Monday, December 30, 2024

ಪ್ರಸ್ತುತ ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ : ಜಿ.ಬಿ ವಿನಯ್ ಕುಮಾರ್

ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಭದ್ರಾವತಿ ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ ಮಾತನಾಡಿದರು. 
    ಭದ್ರಾವತಿ : ಇಂದು ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸುತ್ತಿದ್ದು, ಎಲ್ಲೆಡೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಗಂಡ, ಹೆಂಡತಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ರಾಜಕಾರಣದಲ್ಲಿದ್ದು, ಕುಟುಂಬದ ಅಧಿಕಾರ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ವ್ಯವಸ್ಥೆ ತೊಡೆದು ಹಾಕಲು ಎಲ್ಲಾ ಸಮಾಜದವರು ಬೆಂಬಲ ನೀಡಬೇಕು ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
    ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ ಮಾತನಾಡಿದ ಅವರು, ಗುಲಾಮಗಿರಿ ಬಿಟ್ಟು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಹೋರಾಡಬೇಕಿದೆ ಎಂದರು. 
    ಪ್ರತಿಷ್ಠೆಗೋಸ್ಕರ ಜನಪ್ರತಿನಿಧಿಗಳಾಗುತ್ತಿದ್ದಾರೆ. ಜನಸೇವೆಗೆಂದು ಬರುತ್ತಿಲ್ಲ. ಕುರುಬರು ಕುರಿ ಕಾಯಬೇಕು, ಮಡಿವಾಳರು ಬಟ್ಟೆ ಸ್ವಚ್ಚಗೊಳಿಸಬೇಕು ಎಂಬಂತೆ ಹಿಂದುಳಿದ ವರ್ಗದ ಜನರು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಕಾಯಕ ಮುಂದುವರಿಸಿಕೊಂಡು ಹೋಗಬೇಕೆಂದು ರಾಜಕೀಯ ನೇತಾರರು ಅಂದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದರು.
    ಕುರುಬ ಸಮಾಜದವರು ರಾಜ್ಯದಲ್ಲಿ ೬೫ ಲಕ್ಷದಷ್ಟಿದ್ದಾರೆ. ಆದರೆ ಶಾಸಕರಿರುವುದು ಕೇವಲ ೧೨ ಮಂದಿ ಮಾತ್ರ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಎಂದರೂ ಸಮಾಜದ ೩೦ ಶಾಸಕರು ವಿಧಾನಸೌಧಕ್ಕೆ ಆರಿಸಿ ಹೋಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದರು.
    ಹೊಸದುರ್ಗದ ಶ್ರೀ ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.
    ವೇದಿಕೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಉದ್ಯಮಿ ಸಿ.ಮಹೇಶ್‌ಕುಮಾರ್, ಸಮಾಜದ ಮುಖಂಡರುಗಳಾದ ಕರಿಯಪ್ಪ, ಡಾ. ಡಿ. ಪ್ರಭಾಕರ ಬೀರಯ್ಯ, ಡಾ. ಎಚ್. ಆರ್.ನರೇಂದ್ರ, ರಾಕೇಶ್, ಹೇಮಾವತಿ, ವೈ.ರೇಣುಕಮ್ಮ, ಬಿ.ಎಚ್ ವಸಂತ, ಬಿ.ಎಸ್ ನಾಗರಾಜ್, ಬಿ.ಎಸ್.ಗೋಪಾಲ್, ಎಚ್. ರವಿಕುಮಾರ್, ಎನ್.ಸತೀಶ್, ವಿನೋದ್‌ಕುಮಾರ್, ಸಣ್ಣಯ್ಯ, ಕೇಶವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 

ಜ.೨ರವರೆಗೆ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಜ.೨ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಭದ್ರಾ ನದಿಯಿಂದ ತೀರ್ಥ ಕೊಡ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ನಡೆಸಲಾಯಿತು. 

   ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಜ.೨ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಭದ್ರಾ ನದಿಯಿಂದ ತೀರ್ಥ ಕೊಡ ತೆಗೆದುಕೊಂಡು ಅಮ್ಮನವರ ಗರ್ಭಗುಡಿಗೆ ಅಭಿಷೇಕ ನಡೆಸಲಾಯಿತು. 
   ೩೧ರ ಮಂಗಳವಾರ ರಾತ್ರಿ ೮ ಗಂಟೆಗೆ ಭದ್ರಾ ನದಿಯಿಂದ ಶಕ್ತಿ ಕರಗ ತರುವುದು ಮತ್ತು ಅಗ್ನಿಕುಂಡ ತ್ರಿಶೂಲ ಮದ್ರೆಯೊಂದಿಗೆ ದೇವಸ್ಥಾನಕ್ಕೆ ಬಂದು ಸೇರುವ ಕಾರ್ಯಕ್ರಮ ನಡೆಯಲಿದೆ. 
   ಜ.೧ರಂದು ಬುಧವಾರ ಬೆಳಿಗ್ಗೆ ೫ ಗಂಟೆಗೆ ಪೊಂಗಲ್ ಹಾಗು ಅನ್ನಸಂತರ್ಪಣೆ ಕಾರ್ಯಕ್ರಮ ಮತ್ತು ಸಂಜೆ ೪ ಗಂಟೆಗೆ ಶ್ರೀ ಮಾರಿಯಮ್ಮ ದೇವಿಯ ರಾಜಬೀದಿ ಉತ್ಸವ ಹಾಗು ಮಹಾಮಂಗಳಾರತಿಯೊಂದಿಗೆ ಪೂಜೆ ನಡೆಯಲಿದೆ. 
    ಜ.೨ರಂದು ಗುರುವಾರ ಅಮ್ಮನವರಿಗೆ ಅರಿಶಿನ ನೀರಿನ ಅಭಿಷೇಕ ನಡೆಯಲಿದ್ದು, ಸಂಜೆ ೬ ಗಂಟೆಗೆ ರಂಸಮಂಜರಿ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. 
 

ಲೋಕಾಯುಕ್ತಕ್ಕೆ ೯ಕ್ಕೂ ಹೆಚ್ಚು ದೂರು ಸಲ್ಲಿಕೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯಿತು. 
    ಭದ್ರಾವತಿ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಇಲಾಖೆಗೆ ಸೋಮವಾರ ಸುಮಾರು ೯ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. 
    ನಗರಸಭೆ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪರವರಿಗೆ ತಾಲೂಕು ಆಡಳಿತ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ಧ ದೂರುಗಳು ಸಲ್ಲಿಕೆಯಾದವು. 
    ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ದೂರು ಸಲ್ಲಿಸಿ, ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೨೮ ಕೋ.ರು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಫುಟ್‌ಪಾತ್ ಕಾಮಗಾರಿ ವಿಳಂಬವಾಗಿದ್ದು, ಅಲ್ಲದೆ ಕಳಪೆ ಗುಣಮಟ್ಟದಿಂದ ಕೂಡಿದೆ ಇದರ ಕ್ರಮ ಕೈಗೊಳ್ಳುವಂತೆ ಹಾಗು ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 
    ಸಾಮಾಜಿಕ ಹೋರಾಟಗಾರ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ ಶಶಿಕುಮಾರ್ ಗೌಡ, ಶಿಕ್ಷಕನೋರ್ವನ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಶಾಲೆಯೊಂದರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಹಾಗು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಡೊನೇಷನ್ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. 
    ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್ ದೂರು ಸಲ್ಲಿಸಿ, ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳ ಸ್ಥಳದಲ್ಲಿ ಕರ್ನಾಟಕ ಪಾರದರ್ಶಕ ೨೦೧೬ರ ಕಾಯ್ದೆಯಡಿ ಕಾಮಗಾರಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 
    ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್‌ರವರು ದೂರು ಸಲ್ಲಿಸಿ, ತಮಗೆ ಸೇರಿದ ನಗರದ ಜೇಡಿಕಟ್ಟೆಯಲ್ಲಿರುವ ನಿವೇಶನದ ಜಾಗದ ಅಳತೆಯಲ್ಲಿ ೧೦ ಅಡಿ ಜಾಗ ವಂಚನೆಯಾಗಿದ್ದು, ಇದಕ್ಕೆ ಕಾರಣಕರ್ತರಾಗಿರುವ ಸರ್ವೇಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  
    ಉಜ್ಜನಿಪುರ ನಗರಸಭೆ ವಾರ್ಡ್ ೨೨ವ್ಯಾಪ್ತಿಯಲ್ಲಿ ಸುಮಾರು ೩೦೦೦ ಆಶ್ರಯ ಮನೆಗಳಿಗಿದ್ದು, ಈ ಭಾಗದ ಗೊಂದಿ ನಾಲೆಯಲ್ಲಿ ಹರಿಯುತ್ತಿರುವ ನೀರಿಗೆ ತ್ಯಾಜ್ಯ ಎಸೆಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರವಿಕುಮಾರ್ ಎಂಬುವರು ದೂರು ಸಲ್ಲಿಸಿ ಮನವಿ ಮಾಡಿದ್ದಾರೆ. 
    ಉಳಿದಂತೆ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದಾಗಿ ಕಳೆದ ೩ ವರ್ಷಗಳಿಂದ ರಥೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಹಾಗು ಭಕ್ತರು ನಿರಾಸೆಗೊಂಡಿದ್ದು, ತಕ್ಷಣ ನಗರಸಭೆ ಆಡಳಿತ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ನ್ಯಾಯವಾದಿ ಸುಧೀಂದ್ರ ಮಾತನಾಡಿ, ನಗರದ ಪ್ರಮುಖ ವಾಣಿಜ್ಯ ರಸ್ತೆಯೊಂದರಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ಮಾಲೀಕರು ಚರಂಡಿಗೆ ಮೀಸಲಿಟ್ಟಿರುವ ಜಾಗವನ್ನು ಅತಿಕ್ರಮಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 
    ಒಟ್ಟಾರೆ ೯ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. ಸಭೆಯಲ್ಲಿ ಉಪತಹಸೀಲ್ದಾರ್ ಮಂಜ್ಯಾನಾಯ್ಕ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ತಾಲೂಕು ಕಂದಾಯ ಇಲಾಖೆ, ನಗರಸಭೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 

Sunday, December 29, 2024

ಹಳೇನಗರ ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ : ೬೫ ದಾನಿಗಳಿಂದ ರಕ್ತದಾನ

ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರರವರ ಸಹಯೋಗದೊಂದಿಗೆ ಭದ್ರಾವತಿ ನಗರದ ಹೊಸಮನೆ ಶಿವಾಜಿ ಸರ್ಕಲ್, ಹಳೇನಗರ, ನ್ಯೂಟೌನ್ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಉದ್ಘಾಟಿಸಿದರು. 
    ಭದ್ರಾವತಿ: ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರರವರ ಸಹಯೋಗದೊಂದಿಗೆ ನಗರದ ಹೊಸಮನೆ ಶಿವಾಜಿ ಸರ್ಕಲ್, ಹಳೇನಗರ, ನ್ಯೂಟೌನ್ ಮತ್ತು ಸಂಚಾರಿ ಪೊಲೀಸ್ ಠಾಣೆಗಳ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಉದ್ಘಾಟಿಸಿದರು. 
    ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್, ಪೇಪರ್‌ಟೌನ್ ಪೊಲೀಸ್ ಠಾಣೆ ಠಾಣಾಧಿಕಾರಿ ನಾಗಮ್ಮ, ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕರಾದ ಚಂದ್ರಶೇಖರ್ ನಾಯ್ಕ, ಮಂಜುನಾಥ ಕುರಿ, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲ ಸೇರಿದಂತೆ ವಿವಿಧ ಠಾಣೆಗಳ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ಆಶಾ ಜ್ಯೋತಿ ರಕ್ತಕೇಂದ್ರದ ಸಿಬ್ಬಂದಿಗಳು, ನಗರದ ಜೀವ ಸಂಜೀವಿನ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಹರೀಶ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಹಳೇನಗರ ಪೊಲೀಸ್ ಠಾಣೆ ಆವರಣದಲ್ಲಿ ಜರುಗಿದ ಶಿಬಿರದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಸಾರ್ವಜನಿಕರು ಸೇರಿದಂತೆ ಒಟ್ಟು ೬೫ ದಾನಿಗಳು ರಕ್ತದಾನ ಮಾಡಿದರು. 
    ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಹುದ್ದೆಯಲ್ಲಿರುವ ಹಾಲೇಶಪ್ಪನವರು ಓರ್ವ ರಕ್ತದಾನಿಯಾಗಿದ್ದು, ಅಲ್ಲದೆ ಪರಿಸರ ಪ್ರೇಮಿಯಾಗಿದ್ದಾರೆ. ಹಾಲೇಶಪ್ಪನವರು ಸುಮಾರು ೪೦ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದು, ಅಲ್ಲದೆ ರಕ್ತ ಅವಶ್ಯಕತೆಯ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿದ್ದಾರೆ.  ಇವರ ಪ್ರಯತ್ನದಿಂದಾಗಿ ಪ್ರತಿ ಭಾನುವಾರ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಸಹಕಾರ ಪಡೆದು ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ. ಶಿಬಿರ ಯಶಸ್ವಿಗೊಳಿಸಿದ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಸರ್ವ ಸದಸ್ಯರ ಸಭೆ : ರಾಜ್ಯಾಧ್ಯಕ್ಷರಾಗಿ ವಿ. ವಿನೋದ್ ಪುನರ್ ಆಯ್ಕೆ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ  ಪದಾಧಿಕಾರಿಗಳ ಆಯ್ಕೆ ಸಭೆ ಭದ್ರಾವತಿ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿರುವ ಒಕ್ಕೂಟದ ಕೇಂದ್ರ ಕಾರ್ಯಾಲಯದಲ್ಲಿ ಜರುಗಿತು. 
    ಭದ್ರಾವತಿ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ  ಪದಾಧಿಕಾರಿಗಳ ಆಯ್ಕೆ ಸಭೆ ನಗರದ ಸಿ.ಎನ್ ರಸ್ತೆ, ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿರುವ ಒಕ್ಕೂಟದ ಕೇಂದ್ರ ಕಾರ್ಯಾಲಯದಲ್ಲಿ ಜರುಗಿತು. 
    ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲೆಕ್ಕಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಲಾಯಿತು. ಅಲ್ಲದೆ ಕಾರ್ಮಿಕರ ಕುಂದು ಕೊರತೆಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಂತರ ನೂತನ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. 
    ರಾಜ್ಯಾಧ್ಯಕ್ಷರಾಗಿ ವಿ. ವಿನೋದ್ ಪುನರ್ ಆಯ್ಕೆಯಾಗಿದ್ದು, ರಾಜ್ಯ ಉಪಾಧ್ಯಕ್ಷರಾಗಿ ಸುರೇಶ್, ಶಿವಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ಪ,  ಕಾರ್ಯದರ್ಶಿಯಾಗಿ ರಮೇಶ್, ಸಹ ಕಾರ್ಯದರ್ಶಿಯಾಗಿ ಆಶೀರ್ವಾದ್, ಖಜಾಂಚಿಯಾಗಿ ಸುಶೀಲ ಮತ್ತು ನಿರ್ದೇಶಕರಾಗಿ ಶಶಿಕುಮಾರ್, ಪವಿತ್ರ, ವೆಂಕಟೇಶ್, ಮೋಹನ್, ಜಗನ್ನಾಥ್, ನೇತ್ರಾವತಿ, ಶೇಖರಪ್ಪ ಉಬ್ಳೆಬೈಲು, ಭಾಗ್ಯ, ಸಂದೇಶ ಪೈ, ಗೌರವ ಸಲಹೆಗಾರರಾಗಿ ಬಿ.ಆರ್ ಯಲ್ಲಪ್ಪ, ರಾಮಾಚಾರಿ ಹಾಗೂ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಮಂಜುನಾಥ್‌ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಸೆಂದಿಲ್‌ಕುಮಾರ್, ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ತೇಜುನಾಯಕ್. ಭದ್ರಾವತಿ ಗ್ರಾಮಾಂತರ ಅಧ್ಯಕ್ಷರಾಗಿ ವಸಂತ್‌ರಾವ್, ಭದ್ರಾವತಿ ನಗರ ಅಧ್ಯಕ್ಷರಾಗಿ ಜಾರ್ಜ್ ಮಾರ್ಟಿನ್, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷರಾಗಿ ಮಂಜುಳಾ ಸೇರಿದಂತೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 
    ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೆ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ಬೈಲಾ ನಿಯಮಗಳ ಓದಿ ತಿಳಿಸಿ ಪದಗ್ರಹಣ ಮಾಡಲಾಯಿತು.  ನೇತ್ರಾವತಿ ಸ್ವಾಗತಿಸಿ, ಜಯಪ್ಪ ನಿರೂಪಿಸಿ, ಶಶಿಕುಮಾರ್ ವಂದಿಸಿದರು. 

ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ : ರಥಯಾತ್ರೆಗೆ ಅದ್ದೂರಿ ಸ್ವಾಗತ

ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ನೇತೃತ್ವದಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಪ್ರತಿಮೆಗೆ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಪುಷ್ಪ ಮಾಲೆ ಹಾಕುವ ಮೂಲಕ ಸ್ವಾಗತಿಸಿದರು. 
    ಭದ್ರಾವತಿ: ಸಾವಿರಾರು ವರ್ಷಗಳ ಹಿಂದೆ ಕಪಿಲಾ ನದಿ ತೀರದಲ್ಲಿ ಶ್ರೀ ಸುತ್ತೂರು ಕ್ಷೇತ್ರವನ್ನು ದಿವ್ಯ ತಪ್ಪಸ್ಸಿನಿಂದ ಸಂಸ್ಥಾಪಿಸಿ ಬೆಳಗಿದ ಮಹಾಮಹಿಮ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಜ.೨೬ ರಿಂದ ೩೧ರವರೆಗೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಯಾತ್ರೆಯನ್ನು ಭಾನುವಾರ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದ ಸಮೀಪ ಅದ್ದೂರಿಯಾಗಿ ಸ್ವಾಗತಿಸಲಾಯಿತು. 
    ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ನೇತೃತ್ವದಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಪ್ರತಿಮೆಗೆ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ಪುಷ್ಪ ಮಾಲೆ ಹಾಕುವ ಮೂಲಕ ಸ್ವಾಗತಿಸಿದರು. 
    ಪ್ರಮುಖರಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನ್, ಉದ್ಯಮಿ ಬಿ.ಕೆ ಜಗನ್ನಾಥ್, ಡಾ. ಜಿ.ಎಂ ನಟರಾಜ್, ಡಾ. ಬಿ.ಜಿ ಧನಂಜಯ, ಜಗದೀಶ್ ಕವಿ, ಸಿದ್ದಲಿಂಗಯ್ಯ, ನಂದಿನಿ, ಮಲ್ಲಿಕಾಂಬ, ಪೂರ್ಣಿಮಾ, ಹೇಮಾವತಿ ಚಿಗಟೇರಪ್ಪ, ಎಂ. ವಿರುಪಾಕ್ಷಪ್ಪ, ಟಿ.ಜಿ ಬಸವರಾಜಯ್ಯ, ರಾಜೇಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ; ಅಪಘಾತ ನಿಯಂತ್ರಿಸಿ

ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮನವಿ 


ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಭಾನುವಾರ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕಾನೂನು ಉಲ್ಲಂಘಿಸಿದ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ ಸೈಲೆನ್ಸರ್ ಹಾಗು ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ಬುಲ್ಡೋಜರ್ ಬಳಸಿ ನಾಶಪಡಿಸಲಾಯಿತು. 
    ಭದ್ರಾವತಿ: ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮನವಿ ಮಾಡಿದರು. 
    ಅವರು ಭಾನುವಾರ ನಗರದ ರಂಗಪ್ಪ ವೃತ್ತದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕಾನೂನು ಉಲ್ಲಂಘಿಸಿದ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ ಸೈಲೆನ್ಸರ್ ಹಾಗು ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ಬುಲ್ಡೋಜರ್ ಬಳಸಿ ನಾಶಪಡಿಸಿದ ನಂತರ ಮಾತನಾಡಿದರು. 
    ವಾಹನ ಸವಾರರು ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿದುಕೊಂಡು ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. 
    ಸಂಚಾರಿ ಪೊಲೀಸ್ ಠಾಣೆ ನೇತೃತ್ವದಲ್ಲಿ ನಗರದ ವಿವಿಧೆಡೆ ವಶಪಡಿಸಿಕೊಳ್ಳಲಾಗಿದ್ದ ಸುಮಾರು ೨೦ಕ್ಕೂ ಹೆಚ್ಚು ಸೈಲೆನ್ಸರ್, ಸುಮಾರು ೩೦೦೦ಕ್ಕೂ ಹೆಚ್ಚು ಕಳಪೆ ಗುಣಮಟ್ಟದ ಮತ್ತು ಅರ್ಧ ಹೆಲ್ಮೆಟ್‌ಗಳನ್ನು ನಾಶಪಡಿಸಲಾಯಿತು. 
    ಹೆಚ್ಚುವರಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಪೊಲೀಸ್ ಉಪ ಅಧೀಕ್ಷಕ ಕೆ.ಆರ್ ನಾಗರಾಜು, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ ಹಂಚಿನಾಳ್, ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲ, ನ್ಯೂಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಭಾರತಿ, ಪೇಪರ್‌ಟೌನ್ ಪೊಲೀಸ್ ಠಾಣೆ ಠಾಣಾಧಿಕಾರಿ ನಾಗಮ್ಮ, ಸೇರಿದಂತೆ ವಿವಿಧ ಠಾಣೆಗಳ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.