ರಾಜುನಾಯ್ಕ ಕನ್ನಡಿಗ ವಯೋವೃದ್ಧರು, ನಿರಾಶ್ರಿತರಿಗೆ ಆಸರೆ
ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ.
* ಅನಂತಕುಮಾರ್
ಭದ್ರಾವತಿ: ಚಲನಚಿತ್ರ ನಟ, ಸಮಾಜ ಸೇವಕ, ಕರ್ನಾಟಕ ರತ್ನ, ಪವರ್‌ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬ ಸೋಮವಾರ ಎಲ್ಲೆಡೆ ಆಚರಿಸಲಾಗುತ್ತಿದ್ದು, ಅವರ ಅಭಿಮಾನಿ ಬಳಗದಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ.
ಪುನೀತ್‌ರಾಜ್‌ಕುಮಾರ್ ಕೇವಲ ಸಿನಿಮಾ ನಟರಾಗಿ ಬದುಕಿರಲಿಲ್ಲ. ಹಲವಾರು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಅವರೊಬ್ಬ ಸಮಾಜ ಸೇವಕರಾಗಿದ್ದರು ಎಂಬುದು ವಿಶೇಷವಾಗಿದೆ. ವಿಶೇಷ ಎಂದರೆ ಅವರ ನಿಧನ ನಂತರ ಅವರ ಸೇವಾಕಾರ್ಯಗಳು ಬೆಳಕಿಗೆ ಬಂದವು. ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಎಲ್ಲಡೆ ಇದ್ದಾರೆ. ಆದರೆ ಅವರ ಅಭಿಮಾನಿಯಾಗಿ ಅವರಂತೆ ಸೇವಾಕಾರ್ಯಗಳನ್ನು ಮೈಗೂಡಿಸಿಕೊಂಡವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದ ಸಂಸ್ಥಾಪಕ ರಾಜುನಾಯ್ಕ ಕನ್ನಡಿಗ ಸಹ ಒಬ್ಬರಾಗಿದ್ದಾರೆ.
ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಕತ್ತಲಗೆರೆ ಕವಳಿ ತಾಂಡ ಎಂಬ ಚಿಕ್ಕ ಗ್ರಾಮದಲ್ಲಿ ಒಬ್ಬ ಬಡ ರೈತನ ಮಗನಾಗಿ ಜನಿಸಿರುವ ರಾಜುನಾಯ್ಕರವರು ಪುನೀತ್‌ರಾಜ್‌ಕುಮಾರ್ ಅಭಿಮಾನಿಯಾಗಿದ್ದು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದೊಂದಿಗೆ ಸುಮಾರು ೯ ವರ್ಷಗಳ ಹಿಂದೆ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ಆರಂಭಿಸುವ ಮೂಲಕ ವಯೋವೃದ್ಧರು, ನಿರಾಶ್ರಿತರಿಗೆ ಆಸರೆಯಾಗಿದ್ದಾರೆ.
ಭದ್ರಾವತಿ ಬೊಮ್ಮನಕಟ್ಟೆ-ತಿಮ್ಲಾಪುರ ರಸ್ತೆಯಲ್ಲಿರುವ ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮದಲ್ಲಿರುವ ವಯೋವೃದ್ಧರು, ನಿರಾಶ್ರಿತರು.
ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ ಆರಂಭಿಸಲು ರಾಜುರವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಆರಂಭದಲ್ಲಿ ಶಿವಮೊಗ್ಗ ಸೋಮಿನಕೊಪ್ಪದ ಆದರ್ಶನಗರದಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೆರವಿನೊಂದಿಗೆ ನಿರ್ಮಿತಿ ಕೇಂದ್ರದಿಂದ ಕಟ್ಟಿರುವ ಪಾಳು ಬಿದ್ದಿರುವ ಒಂದು ಕಟ್ಟಡ ಇವರಿಗೆ ಲಭಿಸಿತ್ತು. ಇದನ್ನು ಸ್ವಚ್ಛಗೊಳಿಸಿ ೨೦೧೬ರಲ್ಲಿ ಆಶ್ರಮ ಪ್ರಾರಂಭಿಸಿದರು. ಆರಂಭದಲ್ಲಿ ಇವರ ಕಾರ್ಯಕ್ಕೆ ಮತ್ತೊಬ್ಬ ಸಮಾಜ ಸೇವಕ ಕೈಜೋಡಿಸಿದ್ದರು. ೨೦೧೮ರಿಂದ ಇವರೊಬ್ಬರೇ ಆಶ್ರಮ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ನಿರ್ಮಿತಿ ಕೇಂದ್ರದ ವೈಕ್ತಿಯೋರ್ವ ಏಕಾಏಕಿ ಇವರನ್ನು ಹೊರಹಾಕಿದ್ದು, ರಸ್ತೆಯಲ್ಲಿ ಬಿದ್ದಿರುವ ನಿರಾಶ್ರಿತರನ್ನು ರಕ್ಷಿಸಿ ಸಲಹಲು ರಾಜುರವರು ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಯಿತು. ಆದರೂ ಧೈರ್ಯ ಕಳೆದುಕೊಳ್ಳದೆ ತಮ್ಮ ಸೇವಾ ಕಾರ್ಯ ಮುಂದುವರೆಸಿದ್ದಾರೆ.
ಶಿವಮೊಗ್ಗದಿಂದ ಸ್ಥಳಾಂತರಗೊಂಡು ನಗರದ ಬೊಮ್ಮನಕಟ್ಟೆ ತಿಮ್ಲಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಸಹಾಯದೊಂದಿಗೆ ಆಶ್ರಮ ಮುಂದುವರೆಸಿದ್ದಾರೆ. ಯಾವುದೇ ಆದಾಯ ಮೂಲ ಹೊಂದಿರುದ ರಾಜುರವರು ತಮ್ಮ ಸ್ವಂತ ಹಣದಲ್ಲಿ ಆಶ್ರಮಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳದೆ ಸ್ಥಳೀಯರು, ದಾನಿಗಳು ಹಾಗು ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಶ್ರಮ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಕೆಲವು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಮಾಜಸೇವಕರಂತೆ ಮುಖವಾಡ ಹಾಕಿಕೊಂಡವರು ಇದ್ದಾರೆ. ಆದರೆ ರಾಜು ಅವರಂತೆ ಎಲೆ-ಮರೆ ಕಾಯಿಯಾಗಿ ಸೇವೆ ಸಲ್ಲಿಸುವವರು ವಿರಳ. ಇಂತಹವರು ಸಮಾಜಕ್ಕೆ ಮಾದರಿ ಎಂದರೆ ತಪ್ಪಾಗಲಾರದು.
ನಾನು ಪುನೀತ್‌ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದು, ಅವರ ಹೆಸರನ್ನು ನಾನು ಎಲ್ಲೂ ದುರ್ಬಳಕೆ ಮಾಡಿಕೊಂಡಿಲ್ಲ. ವಯೋವೃದ್ದರು, ನಿರಾಶ್ರಿತರ ಸೇವೆ ಮಾಡುತ್ತಿರುವುದು ನನಗೆ ತೃಪ್ತಿ ನೀಡುತ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಭೇಟಿಯಾಗಿಲ್ಲ. ಅವರು ನಿಧನ ಹೊಂದುವ ಒಂದು ವಾರದ ಹಿಂದೆ ನಾನು ಅವರ ಸಹಾಯಕರನ್ನು ಸಂಪರ್ಕಿಸಿದಾಗ ನನಗೆ ಪುನೀತ್ ರಾಜ್‌ಕುಮಾರ್ ಭೇಟಿಯಾಗಲು ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ.
- ರಾಜುನಾಯ್ಕ ಕನ್ನಡಿಗ, ಸಂಸ್ಥಾಪಕರು,
ಹೋಂ ಆಫ್ ಹೋಂ ಜನಸ್ನೇಹಿ ಸೇವಾ ಟ್ರಸ್ಟ್ ನಿರಾಶ್ರಿತರ ಆಶ್ರಮ
--------------------------------------------------------------------------------------------
ರಾಜುನಾಯ್ಕ ಅವರು ಒಬ್ಬ ಮಾನವೀಯತೆ ಉಳ್ಳ ವ್ಯಕ್ತಿಯಾಗಿದ್ದು, ಯಾವುದೇ ಫಲಾಫೇಕ್ಷೆ ಇಲ್ಲದೆ ವಯೋವೃದ್ಧರು, ನಿರಾಶ್ರಿತರ ಸೇವೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಆಶ್ರಮದಲ್ಲಿ ಸುಮಾರು ೪೫ ಜನರಿದ್ದು, ಅವರ ಜೊತೆಯಲ್ಲಿಯೇ ರಾಜು ದಂಪತಿ ಸಹ ವಾಸಿಸುತ್ತಿದ್ದರು. ಇವರ ಈ ಸೇವಾ ಕಾರ್ಯಕ್ಕೆ ನಗರದ ಜನಪ್ರತಿನಿಧಿಗಳು, ದಾನಿಗಳು ನೆರವಾಗಿದ್ದಾರೆ.
- ಅಪೇಕ್ಷ ಮಂಜುನಾಥ್, ಕಲಾವಿದರು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಭದ್ರಾವತಿ.