಾರ್ಗ ಸೂಚಿಗಳು : ಶಿವಬಸಪ್ಪ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನಗರದ ಮಿಲ್ಟಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ  ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: `ವೇದ, ಉಪನಿಷತ್ತು, ಶಾಸ್ತ್ರ, ಪುರಾಣಗಳಿಂದ ದಲಿತರು ಕಲಿಯಬೇಕಾಗಿದ್ದು ಏನು ಇಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳೇ ದಲಿತರ ಉದ್ಧಾರಕ್ಕೆ ಮಾರ್ಗ ಸೂಚಿಗಳು' ಎಂದು ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಹೇಳಿದರು. 
    ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ನಗರದ ಮಿಲ್ಟಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಹಿಂದೂ ಧರ್ಮದ ಒಡಲಾಳದಲ್ಲಿ ಸಾವಿರಾರು ವರ್ಷಗಳಿಂದ ಹುದುಗಿದ್ದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹಾಗೂ ವರ್ಣವ್ಯವಸ್ಥೆಯಿಂದಾಗಿ ಭಾರತ ವಿಶ್ವದ ಮುಂದೆ ತಲೆತಗ್ಗಿಸುವಂತಾಗಿತ್ತು. ಆದರೆ ಅಂಬೇಡ್ಕರ್ ಅವರ ಸಂವಿಧಾನದ ಜಾರಿಯಿಂದಾಗಿ ಸ್ವಾತಂತ್ರ್ಯ, ಸಮಾನತೆಗಳಿಂದ ಕೂಡಿದ ಜಾತ್ಯಾತೀತ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಕಾರಣವಾಯಿತು ಎಂದರು.
    ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಮೇಲು ಕೀಳುಗಳಿಂದಾಗಿ ಹಿಂದೂ ಧರ್ಮ ತೊರೆದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಗಳಿಂದ ಕೂಡಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.  
    ಜಿಲ್ಲಾ ಸಂಚಾಲಕ ಎಂ.ಏಳುಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕರ್ನಾಟಕದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆರ್. ತಮ್ಮಯ್ಯ, ಗ್ರಾಮಾಂತರ ಜಿಲ್ಲಾ ಸಂಘಟನಾ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ತಾಲೂಕು ದಲಿತ ನೌಕರರ ಒಕ್ಕೂಟದ ತಾಲೂಕು ಸಂಚಾಲಕ ಲಿಂಗರಾಜು, ಕಾರ್ಯದರ್ಶಿ ಚನ್ನಪ್ಪ, ದಸಂಸ ಹಿರಿಯ ಮುಖಂಡ ಮುತ್ತು, ಸಿರಿಯೂರು ಜಯಣ್ಣ, ಪ್ರೌಢಶಾಲಾ ನಿವೃತ್ತ ಶಿಕ್ಷಕ ಬೊಮ್ಮೇನಹಳ್ಳಿ ಶ್ರೀನಿವಾಸ್, ಎಸ್.ಜೆ.ಎಂ ಕಾಲೇಜಿನ ಕಡದಕಟ್ಟೆ ರಾಜಶೇಖರ್, ಶಿಕ್ಷಕ  ನರಸಿಂಹಮೂರ್ತಿ, ಮಾಚೇನಹಳ್ಳಿ ಮಲ್ನಾಡ್ ಕಂಪನಿಯ ಉದ್ಯೋಗಿ ಶಿವಣ್ಣ ಮತ್ತು ತಾಲೂಕು ದಸಂಸ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಸಂಚಾಲಕ ಕಾಂಚಗೊಂಡನಹಳ್ಳಿ ನಾಗರಾಜ್ ಸ್ವಾಗತಿಸಿದರು. ಎಸ್ ಮುತ್ತು  ವಂದಿಸಿದರು. 

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಕ್ಕಳಿಂದ ಸಂಭ್ರಮಾಚರಣೆ

ಭದ್ರಾವತಿ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವತಿಯಿಂದ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮಾರಣೆ ನಡೆಸಲಾಯಿತು. 
    ಭದ್ರಾವತಿ :  ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವತಿಯಿಂದ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮಾರಣೆ ನಡೆಸಲಾಯಿತು. 
    ಸಂತ ಕ್ಲಾತ್ ವೇಷ ಧರಿಸಿದ ಮಕ್ಕಳು, ಮಹಿಳೆಯರು ಕೈಯಲ್ಲಿ ಬಾಲ ಯೇಸುವಿನ ಪ್ರತಿಮೆಯನ್ನು ಎತ್ತಿಕೊಂಡು ಕ್ಯಾರೋಲ್ಸ್ ಗೀತೆಗಳನ್ನು ಹಾಡುತ್ತಾ, ಸಿಹಿ ಹಂಚುತ್ತಾ, ಹಬ್ಬದ ಶುಭಾಶಯಗಳನ್ನು ಕೋರುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಸಂಭ್ರಮಿಸಿದರು.
    ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ಕ್ರೈಸ್ತ ಸಮುದಾಯದವರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಹಬ್ಬದ ದಿನದಂದು ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ. 

`ವಿಶ್ವ ಜಲ ದಿನಾಚರಣೆ'ಗೆ ಪೂರಕವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸಿ

ತಾಲೂಕು ಆಡಳಿತಕ್ಕೆ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ 

ಮುಂಬರುವ `ವಿಶ್ವ ಜಲ ದಿನಾಚರಣೆ' ಅಂಗವಾಗಿ ಕೆರೆ ಕಟ್ಟೆಗಳ ಉತ್ಸವ ನಡೆಯಲಿರುವುದರಿಂದ ಹಾಗು ಈ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನೂತನ ತಹಸೀಲ್ದಾರ್ ಪರಶುರಾಮ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ: ಮುಂಬರುವ `ವಿಶ್ವ ಜಲ ದಿನಾಚರಣೆ' ಅಂಗವಾಗಿ ಕೆರೆ ಕಟ್ಟೆಗಳ ಉತ್ಸವ ನಡೆಯಲಿರುವುದರಿಂದ ಹಾಗು ಈ ಕಾರ್ಯಕ್ರಮಕ್ಕೆ ಜಲಸಂಪನ್ಮೂಲ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಆಗಮಿಸುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ನೂತನ ತಹಸೀಲ್ದಾರ್ ಪರಶುರಾಮ್‌ರವರಿಗೆ ಮನವಿ ಸಲ್ಲಿಸಲಾಗಿದೆ. 
    ಸದ್ಯದಲ್ಲೇ ಜಿಲ್ಲಾಧಿಕಾರಿಗಳವರ ಸಮ್ಮುಖದಲ್ಲಿ ತಾಲೂಕು ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಒಂದು ಸಭೆ ನಡೆಯಲಿರುವುದರಿಂದ ತಾಲೂಕಿನಲ್ಲಿರುವ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿರುವ ಕೆರೆಗಳ ಪಟ್ಟಿಯನ್ನು ನೀಡುವುದು ಹಾಗೂ ಇತ್ತೀಚೆಗೆ ಸರ್ವೆ ನಡೆದಿರುವ ಕಸಬಾ-೧ ಸೀಗೆಬಾಗಿ ಗ್ರಾಮ ಸರ್ವೆ ನಂ.೫೭ರ ಬೆಂಡಿಕಟ್ಟೆ ಕೆರೆಯ ದಾಖಲೆ ಹಾಗೂ ಈ ಸಂಬಂಧ ತಮ್ಮ ಕಛೇರಿಯಿಂದ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡುವುದು. ತಾಲೂಕಿನ ಕಲ್ಲಹಳ್ಳಿ ಗ್ರಾಮಪಂಚಾಯತಿ ಸಿರಿಯೂರು ಸರ್ವೆ ನಂ.೪ರ ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಗ್ರಾಮಪಂಚಾಯತಿವತಿಯಿಂದ ತಾಲೂಕು ಕಛೇರಿಗೆ ಬಂದಿರುವ ಪತ್ರದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೋರಲಾಗಿದೆ. 
    ವಿಧಾನಸಭಾ ಕ್ಷೇತ್ರದ ದೊಣಭಘಟ್ಟ ಸರ್ವೆ ನಂ.೩೬ರ ದೊಡ್ಡಕೆರೆ, ತಡಸ ಸರ್ವೆ ನಂ.೭೨ರ ಕೆರೆ, ಹೊಳೆನೇರಳಕೆರೆ ಸರ್ವೆ ನಂ:೫೦ರ ದೊಡ್ಡಕೆರೆ ಹಾಗು ನಂಜಾಪುರ ಸರ್ವೆ, ನಂ.೧ರ ಸರ್ಕಾರಿ ಕೆರೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಿದ್ದಾಪುರ ಸರ್ವೆ ನಂ.೬೩ ಹಾಗೂ ಇದಕ್ಕೆ ಲಗತ್ತಾಗಿರುವ ಸರ್ವೆ ನಂಬರಿನ ಕೆರೆಗಳು ಮತ್ತು ಸರ್ವೆ ನಂ.೧೧೦ರ ಸರ್ಕಾರಿ ಕೆರೆ, ಜನ್ನಾಪುರ ಸರ್ವೆ ನಂ:೯೦ರ ಕೆರೆ ಮತ್ತು ಸೀಗೆಬಾಗಿ ಸರ್ವೆ ನಂ.೩೩ರ ಕೆರೆ ಸೇರಿದಂತೆ ಇನ್ನಿತರ ಕೆರೆಗಳ ಬೌಂಡರಿ ಕಾರ್ಯ ತುರ್ತಾಗಿ ನಿಗದಿಪಡಿಸಿ ಒತ್ತುವರಿ ತೆರವುಗೊಳಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. 
    ಟ್ರಸ್ಟ್ ಛೇರ್ಮನ್ ಆರ್. ವೇಣುಗೋಪಾಲ್, ವೈಸ್ ಛೇರ್ಮನ್ ಎನ್.ಎಲ್ ರಮಾದೇವಿ, ಗೌರವಾಧ್ಯಕ್ಷ ವಿಶ್ವೇಶ್ವರರಾವ್ ಗಾಯಕ್ವಾಡ್, ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ, ಸಂಚಾಲಕ ಎಂ.ವಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಕೆ.ಎಸ್ ಶೈಲಜಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ಗೆ ರಾಜ್ಯ ಮಟ್ಟದ ದೇವಾಂಗರತ್ನ ಪ್ರಶಸ್ತಿ

ಶ್ರೀ ಗಾಯಿತ್ರಿ ಪೀಠ ಮಹಾಸಂಸ್ಥಾನ, ಹೇಮಕೋಟ, ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘ, ಬೆಂಗಳೂರು ವತಿಯಿಂದ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಮಠದಲ್ಲಿ ನಡೆದ ಶ್ರೀ ದೇವಲಮಹರ್ಷಿ ಜಯಂತೋತ್ಸವ ಸಮಾರಂಭದಲ್ಲಿ ಭದ್ರಾವತಿ ನಗರದ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ಭದ್ರಾವತಿ : ಶ್ರೀ ಗಾಯಿತ್ರಿ ಪೀಠ ಮಹಾಸಂಸ್ಥಾನ, ಹೇಮಕೋಟ, ಹಂಪಿ ಮತ್ತು ಕರ್ನಾಟಕ ರಾಜ್ಯ ದೇವಾಂಗ ಸಂಘ, ಬೆಂಗಳೂರು ವತಿಯಿಂದ ನೆಲಮಂಗಲದ ಕೆಂಪಲಿಂಗನಹಳ್ಳಿಯ ದೇವಾಂಗ ಮಠದಲ್ಲಿ ನಡೆದ ಶ್ರೀ ದೇವಲಮಹರ್ಷಿ ಜಯಂತೋತ್ಸವ ಸಮಾರಂಭದಲ್ಲಿ ನಗರದ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್‌ರವರಿಗೆ ರಾಜ್ಯಮಟ್ಟದ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
ನಾಗರಾಜ್‌ರವರ ನಾಲ್ಕು ದಶಕಗಳ ಯೋಗ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶ್ರೀ ಜಗದ್ಗುರು ದಯಾನಂದಪುರಿ ಸ್ವಾಮೀಜಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಪಿ. ಕಲಬುರ್ಗಿ, ಶ್ರೀ ಗಾಯಿತ್ರಿ ಪೀಠದ ಅಧ್ಯಕ್ಷ ಪಿ. ಗಿರಿಯಪ್ಪ, ಕಾರ್ಯದರ್ಶಿ ಎಚ್.ಎಸ್ ತಿಮ್ಮಶೆಟ್ಟಿ,  ರಾಷ್ಟ್ರೀಯ ದೇವಾಂಗ ಸಂಘದ ಅಧ್ಯಕ್ಷರಾದ ಅರುಣ್ ಗಂಗಾಧರ ವರೋಡೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹಾಗೂ ತುರುವೇಕೆರೆ ಮಾಜಿ ಶಾಸಕ ಎಂ.ಡಿ ಲಕ್ಷ್ಮೀನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಎಂಪಿಎಂ ನಿವೃತ್ತ ಕಾರ್ಮಿಕ ಬ್ರಹ್ಮಲಿಂಗಯ್ಯ ನಿಧನ

ಬ್ರಹ್ಮಲಿಂಗಯ್ಯ 
    ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕ, ಉಜ್ಜನಿಪುರ ನಿವಾಸಿ ಬ್ರಹ್ಮಲಿಂಗಯ್ಯ(68) ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ಸಹೋದರ, ಸಹೋದರಿ ಇದ್ದಾರೆ. ಇವರ ಅಂತ್ಯ ಸಂಸ್ಕಾರ ಡಿ. ೧೮ರ ಬುಧವಾರ ಬೆಳಿಗ್ಗೆ ಬೈಪಾಸ್ ರಸ್ತೆ ಸಮೀಪದ ಬಾಳೆಮಾರನಹಳ್ಳಿ-ತಿಮ್ಲಾಪುರ ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.
    ಬ್ರಹ್ಮಲಿಂಗಯ್ಯ ಎಂಪಿಎಂ ಕಾರ್ಖಾನೆಯ ಎಲೆಕ್ಟ್ರಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ಹೊರಗೂ ಸಹ ಎಲೆಕ್ಟ್ರಿಕಲ್ ಕೆಲಸಗಳನ್ನು ನಿರ್ವಹಿಸುವ ಮೂಲಕ ಎಲೆಕ್ಟ್ರಿಕಲ್ ಬೊಮ್ಮಣ್ಣ ಎಂದೇ ಹೆಸರುವಾಸಿಯಾಗಿದ್ದರು. ಅಲ್ಲದೆ ಚೇತನ್ ಸೌಂಡ್ಸ್ ಮತ್ತು ಭದ್ರಾವತಿ ಬಾಯ್ಸ್ ಆರ್ಕೆಸ್ಟ್ರಾ ಮಾಲೀಕರಾಗಿದ್ದರು. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಭದ್ರಾವತಿ ಗುರು ಆರ್ಟ್ಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.