Thursday, January 9, 2025

ಜ.೧೬ರಿಂದ ೪೨ ದಿನ ಲ್ಲಿ ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫


ಭದ್ರಾವತಿ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ  ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫ ನಡೆಸುವ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. 
    ಭದ್ರಾವತಿ: ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ಈ ಬಾರಿ ನಗರದ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಕ್ಷೇತ್ರದ ಜನತೆಗೆ ಸುಮಾರು ೪೨ ದಿನಗಳವರೆಗೆ ಹಬ್ಬದ ವಾತಾವರಣದಲ್ಲಿ ಕಾಲ ಕಳೆಯಲು ನೆರವಾಗುತ್ತಿದೆ. ಈ ಹಿನ್ನಲೆಯಲ್ಲಿ ಉತ್ಸವಕ್ಕೆ ಕಾರ್ಮಿಕ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದರು. 
    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೬ ರಿಂದ ಫೆಬ್ರವರಿ ೨೬ರವರೆಗೆ ಉತ್ಸವ ನಡೆಯಲಿದ್ದು, ಉತ್ಸವದ ಸಂಪೂರ್ಣ ಜವಾಬ್ದಾರಿ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ತೆಗೆದುಕೊಂಡಿದೆ ಎಂದರು. 
    ಉತ್ಸವ ಕೇವಲ ವಸ್ತು ಪ್ರದರ್ಶನ ಹಾಗು ಮಕ್ಕಳ ಆಟಿಕೆಗಳಿಗೆ ಸೀಮಿತವಾಗದೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮನರಂಜನೆ ಹಾಗು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮನರಂಜನೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಕ್ಷೇತ್ರದ ಜನತೆಗೆ ಕೆಲ ಸಮಯ ನೆಮ್ಮದಿಯಿಂದ ಕಾಲ ಕಳೆಯಲು ಅವಕಾಶ ಲಭಿಸಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದರು.
    ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಕಾರ್ಖಾನೆ ವತಿಯಿಂದ ವಿಐಎಸ್‌ಎಲ್ ಉತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿಗೆ ಉತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ.  ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ನಡೆಸಲಾಗುತ್ತಿರುವ ಉತ್ಸವ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಐಎಸ್ ಎಲ್ ಉತ್ಸವದ ರೀತಿಯಲ್ಲಿಯೇ ಈ ಉತ್ಸವ ಸಹ ನಡೆಸುವ ಉದ್ದೇಶ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ಹೊಂದಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ಆಯೋಜಕ ಎಚ್. ಪ್ರದೀಪ್ ಕುಮಾರ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Wednesday, January 8, 2025

ನಗರಸಭೆ ವ್ಯಾಪ್ತಿಯಲ್ಲಿಸರ್ಕಾರಿ, ಧಾರ್ಮಿಕ ಕಾರ್ಯಕ್ರಮಗಳು ಹೊರತು ಫ್ಲೆಕ್ಸ್ ಬಳಕೆ ಸಂಪೂರ್ಣ ನಿಷೇಧ

    ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬಳಕೆಯನ್ನು ಜ.೧೬ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದರೆ ಸರ್ಕಾರಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಪ್ರಚಾರಕ್ಕೆ ಪ್ಲೆಕ್ಸ್ ಬಳಸಲು ವಿನಾಯಿತಿ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷ ಹಾಗೂ ಖಾಸಗಿ ವ್ಯಕ್ತಿಗಳ ಭಾವಚಿತ್ರ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್ ತಿಳಿಸಿದರು.
    ಅವರು ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಗರದಲ್ಲಿ ಅಳವಡಿಸಲಾಗಿರುವ ಪ್ಲೆಕ್ಸ್‌ಗಳನ್ನು ಜ.೧೫ರಿಂದ ತೆರವುಗೊಳಿಸಲಾಗುವುದು ಎಂದರು. 
    ಪ್ಲಾಸ್ಟಿಕ್ ಬ್ಯಾನರ್/ಫ್ಲೆಕ್ಸ್ ಮತ್ತು ಕಟೌಟ್‌ಗಳಿಂದ ಪರಿಸರ ಮತ್ತು ನಗರದ ಸೌಂದರ್ಯ ಹಾಳಾಗುತ್ತಿರುವುದಲ್ಲದೆ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ತೊಂದರೆಯಾಗುವುದರಿಂದ ಸಂಪೂರ್ಣವಾಗಿ ನಿಷೇಧಿಸಲು ಈ ಹಿಂದಿನ ಹಲವಾರು ಸಭೆಗಳಲ್ಲಿ ನಿರ್ಣಯವಾಗಿದ್ದರೂ ಸಹ ಕ್ರಮವಹಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಡಿ.೨೬ರಂದು ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವಂತೆ ಜ.೧೬ರಿಂದ ಫ್ಲೆಕ್ಸ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದರು.
ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್‌ನಿಂದ ಸಿ.ಎನ್ ರಸ್ತೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ವರೆಗಿನ ರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಹಾಗೂ ಮಾಧವಾಚಾರ್ ವೃತ್ತದಿಂದ ಬಾರಂದೂರು ಬೈಪಾಸ್‌ವರೆಗೆ ಮಹಾತ್ಮ ಗಾಂಧಿ ರಸ್ತೆ ಎಂದು ನಾಮಕರಣ ಮಾಡಲಾಗಿದ್ದು, ವರ್ತಕರು ಕಡ್ಡಾಯವಾಗಿ ಫಲಕಗಳಲ್ಲಿ ನಮೂದು ಮಾಡದಿದ್ದಲ್ಲಿ ನಗರಸಭೆ ವತಿಯಿಂದ ಕ್ರಮ ಜರುಗಿಸಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪೌರಾಯುಕ್ತರಾದ ಪಿ.ಎಂ ಚನ್ನಪ್ಪನವರ್, ನಗರಸಭಾ ಸದಸ್ಯರುಗಳಾದ ಬಿ.ಕೆ. ಮೋಹನ್, ಬಿ.ಟಿ. ನಾಗರಾಜ್, ವಿ. ಕದಿರೇಶ್, ಚನ್ನಪ್ಪ, ಮೋಹನ್‌ಕುಮಾರ್, ಉದಯ್‌ಕುಮಾರ್, ಲತಾಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎನ್. ಶ್ರೀನಿವಾಸ್ ನಿಧನಕ್ಕೆ ಛಲವಾದಿಗಳ ಸಮಾಜ ಸಂತಾಪ

ಭದ್ರಾವತಿ ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಛಲವಾದಿಗಳ ಸಮಾಜ(ಪ.ಜಾ)ದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಎನ್. ಶ್ರೀನಿವಾಸ್‌ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಛಲವಾದಿಗಳ ಸಮಾಜ(ಪ.ಜಾ)ದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಎನ್. ಶ್ರೀನಿವಾಸ್‌ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. 
    ಸಮಾಜದ ಅಧ್ಯಕ್ಷ ಚನ್ನಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್. ಶ್ರೀನಿವಾಸ್ ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗು ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿ, ಮೌನಾಚರಣೆ ನಡೆಸಲಾಯಿತು. 
    ಸಮಾಜದ ಪ್ರಮುಖರಾದ ನಿರ್ದೇಶಕರಾದ ಶಂಕರಯ್ಯ, ರಂಗಸ್ವಾಮಿ, ಚಂದ್ರಕುಮಾರ್, ಹುಚ್ಚಯ್ಯ, ಗೌರವಾಧ್ಯಕ್ಷ ಎಂ. ನಾಗರಾಜ್, ಕಾರ್ಯದರ್ಶಿ ಎಚ್.ಎಂ ಮಹಾದೇವಯ್ಯ, ರಾಮದಾಸ್, ಚಿಕ್ಕರಾಜು, ನೀಲಕಂಠಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜ.೯ರಂದು ತಾಲೂಕು ೧೧ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಜ.೯ರ ಗುರುವಾರ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆ ಆವರಣದಲ್ಲಿ ತಾಲೂಕು ಹನ್ನೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಜ.೯ರ ಗುರುವಾರ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆ ಆವರಣದಲ್ಲಿ ತಾಲೂಕು ಹನ್ನೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು. 
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಿಗ್ಗೆ ೯.೩೦ಕ್ಕೆ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಿ. ಜಗದೀಶ್ ರಾಷ್ಟ್ರ ಧ್ವಜಾರೋಹಣ ಹಾಗು ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತ ನಾಡ ಧ್ವಜಾರೋಹಣ ಮತ್ತು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. 
    ವಿದ್ಯಾಸಂಸ್ಥೆಯ ೮ನೇ ತರಗತಿ ವಿದ್ಯಾರ್ಥಿ ಮನೀಷ್ ಪಿ ಯಾದವ್ ೧೦ ಗಂಟೆಗೆ ಸಮ್ಮೇಳನ ಉದ್ಘಾಟಿಸಲಿದ್ದು, ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ೯ನೇ ತರಗತಿ ವಿದ್ಯಾರ್ಥಿನಿ ಲಿಖಿತ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. 
    ಬೆಳಿಗ್ಗೆ ೧೧.೩೦ ರಿಂದ ೧೨.೧೫ರವರೆಗೆ ಗೋಷ್ಠಿ-೧, ಕವಿಗೋಷ್ಠಿ, ಮಧ್ಯಾಹ್ನ ೧೨.೧೫ರಿಂದ ೧ ಗಂಟೆವರೆಗೆ ಗೋಷ್ಠಿ-೨, ಕವಿಗೋಷ್ಠಿ ಹಾಗು ಮಧ್ಯಾಹ್ನ ೨ ಗಂಟೆಯಿಂದ ಗೋಷ್ಠಿ-೩, ಪ್ರಚಲಿತ ವಿದ್ಯಾಮಾನಗಳು ನಡೆಯಲಿವೆ. ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ವಿ ಪಂಚಾಕ್ಷರಿ, ಶಿಕ್ಷಣ ಸಂಯೋಜಕ ದಯಾನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಮ್ಮೇಳನ ಯಶಸ್ವಿಗೊಳಿಸುವಂತೆ ಕೋರಿದರು. 
    ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಜೆ. ಉಮಾಪತಿ, ಖಜಾಂಚಿ ಗಂಗರಾಜ್, ಸಂಘಟನಾ ಕಾರ್ಯದರ್ಶಿ ಬಿ. ಕಾಂತಪ್ಪ, ಕಮಲಾಕುಮಾರಿ, ಮಲ್ಲಿಕಾಂಬ ವಿರೂಪಾಕ್ಷಪ್ಪ, ಕೋಡ್ಲು ಯಜ್ಞಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Tuesday, January 7, 2025

ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್, ಉಪಾಧ್ಯಕ್ಷರಾಗಿ ಎಂ. ಮಂಜುಳ ಅವಿರೋಧ ಆಯ್ಕೆ

ಟಿ.ಎಸ್ ದುಗ್ಗೇಶ್ 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಭಾವಸಾರ ಕ್ಷತ್ರಿಯ ಕೋ-ಆಪರೆಟೀವ್ ಸೊಸೈಟಿ ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್ ಹಾಗು ಉಪಾಧ್ಯಕ್ಷರಾಗಿ ಎಂ. ಮಂಜುಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೨೦೨೫-೨೦೩೦ನೇ ಸಾಲಿನ ೫ ವರ್ಷದ ಅವಧಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಟಿ.ಎಸ್ ದುಗ್ಗೇಶ್ ಅಧ್ಯಕ್ಷರಾಗಿ ಸತತ ೫ನೇ ಬಾರಿಗೆ ಪುನರಾಯ್ಕೆಯಾಗಿದ್ದು, ಈ ಬಾರಿ ಉಪಾಧ್ಯಕ್ಷರಾಗಿ ಎಂ. ಮಂಜುಳಾ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ನಿರ್ದೇಶಕರು ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕ ವಿ. ಮೋತಿನಾಯ್ಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 


ಎಂ. ಮಂಜುಳ  
  ಕಾರ್ಯದರ್ಶಿ ಎ.ಎಸ್ ಜಗದೀಶ ಕುಮಾರ್, ಭಾವಸರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್, ಹಿರಿಯ ಮುಖಂಡರಾದ ಎಂ. ಸತೀಶ್, ಆರ್. ಜಗನ್ನಾಥ್, ಶ್ರೀಧರ, ಮಂಜುನಾಥ ಸ್ವಾಮಿ,  ಆರ್. ರಮೇಶ್ ಸೇರಿದಂತೆ ಇನ್ನಿತರರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ.

ಎನ್. ಶ್ರೀನಿವಾಸ್ ನಿಧನ


ಎನ್. ಶ್ರೀನಿವಾಸ್ 
    ಭದ್ರಾವತಿ: ನಗರದ ಸಿದ್ದಾಪುರ ನಿವಾಸಿ, ಛಲವಾದಿ ಸಮಾಜದ ಮುಖಂಡ ಎನ್. ಶ್ರೀನಿವಾಸ್(೬೩) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಶ್ರೀನಿವಾಸ್ ಮೈನ್ಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆ ಬುಧವಾರ ಸಿದ್ದಾಪುರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  
    ಶ್ರೀನಿವಾಸ್‌ರವರು ಪ್ರಸ್ತುತ ಜಿಲ್ಲಾ ಛಲವಾದಿ ಸಮಾಜದ ಗೌರವಾಧ್ಯಕ್ಷರಾಗಿದ್ದರು. ಅಲ್ಲದೆ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
    ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಇವರ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾಮಟ್ಟದ ಹಾಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಛಲವಾದಿಗಳ ಸಮ್ಮೇಳನ ನಡೆಸಲಾಗಿತ್ತು. ಇವರ ನಿಧನಕ್ಕೆ ತಾಲೂಕು ಛಲವಾದಿಗಳ ಮಹಾಸಭಾ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಕೃಷ್ಣಮೂರ್ತಿ ನಿಧನ

ಕೃಷ್ಣಮೂರ್ತಿ 
    ಭದ್ರಾವತಿ: ತಾಲೂಕು ದೇವಾಂಗ ಸಮಾಜದ ಮಾಜಿ ಅಧ್ಯಕ್ಷರು, ಹಳೇನಗರ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮೀಪದ ನಿವಾಸಿ ಕೃಷ್ಣಮೂರ್ತಿ(೫೭) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕೃಷ್ಣಮೂರ್ತಿಯವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಯಿ ಗುಂಡಣ್ಣ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ನಗರದ ದೇವಾಂಗ ಸಮಾಜದ ಪ್ರಮುಖರು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.