Thursday, January 16, 2025

ಕಿರುಕುಳದಿಂದ ನರ್ಸ್ ಆತ್ಮಹತ್ಯೆ ಯತ್ನ ಆರೋಪ : ಮನನೊಂದು ವೈದ್ಯೆ ಆತ್ಮಹತ್ಯೆ ಯತ್ನ

ವೈಯಕ್ತಿಕ ಕಾರಣವೋ, ಕಿರಿಕುಳವೋ 


    ಭದ್ರಾವತಿ: ತಾಲೂಕಿನ ಶಂಕರಘಟ್ಟ ಸಂಯುಕ್ತ ಆರೋಗ್ಯ ಕೇಂದ್ರ(ಪಿಎಚ್‌ಸಿ)ದ ನರ್ಸ್ ಮತ್ತು ವೈದ್ಯೆ ನಡುವಿನ ಜಗಳ ಆತ್ಮಹತ್ಯೆಯತ್ನದವರೆಗೂ ಸಾಗಿರುವ ಘಟನೆ ಗುರುವಾರ ನಡೆದಿದೆ. 
    ನರ್ಸ್ ಸುಕನ್ಯ ಮತ್ತು ವೈದ್ಯೆ ಡಾ. ಹಂಸವೇಣಿ ಇಬ್ಬರು ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಕನ್ಯ ಮತ್ತು ಡಾ. ಹಂಸವೇಣಿ ನಡುವೆ ಕೆಲವು ತಿಂಗಳಿನಿಂದ ಸಣ್ಣ ಪ್ರಮಾಣದಲ್ಲಿ ಜಗಳ ನಡೆಯುತ್ತಿದ್ದು, ಈ ನಡುವೆ ಡಾ. ಹಂಸವೇಣಿಯವರನ್ನು ಕಳೆದ ಸುಮಾರು ೧ ತಿಂಗಳ ಹಿಂದೆ ತಾಲೂಕಿನ ಸನ್ಯಾಸಿ ಕೋಡಮಗ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಶಂಕರಘಟ್ಟ ಸಂಯುಕ್ತ ಆರೋಗ್ಯ ಕೇಂದ್ರದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. 
    ನರ್ಸ್ ಸುಕನ್ಯ ಆಸ್ಪತ್ರೆಯಲ್ಲಿಯೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಡಾ. ಹಂಸವೇಣಿ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿತ್ತು. ಈ ಹಿನ್ನಲೆಯಲ್ಲಿ ಮನನೊಂದು ಡಾ. ಹಂಸವೇಣಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದ್ದು, ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
    ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಹಾಗು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್‌ರವರು ಆಸ್ಪತ್ರೆಗೆ ಭೇಟಿ ನೀಡಿ ಇಬ್ಬರ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

No comments:

Post a Comment