Tuesday, March 25, 2025

ಜಾನಪದ ಕಲಾವಿದ, ಶಿಕ್ಷಕ ಎಂ.ಆರ್ ರೇವಣಪ್ಪರಿಗೆ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ

ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ ಭದ್ರಾವತಿ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಲಭಿಸಿದೆ. 
    ಭದ್ರಾವತಿ : ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಜನಪದ ಕಲಾ ಸೇವಾ ರತ್ನ ಪ್ರಶಸ್ತಿ ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಲಭಿಸಿದೆ. 
    ಕನ್ನಡ ಫಿಲಂ ಚೇಂಬರ್ ವತಿಯಿಂದ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಾಗು ಸಾಧನೆಯ ದಾರಿಯಲ್ಲಿ ಸಾಗುತ್ತಿರುವ ಸಾಧಕರಿಗೆ ಸರಳತೆಯ ಶಿಖರ, ಕರ್ನಾಟಕ ರತ್ನ, ನಗು ಮುಖದ ಪರಮಾತ್ಮ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್‌ರವರ ಸ್ಪೂರ್ತಿಯೊಂದಿಗೆ ರಾಜ್ಯಮಟ್ಟದ ಪ್ರಶಸ್ತಿನೀಡಿ ಗೌರವಿಸಲಾಗುತ್ತಿದೆ. 
    ಎಂ.ಆರ್ ರೇವಣಪ್ಪರವರು ಮೂಲತಃ ಶಿಕ್ಷಕರಾಗಿದ್ದು, ವೃತ್ತಿಯೊಂದಿಗೆ ಜಾನಪದ ಅಂತರರಾಷ್ಟ್ರೀಯ ಡೊಳ್ಳು ನೃತ್ಯ ಕಲಾವಿದರು ಹಾಗು ಸುಗ್ಗಿ ಕುಣಿತ ಕೋಲಾಟ ಕಲಾವಿದರಾಗಿದ್ದಾರೆ. ಅಲ್ಲದೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ಅಧ್ಯಕ್ಷರಾಗಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಅಂತರರಾಷ್ಟ್ರೀಯ ಹಾಗು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ. 
    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾ.೨೩ರಂz ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರೇವಣಪ್ಪರವರು `ಜನಪದ ಕಲಾ ಸೇವಾರತ್ನ' ಪ್ರಶಸ್ತಿ  ಸ್ವೀಕರಿಸಿದರು. ರೇವಣಪ್ಪ ಅವರನ್ನು ನಗರದ ಜನಪ್ರತಿನಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.

Monday, March 24, 2025

ಲಕ್ಷಾಂತರ ರು. ಮೌಲ್ಯದ ಅಡಕೆ ಸಸಿ ನಾಶ : ಕ್ರಮ ಕೈಗೊಳ್ಳಲು ಆಗ್ರಹಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ

ಸರ್ಕಾರದ ಆದೇಶ ಪತ್ರ ಅಥವಾ ತಿಳುವಳಿಕೆ ಪತ್ರ ಅಥವಾ ಸೂಚನಾ ಪತ್ರ ಸೇರಿದಂತೆ ಯಾವುದನ್ನು ಸಹ ನೀಡದೆ ಏಕಾಏಕಿ ಜಮೀನಿನಲ್ಲಿ ಬೆಳೆಯಲಾಗಿದ್ದ  ಅಡಕೆ ಸಸಿಗಳನ್ನು ಕಿತ್ತು ಹಾಕಿ ಲಕ್ಷಾಂತರ ರು. ನಷ್ಟ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ  ಕೂಡ್ಲಿಗೆರೆ ಹೋಬಳಿ, ರತ್ನಾಪುರ ಗ್ರಾಮದಲ್ಲಿ ಸೋಮವಾರದಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ಭದ್ರಾವತಿ: ಸರ್ಕಾರದ ಆದೇಶ ಪತ್ರ ಅಥವಾ ತಿಳುವಳಿಕೆ ಪತ್ರ ಅಥವಾ ಸೂಚನಾ ಪತ್ರ ಸೇರಿದಂತೆ ಯಾವುದನ್ನು ಸಹ ನೀಡದೆ ಏಕಾಏಕಿ ಜಮೀನಿನಲ್ಲಿ ಬೆಳೆಯಲಾಗಿದ್ದ  ಅಡಕೆ ಸಸಿಗಳನ್ನು ಕಿತ್ತು ಹಾಕಿ ಲಕ್ಷಾಂತರ ರು. ನಷ್ಟ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ  ಕೂಡ್ಲಿಗೆರೆ ಹೋಬಳಿ, ರತ್ನಾಪುರ ಗ್ರಾಮದಲ್ಲಿ ಸೋಮವಾರದಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ತಾಲೂಕಿನ ಕೂಡ್ಲಿಗೆರೆ ಹೋಬಳಿ, ರತ್ನಾಪುರ ಗ್ರಾಮದ ನಿವಾಸಿ, ಪರಿಶಿಷ್ಟ ಜಾತಿ ಭೋವಿ ಜನಾಂಗಕ್ಕೆ ಸೇರಿರುವ ಉತ್ರೇಶ್ ಕುಟುಂಬದವರು ಸರ್ವೆ ನಂ.೬೩ ಮತ್ತು ೬೪ರಲ್ಲಿ ತಲಾ ೨ ಎಕರೆ ಜಮೀನು  ಸುಮಾರು ೫೦-೬೦ ವರ್ಷಗಳಿಂದ  ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಬಂಡಿ ರಸ್ತೆ ಇದ್ದರೂ ಸಹ  ಮೇಲ್ವರ್ಗದವರು ಇವರ ಜಮೀನಿನಲ್ಲಿ ದಾರಿ ಪಡೆಯುವ ಉದ್ದೇಶದಿಂದ ಸುಮಾರು ೫೦ ರಿಂದ ೬೦ ಅಡಕೆ ಸಸಿಗಳನ್ನು ಕಿತ್ತು ಹಾಕಿ ಸುಮಾರು ೧೫ ರಿಂದ ೨೦ ಲಕ್ಷ ರು. ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. 
    ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಕೋರಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳು ಹಾಗು ಉಪ ವಿಭಾಗಾಧಿಕಾರಿಗಳು  ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಎಚ್ಚರಿಸಲಾಗಿದೆ. 
    ಉತ್ರೇಶ್ ಹಾಗು ಕುಟುಂಬ ವರ್ಗದವರು, ಭೋವಿ ಸಮುದಾಯದ ಮುಖಂಡರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಅಹೋ ರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. 

ಅಧ್ಯಕ್ಷರಾಗಿ ಎಂ. ಪರಮೇಶ್ವರಪ್ಪ, ಉಪಾಧ್ಯಕ್ಷರಾಗಿ ರಾಜಣ್ಣ

ಕೂಡ್ಲಿಗೆರೆ ಎಂ ಪರಮೇಶ್ವರಪ್ಪ 
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೂಡ್ಲಿಗೆರೆ ಎಂ ಪರಮೇಶ್ವರಪ್ಪ ಹಾಗೂ  ಉಪಾಧ್ಯಕ್ಷರಾಗಿ ಅರಳಿಹಳ್ಳಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
     ಸದಸ್ಯರಾದ ಜಿ.ಆರ್ ಪಂಚಾಕ್ಷರಿ, ಮಹೇಶ್ವರನಾಯ್ಕ, ರಾಜ್ ಕುಮಾರ್, ಜಿ.ಆರ್ ಸಿದ್ದೇಶಪ್ಪ,  ಆರ್.ಎನ್ ರುದ್ರೇಶ್, ಗಿರಿಜಮ್ಮ, ವಿಜಯಲಕ್ಷ್ಮಿ ಬಾಯಿ, ವೆಂಕಟೇಶ್, ಆರ್. ಶಿವಣ್ಣ ಮತ್ತು ಟಿ.ತಿಪ್ಪೆಸ್ವಾಮಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.  


ಅರಳಿಹಳ್ಳಿ ರಾಜಣ್ಣ
     ಸಂಘದ ಮಾಜಿ ಅಧ್ಯಕ್ಷ ಎನ್.ಎಚ್ ಮಹೇಶ್, ಪಿ. ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಿ. ಕೆ  ಶಿವಕುಮಾರ್,  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಣಿಶೇಖರ್,  ಅರಳಿಹಳ್ಳಿ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು, ಕೂಡ್ಲಿಗೆರೆ, ಸೀತಾರಾಮಪುರ, ಅತ್ತಿಗುಂದ, ಅರಳಿಹಳ್ಳಿ, ಕಲ್ಪನಹಳ್ಳಿ, ಬಸಲೀಕಟ್ಟೆ, ತಿಪ್ಲಾಪುರ, ಕೋಡಿಹಳ್ಳಿ ಗ್ರಾಮದ ಗ್ರಾಮಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯ ಕ್ಷೇತ್ರಕ್ಕೆ ಪಾದಯಾತ್ರೆ

ಭದ್ರಾವತಿ ಹಳೇನಗರದ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಭಾನುವಾರ ಆಯೋಗಗಳ ನಿರ್ದೇಶಕಿ ಸಿಸ್ಟರ್ ಬರ್ನಿ ಅವರ ನೇತೃತ್ವದಲ್ಲಿ ತಾಲೂಕಿನ ಕಾರೆಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಭಕ್ತರು ಪಾದಯಾತ್ರೆ ಕೈಗೊಂಡರು. 
    ಭದ್ರಾವತಿ : ಹಳೇನಗರದ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆ ಧರ್ಮ ಕೇಂದ್ರದ ವತಿಯಿಂದ ಭಾನುವಾರ ಆಯೋಗಗಳ ನಿರ್ದೇಶಕಿ ಸಿಸ್ಟರ್ ಬರ್ನಿ ಅವರ ನೇತೃತ್ವದಲ್ಲಿ ತಾಲೂಕಿನ ಕಾರೆಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಭಕ್ತರು ಪಾದಯಾತ್ರೆ ಕೈಗೊಂಡರು. 
    ೨೦೨೫ ಜ್ಯೂಬಿಲಿ ವರ್ಷವನ್ನು "ಭರವಸೆಯ ಯಾತ್ರಿಗಳ " ವರ್ಷವನ್ನಾಗಿ ಕ್ರೈಸ್ತ ಕಥೋಲಿಕ ಧರ್ಮದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಾಧ್ಯವಾದಷ್ಟು ಪುಣ್ಯಕ್ಷೇತ್ರಗಳಿಗೆ ತೆರಳಿ ಪ್ರಾರ್ಥಿಸಲು ಭಕ್ತರಿಗೆ ಕರೆ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಶಿವಮೊಗ್ಗ ಪ್ರಧಾನಾಲಯ ಸೆಕ್ರೆಟ್ ಹಾರ್ಟ್ ದೇವಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದರು. 
    ಇದೀಗ ನಗರ ಪ್ರದೇಶದಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಹಳ್ಳಿಯಲ್ಲಿರುವ ಸಂತ ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಧರ್ಮ ಕೇಂದ್ರದಿಂದ ೨೦೦ಕ್ಕೂ ಅಧಿಕ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿ ದೇವಾಲಯವನ್ನು ತಲುಪಿದರು ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ ತಿಳಿಸಿದರು. 
    ನಂತರ ಕಾರೆಹಳ್ಳಿ ದೇವಾಲಯದ ಧರ್ಮ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡರವರಿಂದ ಪ್ರಾರ್ಥನೆ ನೆರವೇರಿತು. 
    ಸಿಸ್ಟರ್ ಗ್ಲಾಡಿಸ್ ಪಿಂಟೋ, ಸಿಸ್ಟರ್ ವಿನ್ಸಿ, ಸಿಸ್ಟರ್ ಶೋಭನ, ಸಿಸ್ಟರ್ ನಿರ್ಮಲ, ಸಿಸ್ಟರ್ ತೆರೇಸಾ, ಸಿಸ್ಟರ್ ಸರಿತಾ, ಸಿಸ್ಟರ್ ಮಂಜು, ಸಿಸ್ಟರ್ ಶಾಲ್ಬಿ, ಸಿಸ್ಟರ್ ಸಿಲ್ಜಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಎಚ್.ಎಸ್ ಮಾಯಮ್ಮರವರ ಮೊದಲ ಕೃತಿ `ಮನಸ್ಸು' ಮಾ.೨೫ರಂದು ಬಿಡುಗಡೆ

ಎಚ್.ಎಸ್ ಮಾಯಮ್ಮ ನರಸಿಂಹಮೂರ್ತಿ ಅವರ ಮೊದಲ ಕವನ ಸಂಕಲನ `ಮನಸ್ಸು' ಕೃತಿ ಮುಖ ಪುಟ. 
    ಭದ್ರಾವತಿ : ತಾಲೂಕಿನ ದೇವರ ನರಸೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎಸ್ ಮಾಯಮ್ಮ ನರಸಿಂಹಮೂರ್ತಿ ಅವರ ಮೊದಲ ಕವನ ಸಂಕಲನ `ಮನಸ್ಸು' ಕೃತಿ ಮಾ.೨೫ರಂದು sಸಂಜೆ ೭ ಗಂಟೆಗೆ ಬಿಡುಗಡೆಗೊಳ್ಳಲಿದೆ. 
    ಶ್ರೀ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ ಸಂಯುಕ್ತಾಶ್ರಯದಲ್ಲಿ ಕುಣಿಗಲ್ ತಾಲೂಕಿನ ಹಾಲುವಾಗಿಲು ಗ್ರಾಮದಲ್ಲಿ ಶಾಸಕ ಎಚ್.ಡಿ ರಂಗನಾಥ್‌ರವರು ಕೃತಿ ಬಿಡುಗಡೆಗೊಳಿಸುತ್ತಿದ್ದಾರೆ. ಮೊದಲ ಕವನ ಸಂಕಲನ `ಮನಸ್ಸು' ಕೃತಿಗೆ ನಗರದ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಮುನ್ನುಡಿ ಬರೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಕೃತಿಯನ್ನು ಅಭಿನಂದಿಸಿದ್ದಾರೆ.
    ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ತಾಲೂಕಿನ ಶಿಕ್ಷಕ ವೃಂದ, ಸಾಹಿತ್ಯಾಭಿಮಾನಿಗಳು, ಹಿತೈಷಿಗಳು ಸೇರಿದಂತೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

Sunday, March 23, 2025

ಮ್ಯಾಮ್ಕೋಸ್‌ಗೆ ೧೯ ನಿರ್ದೇಶಕರ ಆಯ್ಕೆ : ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು

ಬಿಜೆಪಿ ತಾಲೂಕು ಮಂಡಲ ಅಭಿನಂದನಾ ಕಾರ್ಯಕ್ರಮದಲ್ಲಿ  ಜಿ. ಧರ್ಮಪ್ರಸಾದ್ 

ಭದ್ರಾವತಿ ಬಿಜೆಪಿ ಮಂಡಲದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮ್ಯಾಮ್ಕೋಸ್‌ಗೆ ನೂತನವಾಗಿ ಆಯ್ಕೆಯಾದ ೧೯ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
    ಭದ್ರಾವತಿ : ಜಿಲ್ಲೆಯಲ್ಲಿ ನಡೆದ ಮ್ಯಾಮ್ಕೋಸ್ ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿದ ಹಿನ್ನಲೆಯಲ್ಲಿ ೧೯ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇದು ಸಂಘಟಿತವಾಗಿ ಕಾರ್ಯನಿರ್ವಹಿಸಿದ ಫಲ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು. 
    ಅವರು ಭಾನುವಾರ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮ್ಯಾಮ್ಕೋಸ್‌ಗೆ ನೂತನವಾಗಿ ಆಯ್ಕೆಯಾದ ೧೯ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
    ಪಕ್ಷದ ಪರವಾಗಿ ೧೯ ಅಭ್ಯರ್ಥಿಗಳನ್ನು ಬೆಂಬಲಿಸಿ ಅವರ ಗೆಲುವಿಗೆ ಶಕ್ತಿಮೀರಿ ಶ್ರಮಿಸಲಾಗಿದ್ದು, ಬೆಂಬಲಿಸಿದ ಎಲ್ಲಾ ೧೯ ನಿರ್ದೇಶಕರು ಸಹ ಗೆಲುವು ಸಾಧಿಸಿರುವುದು ಸಂತೋಷದ ಸಂಗತಿಯಾಗಿದೆ. ಇದು ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸಿದೆ ಎಂದರು. 
    ಮ್ಯಾಮ್ಕೋಸ್ ಜಿಲ್ಲಾಧ್ಯಕ್ಷ ಮಹೇಶ್ ಉಲ್ಕುಳಿ ಮಾತನಾಡಿ, ಸಹಕಾರ ಭಾರತಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಂತಹ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದೆ. ೧೯ ಅಭ್ಯರ್ಥಿಗಳ ಗೆಲುವಿಗೆ ಕಾರಣಕರ್ತರಾದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಖಂಡರು, ಕಾರ್ಯಕರ್ತರ ಶ್ರಮ ಹೆಚ್ಚಿನದ್ದಾಗಿದೆ ಎಂದರು.  
    ಪಕ್ಷದ  ಜಿಲ್ಲಾ ಉಪಾಧ್ಯಕ್ಷ ಜಿ. ಅನಂದ್ ಕುಮಾರ್, ಹೊಳೆಹೊನ್ನೂರು ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ವಿಶೇಷ ಆಹ್ವಾನಿತ ಎಚ್. ತೀರ್ಥಯ್ಯ, ಸಹಕಾರ ಭಾರತಿ ಜಿಲ್ಲಾ ನಿರ್ದೇಶಕರಾದ ಕುಪೇಂದ್ರಪ್ಪ, ಕೀರ್ತಿರಾಜ್, ಮಹೇಶ್, ಭೀಮಣ್ಣ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್, ಸಂಘದ ಪ್ರಮುಖರಾದ ಡಾ. ದತ್ತಾತ್ರೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್ ಹಾಗೂ ಮೊಸರಳ್ಳಿ ಅಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪ್ರಸ್ತುತ ಬಗರ್‌ಹುಕುಂ ಸಾಗುವಳಿದಾರರಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ : ಸಚಿವ ಮಧು ಬಂಗಾರಪ್ಪ

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಿದರು. 
    ಭದ್ರಾವತಿ: ರಾಜ್ಯ ಸರ್ಕಾರ ಎಂದಿಗೂ ರೈತರ ಪರವಾಗಿದ್ದು, ಯಾವುದೇ ಕಾರಣಕ್ಕೂ ಅವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಪ್ರಸ್ತುತ ಬಗರ್‌ಹುಕುಂ ಸಾಗುವಳಿದಾರರಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 
    ಅವರು ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. 
    ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್‌ನಿಂದ ಯಾರು ಸಹ ಭಯಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಎದುರಾಗಿರುವ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು. 
    ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವ ಸಂಬಂಧ ಶಾಸಕರು ಹೆಚ್ಚಿನ ಶ್ರಮವಹಿಸುತ್ತಿದ್ದಾರೆ. ಅವರೊಂದಿಗೆ ನಾನು ಸಹ ಕೈಜೋಡಿಸುತ್ತೇನೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಒಂದು ವೇಳೆ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸುವ ಅಗತ್ಯವಿದ್ದಲ್ಲಿ ಇದ್ದಕ್ಕೂ ಸಹ ಸಿದ್ದವಿದ್ದೇನೆ ಎಂದರು. 


ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮುಂಬರುವ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಪಕ್ಷದ ಜಿಲ್ಲಾಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಆದೇಶದಂತೆ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ತಾಲೂಕು ಹಾಗು ಜಿಲ್ಲೆಗಳಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗುತ್ತಿದೆ. ಕ್ಷೇತ್ರದಲ್ಲಿ ಈಗಾಗಲೇ ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷದಲ್ಲಿದ್ದು, ಶಾಸಕರ ನೇತೃತ್ವದಲ್ಲಿ ಪಕ್ಷ ಹೆಚ್ಚು ಕ್ರಿಯಾಶೀಲವಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಚುನಾವಣೆಯಲ್ಲಿ ಎಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಿಲ್ಲ. ಪಕ್ಷ ಯಾರನ್ನು ಆಯ್ಕೆ ಮಾಡುತ್ತವೆಯೋ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸಬೇಕು. ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಅವುಗಳನ್ನು ತಿಳಿಸುವ ಮೂಲಕ ಅಭಿವೃದ್ಧಿ ಕುರಿತು ಮನವರಿಕೆ ಮಾಡಿಕೊಡಬೇಕೆಂದರು. 
    ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಪ್ರಮುಖರಾದ ಚಂದ್ರಭೂಪಾಲ, ವೈ. ರೇಣುಕಮ್ಮ, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್, ಸಿ.ಎಂ ಖಾದರ್, ಎಸ್. ಮಣಿಶೇಖರ್, ಬಿ.ಎಸ್ ಗಣೇಶ್, ಸುಕನ್ಯ ದಶರಥಗಿರಿ, ಎಚ್. ರವಿಕುಮಾರ್, ನಗರಸಭೆ ಸದಸ್ಯರಾದ ವಿ. ಕದಿರೇಶ್, ಶಶಿಕಲಾ ನಾರಾಯಣಪ್ಪ, ಬಿ.ಟಿ ನಾಗರಾಜ್, ಅಮೀರ್ ಜಾನ್, ಗಂಗಾಧರ್, ಎಂ. ಶಿವಕುಮಾರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಗು ಕಾರ್ಯಕರ್ತರು ಪಾಲ್ಗೊಂಡಿದ್ದರು.