ಸಮುದಾಯ ಭವನ ವಶಕ್ಕೆ ಪಡೆಯಿರಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ
ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿಯ ಪ್ರಮುಖರು, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮಾತನಾಡಿದರು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್‌ಶೆಡ್‌ನಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ೩೦*೮೦ ಅಡಿ ಅಳತೆಯ ಜಾಗದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಸಮುದಾಯ ಭವನ ತಾಲೂಕು ಆಡಳಿತ ವಹಿಸಿಕೊಂಡು ಜನ್ನಾಪುರದ ಸ್ಥಳೀಯ ನಾಗರೀಕರಿಗೆ ಶುಭ ಸಮಾರಂಭಗಳು ಹಾಗೂ ಇತರೆ ಸಣ್ಣಪುಟ್ಟ ಕಾರ್ಯಕ್ರಮ ರಿಯಾಯಿತಿ ದರದಲ್ಲಿ ನಡೆಸಲು ಅವಕಾಶ ಮಾಡಿಕೊಡುವುದರ ಜೊತೆಗೆ ಅಕ್ರಮವಾಗಿ ಸಮುದಾಯ ಭವನವ ನಿರ್ಮಿಸಿರುವವರ ವಿರುದ್ಧ ಹಾಗೂ ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ನಗರಸಭೆ ಹಾಗೂ ತಾಲೂಕು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜ.೨೬ರಂದು ಕನಕಮಂಟಪ ಮೈದಾನದಲ್ಲಿ ಶಾಸಕರಿಗೆ ಸ್ಥಳೀಯ ನಿವಾಸಿಗಳೊಂದಿಗೆ ಮನವಿ ಮಾಡಲಾಗುವುದು ಎಂದು ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಿಳಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕರ ಶಾಸಕರ ಮತ್ತು ಸಂಸದರ ಅನುದಾನಗಳನ್ನು ಪಡೆದುಕೊಂಡು ಮೂರು ಅಂತಸ್ತಿನ ಸಮುದಾಯ ಭವನವನ್ನು ನಿರ್ಮಿಸಿ ಖಾಸಗಿ ಸಮುದಾಯ ಭವನದ ರೀತಿ ಮಾರ್ಪಾಡು ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ, ಕಳೆದ ಒಂದು ವರ್ಷದಿಂದ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿಯಿಂದ ಹೋರಾಟ ಮಾಡುತ್ತಿದ್ದು, ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಬಾಹಿರವಾಗಿ ಸಮುದಾಯಭವನ ನಿರ್ಮಿಸಿರುವವರ ವಿರುದ್ಧ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಜಾಗಗಳಲ್ಲಿ ಸಮುದಾಯ ಭವನ ಅಥವಾ ಇನ್ನಿತರೆ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಂಬಂಧಪಟ್ಟ ತಾಲೂಕು ಆಡಳಿತ, ಕೊಳಚೆ ಮಂಡಳಿ(ಸ್ಲಂ ಬೋರ್ಡ್), ನಗರಸಭೆ ವತಿಯಿಂದ ಅನುಮತಿ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅಲ್ಲದೆ ಶಾಸಕರ ಮತ್ತು ಸಂಸದರ ಅನುದಾನ ಸಾರ್ವಜನಿಕರ ಉದ್ದೇಶಕ್ಕಾಗಿ ಪಡೆಯುವ ಸಂದರ್ಭದಲ್ಲಿ ಟ್ರಸ್ಟ್ ನೊಂದಣಿಯಾಗಿರಬೇಕು. ನಿರ್ಮಾಣವಾಗುತ್ತಿರುವ ಜಾಗಕ್ಕೆ ಖಾತೆಯಾಗಿರಬೇಕು. ಇವುಗಳಲ್ಲಿ ಯಾವುದೂ ಆಗದೇ ಸಮುದಾಯಭವನ ನಿರ್ಮಾಣ ಮಾಡಿರುವವರು ೨೦೧೯-೨೦೨೦ರಲ್ಲಿ ಸಂಸದರ ಹಾಗೂ ಶಾಸಕರ ಅನುದಾನ ಪಡೆದುಕೊಂಡಿರುತ್ತಾರೆ. ೨೦೨೨-೨೦೨೩ರಲ್ಲಿ ಟ್ರಸ್ಟ್ ನೊಂದಣಿ ಮಾಡಿಕೊಂಡಿರುತ್ತಾರೆ. ನಗರಸಭೆವತಿಯಿಂದ ೨೦೨೪ ಫೆಬ್ರವರಿಯಲ್ಲಿ ಅಂತರಘಟ್ಟಮ್ಮ ದೇವಸ್ಥಾನದ ಹೆಸರಿನಲ್ಲಿ ಸಂಬಂಧಪಟ್ಟ ಜಾಗಕ್ಕೆ ಖಾತೆ ಮಾಡಿಸಿಕೊಂಡಿರುತ್ತಾರೆ. ಇವೆಲ್ಲವೂ ಕೂಡ ಒಂದಕ್ಕೊಂದು ಸಂಬಂಧವಿಲ್ಲದೆ ಇರುವುದರಿಂದ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದು, ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಪ್ರತಿಕಾಗೋಷ್ಠಿಯಲ್ಲಿ ಸ್ಥಳೀಯ ಪ್ರಮುಖರಾದ ಬಿ.ಜಿ ಉಮೇಶ್, ಸವಿತಾ ಉಮೇಶ್, ಸತೀಶ್ ಪೂಜಾರಿ, ಮಹಾದೇವಿ, ದಿವ್ಯಶ್ರೀ, ಗೋಪಾಲ್‌ರಾವ್, ಶಶಿಧರ್, ಜಯಲಕ್ಷ್ಮೀ, ಮಹಾಲಕ್ಷ್ಮಿ, ಸಣ್ಣಮ್ಮ, ಪಾರ್ವತಿಬಾಯಿ, ಜಯಂತಿ, ನಾಗೋಜಿರಾವ್, ಪರಮೇಶ್ವರ್, ಇಂದ್ರಮ್ಮ, ಕುಮಾರ್ ರಾವ್, ಮೋಹನ್‌ಕುಮಾರ್, ಉಮೇಶ್, ಶಿವಶಂಕರ್, ಲಕ್ಷ್ಮಿಬಾಯಿ, ಸುಭದ್ರಬಾಯಿ, ಜಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.