ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೮ರ ಹೊಸ ಸಿದ್ದಾಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಿವೇಶನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಗೊಳ್ಳುತ್ತಿದ್ದು, ಇದರ ನೀಲನಕ್ಷೆ ಸಿದ್ದಪಡಿಸಲಾಗಿದೆ.
ಭದ್ರಾವತಿ : ಸಾಹಿತ್ಯ ಹಾಗು ಕನ್ನಡಾಭಿಮಾನಿಗಳ ಮತ್ತು ಕ್ಷೇತ್ರದ ಸಮಸ್ತ ನಾಗರಿಕರ ಬಹಳ ವರ್ಷಗಳ ಬೇಡಿಕೆಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಏ.೬ರಂದು ಭೂಮಿ ಪೂಜೆ ನೆರವೇರಲಿದೆ.
ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೮ರ ಹೊಸ ಸಿದ್ದಾಪುರ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಿವೇಶನದಲ್ಲಿ ಭವನ ನಿರ್ಮಾಣಗೊಳ್ಳುತ್ತಿದ್ದು, ಬೆಳಿಗ್ಗೆ ೧೦ ಗಂಟೆಗೆ ಭೂಮಿ ಪೂಜೆ ಆರಂಭಗೊಳ್ಳಲಿದೆ. ಕರ್ನಾಟಕ ರಾಜ್ಯ ಗ್ರಾಮಿಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಪೂರ್‍ಯಾನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಡಿ.ಎಸ್ ಅರುಣ್ ಮತ್ತು ಎಸ್.ಎಲ್ ಭೋಜೇಗೌಡ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ನಗರಸಭೆ ಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿರುವರು. ಸಾಹಿತ್ಯ ಹಾಗು ಕನ್ನಡಾಭಿಮಾನಿಗಳು, ಕ್ಷೇತ್ರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷೆ ಡಾ. ವಿಜಯದೇವಿ ಕೋರಿದ್ದಾರೆ.
ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ರಚನೆ :
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧೀನದಲ್ಲಿ ಭವನ ನಿರ್ಮಾಣಕ್ಕೆ ಸಮಿತಿ ರಚಿಸಲಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮಿತಿ ಗೌರವಾಧ್ಯಕ್ಷರಾಗಿದ್ದಾರೆ. ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಬಿ.ಕೆ ಜಗನ್ನಾಥ್, ಡಾ. ಡಿ. ಪ್ರಭಾಕರ ಬೀರಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಎಂ.ಈ ಜಗದೀಶ್, ಸಿ. ಜಯಪ್ಪ ಹೆಬ್ಬಳಗೆರೆ, ಎಂ.ಎಸ್ ಸುಧಾಮಣಿ, ಕಾರ್ಯದರ್ಶಿಗಳಾಗಿ ಡಿ. ನಾಗೋಜಿರಾವ್, ಬಿ.ಎಲ್ ಮೋಹನ್ ಕುಮಾರ್ ಮತ್ತು ಖಜಾಂಚಿಯಾಗಿ ಬಿ.ಎಸ್ ಪ್ರಕಾಶ್ ಕಾರ್ಯ ನಿರ್ವಹಿಸಲಿದ್ದಾರೆ.
೩.೮೦ ಕೋ.ರು ವೆಚ್ಚದಲ್ಲಿ ಭವನ ನಿರ್ಮಾಣ :
೧೦೦*೭೯ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಪರಿಷತ್ ನೂತನ ಕನ್ನಡ ಸಾಹಿತ್ಯ ಭವನ ಸುಮಾರು ೩.೮೦ ಕೋ.ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ೧ ಕೋ.ರು. ವೆಚ್ಚದಲ್ಲಿ ನೆಲ ಕಟ್ಟಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಟ್ಟಡದ ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಅದರಂತೆ ೩೬.೬*೧೫ ಅಡಿ ಅಳತೆಯಲ್ಲಿ ಬೃಹತ್ ವೇದಿಕೆ ಹಾಗು ೫೯*೩೯.೮ ಅಡಿ ಅಳತೆಯಲ್ಲಿ ಸಭಾಂಗಣ, ವೇದಿಕೆ ಎರಡು ಬದಿಯಲ್ಲೂ ಪುರುಷ ಮತ್ತು ಮಹಿಳೆಯರಿಗೆ ೨ ಪ್ರತ್ಯೇಕ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಅಲ್ಲದೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆ ಸೇರಿದಂತೆ ಇನ್ನಿತರ ಹಲವು ಸೌಲಭ್ಯಗಳನ್ನು ಭವನ ಹೊಂದಲಿದೆ.
೫೦ ಸಾವಿರ ರು. ದೇಣಿಗೆ :
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನಕ್ಕೆ ಪ್ರಧಾನ ಕಾರ್ಯದರ್ಶಿ ಎಂ.ಈ ಜಗದೀಶ್ ವೈಯಕ್ತಿಕವಾಗಿ ೫೦ ಸಾವಿರು ರು. ದೇಣಿಗೆ ನೀಡಿದ್ದು, ಈ ಮೂಲಕ ಭವನ ನಿರ್ಮಾಣಕ್ಕೆ ಸಾಹಿತ್ಯ ಹಾಗು ಕನ್ನಡಾಭಿಮಾನಿಗಳು ಸೇರಿದಂತೆ ಸಮಸ್ತ ನಾಗರಿಕರು ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಪ್ರೇರೇಪಿಸಿದ್ದಾರೆ.
ಭದ್ರಾವತಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನಕ್ಕೆ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಈ ಜಗದೀಶ್ ವೈಯಕ್ತಿಕವಾಗಿ ೫೦ ಸಾವಿರು ರು. ದೇಣಿಗೆ ನೀಡಿದ್ದು, ಈ ಮೂಲಕ ಭವನ ನಿರ್ಮಾಣಕ್ಕೆ ಸಾಹಿತ್ಯ ಹಾಗು ಕನ್ನಡಾಭಿಮಾನಿಗಳು ಸೇರಿದಂತೆ ಸಮಸ್ತ ನಾಗರಿಕರು ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಪ್ರೇರೇಪಿಸಿದ್ದಾರೆ.
No comments:
Post a Comment