ಭವನ ನಿರ್ಮಾಣಕ್ಕೆ ಸಹಕಾರ ನೀಡಲು ಬದ್ಧ : ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೮ರ ಹೊಸ ಸಿದ್ದಾಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಿವೇಶನದಲ್ಲಿ ನೂತನವಾಗಿ ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ ವೈಯಕ್ತಿಕವಾಗಿ ೫೫ ಸಾವಿರ ರು. ದೇಣಿಗೆ ಚೆಕ್ ಮೂಲಕ ನೀಡಿದರು.
ಭದ್ರಾವತಿ: ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ಸಾಹಿತ್ಯ ಹಾಗು ಕನ್ನಡಾಭಿಮಾನಿಗಳು ಸೇರಿದಂತೆ ಸಮಸ್ತ ನಾಗರಿಕರು ನೀಡಬೇಕು. ಆ ಮೂಲಕ ಕನ್ನಡದ ತೇರು ಎಳೆಯುವ ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ಅವರು ಭಾನುವಾರ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೨೮ರ ಹೊಸ ಸಿದ್ದಾಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಿವೇಶನದಲ್ಲಿ ನೂತನವಾಗಿ ಸುಮಾರು ೩.೮೦ ಕೋ. ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಾಹಿತ್ಯ ಭವನ ಕಾಮಗಾರಿ ಯಶಸ್ವಿಯಾಗಿ ನಡೆಯಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ಯಾವುದೇ ಅಡೆತಡೆಗಳಿಗೂ ಅವಕಾಶ ನೀಡಬಾರದು. ಕಾಮಗಾರಿ ಪೂರ್ಣಗೊಳಿಸಿ ಭವನ ಲೋಕಾರ್ಪಣೆಗೊಳಿಸಲು ನಾನು ಸಹ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಿದ್ದೇನೆ. ಒಂದು ವೇಳೆ ಆರ್ಥಿಕ ನೆರವಿನ ಕೊರತೆ ಕಂಡು ಬಂದಲ್ಲಿ ಅದನ್ನು ಸಹ ಸಂಪೂರ್ಣವಾಗಿ ನಾನೇ ವಹಿಸಿಕೊಂಡು ಭರಿಸಲು ಸಿದ್ದವಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಒಂದು ನೆಲೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಗೊಳ್ಳುತ್ತಿದ್ದು, ಭವನ ನಿರ್ಮಾಣಕ್ಕೆ ಶಾಸಕರು ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಭೂಮಿ ಪೂಜೆ ನೆರವೇರಿಸಲು ಸಾಧ್ಯವಾಗುತ್ತಿದೆ. ಅವರ ಪ್ರಯತ್ನದಿಂದ ನಗರಸಭೆ ಆಡಳಿತ ಸುಮಾರು ೨೫ ಲಕ್ಷ ರು. ಆರ್ಥಿಕ ನೆರವು ನೀಡುತ್ತಿದ್ದು, ಅಲ್ಲದೆ ಅಧ್ಯಕ್ಷರು ಸೇರಿದಂತೆ ಸದಸ್ಯರು ತಮ್ಮ ಒಂದು ತಿಂಗಳ ವೇತನ ಸಹ ನೀಡುತ್ತಿರುವುದು ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಭವನ ನಿರ್ಮಾಣಕ್ಕೆ ಎಲ್ಲರೂ ಸಹ ಹೆಚ್ಚಿನ ನೆರವು ನೀಡಬೇಕೆಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ, ಉಪಾಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಈ ಜಗದೀಶ್, ಎಂ.ಎಸ್ ಸುಧಾಮಣಿ, ಕಾರ್ಯದರ್ಶಿಗಳಾದ ಡಿ. ನಾಗೋಜಿರಾವ್, ಬಿ.ಎಲ್ ಮೋಹನಕುಮಾರ್, ಖಜಾಂಚಿ ಬಿ.ಎಸ್ ಪ್ರಕಾಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಟಿ. ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಮತ್ತು ಜಾನಪದ ಕಲಾವಿದ ದಿವಾಕರ್ ಭೂಮಿ ಪೂಜೆ ಕುರಿತು ಕವನ ವಾಚಿಸಿದರು. ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಉಪಾಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ವಂದಿಸಿದರು.
ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಸುಧಾಮಣಿ, ಕಸಾಪ ನಿಕಟಪೂರ್ವ ಕೋಶಾಧ್ಯಕ್ಷ ಜಿ.ಎಸ್ ಸತ್ಯಮೂರ್ತಿ, ಮೋಹನ್, ಸೂಡಾ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ವೈಯಕ್ತಿಕವಾಗಿ ದೇಣಿಗೆ ನೀಡಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಸುರೇಶ್‌ನಾಯರ್, ಎಸ್. ಉಮಾ, ಮಾಯಮ್ಮ, ಭಾಗ್ಯಮ್ಮ, ಆರ್. ಶೋಭಾ, ಕುಸುಮ, ಉಷಾ, ಮಲ್ಲಿಕಾಂಬ ಹಾಗು ಕಸಾಪ, ಕಜಾಪ, ಕಸಾಸಾಂವೇ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.