Monday, January 13, 2025

ತಳ್ಳಿಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಧರ್ಮೇಗೌಡ, ಉಪಾಧ್ಯಕ್ಷರಾಗಿ ರವೀಂದ್ರನಾಯ್ಡು

ಭದ್ರಾವತಿ ತಾಲೂಕಿನ ತಳ್ಳಿಕಟ್ಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಧರ್ಮೇಗೌಡ(ಕುಮ್ರಿ ಚಂದ್ರಣ್ಣ) ಹಾಗು ಉಪಾಧ್ಯಕ್ಷರಾಗಿ ರವೀಂದ್ರನಾಯ್ಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ : ತಾಲೂಕಿನ ತಳ್ಳಿಕಟ್ಟೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಧರ್ಮೇಗೌಡ(ಕುಮ್ರಿ ಚಂದ್ರಣ್ಣ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಭಾನುವಾರ ನಡೆದ ಚುನಾವಣೆಯಲ್ಲಿ ೧೨ ನಿರ್ದೇಶಕರನ್ನು ಹೊಂದಿರುವ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಧರ್ಮೇಗೌಡ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ರವೀಂದ್ರನಾಯ್ಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಡಿ.೨೮ರಂದು ಸಹಕಾರ ಸಂಘಕ್ಕೆ ನೂತನ ನಿರ್ದೇಶಕರು ಆಯ್ಕೆಯಾಗಿದ್ದರು. 
    ನೂತನ ಅಧ್ಯಕ್ಷ ಧರ್ಮೇಗೌಡ ಹಾಗು ಉಪಾಧ್ಯಕ್ಷ ರವೀಂದ್ರನಾಯ್ಡು ಅವರನ್ನು ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಧರ್ಮಮೂರ್ತಿ ಸೇರಿದಂತೆ ಪಕ್ಷದ ಮುಖಂಡರು ಅಭಿನಂದಿಸಿದ್ದಾರೆ. 

ಮಾಜಿ ಸೈನಿಕ, ಪಿಡಿಓ ಜಿ. ವೆಂಕಟೇಶ್ ನಿಧನ

ಜಿ. ವೆಂಕಟೇಶ್ 
    ಭದ್ರಾವತಿ: ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ), ಮಾಜಿ ಸೈನಿಕ ಜಿ. ವೆಂಕಟೇಶ್(೫೨) ಭಾನುವಾರ ನಿಧನ ಹೊಂದಿದರು. 
    ಪತ್ನಿ, ಪುತ್ರಿ, ತಾಯಿ, ಸಹೋದರ ಹಾಗು ಸಹೋದರಿ ಇದ್ದಾರೆ. ಇವರ ಅಂತ್ಯಕ್ರಿಯೆ ತಾಲೂಕಿನ ಬಾರಂದೂರು ಗ್ರಾಮದ ಇವರ ತೋಟದಲ್ಲಿ ನೆರವೇರಿತು. ವೆಂಕಟೇಶ್‌ರವರು ಕಾರೇಹಳ್ಳಿ-ಬಾರಂದೂರು ಗ್ರಾಮದಲ್ಲಿ ವಾಸವಾಗಿದ್ದರು. 
    ವೆಂಕಟೇಶ್‌ರವರು ತಾಲೂಕು ಮಾಜಿ ಸೈನಿಕರ ಸಂಘದ ನಿರ್ದೇಶಕರಾಗಿದ್ದು, ತಾಲೂಕಿನ ವಿವಿಧೆಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.  ಇವರ ನಿಧನಕ್ಕೆ ತಾಲೂಕು ಮಾಜಿ ಸೈನಿಕರ ಸಂಘ ಸಂತಾಪ ಸೂಚಿಸಿದೆ.  

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಬಿ.ಕೆ ಶಿವಕುಮಾರ್, ಉಪಾಧ್ಯಕ್ಷರಾಗಿ ಮೀರಾಬಾಯಿ

ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್ ಭದ್ರಾವತಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು ಮೀರಾಬಾಯಿ ಉಪಾಧ್ಯಕ್ಷರಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಸಹೋದರ ಬಿ.ಕೆ ಶಿವಕುಮಾರ್ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 
    ಸೋಮವಾರ ನಡೆದ ಚುನಾವಣೆಯಲ್ಲಿ ಸಾಲ ಪಡೆಯದ ಕ್ಷೇತ್ರದ ನಿರ್ದೇಶಕ ಸ್ಥಾನದಿಂದ ಆಯ್ಕೆಯಾಗಿದ್ದ ಬಿ.ಕೆ ಶಿವಕುಮಾರ್ ಅಧ್ಯಕ್ಷರಾಗಿ ಮತ್ತು ತಾಲೂಕಿನ ವೀರಾಪುರ ಕ್ಷೇತ್ರದ ನಿರ್ದೇಶಕ ಸ್ಥಾನದಿಂದ ಆಯ್ಕೆಯಾಗಿದ್ದ ಮೀರಾಬಾಯಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ನಿರ್ದೇಶಕರಾದ ಎಸ್. ವಿರುಪಾಕ್ಷಪ್ಪ, ಎಸ್. ಕೃಷ್ಣಪ್ಪ, ಜಿ.ಎಂ ಚನ್ನಬಸಪ್ಪ, ಬಿ. ನಾಗೇಶ್, ಎಚ್.ಎಲ್ ಏಕಾಂತ, ಕೆ. ಶ್ರೀನಿವಾಸ್, ಎನ್.ಟಿ ಸಂಗನಾಥ, ಟಿ.ಎಸ್ ಮೌನೇಶ್ವರ, ಕೆ. ಕೇಶವಚಾರ್, ಬಿ. ಶಶಿಕಲಾ ಮತ್ತು ಸುಲೋಚನ ಸೇರಿದಂತೆ ಇನ್ನಿತರರು ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು. 
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ಎನ್‌ಟಿಸಿ ನಾಗೇಶ್, ಬಸವಂತಪ್ಪ, ವೈ. ನಟರಾಜ್, ಎಂ.ಎಸ್ ರವಿ,  ಸೂಡಾ ಸದಸ್ಯ ಎಚ್. ರವಿಕುಮಾರ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಬಿ.ಕೆ ಶಿವಕುಮಾರ್ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ರವರ ಬೀಗರಾಗಿದ್ದು, ಸಹೋದರ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು ಅಭಿನಂದಿಸಿದ್ದಾರೆ. 
 
ನಾನು ರೈತರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಜಿಲ್ಲೆಯಲ್ಲಿರುವ ಲೋಕಸಭೆ ಹಾಗು ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಸಹಕಾರ ಪಡೆದುಕೊಂಡು ಸರ್ಕಾರದ ಅನುದಾನ ಬಳಸಿಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಅಲ್ಲದೆ ಬ್ಯಾಂಕ್ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ಶಾಸಕ ಬಿ.ಕೆ ಸಂಗಮೇಶ್ವರ್, ಸಹಕಾರ ಸಚಿವ ಕೆ.ಎನ್ ರಾಜಣ್ಣ ಹಾಗು ಬ್ಯಾಂಕ್ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 
                                                               - ಬಿ.ಕೆ ಶಿವಕುಮಾರ್, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್, ಭದ್ರಾವತಿ 
 

Sunday, January 12, 2025

ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ಓಂ ಕ್ರಿಕೆಟರ್‍ಸ್ ತಂಡಕ್ಕೆ ಮೊದಲ ಬಹುಮಾನ, ಟ್ರೋಫಿ

ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರ ಜನ್ಮದಿನದ ಅಂಗವಾಗಿ ಓಂ ಕ್ರಿಕೆಟರ್‍ಸ್ ಕ್ಲಬ್ ವತಿಯಿಂದ ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ'ಯಲ್ಲಿ ನಗರದ ಓಂ ಕ್ರಿಕೆಟರ್‍ಸ್ ತಂಡ ಮೊದಲ ಬಹುಮಾನದೊಂದಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ. 
    ಭದ್ರಾವತಿ : ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ ಬಿ.ಎಸ್ ಬಸವೇಶ್‌ರವರ ಜನ್ಮದಿನದ ಅಂಗವಾಗಿ ಓಂ ಕ್ರಿಕೆಟರ್‍ಸ್ ಕ್ಲಬ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ `ಓಂ ಕಪ್ ಕ್ರಿಕೆಟ್ ಪಂದ್ಯಾವಳಿ'ಯಲ್ಲಿ ನಗರದ ಓಂ ಕ್ರಿಕೆಟರ್‍ಸ್ ತಂಡ ಮೊದಲ ಬಹುಮಾನದೊಂದಿಗೆ ಟ್ರೋಫಿ ತನ್ನದಾಗಿಸಿಕೊಂಡಿದೆ. 
    ಭಾನುವಾರ ಜರುಗಿದ ಅಂತಿಮ ಪಂದ್ಯಾದಲ್ಲಿ ಬೆಂಗಳೂರಿನ ಜೈ ಕರ್ನಾಟಕ ತಂಡ ವಿರುದ್ಧ ಓಂ ಕ್ರಿಕೆಟರ್‍ಸ್ ತಂಡ ಜಯಭೇರಿ ಭಾರಿಸಿತು. ಮೊದಲನೇ ಬಹುಮಾನ ೨.೫೦ ಲಕ್ಷ ರು. ನಗದು ಮತ್ತು ಟ್ರೋಫಿ ಪಡೆದುಕೊಂಡಿತು. ಎರಡನೇ ಬಹುಮಾನ ಜೈ ಕರ್ನಾಟಕ ತಂಡ ಎರಡನೇ ಬಹುಮಾನ ೧.೨೫ ಲಕ್ಷ ರು. ನಗದು ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು. ಮೂರನೇ ಬಹುಮಾನ ಸಚಿನ್ ಇಲೆವೆನ್ ಬೆಂಗಳೂರು ಮತ್ತು ಪ್ರಕೃತಿ ನ್ಯಾಶ್ ತಂಡಗಳು ಹಂಚಿಕೊಂಡಿವೆ. 
    ಚಲನಚಿತ್ರ ನಟ ವಸಿಷ್ಠ ಸಿಂಹ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು. ಓಂ ಕ್ರಿಕೆಟರ್‍ಸ್ ಕ್ಲಬ್ ಅಧ್ಯಕ್ಷ ಗಿರೀಶ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಎಂ. ಶಿವಕುಮಾರ್, ಪ್ರಮುಖರಾದ ಕುಮಾರ್(ಮಾಸ್ಟರ್), ಅಭಿಲಾಷ್, ಚಂದ್ರಶೇಖರ್, ಶಿವು ಪಾಟೀಲ್, ಕೇಶವ, ಮಂಜುನಾಥ್ ಕೊಯ್ಲಿ ಮತ್ತು  ವೈ. ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕೊಲೆ ಪ್ರಕರಣದಲ್ಲಿ ೨೬ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

೨೬ ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ಭದ್ರಾವತಿ: ೨೬ ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
    ೧೯೯೯ನೇ ಸಾಲಿನ ಹಳೇನಗರ ಪೊಲೀಸ್ ಠಾಣೆಯ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚುವ ಮೂಲಕ ಬಂಧಿಸಲಾಗಿದ್ದು, ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದರಿಂದ ಅಪರಾಧಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
    ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ್ ನಾಯ್ಕ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. 
 

ನಮಿತಾ ಆರ್ ಶೆಟ್ಟಿಗೆ ಪಿಎಚ್‌ಡಿ ಪದವಿ


ನಮಿತಾ ಆರ್ ಶೆಟ್ಟಿ 
ಭದ್ರಾವತಿ: ಕುವೆಂಪು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ನಮಿತಾ ಆರ್ ಶೆಟ್ಟಿಯವರು ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
    "ಡೆವಲಪ್‌ಮೆಂಟ್ ಆಫ್ ರಿವರ್ಸಿಬಲ್ ಡಾಟಾ ಹೈಡಿಂಗ್ ಟೆಕ್ನಿಕ್ವೆಸ್ ಫಾರ್ ಡಿಜಿಟಲ್ ಇಮೇಜಸ್"  ವಿಷಯದ ಕುರಿತು ಅಧ್ಯಯನ ನಡೆಸಿದ್ದರು. ಇವರು ಕಂಪ್ಯೂಟರ್ ಸೈನ್ಸ್ ವಿಭಾಗದ  ಪ್ರಾಧ್ಯಾಪಕರಾದ ಡಾ.ಯೋಗೀಶ್ ನಾಯ್ಕ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
    ಶಂಕರಘಟ್ಟದ ರೂಪ ರಮೇಶ್ ಶೆಟ್ಟಿ ದಂಪತಿ ಪುತ್ರಿಯಾಗಿದ್ದು, ಶಿವಮೊಗ್ಗ ಕ್ಲಿಫ್ ಎಂಬೆಸ್ಸಿ ಮಾಲೀಕರಾದ ಆರ್. ರೋಹಿತ್‌ರವರ ಪತ್ನಿಯಾಗಿದ್ದಾರೆ. ಜ. ೨೨ ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರಮಾಣ ಪತ್ರ ನೀಡಲಿದ್ದಾರೆ.

ಗ್ರಾಮಾಂತರ ಠಾಣೆಯಿಂದ ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಬೈಕ್ ಜಾಥಾ

ಭದ್ರಾವತಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಭಾನುವಾರ ಬೈಕ್ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು. 
    ಭದ್ರಾವತಿ : ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಭಾನುವಾರ ಬೈಕ್ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು. 
    ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂದಿ, ಗೋಣಿಬೀಡು ಮತ್ತು ಶಂಕರಘಟ್ಟ ಗ್ರಾಮಗಳಲ್ಲಿ ಬೈಕ್ ಜಾಥಾ ನಡೆಸುವ ಮೂಲಕ ವಿದ್ಯಾರ್ಥಿಗಳು, ಗ್ರಾಮಸ್ಥರು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚಾರ ನಿಯಮಗಳ ಪಾಲನೆ, ಅಪಘಾತ ನಿಯಂತ್ರಣ ಕುರಿತು ಮತ್ತು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
    ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳರವರ ನೇತೃತ್ವದಲ್ಲಿ ನಡೆದ ಬೈಕ್ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮಾಂತರ ಠಾಣೆ ಉಪ ನಿರೀಕ್ಷಕರಾದ ಶಿಲ್ಪ ನಾಯನೇಗಲಿ, ಮಹೇಶ್ ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.