Thursday, January 16, 2025

ಕಣ್ಮನ ಸೆಳೆದ ಗೂಳಿಗಳ ಓಟದ ಸ್ಪರ್ಧೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಗುರುವಾರ ವಿಜೃಂಭಣೆಯಿಂದ ನಡೆಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಗುರುವಾರ ವಿಜೃಂಭಣೆಯಿಂದ ನಡೆಯಿತು. 


       ಪ್ರತಿ ವರ್ಷದಂತೆ ಈ ಬಾರಿ ಸಹ ಮಧ್ಯಾಹ್ನ ಶ್ರೀ ಮಾರಿಯಮ್ಮ ದೇವಸ್ಥಾನದ ಮುಂಭಾಗದ ಮುಖ್ಯ ರಸ್ತೆಯ ಅಡ್ಡ ರಸ್ತೆಯಲ್ಲಿ ಸ್ಪರ್ಧೆ ಜರುಗಿತು. ಸ್ಪರ್ಧೆ ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ನ್ಯೂಟೌನ್, ಗಣೇಶ್ ಕಾಲೋನಿ, ಜನ್ನಾಪುರ, ಹುಡ್ಕೋ ಕಾಲೋನಿ, ಸುರಗಿತೋಪು, ಜೆಪಿಎಸ್ ಕಾಲೋನಿ, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ವೀಕ್ಷಿಸಲು ಮಕ್ಕಳು, ಮಹಿಳೆಯರು, ವಯೋವೃದ್ಧ ಆಗಮಿಸಿದ್ದರು. ಯುವಕರು ಗೂಳಿಗಳ ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
    ಶಿಕಾರಿಪುರ, ಶಿರಾಳಕೊಪ್ಪ, ಹೊನ್ನಾಳಿ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು ೭೫ ಗೂಳಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅಲಂಕೃತಗೊಂಡ ಗೂಳಿಗಳ ಓಟ ಕಣ್ಮನ ಸೆಳೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರಿಂದ ಹೆಚ್ಚಿನ ಮುನ್ನಚ್ಚರಿಕೆ ವಹಿಸಲಾಗಿತ್ತು. ಅಲ್ಲದೆ ನ್ಯೂಟೌನ್ ಠಾಣೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡುಬಿಟ್ಟು ಸ್ಪರ್ಧೆ ಯಶಸ್ವಿಗೊಳ್ಳಲು ಸಹಕರಿಸಿದರು. 


    ಫಲಿತಾಂಶ ವಿವರ: 
    ಹೊನ್ನಾಳಿ ಭೈರವ ಗೂಳಿ ೧೧.೭೫ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಪ್ರಥಮ ಬಹುಮಾನ, ವಿದ್ಯಾಮಂದಿರ ರೇಣುಕಾಂಬ ಎಕ್ಸ್‌ಪ್ರೆಸ್ ಗೂಳಿ ೧೧.೯೧ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ದ್ವಿತೀಯ ಬಹುಮಾನ ಹಾಗು ಜಾನುವಾರುಗಳ ಸಂಘದ ಗಜೇಂದ್ರ ಗೂಳಿ ೧೨.೦೬ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಬಹುಮಾನ ಹಾಗು ರಾಜಾಹುಲಿ(ಸೀನಾ), ಶಿವಮೊಗ್ಗ ವೀರಭದ್ರ ಮತ್ತು ಚೋರಡಿ ಶಿವಲಿಂಗ ಗೂಳಿಗಳು ಸಮಾಧಾನಕರ ಬಹುಮಾನ ಪಡೆದುಕೊಂಡವು. ಶುಕ್ರವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನಗಳ ವಿತರಣೆ ನಡೆಯಲಿದೆ. 

No comments:

Post a Comment