Thursday, March 6, 2025

೪ ದಶಕಗಳ ಹೋರಾಟಕ್ಕೆ ಇದೀಗ ಫಲ : ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ ಡಾ.ಬಿ.ಆರ್ ಅಂಬೇಡ್ಕರ್ ಭವನ

ಭದ್ರಾವತಿ ಹಳೇನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ. 
* ಅನಂತಕುಮಾರ್
     ಭದ್ರಾವತಿ: ಕ್ಷೇತ್ರದಲ್ಲಿ ಸುಮಾರು ೪ ದಶಕಗಳ ಹೋರಾಟಕ್ಕೆ ಇದೀಗ ಫಲ ಲಭಿಸಿದ್ದು, ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಇದೀಗ ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ಸಿದ್ದಗೊಳ್ಳುತ್ತಿದೆ. 
    ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಅದರ ಮೂಲ ಪ್ರೇರಕ ಶಕ್ತಿ, ಜಗತ್ತಿನ ಶ್ರೇಷ್ಠ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಭವನದ ಕನಸು ಇದೀಗ ನನಸಾಗುತ್ತಿದೆ. ಕ್ಷೇತ್ರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ವಿವಿಧ ದಲಿತಪರ ಸಂಘಟನೆಗಳು ಸುಮಾರು ೪ ದಶಕಗಳ ಹಿಂದೆ ಆರಂಭಿಸಿದ ಹೋರಾಟ ಇದೀಗ ಅಂತ್ಯಗೊಳ್ಳುವಂತಾಗಿದೆ.
    ಆರಂಭದ ಹೋರಾಟದಲ್ಲಿ ಜಯ ಲಭಿಸಿದಾದರೂ ನಿರೀಕ್ಷೆಯಂತೆ ಸುಸಜ್ಜಿತ ಭವನ ನಿರ್ಮಾಣಗೊಳ್ಳಲಿಲ್ಲ. ಆರಂಭದಲ್ಲಿ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾ ರೈಲ್ವೆ ಕೆಳಸೇತುವೆ ಬಳಿ ಅತಿ ಚಿಕ್ಕದಾದ, ಗುಡಿಸಲಿನ ಮಾದರಿಯ ಭವನ ನಿರ್ಮಾಣಗೊಂಡಿತು. ಆದರೆ ಈ ಭವನವನ್ನು ಯಾರು ಸಹ ಅಂಬೇಡ್ಕರ್ ಭವನವೆಂದು ಸ್ವೀಕರಿಸಲು ಸಿದ್ದರಿರಲಿಲ್ಲ. ಈ ಹಿನ್ನಲೆಯಲ್ಲಿ ಈ  ಭವನ ಸುಮಾರು ೪-೫ ವರ್ಷಗಳವರೆಗೆ ಪಾಳು ಬಿದ್ದಿತ್ತು. ನಂತರದ ದಿನಗಳಲ್ಲಿ ಈ ಭವನವನ್ನು ನಗರಸಭೆ ಆಡಳಿತ ಸಾರ್ವಜನಿಕ ಗ್ರಂಥಾಲಯಕ್ಕೆ ಬಿಟ್ಟುಕೊಡುವ ಮೂಲಕ ಇದರ ನಿರ್ವಹಣೆ ಜವಾಬ್ದಾರಿಯನ್ನು ಗ್ರಂಥಾಲಯ ಇಲಾಖೆಗೆ ವಹಿಸಿದೆ.
     ಪುನಃ ಮುಂದುವರೆದ ಹೋರಾಟ : ಜಾಗ ಹುಡುಕಾಟ
    ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಪುನಃ ದಲಿತಪರ ಸಂಘಟನೆಗಳು ಹೋರಾಟ ಮುಂದುವರೆಸಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಹುಡುಕುವ ಪ್ರಕ್ರಿಯೆ ಆರಂಭಗೊಂಡಿತು. ಮೊದಲು ಹೊಸಮನೆ ಮುಖ್ಯರಸ್ತೆಯಲ್ಲಿರುವ ಹಳೇ ಸಂತೆ ಮೈದಾನದಲ್ಲಿ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಯಿತು. ಆದರೆ ಈ ಸ್ಥಳ ಸೂಕ್ತವಲ್ಲ ಬೇರೆಡೆ ನಿರ್ಮಿಸಬೇಕೆಂದು ಒತ್ತಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೈಬಿಡಲಾಯಿತು. ನಂತರ ಜಟ್‌ಪಟ್ ನಗರದಲ್ಲಿ ಭವನಕ್ಕೆ ಜಾಗ ಮಂಜೂರಾತಿ ಪಡೆದುಕೊಂಡರೂ ಈ ಜಾಗ ಸಹ ಸೂಕ್ತವಲ್ಲ ಎಂದು ಕೈಬಿಡಲಾಯಿತು. ಕೊನೆಯದಾಗಿ ತಾಲೂಕು ಕಚೇರಿ ರಸ್ತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಗರಸಭೆಗೆ ಸೇರಿದ ಖಾಲಿ ಜಾಗದಲ್ಲಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ೨೦೧೭ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿಯವರು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು ೮ ವರ್ಷಗಳ ನಂತರ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಭವನ ಉದ್ಘಾಟನೆಗೊಳ್ಳಲಿದೆ.  
ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಪರಿಣಾಮವಾಗಿ ಅಂಬೇಡ್ಕರ್ ಭವನದ ಕಾಮಗಾರಿ ಮುಕ್ತಾಯ ಹಂತ ತಲುಪುತ್ತಿದೆ. ಏ.೧೦ರೊಳಗೆ ಕಾಮಗಾರಿ ಕಾಮಗಾರಿ ಪೂರ್ಣಗೊಳಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ಕೊನೆಗೂ ನಮ್ಮ ಹೋರಾಟಕ್ಕೆ ಫಲ ಲಭಿಸುತ್ತಿದೆ. ನಮ್ಮ ಹೋರಾಟಕ್ಕೆ ಸ್ಪಂದಿಸಿ ಈ ನಡುವೆ ಸರ್ಕಾರದಿಂದ ಪುನಃ ೧ ಕೋ.ರು. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. 
        -ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ. 
 
    ಅನುದಾನ ಬಿಡುಗಡೆಯಾದರೂ ಕಾಮಗಾರಿ ವಿಳಂಬ : 
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭವನ ನಿರ್ಮಿಸಲಾಗುತ್ತಿದ್ದು, ಆರಂಭದಲ್ಲಿ ಇಲಾಖೆಗೆ ಸರ್ಕಾರದಿಂದ ರು. ೧ ಕೋ. ಅನುದಾನ ಬಿಡುಗಡೆಗೊಂಡಿದ್ದು, ಈ ಅನುದಾನ ಬಳಸಿಕೊಂಡು ಮೊದಲ ಹಂತದ ಕಾಮಗಾರಿ ನಡೆಸಲಾಯಿತು. ಹೆಚ್ಚಿನ ಅನುದಾನ ಅಗತ್ಯತೆ ಹಿನ್ನಲೆಯಲ್ಲಿ ಪುನಃ ಇಲಾಖೆಗೆ ರು. ೧ ಕೋ. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ನಗರಸಭೆ ವತಿಯಿಂದ ರು.೫೦ ಲಕ್ಷ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರು.೩೭.೩೭ ಲಕ್ಷ ರು. ಹಾಗು ಸಂಸದರ ನಿಧಿಯಿಂದ ೨೫ ಲಕ್ಷ ರು. ಸೇರಿದಂತೆ ಒಟ್ಟು ೩.೧೨ ಕೋ. ರು. ಅನುದಾನ ಲಭ್ಯವಾದರೂ ಸಹ ಭವನ ಪೂರ್ಣಗೊಳ್ಳಲಿಲ್ಲ. ಈ ನಡುವೆ ಸರ್ಕಾರ ಹೆಚ್ಚುವರಿಯಾಗಿ ಪುನಃ ೧.೫೦ ಕೋ.ರು ಅನುದಾನ ಬಿಡುಗಡೆಗೊಳಿಸಿದ್ದು, ಆದರೂ ಸಹ ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಮಿತಿ ಕೇಂದ್ರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಈ ನಡುವೆ ಹೋರಾಟಗಳು ತೀವ್ರಗೊಂಡು ಭವನ ಕಾಮಗಾರಿ ಪೂರ್ಣಗೊಳಿಸುವಂತೆ ಎಚ್ಚರಿಸಿದ ಹಿನ್ನಲೆಯಲ್ಲಿ ಇದೀಗ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಕಳೆದ ಎರಡು ದಿನಗಳ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದು ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದೆ. ಬುಧವಾರದಿಂದ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. 

ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಕೊಳ್ಳಲು ವಿದ್ಯಾದಾನ ಸಹಕಾರಿ : ಎ.ಕೆ ನಾಗೇಂದ್ರಪ್ಪ

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಕೂಲಿ ಕಾರ್ಮಿಕರಿಗೆ ವಸ್ತ್ರ ವಿತರಣೆ 

ಭದ್ರಾವತಿಯಲ್ಲಿ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗು ಬಡ ಕೂಲಿ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ದಾನಗಳಲ್ಲಿ ವಿದ್ಯಾದಾನ ಸಹ ಶ್ರೇಷ್ಠವಾಗಿದ್ದು, ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಕೊಳ್ಳಲು ವಿದ್ಯಾದಾನ ಸಹಕಾರಿಯಗಲಿದೆ ಈ ಹಿನ್ನಲೆಯಲ್ಲಿ ದಾನಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮನವಿ ಮಾಡಿದರು. 
    ಅವರು ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗು ಬಡ ಕೂಲಿ ಕಾರ್ಮಿಕರಿಗೆ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  
    ಧರ್ಮಸಂಸ್ಥೆ ವತಿಯಿಂದ ಪ್ರತಿ ವರ್ಷ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದರ ಜೊತೆಗೆ ದಾನಿಗಳು ವಿದ್ಯಾದಾನ ಮಾಡುವ ಮೂಲಕ ಇನ್ನೂ ಹೆಚ್ಚಿನ ಸೇವೆ ನೀಡಬೇಕು. ಆ ಮೂಲಕ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. . 
    ಹಿರಿಯ ಮುಖಂಡ, ಉದ್ಯಮಿ ಬಿ.ಕೆ ಜಗನ್ನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸಂಸ್ಥೆ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ. ಸಮಾಜದಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು.  
    ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಧರ್ಮಸಂಸ್ಥೆಯನ್ನು ೧೯೯೮ರಲ್ಲಿ ಆರಂಭಿಸಲಾಯಿತು. ಎಲ್ಲರ ಸಹಕಾರದಿಂದ ಅಂದಿನಿಂದ ನಿರಂತರವಾಗಿ ಹಲವಾರು ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಆಶಯ ನಮ್ಮದಾಗಿದೆ ಎಂದರು. 
    ಸಮಾಜ ಸೇವಕ ರಾಜುನಾಯ್ಕ, ಚಲನಚಿತ್ರ ನಟ, ನಿರ್ಮಾಪಕ ಮಂಜು(ಮಿಲ್ಟ್ರಿ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಧರ್ಮಸಂಸ್ಥೆ ಟ್ರಸ್ಟಿ ಶಶಿಕಲಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. 
. ನಂದಿನಿ ಮಲ್ಲಿಕಾರ್ಜುನ ಪ್ರಾರ್ಥಿಸಿ, ಪೇಪರ್‌ಟೌನ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ. ಬಸವರಾಜ್ ಸ್ವಾಗತಿಸಿದರು. ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. 

Tuesday, March 4, 2025

ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸಿ

ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಸಚಿವ ಕೆ.ಎಚ್ ಮುನಿಯಪ್ಪರಿಗೆ ಮನವಿ 

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಭದ್ರಾವತಿ ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. 
    ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. 
    ಸಂಘದ ಸಂಘಟನಾ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ೨೦೨೪ರ ಮಾರ್ಚ್ ತಿಂಗಳ ನ್ಯಾಯ ಬೆಲೆ ಅಂಗಡಿಯವರಿಗೆ ಬರಬೇಕಾದ ಕಮೀಷನ್ ಬಾಕಿ ಇದ್ದು, ತಕ್ಷಣ ನೀಡುವುದು. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡುತ್ತಿರುವ ಕಮೀಷನ್ ಹಣ ಡಿಬಿಟಿ ಮುಖಾಂತರ ನೀಡುವಂತೆ ಕೋರಲಾಗಿದೆ.
    ನ್ಯಾಯಬೆಲೆ ಅಂಗಡಿಗಳು ತಿಂಗಳ ೩೦ ದಿನಗಳು ಪೂರ್ತಿ ತೆಗೆಯಬೇಕೆಂಬ ಸರ್ಕಾರದ ನಿಯಮವಿದ್ದು, ಸರ್ಕಾರದಿಂದ ಜನರಿಗೆ ದಿನನಿತ್ಯ ಬಳಸುವ ಸಾಮಾಗ್ರಿಗಳಾದ ಎಣ್ಣೆ, ಸಕ್ಕರೆ, ತೊಗರಿಬೇಳೆ, ಕಡಲೆಕಾಳು, ಇತರೆ ಕಾಟನ್ ಬಟ್ಟೆಗಳಾದ ಪಂಚೆ, ಸೀರೆ ನ್ಯಾಯಯುತವಾದ ಬೆಲೆಗೆ ನೀಡಿದ್ದಲ್ಲಿ ನಮ್ಮ ಸ್ವಂತ ಹಣದಿಂದ ಸರ್ಕಾರಕ್ಕೆ ಭರ್ತಿ ಮಾಡಿ ಜನರಿಗೆ ನಿಗದಿತ ಬೆಲೆಗೆ ನೀಡುತ್ತೇವೆ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು.  ಅದ್ಯತಾ ಪಡಿತರ ಚೀಟಿ ಹೊಂದಿರುವ ಕೂಲಿ ಕಾರ್ಮಿಕರು ಕೆಲಸದ ಮೇಲೆ ಬೇರೆ ಬೇರೆ ಕಡೆ ಹೋಗಿಬರುವುದರಿಂದ ಹಾಗೂ ವಯೋವೃದ್ಧರಿಗೆ ಬಯೋಮೆಟ್ರಿಕ್ ಸಮಸ್ಯೆಯಿಂದ ಪಡಿತರ ಪಡೆಯಲು ತೊಂದರೆ ಆಗಿರುವುದರಿಂದ ಓಟಿಪಿ ಪದ್ಧತಿ ಮುಂದುವರೆಸುವುದು ಹಾಗು  ೨೦೧೮ರ ಸಾಲಿನಲ್ಲಿ ಇ-ಕೆವೈಸಿ ಹಣದ ಬಾಕಿಯಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಕೆಲಸ ಶೇಕಡ ೯೮ರಷ್ಟು ಸಂಪೂರ್ಣವಾಗಿ ಮಾಡಿದ್ದು, ಸರ್ಕಾರ ನಮಗೆ ಕೊಡಬೇಕಾದ ಕಮೀಷನ್ ಹಣ ಪ್ರಸಕ್ತ ೨೦೨೫ರ ಮಾರ್ಚ್ ತಿಂಗಳ ಒಳಗಾಗಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
    ನಗರ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಆರ್ ನಾಗರಾಜ, ಎನ್. ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮನುಷ್ಯನನ್ನು ಮನುಷ್ಯನ ರೀತಿಯಲ್ಲಿ ನೋಡಿದಾಗ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ : ಎಂ. ಶಿವಕುಮಾರ್

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿವಮೊಗ್ಗ ನೇಸರ ಸೆಂಟರ್ ಫಾರ್  ರೂರಲ್  ಸಂಯುಕ್ತ ಆಶ್ರಯದಲ್ಲಿ ಭದ್ರಾವತಿ ತಾಲೂಕಿನ ತಾವರಘಟ್ಟ ಪಂಚಾಯಿತಿಯಲ್ಲಿ  ಹಮ್ಮಿಕೊಂಡಿದ್ದ  ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ನಿಷೇಧ ಹಾಗೂ ಅಸ್ಪೃಶ್ಯ ಜಾತಿಗಳ ನಿರ್ಮೂಲನೆ ಬಗ್ಗೆ ಅರಿವು /ಜಾಗೃತಿ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.  
ಭದ್ರಾವತಿ: ಮನುಷ್ಯನನ್ನು ಮನುಷ್ಯನ ರೀತಿಯಲ್ಲಿ ನೋಡಿದಾಗ ಮಾತ್ರ  ಜಾತಿ ನಿರ್ಮೂಲನೆ ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ, ನ್ಯಾಯವಾದಿ ಎಂ. ಶಿವಕುಮಾರ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿವಮೊಗ್ಗ ನೇಸರ ಸೆಂಟರ್ ಫಾರ್  ರೂರಲ್  ಸಂಯುಕ್ತ ಆಶ್ರಯದಲ್ಲಿ  ತಾಲೂಕಿನ ತಾವರಘಟ್ಟ ಪಂಚಾಯಿತಿಯಲ್ಲಿ  ಹಮ್ಮಿಕೊಂಡಿದ್ದ  ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ನಿಷೇಧ ಹಾಗೂ ಅಸ್ಪೃಶ್ಯ ಜಾತಿಗಳ ನಿರ್ಮೂಲನೆ ಬಗ್ಗೆ ಅರಿವು /ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.  
    ಇತ್ತೀಚಿನ ದಿನಗಳಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇವು ಇನ್ನೂ ಹೆಚ್ಚಾಗಿವೆ. ಸಂವಿಧಾನದ ಆಶಯಕ್ಕೆ ಇವು ಕಳಂಕ ತಂದಿವೆ.  ಜಾತಿ ನಿರ್ಮೂಲನೆಯಿಂದ ಸ್ವಾಸ್ಥ್ಯ ಸಮಾಜ,  ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. 
      ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಹನುಮಂತಪ್ಪ, ಉಪಾಧ್ಯಕ್ಷ ಗಿರೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ದಸ್ತಗಿರ್, ಸದಸ್ಯರಾದ  ಲೋಕೇಶ್,  ಶೋಭಾ, ಸಂಧ್ಯಾ, ದೇವಲನಾಯ್ಕ, ಮಂಜುನಾಥ, ಸೋಮಶೇಖರ್ ಹಾಗು ನೇಸರ ಸಂಸ್ಥೆಯ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, March 3, 2025

ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ನಿಧನ

ಪುಟ್ಟಸ್ವಾಮಿ ಆಚಾರ್ 
ಭದ್ರಾವತಿ: ನಗರದ ನ್ಯೂಟೌನ್ ಪೊಲೀಸ್ ಠಾಣೆ ಸಮೀಪದಲ್ಲಿರುವ ಅರಣ್ಯ ಇಲಾಖೆ ವಸತಿಗೃಹದ ನಿವಾಸಿ ಪುಟ್ಟಸ್ವಾಮಿ ಆಚಾರ್(೫೬) ಕರ್ತವ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. 
ಪತ್ನಿ ಮಾಲತಿ, ಪುತ್ರ ಪಿ. ರಾಹುಲ್ ಮತ್ತು ಪುತ್ರಿ ಪಿ. ಅನುಷಾ ಇದ್ದಾರೆ.  ಇವರ ಅಂತ್ಯ ಸಂಸ್ಕಾರ ಮಂಗಳವಾರ ನಗರದ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
ನಗರದ  ಬಿ.ಎಚ್  ರಸ್ತೆ, ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಎಫ್‌ಓ)ಗಳ ಕಛೇರಿಯಲ್ಲಿ ವೈರ್‌ಲೆಸ್ ಆಪರೇಟರ್ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟಸ್ವಾಮಿಯವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಹಳ ಕಾಲದಿಂದ ರಾತ್ರಿ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ಕರ್ತವ್ಯಕ್ಕೆ ತೆರಳಿದ್ದ ಇವರು ಸೋಮವಾರ ಬೆಳಿಗ್ಗೆ ಮೃತಪಟ್ಟಿರುವುದು ತಿಳಿದುಬಂದಿದೆ.  ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ನೌಕರರು ಸಂತಾಪ ಸೂಚಿಸಿದ್ದಾರೆ. 

ವಿಐಎಸ್‌ಎಲ್ ನಗರಾಡಳಿತ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ : ಸರ್ವೆ ನಡೆಸಿ, ಜಾಗದ ಬಗ್ಗೆ ಲಿಖಿತ ದಾಖಲೆ ನೀಡಿ

ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್ ಶೆಡ್, ಸರ್ವೆ ನಂ. ೭ರಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡದ ಜಾಗಕ್ಕೆ ವಿಐಎಸ್‌ಎಲ್ ನಗರಾಡಳಿತ ವತಿಯಿಂದ ಸರ್ವೆ ನಡೆಸಿ ಜಾಗದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.  
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್ ಶೆಡ್, ಸರ್ವೆ ನಂ. ೭ರಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡದ ಜಾಗಕ್ಕೆ ವಿಐಎಸ್‌ಎಲ್ ನಗರಾಡಳಿತ ವತಿಯಿಂದ ಸರ್ವೆ ನಡೆಸಿ ಜಾಗದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.  
    ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ನಿವಾಸಿಗಳು ಫಿಲ್ಟರ್‌ಶೆಡ್‌ನಲ್ಲಿ ೩೦*೮೦ ಅಳತೆಯಲ್ಲಿ ಕಾನೂನು ಬಾಹಿರವಾಗಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದ್ದು, ಈ ಜಾಗಕ್ಕೆ ಸಂಬಂಧಪಟ್ಟಂತೆ ಪಹಣಿಯಲ್ಲಿ ವಿಐಎಸ್‌ಎಲ್ ಮತ್ತು ಗೋಮಾಳ ಜಾಗ ಎಂದು ನಮೂದಾಗಿರುತ್ತದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಾಲೂಕು ಆಡಳಿತ ಮತ್ತು ವಿಐಎಸ್‌ಎಲ್ ನಗರಾಡಳಿತ ವತಿಯಿಂದ ಸ್ಥಳ ಪರಿಶೀಲಿಸಿ ಫೆ.೨೮ ರಂದು ಜಂಟಿ ಸರ್ವೆ ನಡೆಸುವ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಇಂಜಿನಿಯರ್ ನಂದನ್‌ರವರು ಕಟ್ಟಡ ನಿರ್ಮಾಣವಾಗಿರುವ ಜಾಗ ವಿಐಎಸ್‌ಎಲ್ ಸೇರಿದ್ದು ಎಂದು ಮೌಖಿಕವಾಗಿ ನಮಗೆ ತಿಳಿಸಿರುತ್ತಾರೆಂದು ಆರೋಪಿಸಿದರು. 
     ವಿಐಎಸ್‌ಎಲ್ ನಗರಾಡಾಳಿತ ಕಛೇರಿಯವರು ತಮ್ಮ ವ್ಯಾಪ್ತಿಗೊಳಪಡುವ ಜಾಗಗಳಲ್ಲಿ ವ್ಯಾಪಾರಿಗಳಿಗೆ, ಬಡ ನಾಗರಿಕರಿಗೆ ಸಣ್ಣಪುಟ್ಟ ವ್ಯಾಪಾರ ಮಾಡುವುದಕ್ಕೂ ಕೂಡ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಮುಗಿಯುವ ಹಂತಕ್ಕೆ ಬಂದರೂ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದನ್ನು ಗಮನಿಸಿದಾಗ ನಗರಾಡಳಿತ ಇಲಾಖೆ ಮತ್ತು ನಂದನ್‌ರವರು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ಜೊತೆ ಶಾಮೀಲಾಗಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣವಾಗಿರುವ ಜಾಗದ ಸರ್ವೆ ನಡೆಸಿ ಜಾಗದ ಬಗ್ಗೆ ತಮ್ಮಲ್ಲಿರುವ ದಾಖಲೆಗಳ ಮಾಹಿತಿಯನ್ನು ಲಿಖಿತವಾಗಿ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 
    ವಿಐಎಸ್‌ಎಲ್ ನಗರಾಡಳಿತಾಧಿಕಾರಿ ನವೀನ್ ರಾಹುಲ್‌ಗೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಧರಣಿ ಸತ್ಯಾಗ್ರಹದಲ್ಲಿ ನಿವಾಸಿಗಳಾದ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ, ನಗರಸಭೆ ಸದಸ್ಯೆ ಕೆ.ಆರ್ ಸವಿತಾ, ಮುಖಂಡ ಉಮೇಶ್, ಇಂದ್ರಮ್ಮ, ದಿವ್ಯಶ್ರೀ, ಮುದ್ದಮ್ಮ, ಲಕ್ಷ್ಮಮ್ಮ, ಸಣ್ಣಕ್ಕ, ಅನುಸೂಯ, ಸಂಧ್ಯಾ, ಮುನಿಯಮ್ಮ, ಮಾಲಕ್ಕ, ಯೋಗೇಶ್, ಗೋಪಾಲರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, March 2, 2025

ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬ ಆಚರಣೆ : ಹಾಲು-ಹಣ್ಣು-ಬ್ರೆಡ್ ವಿತರಣೆ

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಭದ್ರಾವತಿ ಗಾಂಧಿನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಸಿಹಿ ಹಂಚಲಾಯಿತು. ನಂತರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು-ಹಣ್ಣು-ಬ್ರೆಡ್ ವಿತರಿಸಲಾಯಿತು.  
    ಭದ್ರಾವತಿ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಗಾಂಧಿನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಸಿಹಿ ಹಂಚಲಾಯಿತು. ನಂತರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು-ಹಣ್ಣು-ಬ್ರೆಡ್ ವಿತರಿಸಲಾಯಿತು.  
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವ ವಹಿಸಿದ್ದರು. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಹಿಂದುಳಿದ ವರ್ಗಗಳ ವಿಭಾಗದ ತಾಲೂಕು ಅಧ್ಯಕ್ಷ ಎಂ. ರಮೇಶ್ ಶೆಟ್ಟಿ ಶಂಕರಘಟ್ಟ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.