- ಮರ ಕಡಿತಲೆ ಮಾಡದೆ ವಿನಾಕಾರಣ ಕಿರುಕುಳ, ಸಂತ್ರಸ್ಥರ ಆರೋಪ
- ಅಕ್ರಮವಾಗಿ ಮರಗಳ ಕಡಿತಲೆಗೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು, ಜೆಡಿಎಸ್ ಆರೋಪ
ಭದ್ರಾವತಿ ತಾಲೂಕಿನ ಎಮ್ಮೆದೊಡ್ಡಿ(ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ : ತಾಲೂಕಿನ ಎಮ್ಮೆದೊಡ್ಡಿ(ಎಮ್ಮೆಹಟ್ಟಿ) ಗ್ರಾಮದಲ್ಲಿ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿರುವ ಕಂದಾಯ ಭೂಮಿಯಲ್ಲಿ ಬೆಳೆದಿರುವ ಮರಗಳನ್ನು ಅರಣ್ಯ ಇಲಾಖೆ ಕಳೆದ ೭ ವರ್ಷಗಳಿಂದ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅಲ್ಲದೆ ಸಂತ್ರಸ್ಥರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ನಗರದ ತರೀಕೆರೆ ರಸ್ತೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಸರ್ವೇ ನಂ.೮ರಲ್ಲಿ ಶರಾವತಿ ಸಂತ್ರಸ್ಥರಾದ ಸೀತಾರಾಮ ಬಿನ್ ಮಂಜಪ್ಪ ಎಂಬುವರಿಗೆ ಕಂದಾಯ ಭೂಮಿ ಮಂಜೂರು ಮಾಡಲಾಗಿದ್ದು, ಈ ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸುವಂತೆ ಆದೇಶವಿದ್ದರೂ ಸಹ ಕಳೆದ ೭ ವರ್ಷಗಳಿಂದ ಹಲವಾರು ಬಾರಿ ಮರಕಡಿತಲೆ ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಹಲವು ಬಾರಿ ಮರಗಳ ಕಳ್ಳತನ ನಡೆದಿದ್ದು, ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸಹ ವಿನಾಕಾರಣ ದೂರು ನೀಡಿದ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಯಿತು.
ಈ ನಡುವೆ ಜ.೧೪ರಂದು ಮರಗಳ ಕಡಿತಲೆ ನಡೆದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಕಡಿತಲೆ ಮಾಡಿದ ಮರಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಈ ಸಂಬಂಧ ಪ್ರಕರಣ ಸಹ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಮರಗಳನ್ನು ಅಕ್ರಮವಾಗಿ ಕಡಿದಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ :
ಸಂಕ್ರಾಂತಿ ಹಬ್ಬದ ದಿನದಂದು ಮರ ಕಳ್ಳರು ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿದ್ದು, ಮಾಹಿತಿ ತಿಳಿದಿದ್ದರೂ ಸಹ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸಿದ್ದಾರೆಂದು ಜೆಡಿಎಸ್ ಪಕ್ಷ ಆರೋಪಿಸಿದೆ.
ಎಮ್ಮೆಹಟ್ಟಿ ಸರ್ವೇ ನಂ. ೮ರಲ್ಲಿ ಅರಣ್ಯ ಇಲಾಖೆ ಬೆಳಸಿದ್ದ ಸುಮಾರು ೩೫ - ೩೭ ಮರಗಳನ್ನು ಮರ ಕಳ್ಳರು ಕಡಿದಿದ್ದು, ಮರಗಳನ್ನು ಸಾಗಿಸುತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ವಲಯದ ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಕ್ರಮಕೈಗೊಳ್ಳದೆ ಇದ್ದಾಗ ನಂತರ ಶಿವಮೊಗ್ಗ ತನಿಖಾದಳಕ್ಕೆ ಮಾಹಿತಿ ನೀಡಲಾಗಿದ್ದಾರೆ. ಶಿವಮೊಗ್ಗ ತನಿಖಾದಳದ ಸಿಬ್ಬಂದಿಗಳು ಸ್ಥಳಕ್ಕೆ ಹೋಗುವಷ್ಟರಲ್ಲಿ ಸುಮಾರು ೩೦ ಲೋಡ್‌ನಷ್ಟು ಮರಗಳನ್ನು ಸಾಗಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ. ಉಳಿದ ೩ ಲೋಡ್‌ನಷ್ಟು ಮರಗಳನ್ನು ವಶಕ್ಕೆ ಪಡೆಯಲಾಗಿದ್ದು, ವಲಯ ಅರಣ್ಯ ಕಚೇರಿ ಆವರಣದಲ್ಲಿ ಸಂಗ್ರಹಿಸಲಾಗಿದೆ. ಸ್ಥಳೀಯ ಆರಣ್ಯ ಅಧಿಕಾರಿಗಳಿಗೆ ತನಿಖಾ ದಳ ವರದಿ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿರುವುದು ತಿಳಿದು ಬಂದಿದೆ. ಆದರೆ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಭಾವಿ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ತಿಪ್ಪೆ ಸಾರಿಸುವ ಕೆಲಸ ಮುಂದಾಗಿರುವುದು ಗಮನಕ್ಕೆ ಬಂದಿದೆ ಎಂದು ಜೆಡಿಎಸ್ ಪಕ್ಷ ಆರೋಪಿಸಿದ್ದು, ಅಲ್ಲದೆ ಈ ಸಂಬಂಧ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವುದಾಗಿ ತಿಳಿಸಿದೆ.
No comments:
Post a Comment