ಭದ್ರಾವತಿ ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ೩ ಎಕರೆ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕೆಂದು ಜಮೀನಿನ ವಾರಸುದಾರರಾದ ಪ್ರಸನ್ನ ಕುಮಾರ್ ಹಾಗೂ ಅನಿತಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಭದ್ರಾವತಿ : ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ೩ ಎಕರೆ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗು ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕೆಂದು ಜಮೀನಿನ ವಾರಸುದಾರರಾದ ಪ್ರಸನ್ನ ಕುಮಾರ್ ಹಾಗೂ ಅನಿತಾ ಮನವಿ ಮಾಡಿದರು.
ಅವರು ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹುಳಿಯಾರು ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ ೩೬ರಲ್ಲಿರುವ (ಹಳೆಯ ಸರ್ವೆ ನಂಬರ್ ೧೫) ೩ ಎಕರೆ ಜಮೀನನ್ನು ಕರ್ನಾಟಕ ಭೂಸುಧಾರಣಾ ಕಾಯ್ದೆಯ ಪ್ರಕಾರ ವೆಂಕಟೇಶ್ ಬಿನ್ ತಿಮ್ಮಯ್ಯ ಅವರ ಹೆಸರಿಗೆ (ಸಾಗುವಳಿ ಚೀಟಿ ಸಂಖ್ಯೆ ೫೦೮/೯೬-೯೭) ಹಾಗೂ ಸರ್ವೇ ನಂಬರ್ ೩೭ರಲ್ಲಿರುವ ಮೂರು ಎಕರೆ ಜಮೀನನ್ನು ನಂಜಮ್ಮ ಬಿನ್ ದೊಡ್ಡಯ್ಯ ಅವರ ಹೆಸರಿಗೆ (ಸಾಗುವಳಿ ಚೀಟಿ ಸಂಖ್ಯೆ ೫೦೫/ ೯೬-೯೭) ಸರ್ಕಾರ ೧೯೯೭ರಲ್ಲಿ ಸಾಗುವಳಿ ಚೀಟಿ ನೀಡಿರುತ್ತದೆ. ವೆಂಕಟೇಶ್ ಹಾಗೂ ನಂಜಮ್ಮ ಅವರ ಹೆಸರಿಗೆ ಜಮೀನಿನ ಖಾತೆ, ಪಹಣಿ ಆಗಿದ್ದು, ಹದ್ದುಬಸ್ತನ್ನೂ ಸಹ ಮಾಡಿಕೊಂಡಿರುತ್ತಾರೆ. ೧೯೯೭ರಿಂದ ವೆಂಕಟೇಶ್ ಹಾಗೂ ನಂಜಮ್ಮ ಅವರ ಕುಟುಂಬದವರೇ ಜಮೀನಿನ ಅನುಭೋಗದಲ್ಲಿದ್ದಾರೆ. ಸರ್ವೆ ನಂಬರ್ ೩೭ರಲ್ಲಿರುವ ಮೂರು ಎಕರೆ ಜಮೀನಿನ ಮಾಲೀಕರಾದ ನಂಜಮ್ಮ ಅವರು ಈಚೆಗೆ ವಿಭಾಗ ಪತ್ರದ ಮೂಲಕ ಪುತ್ರಿ ಅನಿತಾ ಹೆಸರಿಗೆ ಜಮೀನಿನ ಖಾತೆ ವರ್ಗಾವಣೆ ಮಾಡಿಕೊಟ್ಟಿರುತ್ತಾರೆ ಎಂದರು.
ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಜಮೀನನ್ನು ಅಗಸ್ಟ್ ೧೪, ೨೦೨೪ರಂದು ವೆಂಕಟೇಶ್ ಅವರ ಪುತ್ರ ಪ್ರದೀಪ್.ವಿ ಅವರಿಂದ ಪ್ರಸನ್ನ ಕುಮಾರ್ ಕ್ರಯಕ್ಕೆ ಪಡೆದಿರುತ್ತಾರೆ. ಈ ಸಂಬಂಧ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಂಆರ್ ಎಚ್೨/೨೦೨೪-೨೫ರಂತೆ ಖಾತೆಯೂ ಆಗಿದೆ. ಇದರ ನಡುವೆ ಫೆಬ್ರುವರಿ ೨೫ರಂದು ತಾಲೂಕಿನ ಜಿಂಕ್‌ಲೈನ್ ನಿವಾಸಿ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ನಮ್ಮ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಹದ್ದುಬಸ್ತು ಬಾಂದ್ ಕಲ್ಲನ್ನು ಕಿತ್ತುಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ಗೂಂಡಾಗಳನ್ನು ಕರೆತಂದು ಭಯ ಹುಟ್ಟಿಸುತ್ತಿದ್ದಾರೆ. ನಮ್ಮ ಜಮೀನಿನೊಳಗೆ ಇಸ್ಪೀಟ್ ಸಹಿತ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ರಕ್ಷಣೆ ಕೋರಿ ಪೊಲೀಸ್ ಇಲಾಖೆಗೂ ದೂರು ನೀಡಲಾಗಿದೆ. ಜಮೀನಿನ ಕ್ರಯ ಪತ್ರ, ನ್ಯಾಯಾಲಯದ ಶಾಶ್ವತ ನಿರ್ಬಂಧಾಜ್ಞೆ ಆದೇಶ ಪ್ರತಿ, ಪಹಣಿ ಸಾಗುವಳಿ ಚೀಟಿ, ಮ್ಯುಟೇಷನ್, ಪೋಡು ನಕ್ಷೆ, ಸರ್ವೆ ಪ್ರತಿ ಸಹಿತ ಅಗತ್ಯ ದಾಖಲೆಗಳೆಲ್ಲವೂ ನಮ್ಮ ಹೆಸರಿನಲ್ಲೇ ಇವೆ. ೨೦೦೪ರಲ್ಲಿ ಜಮೀನಿಗೆ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಬೋರ್‌ವೆಲ್ ಕೊರೆಸಲಾಗಿದೆ. ಸಣ್ಣ ಹೆಂಚಿನ ಮನೆಯನ್ನೂ ನಿರ್ಮಿಸಲಾಗಿದೆ. ತಹಶೀಲ್ದಾರ್ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಆದೇಶದಂತೆ ಮಾರ್ಚ್ ೧೮ರಂದು ಭೂಮಾಪಕರು, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಗಡಿ ಗುರುತಿಸಿದ್ದು ಸರ್ವೆ ನಂಬರ್ ೩೬ರಲ್ಲಿರುವ ಮೂರು ಎಕರೆ ಜಮೀನು ಪ್ರಸನ್ನಕುಮಾರ್ ಬಿನ್ ತಿಮ್ಮಯ್ಯ ಅವರ ಹೆಸರಿನಲ್ಲಿ ಇರುವುದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದರು.
ಇಷ್ಟಾದರೂ ಕುಮಾರ್ ಹಾಗೂ ಅವರ ಕುಟುಂಬದ ಸದಸ್ಯರು ಜಮೀನಿಗೆ ನುಗ್ಗಿ ಅನಗತ್ಯ ಕಿರುಕುಳ ನೀಡುತ್ತಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಜಮೀನು ಪ್ರವೇಶ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಸ್ವಾಧೀನಕ್ಕೆ ಜಮೀನು ಬಿಟ್ಟುಕೊಡಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿ ಪಾರ್ವತಮ್ಮ ಉಪಸ್ಥಿತರಿದ್ದರು.