ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ

ಭದ್ರಾವತಿಯಲ್ಲಿ ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮ ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿದರು.
ಭದ್ರಾವತಿ: ವೇದ ಉಪನಿಷತ್‌ಗಳ ಕಾಲದಲ್ಲೂ ಸಂವಾದ, ಚರ್ಚೆಗಳು ನಡೆಯುತ್ತಿತ್ತು. ಜನರ ಅಹವಾಲುಗಳನ್ನು ಆಲಿಸಲಾಗುತ್ತಿತ್ತು. ಅನುಭವ ಮಂಟಪ ಎಂಬುದು ಇರಲೇ ಇಲ್ಲ ಎಂಬ ವಾದ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಇದರ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಶಿವಮೊಗ್ಗ ಬಸವ ಕೇಂದ್ರ ಹಾಗು ಚಿಕ್ಕಮಗಳೂರು ಬಸವತತ್ವ ಪೀಠದ ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿಯವರು ಕರೆ ನೀಡಿದರು.
ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಸಹಯೋಗದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಅಕ್ಕನ ಬಳಗದವತಿಯಿಂದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೬೫೯ನೇ ವಚನ ಮಂಟಪ ಮತ್ತು ಸಾವಿತ್ರಮ್ಮ ಎಚ್.ವಿ ಶಿವರುದ್ರಪ್ಪ ಹೆಬ್ಬಂಡಿ ದತ್ತಿ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
೧೨ನೇ ಶತಮಾನದ ಅನುಭವ ಮಂಟಪದ ಅಸ್ತಿತ್ವ ಕುರಿತು ವಿದ್ವಾಂಸರು, ಸಾಹಿತಿಗಳು, ಇತಿಹಾಸಕಾರರು ಸೂಕ್ತ ಸಾಕ್ಷ್ಯಾಧಾರ ಹಾಗು ಐತಿಹಾಸಿಕ ದಾಖಲೆಗಳು, ಸಂಗತಿಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದು ಏನು ಮಾಡಿತು ಎಂಬುದನ್ನು ಸಹ ತಿಳಿಸಿದ್ದಾರೆ. ಪ್ರಸ್ತುತ ಕೆಲವರು ಇದರ ಅಸ್ತಿತ್ವ ಕುರಿತು ಪ್ರಶ್ನಿಸುವ ಮೂಲಕ ಅತಿಸೂಕ್ಷ್ಮವಾಗಿ, ವ್ಯವಸ್ಥಿತವಾಗಿ ಮರೆಮಾಚುವ ಪಿತೂರಿ ನಡೆಸುತ್ತಿದ್ದಾರೆ ಎಂದರು.
ಅಂದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಶ್ರೀಸಾಮಾನ್ಯರು, ತಳಸಮುದಾಯದವರು ಹಾಗು ಮಹಿಳೆಯರು ಭಾಗವಹಿಸುತ್ತಿದ್ದರು. ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ನೀಡಲಾಗಿತ್ತು. ಅನುಭವ ಮಂಟಪ ಕೇವಲ ಕಾಲ್ಪನಿಕ ಹಾಗು ಕಟ್ಟು ಕಥೆಯಲ್ಲ. ಇಲ್ಲಿ ಜನಸಾಮಾನ್ಯರ ಅನುಭವಗಳ ಆಧಾರದ ಮೇಲೆ ಶಿವಶರಣರು ವಚನ ಸಾಹಿತ್ಯವನ್ನು ರಚಿಸಿದ್ದಾರೆ. ಇದನ್ನು ಎಲ್ಲರೂ ಅರಿಯುಬೇಕಿದೆ ಎಂದರು.
ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ನಗರದ ನಿವಾಸಿ ಡಾ.ಬಿ.ಜಿ ಧನಂಜಯ ಮಾತನಾಡಿ, ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಅಲ್ಲದೆ ಸಾಮಾಜಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರವಹಿಸಿರುವ ಶಿವಶರಣರ ತಂಡವನ್ನು ನಿರ್ಮಾಣ ಮಾಡಿದರು. ಬಸವಣ್ಣನವರ ಆದರ್ಶ, ಚಿಂತನೆಗಳು ಇಡೀ ವಿಶ್ವವ್ಯಾಪ್ತಿಯಾದವು. ಅವರು ಕಂಡ ಕನಸನ್ನು ನನಸು ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ಕ್ರಾಂತಿಕಾರಿಯಾದರು ಎಂದರು.
ಶರಣಾಗತಿಯ ಬದಲಾಗಿ ಸ್ವಾಭಿಮಾನದ ಕಿಚ್ಚನ್ನು ಸಮಾಜಕ್ಕೆ ತಿಳಿಸಿದರು. ದಾನದ ಸಂಸ್ಕೃತಿ ಬದಲಿಗೆ ದಾಸೋಹ, ದೇವಾಲಯ ಸಂಸ್ಕೃತಿಗೆ ಬದಲಾಗಿ ದೇಹವೇ ದೇವಾಲಯ, ಯಜಮಾನ ಸಂಸ್ಕೃತಿ ವಿರುಧ್ಧ ಸಮಾಜವಾದ, ಸಮಾನತೆಯನ್ನು ಪ್ರತಿಪಾದಿಸಿ ಜನರಲ್ಲಿ ಜಾಗೃತಿಯನ್ನು ಉಂಟುಮಾಡಿದರು. ಸಂದೇಹಗಳಿಗೆ ಪ್ರಶ್ನೆ ಮಾಡುವ ಅದನ್ನು ತಿರಸ್ಕರಿಸುವ, ನಿರಾಕಾರ ಮಾಡುವ ಧೈರ್ಯದ ಬಗ್ಗೆ ತಿಳಿಸಿದರು. ಸಂಪ್ರದಾಯ ಪದ್ದತಿಗೆ ಪರ್ಯಾಯವಾಗಿ ಪರಂಪರೆಯ ಪ್ರಜ್ಞೆಯನ್ನು ಹುಟ್ಟು ಹಾಕಿದ ಮಹಾನ್ ಪುರುಷ ಬಸವಣ್ಣಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಯಾವುದೇ ಒಂದು ನಿರ್ದಿಷ್ಟ ಜಾತಿ, ಜನಾಂಗಕ್ಕೆ ಸೀಮಿತವಾದ ಸಂಘಟನೆಯಾಗಿಲ್ಲ. ಎಲ್ಲಾ ಜಾತಿ ಜನಾಂಗದವರಿಗೂ ಮುಕ್ತ ಮನಸ್ಸಿನಿಂದ ತೆರೆದ ಸಂಘಟನೆಯಾಗಿದೆ ಎಂದರು.
ಅಂದು ವೀರಶೈವ ಮಠಗಳು ದೇಶದಲ್ಲಿ ಮಾಡಿರುವ ಕ್ರಾಂತಿ ಹಾಗು ತ್ರಿವಿಧ ದಾಸೋಹ ಬೇರೆ ಯಾವ ಮಠಗಳು ಮಾಡಿಲ್ಲ ಎಂಬುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್ ಪ್ರಮುಖರಾದ ಕೆ. ಮಂಜಪ್ಪ ವೇದಿಯಲ್ಲಿ ಉಪಸ್ಥಿತರಿದ್ದರು.
ಎಚ್.ಎಸ್ ಹರೀಶ್, ಎಚ್.ಎಸ್ ಧರಣೇಶ್ ಕುಟುಂಬದವರು ಆತಿಥ್ಯವಹಿಸಿದ್ದರು. ಕದಳಿ ವೇದಿಕೆ ಸದಸ್ಯರುಗಳು ವಚನ ಗಾಯನ ನಡೆಸಿಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಸ್ವಾಗತಿಸಿ, ಬಾರಂದೂರು ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್ ಮಹೇಶ್ವರಪ್ಪ ಅತಿಥಿ ಪರಿಚಯ, ಮಲ್ಲಿಕಾಂಬ ವಿರುಪಾಕ್ಷ ಕಾರ್ಯಕ್ರಮ ನಿರೂಪಿಸಿ, ಗಂಗಾ ಕುಬ್ಸದ್ ವಂದಿಸಿದರು.
ಬಸವಾದಿ ಶಿವಶರಣರು ಪ್ರತಿಪಾದಿಸಿದ ವಚನ ಸಾಹಿತ್ಯದ ಮೌಲ್ಯಗಳನ್ನು ಇಂದಿನ ಯುವ ಜನರಿಗೆ ತಿಳಿಸಿಕೊಡದೆ ಹಾಗು ಮೌಲ್ಯಗಳನ್ನು ಪಾಲನೆ ಮಾಡದೆ ಐಪಿಎಲ್ ನಂತಹ ಕ್ರಿಕೆಟ್ ಪಂದ್ಯಾವಳಿಗಳನ್ನು ವಿಕ್ಷೀಸಿ ಅದರ ಮೇಲೆ ಬೆಟ್ಟಿಂಗ್ ಕಟ್ಟುವಂತಹ, ಅದರಿಂದ ಹಣ ಮಾಡುವ ಕಾರ್ಯ ಮಾಡುತ್ತಿರುವುದು ಶೋಚನೀಯ ಸಂಗತಿ. ಇದರಿಂದ ಕುಟುಂಬ ವ್ಯವಸ್ಥೆ ಆರ್ಥಿಕವಾಗಿ ನಾಶವಾಗುತ್ತಿದೆ. ಶ್ರಮ ಸಂಸ್ಕೃತಿ ಇಲ್ಲದೆ ದಿಢೀರ್ ಶ್ರೀಮಂತರಾಗಬೇಕು ಎಂಬ ಮನೋಭಾವನೆ ಸರಿಯಲ್ಲ.
-ಶ್ರೀ ಮ.ನಿ.ಪ್ರ ಬಸವ ಮರುಳಸಿದ್ದ ಸ್ವಾಮೀಜಿ