Friday, January 17, 2025

ಡಾ. ಎಂ.ಎಚ್ ವಿದ್ಯಾಶಂಕರ್‌ಗೆ ಲೆಫ್ಟಿನೆಂಟ್ ಪದವಿ

ಭದ್ರಾವತಿ ನಗರದ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಂ.ಎಚ್ ವಿದ್ಯಾಶಂಕರ್‌ರವರಿಗೆ ಲೆಫ್ಟಿನೆಂಟ್ ಪದವಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ : ನಗರದ ನಿವಾಸಿ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಂ.ಎಚ್ ವಿದ್ಯಾಶಂಕರ್‌ರವರಿಗೆ ಲೆಫ್ಟಿನೆಂಟ್ ಪದವಿ ನೀಡಿ ಗೌರವಿಸಲಾಗಿದೆ. 
    ಇವರು ಇತ್ತೀಚೆಗೆ ನಾಗಪುರದ ಕಾಮಟೆಯಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದಿಂದ ನಡೆಸುವ ಸೈನಿಕ ತರಬೇತಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಮೂರು ತಿಂಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ವಿಷಯ ವಿವರಣೆ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದರು. 
    ವಿದ್ಯಾಶಂಕರ್ ನಗರದ ಪುರೋಹಿತರತ್ನ ಎಂ.ಡಿ ಹಿರಿಯಣ್ಣ ಭಟ್ ಮತ್ತು ಸರೋಜಾ ದಂಪತಿ ಪುತ್ರರಾಗಿದ್ದು, ಇವರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ. 

ಜ.೧೮ರಂದು ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ ಉದ್ಘಾಟನೆ

    ಭದ್ರಾವತಿ : ನಗರದ ಸೈಲ್ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ವಿಐಎಸ್‌ಎಲ್ ಸಂಸ್ಥಾಪಕರ ದಿನ, ಸೈಲ್ ಸಂಸ್ಥಾಪನೆ ದಿನ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಐಎಸ್‌ಎಲ್ ವಸ್ತು ಪ್ರದರ್ಶನ ಉದ್ಘಾಟನೆ ಜ.೧೮ರಂದು ನಡೆಯಲಿದೆ. 
    ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಸಂಜೆ ೭ ಗಂಟೆಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಉದ್ಘಾಟಿಸಲಿದ್ದಾರೆ.  ಸ್ಥಳೀಯ ಪ್ರತಿಭೆಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕೃತಿಕ ತಂಡಗಳಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿ ಕೊಡಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ಯಶಸ್ವಿಗೊಳಿಸುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕೋರಿದ್ದಾರೆ. 

ಶ್ರಮ ಜೀವಿಗಳ ಬದುಕಿನ ಮಾರ್ಗದರ್ಶಕರು ಶ್ರೀ ಶಿವಯೋಗಿ ಸಿದ್ದರಾಮೇಶ್ವರರು : ಬಿ.ಕೆ ಜಗನ್ನಾಥ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಭೋವಿ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೫೨ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಹಿರಿಯ ಮುಖಂಡ ಬಿ.ಕೆ ಜಗನ್ನಾಥ ಉದ್ಘಾಟಿಸಿದರು.  
    ಭದ್ರಾವತಿ: ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ೧೨ನೇ ಶತಮಾನದಲ್ಲಿ ಆಧ್ಯಾತ್ಮಿಕ ಬದುಕಿನ ಜೊತೆಗೆ ಶ್ರಮ ಜೀವಿಗಳಿಗೆ ಮಾರ್ಗದರ್ಶಕರಾಗಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಆದರ್ಶತನ ನಾವೆಲ್ಲರೂ ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದು ನಗರದ ಹಿರಿಯ ಮುಖಂಡ ಬಿ.ಕೆ ಜಗನ್ನಾಥ ಹೇಳಿದರು. 
    ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಭೋವಿ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೮೫೨ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಯಾವುದೇ ತಂತ್ರಜ್ಞಾನದ ಅರಿವಿಲ್ಲದ ಹಾಗು ಯಾವುದೇ ಸೌಲಭ್ಯಗಳು ಇಲ್ಲದ ಅಂದಿನ ಕಾಲದಲ್ಲಿ ನೀರಿನ ಮಹತ್ವ ಅರಿತು ಕೆರೆ, ಕಟ್ಟೆ, ಜಲಾಶಯಗಳನ್ನು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಭೋವಿ ಸಮಾಜದ ಶ್ರಮ ಜೀವಿಗಳಿಗೆ ಮಾರ್ಗದರ್ಶಕರಾಗಿ ಆ ಮೂಲಕ ಸಮಾಜದ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರಿಗೂ ನೀರಿನ ಸೌಕರ್ಯಗಳು ಲಭಿಸಲು ಕಾರಣಕರ್ತರಾದರು. ಅಲ್ಲದೆ ಭೋವಿ ಸಮಾಜದವರು ಕೇವಲ ಕೆರೆ, ಕಟ್ಟೆ, ಜಲಾಶಯಗಳು ಮಾತ್ರವಲ್ಲ, ದೇವಸ್ಥಾನ ಸೇರಿದಂತೆ ಹಲವಾರು ಕಟ್ಟಡಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇಂದಿಗೂ ಶ್ರಮ ನಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು. 
    ಎನ್.ಆರ್ ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಧನಂಜಯ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಪ್ರಮುಖ ಕಾಯಕ ಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು. ಇವರು ಕಾಯಕದ ಜೊತೆಗೆ ಸಮಾಜದಲ್ಲಿನ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದರು. ಅಂದಿನ ಅನುಭವ ಮಂಟದಲ್ಲಿನ ಚಿಂತನೆಗಳು, ಆಶಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸುವ ಮೂಲಕ ಇಂದು ನಮ್ಮೆಲ್ಲರಿಗೂ ಬೆಳಕಾಗಿದ್ದಾರೆ. ಇವರೆಲ್ಲರ ಆಶಯಗಳಂತೆ ನಾವುಗಳು ಮುನ್ನಡೆಯುವ ಮೂಲಕ ಭವಿಷ್ಯದ ಸಮಾಜ ರೂಪಿಸಬೇಕೆಂದರು. 
    ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ, ಉಪತಹಸೀಲ್ದಾರ್ ಮಂಜ್ಯಾನಾಯ್ಕ, ಸೂಡಾ ಸದಸ್ಯ ಎಚ್. ರವಿಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಕಂದಾಯಾಧಿಕಾರಿ ರಮೇಶ್, ಪ್ರಮುಖರಾದ ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್, ಚೌಡಪ್ಪ, ಅರ್ಜುನ್, ಟಿ.ಎಂ ಮಂಜುನಾಥ್, ಪ್ರಕಾಶ್, ಯಲ್ಲಪ್ಪ, ರಾಮಣ್ಣ, ದಶರಥಗಿರಿ, ಶಿವಬಸಪ್ಪ, ರಂಗನಾಥ್, ವೆಂಕಟೇಶ್, ತಮ್ಮಣ್ಣ, ವೈ. ಮಂಜುನಾಥ್, ಬಸವಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಸ್ವಾಗತಿಸಿ, ಎಸ್.ಕೆ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾರಂತ್, ಕೋಕಿಲ ತಂಡದವರು ಪ್ರಾರ್ಥಿಸಿದರು.  
 

Thursday, January 16, 2025

ಪುರೋಹಿತ ಪ್ರಭಾಕರ ಜೋಯ್ಸ್ ನಿಧನ

    ಭದ್ರಾವತಿ: ನಗರದ ಹೊಸಮನೆ ಎನ್‌ಎಂಸಿ ಬಲಭಾಗ ನಿವಾಸಿ, ಪುರೋಹಿತ ಪ್ರಭಾಕರ ಜೋಯ್ಸ್(೭೩) ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು. ಇವರ ನಿಧನಕ್ಕೆ ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ. 

ಕಿರುಕುಳದಿಂದ ನರ್ಸ್ ಆತ್ಮಹತ್ಯೆ ಯತ್ನ ಆರೋಪ : ಮನನೊಂದು ವೈದ್ಯೆ ಆತ್ಮಹತ್ಯೆ ಯತ್ನ

ವೈಯಕ್ತಿಕ ಕಾರಣವೋ, ಕಿರಿಕುಳವೋ 


    ಭದ್ರಾವತಿ: ತಾಲೂಕಿನ ಶಂಕರಘಟ್ಟ ಸಂಯುಕ್ತ ಆರೋಗ್ಯ ಕೇಂದ್ರ(ಪಿಎಚ್‌ಸಿ)ದ ನರ್ಸ್ ಮತ್ತು ವೈದ್ಯೆ ನಡುವಿನ ಜಗಳ ಆತ್ಮಹತ್ಯೆಯತ್ನದವರೆಗೂ ಸಾಗಿರುವ ಘಟನೆ ಗುರುವಾರ ನಡೆದಿದೆ. 
    ನರ್ಸ್ ಸುಕನ್ಯ ಮತ್ತು ವೈದ್ಯೆ ಡಾ. ಹಂಸವೇಣಿ ಇಬ್ಬರು ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಕನ್ಯ ಮತ್ತು ಡಾ. ಹಂಸವೇಣಿ ನಡುವೆ ಕೆಲವು ತಿಂಗಳಿನಿಂದ ಸಣ್ಣ ಪ್ರಮಾಣದಲ್ಲಿ ಜಗಳ ನಡೆಯುತ್ತಿದ್ದು, ಈ ನಡುವೆ ಡಾ. ಹಂಸವೇಣಿಯವರನ್ನು ಕಳೆದ ಸುಮಾರು ೧ ತಿಂಗಳ ಹಿಂದೆ ತಾಲೂಕಿನ ಸನ್ಯಾಸಿ ಕೋಡಮಗ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಶಂಕರಘಟ್ಟ ಸಂಯುಕ್ತ ಆರೋಗ್ಯ ಕೇಂದ್ರದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. 
    ನರ್ಸ್ ಸುಕನ್ಯ ಆಸ್ಪತ್ರೆಯಲ್ಲಿಯೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಡಾ. ಹಂಸವೇಣಿ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿತ್ತು. ಈ ಹಿನ್ನಲೆಯಲ್ಲಿ ಮನನೊಂದು ಡಾ. ಹಂಸವೇಣಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದ್ದು, ಇಬ್ಬರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
    ಘಟನೆ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಹಾಗು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್‌ರವರು ಆಸ್ಪತ್ರೆಗೆ ಭೇಟಿ ನೀಡಿ ಇಬ್ಬರ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ಸಂಬಂಧ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಕಣ್ಮನ ಸೆಳೆದ ಗೂಳಿಗಳ ಓಟದ ಸ್ಪರ್ಧೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಗುರುವಾರ ವಿಜೃಂಭಣೆಯಿಂದ ನಡೆಯಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಗುರುವಾರ ವಿಜೃಂಭಣೆಯಿಂದ ನಡೆಯಿತು. 


       ಪ್ರತಿ ವರ್ಷದಂತೆ ಈ ಬಾರಿ ಸಹ ಮಧ್ಯಾಹ್ನ ಶ್ರೀ ಮಾರಿಯಮ್ಮ ದೇವಸ್ಥಾನದ ಮುಂಭಾಗದ ಮುಖ್ಯ ರಸ್ತೆಯ ಅಡ್ಡ ರಸ್ತೆಯಲ್ಲಿ ಸ್ಪರ್ಧೆ ಜರುಗಿತು. ಸ್ಪರ್ಧೆ ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ನ್ಯೂಟೌನ್, ಗಣೇಶ್ ಕಾಲೋನಿ, ಜನ್ನಾಪುರ, ಹುಡ್ಕೋ ಕಾಲೋನಿ, ಸುರಗಿತೋಪು, ಜೆಪಿಎಸ್ ಕಾಲೋನಿ, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ವೀಕ್ಷಿಸಲು ಮಕ್ಕಳು, ಮಹಿಳೆಯರು, ವಯೋವೃದ್ಧ ಆಗಮಿಸಿದ್ದರು. ಯುವಕರು ಗೂಳಿಗಳ ಓಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 
    ಶಿಕಾರಿಪುರ, ಶಿರಾಳಕೊಪ್ಪ, ಹೊನ್ನಾಳಿ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು ೭೫ ಗೂಳಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅಲಂಕೃತಗೊಂಡ ಗೂಳಿಗಳ ಓಟ ಕಣ್ಮನ ಸೆಳೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರಿಂದ ಹೆಚ್ಚಿನ ಮುನ್ನಚ್ಚರಿಕೆ ವಹಿಸಲಾಗಿತ್ತು. ಅಲ್ಲದೆ ನ್ಯೂಟೌನ್ ಠಾಣೆ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡುಬಿಟ್ಟು ಸ್ಪರ್ಧೆ ಯಶಸ್ವಿಗೊಳ್ಳಲು ಸಹಕರಿಸಿದರು. 


    ಫಲಿತಾಂಶ ವಿವರ: 
    ಹೊನ್ನಾಳಿ ಭೈರವ ಗೂಳಿ ೧೧.೭೫ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಪ್ರಥಮ ಬಹುಮಾನ, ವಿದ್ಯಾಮಂದಿರ ರೇಣುಕಾಂಬ ಎಕ್ಸ್‌ಪ್ರೆಸ್ ಗೂಳಿ ೧೧.೯೧ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ದ್ವಿತೀಯ ಬಹುಮಾನ ಹಾಗು ಜಾನುವಾರುಗಳ ಸಂಘದ ಗಜೇಂದ್ರ ಗೂಳಿ ೧೨.೦೬ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಬಹುಮಾನ ಹಾಗು ರಾಜಾಹುಲಿ(ಸೀನಾ), ಶಿವಮೊಗ್ಗ ವೀರಭದ್ರ ಮತ್ತು ಚೋರಡಿ ಶಿವಲಿಂಗ ಗೂಳಿಗಳು ಸಮಾಧಾನಕರ ಬಹುಮಾನ ಪಡೆದುಕೊಂಡವು. ಶುಕ್ರವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನಗಳ ವಿತರಣೆ ನಡೆಯಲಿದೆ. 

ಹಿರೇಕೆರೆ ವೀಕ್ಷಣೆ ಮಾಡಿ, ಜನ್ನಾಪುರ ಕೆರೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿ

ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಮನವಿ 

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಕೆರೆ ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿಪಡಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್ ಸುಂದರೇಶ್‌ರವರಿಗೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಗಿದೆ. 
    ಭದ್ರಾವತಿ : ನಗರಸಭೆ ವಾರ್ಡ್ ನಂ.೨೯ರ ಜನ್ನಾಪುರ ಕೆರೆ ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿಪಡಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್ ಸುಂದರೇಶ್‌ರವರಿಗೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಗಿದೆ. 
    ನಗರಸಭೆ ವಾರ್ಡ್ ನಂ.೧೫ರ ಹೊಸಮನೆ ತಮ್ಮಣ್ಣ ಕಾಲೋನಿ ಹಿಂಭಾಗದಲ್ಲಿರುವ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ೫೦ ಎಕರೆ ೨೦ ಗುಂಟೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಹಿರೇಕೆರೆ ಅಭಿವೃದ್ದಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಆಗಮಿಸಿ ಕೆರೆ ವೀಕ್ಷಣೆ ನಡೆಸುವಂತೆ ಕೋರಲಾಗಿದೆ. 
    ಜನ್ನಾಪುರ ಕೆರೆಗೆ ನೂರಾರು ವರ್ಷಗಳಿಂದ ಕಲ್ಮಶಗೊಂಡಿರುವ ನೀರು ಬಂದು ಸೇರುತ್ತಿದ್ದು, ಇದರಿಂದಾಗಿ ಕೆರೆಯಿಂದ ದುರ್ವಾಸನೆ ಬರುತ್ತಿದೆ. ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಹದಗೆಟ್ಟು ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಅನ್ನದಾತ, ಶ್ರೇಷ್ಠ ತಂತ್ರಜ್ಞ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಹೆಸರಿನಲ್ಲಿ ಕೆರೆ ಪ್ರವಾಸಿಗರ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಮನವಿ ಮಾಡಲಾಗಿದೆ. 
    ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ತಹಸೀಲ್ದಾರ್, ನಗರಸಭೆ ಪೌರಾಯುಕ್ತರು, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿ ವರ್ಗದವರು ಹಾಗು ಕೆರೆ ಸಮೀಪದ ರೈತರನ್ನೊಳಗೊಂಡ ಒಂದು ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
    ಮನವಿ ಸ್ವೀಕರಿಸಿದ ಎಚ್.ಎಸ್ ಸುಂದರೇಶ್‌ರವರು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ದೊರೆತ ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸುವುದಾಗಿ ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್‌ರವರಿಗೆ ಭರವಸೆ ನೀಡಿದ್ದಾರೆ. 
    ತಾಲೂಕಿನ ಕಲ್ಲಹಳ್ಳಿ ಗ್ರಾಮದ ಧರ್ಮಣ್ಣ ಹಾಗೂ ಕೋಡಿಹಳ್ಳಿ ಸತ್ಯ ಉಪಸ್ಥಿತರಿದ್ದರು.