Thursday, January 16, 2025

ಶರಾವತಿ ಸಂತ್ರಸ್ಥರಿಗೆ ಮಂಜೂರಾತಿಯಾದ ಭೂಮಿಯಲ್ಲಿ ಮರಕಡಿತಲೆ ಪ್ರಕರಣ : ಪ್ರತಿಭಟನೆ

- ಮರ ಕಡಿತಲೆ ಮಾಡದೆ ವಿನಾಕಾರಣ ಕಿರುಕುಳ, ಸಂತ್ರಸ್ಥರ ಆರೋಪ 
- ಅಕ್ರಮವಾಗಿ ಮರಗಳ ಕಡಿತಲೆಗೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು, ಜೆಡಿಎಸ್ ಆರೋಪ 

ಭದ್ರಾವತಿ ತಾಲೂಕಿನ ಎಮ್ಮೆದೊಡ್ಡಿ(ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ಎಮ್ಮೆದೊಡ್ಡಿ(ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 
    ಗ್ರಾಮದ ಸರ್ವೇ ನಂ.೮ರಲ್ಲಿ ಶರಾವತಿ ಸಂತ್ರಸ್ಥರಾದ ಸೀತಾರಾಮ ಬಿನ್ ಮಂಜಪ್ಪ ಎಂಬುವರಿಗೆ ಕಂದಾಯ ಭೂಮಿ ಮಂಜೂರು ಮಾಡಲಾಗಿದ್ದು, ಈ ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸುವಂತೆ ಆದೇಶವಿದ್ದರೂ ಸಹ ಕಳೆದ ೭ ವರ್ಷಗಳಿಂದ ಹಲವಾರು ಬಾರಿ ಮರಕಡಿತಲೆ ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಹಲವು ಬಾರಿ ಮರಗಳ ಕಳ್ಳತನ ನಡೆದಿದ್ದು, ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸಹ ವಿನಾಕಾರಣ ದೂರು ನೀಡಿದ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಯಿತು. 
    ಈ ನಡುವೆ ಜ.೧೪ರಂದು ಮರಗಳ ಕಡಿತಲೆ ನಡೆದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಕಡಿತಲೆ ಮಾಡಿದ ಮರಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಈ ಸಂಬಂಧ ಪ್ರಕರಣ ಸಹ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. 
    ಮರಗಳನ್ನು ಅಕ್ರಮವಾಗಿ  ಕಡಿದಿದ್ದು,  ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ : 
    ಸಂಕ್ರಾಂತಿ ಹಬ್ಬದ ದಿನದಂದು ಮರ ಕಳ್ಳರು ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿದ್ದು, ಮಾಹಿತಿ ತಿಳಿದಿದ್ದರೂ ಸಹ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸಿದ್ದಾರೆಂದು ಜೆಡಿಎಸ್ ಪಕ್ಷ ಆರೋಪಿಸಿದೆ. 
    ಎಮ್ಮೆಹಟ್ಟಿ ಸರ್ವೇ ನಂ. ೮ರಲ್ಲಿ ಅರಣ್ಯ ಇಲಾಖೆ ಬೆಳಸಿದ್ದ ಸುಮಾರು ೩೫ - ೩೭ ಮರಗಳನ್ನು ಮರ ಕಳ್ಳರು ಕಡಿದಿದ್ದು, ಮರಗಳನ್ನು ಸಾಗಿಸುತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ವಲಯದ ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಕ್ರಮಕೈಗೊಳ್ಳದೆ ಇದ್ದಾಗ ನಂತರ ಶಿವಮೊಗ್ಗ ತನಿಖಾದಳಕ್ಕೆ ಮಾಹಿತಿ ನೀಡಲಾಗಿದ್ದಾರೆ.  ಶಿವಮೊಗ್ಗ ತನಿಖಾದಳದ ಸಿಬ್ಬಂದಿಗಳು ಸ್ಥಳಕ್ಕೆ ಹೋಗುವಷ್ಟರಲ್ಲಿ ಸುಮಾರು ೩೦ ಲೋಡ್‌ನಷ್ಟು ಮರಗಳನ್ನು ಸಾಗಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.  ಉಳಿದ ೩ ಲೋಡ್‌ನಷ್ಟು ಮರಗಳನ್ನು ವಶಕ್ಕೆ ಪಡೆಯಲಾಗಿದ್ದು, ವಲಯ ಅರಣ್ಯ ಕಚೇರಿ ಆವರಣದಲ್ಲಿ ಸಂಗ್ರಹಿಸಲಾಗಿದೆ. ಸ್ಥಳೀಯ ಆರಣ್ಯ ಅಧಿಕಾರಿಗಳಿಗೆ ತನಿಖಾ ದಳ ವರದಿ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿರುವುದು ತಿಳಿದು ಬಂದಿದೆ. ಆದರೆ ಸ್ಥಳೀಯ ಅರಣ್ಯ ಅಧಿಕಾರಿಗಳು  ಪ್ರಭಾವಿ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ತಿಪ್ಪೆ ಸಾರಿಸುವ ಕೆಲಸ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಜೆಡಿಎಸ್ ಪಕ್ಷ ಆರೋಪಿಸಿದ್ದು, ಅಲ್ಲದೆ ಈ ಸಂಬಂಧ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ತಿಳಿಸಿದೆ. 

Wednesday, January 15, 2025

ಪ್ರಕಾಶ್ ರಾಜ್ ನಿಧನ

ಪ್ರಕಾಶ್ ರಾಜ್
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಲಪ್ಪ ಶೆಡ್ ನಿವಾಸಿ ಪ್ರಕಾಶ್ ರಾಜ್(೫೦) ಬುಧವಾರ ನಿಧನ ಹೊಂದಿದರು. 
    ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ಮಿಲ್ಟ್ರಿಕ್ಯಾಂಪ್, ಬೈಪಾಸ್ ರಸ್ತೆ, ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಲಿದೆ. 
    ಹಾಲಪ್ಪ ಶೆಡ್ ಅಂಗಾಳ ಪರಮೇಶ್ವರಿ ದೇವಸ್ಥಾನದ ಅರ್ಚಕ ರಮೇಶ್ ಹಾಗು ಮೋಹನ್ ಕುಮಾರ್ ಸೇರಿದಂತೆ ದೇವಸ್ಥಾನ ಸಮಿತಿ ಪ್ರಮುಖರು ಸಂತಾಪ ಸೂಚಿಸಿದ್ದಾರೆ. 

ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ, ಕಡಿತಕ್ಕೊಳಗಾದವರಿಗೆ ೫,೦೦೦ ರು. ನೀಡಿ

ಭದ್ರಾವತಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸಾಮಾಜಿಕ ಹೋರಾಟ ಶಶಿಕುಮಾರ್ ಗೌಡ ನೇತೃತ್ವದಲ್ಲಿ ಬುಧವಾರ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣರವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸಾಮಾಜಿಕ ಹೋರಾಟ ಶಶಿಕುಮಾರ್ ಗೌಡ ನೇತೃತ್ವದಲ್ಲಿ ಬುಧವಾರ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣರವರಿಗೆ ಮನವಿ ಸಲ್ಲಿಸಲಾಯಿತು. 
    ಬೀದಿ ನಾಯಿಗಳ ಹೆಚ್ಚಳದಿಂದಾಗಿ ಗ್ರಾಮಸ್ಥರಿಗೆ, ರಸ್ತೆಗಳಲ್ಲಿ ಸಂಚರಿಸುವ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ವಯೋವೃದ್ಧರು, ಮಹಿಳೆಯರು, ಮಕ್ಕಳು, ಅದರಲ್ಲೂ ಶಾಲೆಗೆ ಹೋಗುವ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ. ಈಗಾಗಲೇ ಈ ಸಂಬಂಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳು ನಡೆದಿವೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ತಕ್ಷಣ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
    ನಗರಸಭೆ ವ್ಯಾಪ್ತಿಯಲ್ಲಿ ನಾಯಿ ಕಡಿತಕ್ಕೊಳಗಾದವರಿಗೆ ೫,೦೦೦ ರು. ಹಣ ನೀಡುತ್ತಿದ್ದು, ಇದೆ ರೀತಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲೂ ಕೂಡ ನಾಯಿ ಕಡಿತಕ್ಕೊಳಗಾದವರಿಗೆ ೫,೦೦೦ ರು. ಹಣ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಮುಂದುವರೆದ ಹೋರಾಟ

ಜ.೧೯ಕ್ಕೆ ೨ ವರ್ಷ ಪೂರ್ಣ : ಇತಿಹಾಸ ಪುಟ ಸೇರಿದ ದಾಖಲೆ  

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ. 
    * ಅನಂತಕುಮಾರ್
    ಭದ್ರಾವತಿ :  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ೧೬ ಜನವರಿ ೨೦೨೩ರಂದು ಕೇಂದ್ರ ಉಕ್ಕು ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿದ್ದು, ಇದನ್ನು ವಿರೋಧಿಸಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ೧೯ ಜನವರಿ ೨೦೨೩ರಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಹೋರಾಟ ೨ ವರ್ಷ ಪೂರೈಸುತ್ತಿದ್ದು, ಆದರೆ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. 
    ದಲಿತ ಚಳುವಳಿ ಸೇರಿದಂತೆ ಹಲವು ಚಳುವಳಿಗಳ ಉದಯಕ್ಕೆ ಕಾರಣವಾಗಿರುವ ಕ್ಷೇತ್ರದಲ್ಲಿ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಹೋರಾಟ ನಡೆದಿಲ್ಲ ಎಂಬುದು ವಿಶೇಷವಾಗಿದೆ. ಶತಮಾನ ಪೂರೈಸಿರುವ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗುತ್ತಿಗೆ, ಕಾಯಂ ಹಾಗೂ ನಿವೃತ್ತ ಕಾರ್ಮಿಕರು ಕಳೆದ ಎರಡು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಹೋರಾಟಕ್ಕೆ ಪ್ರತಿಫಲ ಇನ್ನು ಲಭಿಸಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ. 
    ಕಳೆದ ಸುಮಾರು ಮೂರು ದಶಕಗಳಿಂದ ಸಂಕಷ್ಟದಲ್ಲಿ ಮುನ್ನಡೆಯುತ್ತಿರುವ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುವ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿತ್ತು. ಆದರೆ ನಿರೀಕ್ಷೆಯಂತೆ ಪ್ರಯತ್ನ ಕೈಗೂಡದ ಹಿನ್ನಲೆಯಲ್ಲಿ ಅಂತಿಮವಾಗಿ ೨೦೨೩ರ ಜನವರಿ ತಿಂಗಳಿನಲ್ಲಿ ಮುಚ್ಚುವ ತೀರ್ಮಾನ ಕೈಗೊಂಡಿತ್ತು. ಇದರ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆನೀಡಿದ್ದರು. ಹಲವು ಏಳುಬೀಳುಗಳ ನಡುವೆ ಹೋರಾಟ ಇಂದಿಗೂ ಮುನ್ನಡೆಯುತ್ತಿದೆ. ಕಾರ್ಖಾನೆಯಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಗುತ್ತಿಗೆ ಕಾರ್ಮಿಕರು ೨ ವರ್ಷಗಳಿಂದ ನಿರಂತರವಾಗಿ ಹೋರಾಟ ಮುಂದುವರೆಸಿಕೊಂಡು ಬಂದಿರುವುದೇ ದೊಡ್ಡ ಸವಾಲಾಗಿದೆ. 
    ಜ.೧೬ `ಭದ್ರಾವತಿಯ ಕರಾಳ ದಿನ' : 
    ಕಳೆದ ವರ್ಷ ಹೋರಾಟ ೧ ವರ್ಷ ಪೂರೈಸಿದ್ದ ಸಂದರ್ಭದಲ್ಲಿ ಯೂನಿಯನ್ ವತಿಯಿಂದ ಜ.೧೬ `ಭದ್ರಾವತಿಯ ಕರಾಳ ದಿನ' ಆಚರಿಸಲಾಗಿತ್ತು. ನಗರದ ಪ್ರಮುಖ ವೃತ್ತ, ರಸ್ತೆಗಳು ಸೇರಿದಂತೆ ನಗರಾದ್ಯಂತ ಪಂಜಿನ ಮೆರವಣಿಗೆ ನಡೆಸಲಾಗಿತ್ತು. ಕಾರ್ಖಾನೆ ಮುಂಭಾಗದಿಂದ ಶಿವಮೊಗ್ಗದಲ್ಲಿರುವ ಸಂಸದ ಬಿ.ವೈ ರಾಘವೇಂದ್ರ ಅವರ ನಿವಾಸದವರೆಗೂ ಬೈಕ್ ರ್‍ಯಾಲಿ ನಡೆಸಿ ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. 


    ಹಲವು ವಿಭಿನ್ನ ಹೋರಾಟ:
    ಕಾರ್ಖಾನೆ ಉಳಿವಿಗಾಗಿ ಕಳೆದ ೨ ವರ್ಷದಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದು, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ, ರಸ್ತೆ ತಡೆ, ಭದ್ರಾವತಿ ಬಂದ್, ಪಾದಯಾತ್ರೆ, ಅರೆಬೆತ್ತಲೆ ಮೆರವಣಿಗೆ, ಪಂಜಿನ ಮೆರವಣಿಗೆ, ಸಹಿ ಅಭಿಯಾನ, ರಕ್ತದಲ್ಲಿ ಪತ್ರ ಚಳುವಳಿ ಸೇರಿದಂತೆ ಹಲವು ವಿಭಿನ್ನ ಹೋರಾಟಗಳನ್ನು ನಡೆಸಲಾಗಿದೆ. ಅಲ್ಲದೆ ಹೋರಾಟದ ಒಂದು ಭಾಗವಾಗಿ ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಅವರ ನೇತೃತ್ವದಲ್ಲಿ ಕಾರ್ಖಾನೆಯ ಶತಮಾನೋತ್ಸವ ವಿಜೃಂಭಣೆಯಿಂದ ಆಚರಿಸಲಾಗಿದೆ. ವಿಶೇಷವಾಗಿ ಹಲವು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಗಿದೆ.
    ಹೋರಾಟಕ್ಕೆ ವ್ಯಾಪಕ ಬೆಂಬಲ:
    ಕಾರ್ಮಿಕರ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ಶಾಲಾ-ಕಾಲೇಜುಗಳ ವಿದ್ಯಾ ಸಂಸ್ಥೆಗಳು, ಮಠ ಮಂದಿರಗಳು ರೈತರು ಸೇರಿದಂತೆ ಕ್ಷೇತ್ರದ ಸಮಸ್ತ ನಾಗರಿಕರು ಹೋರಾಟಕ್ಕೆ ಕಳೆದ ೨ ವರ್ಷಗಳಿಂದ ಬೆಂಬಲ ಸೂಚಿಸಿಕೊಂಡು ಬಂದಿದ್ದಾರೆ. 
    ಉಡುಪಿ ಪೇಜಾವರ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ, ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಡಾ. ಮುರುಘ ರಾಜೇಂದ್ರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಲಗೂಡು ವಿಶ್ವನಾಥ್, ಜೆಡಿಯು ಮುಖಂಡ ಮಹಿಮಾ ಜೆ. ಪಟೇಲ್ ಸೇರಿದಂತೆ ಪ್ರಮುಖರು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ.
    ಈ ನಡುವೆ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಹಾಗು ರಾಜ್ಯ ಸಚಿವರು, ಮಾಜಿ ಪ್ರಧಾನಿ, ಸಂಸದರು, ಶಾಸಕರು ಹಾಗು ಮೈಸೂರು ಸಂಸ್ಥಾನದ ಮಹಾರಾಜರಿಗೆ ಹಾಗು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ, ರಾಜ್ಯದ ವಿವಿಧ ಮಠಗಳ ಮಠಾಧೀಶರಿಗೆ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಸಹ ಇದುವರೆಗೂ ಹೋರಾಟಕ್ಕೆ ಯಾವುದೇ ಪ್ರತಿಫಲ ಲಭಿಸಿಲ್ಲ.
    ಬದಲಾದ ಸರ್ಕಾರಗಳು : 
    ಎರಡು ವರ್ಷಗಳ ಹೋರಾಟದ ಅವಧಿಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬದಲಾವಣೆಗೊಂಡಿವೆ. ರಾಜ್ಯದಲ್ಲಿ ೨ನೇ ಬಾರಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಹಾಗು ಕೇಂದ್ರದಲ್ಲಿ ೩ನೇ ಬಾರಿಗೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೊಸ ಸರ್ಕಾರಗಳು ರಚನೆಯಾಗಿವೆ. ರಾಜ್ಯ ಸರ್ಕಾರ ೨ ವರ್ಷ ಅಧಿಕಾರ ಪೂರೈಸುತ್ತಿದ್ದು, ಉಳಿದಂತೆ ಕೇಂದ್ರ ಸರ್ಕಾರ ೭ ತಿಂಗಳು ಪೂರೈಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಅದರಲ್ಲೂ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವರಾಗಿದ್ದಾರೆ. ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಲವು ಬಾರಿ ಕಾರ್ಖಾನೆ ಉಳಿಸಿಕೊಳ್ಳುವುದಾಗಿ ಹಾಗು ಅಗತ್ಯವಿರುವ ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಿದ್ದಾರೆ. ಇವರ ಭರವಸೆ ಈಡೇರುವ ಆಶಾಭಾವನೆಯಿಂದ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಸೇರಿದಂತೆ ಕ್ಷೇತ್ರದ ಸಮಸ್ತ ನಾಗರೀಕರು ಎದುರು ನೋಡುತ್ತಿದ್ದಾರೆ. 


    ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡ ದೇಶದ ಎರಡನೇ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ, ದೇಶ ಹಾಗು ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವ, ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಭಾರತರತ್ನ, ಶ್ರೇಷ್ಠ ತಂತ್ರಜ್ಞಾನಿ, ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡಿರುವ ಹಾಗು ಮಲೆನಾಡಿನ ಏಕೈಕ ಬೃಹತ್ ಕಾರ್ಖಾನೆ ಎಂಬ ಪ್ರಶಂಸೆಗೆ ಪಾತ್ರವಾಗಿರುವ ಈ ಕಾರ್ಖಾನೆ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
    ಕೇಂದ್ರ ಸರ್ಕಾರ ಈ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಸೂಕ್ತ ನಿಲುವು ಕೈಗೊಳ್ಳುವ ಮೂಲಕ  ಕಾರ್ಮಿಕರ ಹಾಗು ಕ್ಷೇತ್ರದ ನಾಗರೀಕರ ಹಿತಕಾಪಾಡಬೇಕಾಗಿದೆ.
 
ಮೈಸೂರು ಮಹಾರಾಜರ ಕೊಡುಗೆಯಾಗಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಈಗಾಗಲೇ ಪ್ರಧಾನಮಂತ್ರಿಯವರನ್ನು ಸಹ ಭೇಟಿ ಮಾಡಿ ಚರ್ಚಿಸಲಾಗಿದೆ. ನಮ್ಮ ನಿರಂತರ ಪ್ರಯತ್ನದ ನಡುವೆ ಎಲ್ಲರ ಸಹಕಾರ ಅಗತ್ಯವಿದೆ. 
        - ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ ಕ್ಷೇತ್ರ ಆದಿಚುಂಚನಗಿರಿ. 
 -----------------------------------------

ಪ್ರಾಮಾಣಿಕವಾಗಿ ಕಾರ್ಮಿಕರ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಜೊತೆಗೆ ರಾಜ್ಯ ಸರ್ಕಾರದಿಂದ ಕಾರ್ಖಾನೆಗೆ ಅಗತ್ಯವಿರುವ ಗಣಿ ಸಹ ಮಂಜೂರಾತಿ ಮಾಡಿಸಿಕೊಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಬಂಡವಾಳ ತೊಡಗಿಸುವಂತೆ ಮನವಿ ಸಹ ಮಾಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಇಚ್ಛಾ ಶಕ್ತಿ ಪ್ರದರ್ಶಿಸಬೇಕಾಗಿದೆ. ಕಾರ್ಮಿಕರ ಮುಂದಿನ ಹೋರಾಟಗಳಿಗೂ ನನ್ನ ಬೆಂಬಲವಿರುತ್ತದೆ.
                          - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.
 ................................................................

ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚರ್ಚಿಸಲಾಗಿದೆ. ಸುಮಾರು ೧೫ ಸಾವಿರ ಕೋ. ರು. ಬಂಡವಾಳ ತೊಡಗಿಸುವ ಉದ್ದೇಶ ಹೊಂದಲಾಗಿದ್ದು, ಈ ಸಂಬಂಧ ವರದಿ ಸಲ್ಲಿಸಲು ತಂತ್ರಜ್ಞರ ತಂಡ ಕಾರ್ಖಾನೆಗೆ ಭೇಟಿ ನೀಡಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
- ಎಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವರು, ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ. 
 
.......................................................................
ನಮ್ಮ ಹೋರಾಟ ಜ.೧೯ಕ್ಕೆ ೨ ವರ್ಷ ಪೂರೈಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಹೋರಾಟ ಮುಂದುವರೆಯಲಿದ್ದು, ಈ ಬಾರಿ ಜ.೧೬ ಕರಾಳ ದಿನ ಆಚರಿಸುವುದಿಲ್ಲ. ಕಳೆದ ವರ್ಷ ಕಾರ್ಖಾನೆ ಉಳಿಸಿಕೊಳ್ಳುವ ಕುರಿತು ಯಾರಿಂದಲೂ ದೃಢ ನಿರ್ಧಾರ, ನಿಲುವು ವ್ಯಕ್ತವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಕರಾಳ ದಿನ ಆಚರಿಸುವ ಮೂಲಕ ಪಂಜಿನ ಮೆರವಣಿಗೆ ಹಾಗು ಸಂಸದರ ನಿವಾಸದವರೆಗೂ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಾರಿ ಯಾವುದೇ ಹೋರಾಟ ನಡೆಸುವುದಿಲ್ಲ. ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರು ಈಗಾಗಲೇ ಹಲವಾರು ಕಾರ್ಖಾನೆ ಉಳಿಸಿಕೊಳ್ಳುವ ಸಂಬಂಧ ಭರವಸೆ ನೀಡಿದ್ದು, ಕುಮಾರಸ್ವಾಮಿಯವರು ನಮ್ಮ ರಾಜ್ಯದವರೇ ಆಗಿದ್ದು, ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ಹಿನ್ನಲೆಯಲ್ಲಿ ಕಾದು ನೋಡುವ ಮೂಲಕ ಮುಂದಿನ ಹೋರಾಟ ರೂಪಿಸಲಾಗುವುದು.
                 - ಸುರೇಶ್, ಅಧ್ಯಕ್ಷರು, ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ 
 
 ........................................................................

ಈ ಬಾರಿ ನಮ್ಮ ಬೇಡಿಕೆ ಈಡೇರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ನಾವು ಇತ್ತೀಚೆಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸಂಸದ ಬಿ.ವೈ ರಾಘವೇಂದ್ರ ಹಾಗು ಕುಮಾರಸ್ವಾಮಿ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈಗಾಗಲೇ ಕುಮಾರಸ್ವಾಮಿಯವರು ೧೫ ಸಾವಿರ ಕೋ.ರು. ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವರು ತಾವು ನೀಡಿರುವ ಭರವಸೆ ಉಳಿಸಿಕೊಳ್ಳುವ ವಿಶ್ವಾಸವಿದೆ. 
                     - ಜೆ. ಜಗದೀಶ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಭದ್ರಾವತಿ. 

Tuesday, January 14, 2025

ಜಗದ್ಗುರು ಶ್ರೀ ಸಿದ್ದಾರೂಢ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

ಶ್ರೀ ಸಿದ್ದಾರೂಢರ ೧೯೦ನೇ ಹಾಗೂ ಶ್ರೀ ಗುರುನಾಥಾರೂಢರ ೧೧೫ನೇ ಜಯಂತ್ಯುತ್ಸವ ಮತ್ತು ಶ್ರೀ ಸಿದ್ದಾರೂಢ ಕಥಾಮೃತ ಗ್ರಂಥದ ಶತಮಾನೋತ್ಸವ ಅಂಗವಾಗಿ ಆರಂಭಗೊಂಡಿರುವ ಜಗದ್ಗುರು ಶ್ರೀ ಸಿದ್ದಾರೂಢ ಜ್ಯೋತಿ ರಥಯಾತ್ರೆ ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿತು. 
    ಭದ್ರಾವತಿ: ಶ್ರೀ ಸಿದ್ದಾರೂಢರ ೧೯೦ನೇ ಹಾಗೂ ಶ್ರೀ ಗುರುನಾಥಾರೂಢರ ೧೧೫ನೇ ಜಯಂತ್ಯುತ್ಸವ ಮತ್ತು ಶ್ರೀ ಸಿದ್ದಾರೂಢ ಕಥಾಮೃತ ಗ್ರಂಥದ ಶತಮಾನೋತ್ಸವ ಅಂಗವಾಗಿ ಆರಂಭಗೊಂಡಿರುವ ಜಗದ್ಗುರು ಶ್ರೀ ಸಿದ್ದಾರೂಢ ಜ್ಯೋತಿ ರಥಯಾತ್ರೆ ಸೋಮವಾರ ನಗರಕ್ಕೆ ಆಗಮಿಸಿತು. 
    ಡಿ.೨೨ರಿಂದ ಹುಬ್ಬಳಿಯ ಶ್ರೀ ಸಿದ್ದಾರೂಢ ಸ್ವಾಮಿಯವರ ಮಠದಿಂದ ಆರಂಭಗೊಂಡಿರುವ ರಥಯಾತ್ರೆ ನಗರದ ಹೊಸಸೇತುವೆ ರಸ್ತೆಯ ಶ್ರೀ ಸಿದ್ದಾರೂಢ ಆಶ್ರಮಕ್ಕೆ ಆಗಮಿಸಿತು. ಶ್ರೀ ಶಿವಲಿಂಗಾನಂದ ಸ್ವಾಮಿಗಳ ನೇತೃತ್ವದಲ್ಲಿ ಭಕ್ತರು ಪೂರ್ಣಕುಂಭ ಸ್ವಾಗತದೊಂದಿಗೆ ರಥಯಾತ್ರೆಯನ್ನು ಬರಮಾಡಿಕೊಂಡರು.
    ಟ್ರಸ್ಟ್ ಕಾರ್ಯದರ್ಶಿ ರಾಮಮೂರ್ತಿ, ಬಿ. ದಿವಾಕರ ಶೆಟ್ಟಿ, ಮಾರುತಿ, ರಂಗನಾಥ ಗಿರಿ, ಬಾಬು, ವಿಜಯಕುಮಾರ್, ಜಿ. ಧರ್ಮಪ್ರಸಾದ್, ಮಂಜುನಾಥ್ ರಾವ್, ಹನುಮಂತಪ್ಪ, ಎರೇಸೀಮೆ, ಭಾರತಮ್ಮ, ಲಕ್ಷ್ಮಣಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ನಗರದ ವಿವಿದೆಢೆ ಸಂಚರಿಸಿ ಶ್ರೀ ಮಠದ ಆವರಣದಲ್ಲಿ ವಾಸ್ತವ್ಯ ಹೂಡಿದ ರಥಯಾತ್ರೆ ಮಂಗಳವಾರ ಬೆಳಿಗ್ಗೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿತು. 
    ಸಿದ್ಧಾರೂಢ ಮಠದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗಾನಂದ ಸ್ವಾಮಿಜಿ ಉಪನ್ಯಾಸ ನೀಡಿ ಆಶೀರ್ವಚಿಸಿದರು. ಗುತ್ತಿಗೆದಾರ ಎಸ್. ಬಾಬಣ್ಣ ಕುಟುಂಬದವರಿಂದ ದಾಸೋಹ ಏರ್ಪಡಿಸಲಾಗಿತ್ತು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಜಿ. ರಮೇಶ್

ಜಿ. ರಮೇಶ್ 
    ಭದ್ರಾವತಿ:  ತಾಲೂಕು ಬ್ರಾಹ್ಮಣ ಮಹಾಸಭಾ ನೂತನ ಅಧ್ಯಕ್ಷರಾಗಿ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಉದ್ಯೋಗಿ ಜಿ. ರಮೇಶ್ ಆಯ್ಕೆಯಾಗಿದ್ದಾರೆ. 
    ಸಿದ್ಧಾರೂಢನಗರದ ಶಂಕರ ಮಠದ ಶ್ರೀ ಭಾರತೀತೀರ್ಥ ಸಮುದಾಯ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷರಾಗಿ ಜಿ. ರಮೇಶ್ 
    ಉಪಾಧ್ಯಕ್ಷರಾಗಿ ಎಸ್.ಸಿ ನೀಲಕಂಠ ಜೋಯ್ಸ್ ಮತ್ತು  ರಾಜಶೇಖರ್(ಬಿಆರ್‌ಪಿ), ಪ್ರಧಾನ ಕಾರ್ಯದರ್ಶಿಯಾಗಿ ಕೆ. ಮಂಜುನಾಥ್, ಸಹ ಕಾರ್ಯದರ್ಶಿಯಾಗಿ ಬಿ.ಆರ್ ಇಂದ್ರಸೇನಾ ರಾವ್, ಖಜಾಂಚಿಯಾಗಿ ಎಸ್. ಶೇಷಾದ್ರಿ ಹಾಗು ಸಂಘಟನಾ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಆಯ್ಕೆಯಾಗಿದ್ದಾರೆ. 

ಸಹ್ಯಾದ್ರಿ ಬಡಾವಣೆಯಲ್ಲಿ ಸಂಕ್ರಾಂತಿ ಸಂಭ್ರಮ

ಭದ್ರಾವತಿ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯಲ್ಲಿ ಮಂಗಳವಾರ ಇಲ್ಲಿನ ನಿವಾಸಿಗಳು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
    ಭದ್ರಾವತಿ : ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯಲ್ಲಿ ಮಂಗಳವಾರ ಇಲ್ಲಿನ ನಿವಾಸಿಗಳು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
    ನಿವಾಸಿಗಳು ಒಟ್ಟಾಗಿ ಕಳೆದ ಕೆಲವು ವರ್ಷಗಳಿಂದ ಸಂಕ್ರಾಂತಿ ಹಬ್ಬ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಹಬ್ಬದ ಮಹತ್ವ ಸಾರುವ ಜೊತೆಗೆ ಇಂದಿನ ಪೀಳಿಗೆಗೆ ಪರಂಪರೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲಾಗುತ್ತಿದೆ.  
    ಬಡಾವಣೆಯಲ್ಲಿ ಇಡೀ ದಿನ ಹಬ್ಬದ ಸಂಭ್ರಮ ಕಂಡು ಬಂದಿದ್ದು, ಬೆಳಿಗ್ಗೆಯಿಂದಲೇ ಹಬ್ಬಕ್ಕಾಗಿ ಸಿದ್ದತೆಗಳು ಆರಂಭಗೊಂಡವು. ಹಸಿರು ತೋರಣಗಳು, ಮನೆಯ ಮುಂಭಾಗ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರಗಳು ಕಂಗೊಳಿಸಿದವು. ಬಡಾವಣೆಯ ಮುಖ್ಯ ಅಡ್ಡ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿತ್ತು. 
    ಸಂಜೆ ಸಂಪ್ರದಾಯದಂತೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಡಾವಣೆಯಲ್ಲಿರುವ ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
    ಬಡಾವಣೆಯ ಹಿರಿಯರಾದ ಎಚ್.ವಿ ರುದ್ರಪ್ಪ, ಕೆ.ಎನ್ ಭೈರಪ್ಪಗೌಡ, ಡಾ. ವೈದ್ಯ, ಸುಬ್ಬಣ್ಣ ರೈ, ಇಂದಿರಾ ಮುರುಳಿ, ಮನು, ರಾಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.